15ರಂದು ವಿಭಾಗ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ

ರಾಯಚೂರು: ಪದವಿ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಕಲಬುರ್ಗಿ ವಿಭಾಗ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ಸೆಪ್ಟೆಂಬರ್ 15ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ವಿಜ್ಞಾನ ಪರಿಷತ್ ರಾಜ್ಯ ಸಂಚಾಲಕ ಕುಂಟೆಪ್ಪ ಗೌರಿಪುರ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶುದ್ಧ ಮತ್ತು ಹಸಿರು ಶಕ್ತಿ, ಆಹಾರ, ಆರೋಗ್ಯ ಮತ್ತು ನೈರ್ಮಲ್ಯ, ಬಾಹ್ಯಾಕಾಶ ಹುಡುಕಾಟ, ಪರಿಸರ ಸ್ನೇಹಿ ತಂತ್ರಜ್ಞಾನ, ಪ್ಲಾಸ್ಟೀಕ್ ಮಾಲಿನ್ಯ ಹಿಮೆಟ್ಟಿಸುವುದು, ಜೈವಿಕ ತಂತ್ರಜ್ಞಾನ ಮತ್ತು ಆರೋಗ್ಯ ಸೇರಿದಂತೆ ವಿವಿಧ ವಿಷಯಗಳ ಆಧಾರದಲ್ಲಿ ಪ್ರದರ್ಶನ ನಡೆಯಲಿದೆ ಎಂದರು.

ಕಲಬುರ್ಗಿಯ ವಿಭಾಗ ಮಟ್ಟದ ಒಂದೊಂದು ಕಾಲೇಜಿನಿಂದ 10 ವಿದ್ಯಾರ್ಥಿಗಳಂತೆ ಒಟ್ಟು 80ಕ್ಕೂ ಹೆಚ್ಚು ವಿಜ್ಞಾನದ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ₨5 ಸಾವಿರ, ದ್ವೀತಿಯ ಬಹುಮಾನ ₨4 ಸಾವಿರ, ತೃತೀಯ ಬಹುಮಾನ ₨3 ಸಾವಿರ, ಸಮಾಧಾನಕರ ಬಹುಮಾನ ₨2 ಸಾವಿರ ನೀಡಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ದಸ್ತಗೀರಸಾಬ್‌ ದಿನ್ನಿ ಮಾತನಾಡಿದರು. ಉಪನ್ಯಾಸಕರಾದ ಮಹೆಬೂಬು ಅಲಿ, ಜೆ.ಎಲ್.ಈರಣ್ಣ, ಆರ್.ಮಲ್ಲನಗೌಡ ಇದ್ದರು.

ಪ್ರಮುಖ ಸುದ್ದಿಗಳು