ಭೂಕುಸಿತ ಕಂಡು ಬೆಚ್ಚಿದ ಕೇಂದ್ರ ತಂಡ

ಮಡಿಕೇರಿ: ಭೂಕುಸಿತ, ಪ್ರವಾಹದ ಸಂಕಷ್ಟಕ್ಕೆ ಸಿಲುಕಿರುವ ಕೊಡಗಿನ ಸ್ಥಿತಿಗತಿ ಅಧ್ಯಯನಕ್ಕೆ ಬಂದಿರುವ ಕೇಂದ್ರ ತಂಡವು ಬುಧವಾರ ಭೂಕುಸಿತ ಪ್ರದೇಶಕ್ಕೆ ಭೇಟಿ ಪರಿಶೀಲಿಸಿತು.

ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್‌ ಮಲ್ಲಿಕ್‌ ಅವರ ನೇತೃತ್ವದಲ್ಲಿ ಜೀತೇಂದ್ರ ಪನ್ವಾರ್‌ ಹಾಗೂ ಡಾ.ಪೊನ್ನುಸ್ವಾಮಿ ಅವರನ್ನು ಒಳಗೊಂಡ ತಂಡವು ಕುಶಾಲನಗರದ ಹಾರಂಗಿ ಜಲಾಶಯ, ಭೂಕುಸಿತವಾದ ಮಾದಾಪುರ, ಹಟ್ಟಿಹೊಳೆ, ತಂತಿಪಾಲ, ಕಾಂಡನಕೊಲ್ಲಿ, ಎಮ್ಮೆತಾಳ, ಮಕ್ಕಂದೂರು, ಮುಕ್ಕೋಡ್ಲು ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿತು.

ಕಾಂಡನಕೊಲ್ಲಿ ಗ್ರಾಮವೇ ಕಣ್ಮರೆಯಾಗಿದ್ದು, ಅಲ್ಲಿನ ಭೂಕುಸಿತದ ದೃಶ್ಯಕಂಡು ಕೇಂದ್ರದ ಅಧಿಕಾರಿಗಳು ಬೆಚ್ಚಿಬಿದ್ದರು. ಸ್ಥಳದಲ್ಲಿದ್ದ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಬೆಟ್ಟ ಕುಸಿತ, ರಸ್ತೆ ಸಂಪರ್ಕ ಕಡಿತ, ಮನೆ ಹಾನಿ ಹಾಗೂ ಬೆಳೆ ನಷ್ಟದ ಮಾಹಿತಿಯನ್ನೂ ಆಯಾ ಸ್ಥಳದಲ್ಲಿಯೇ ಪಡೆದುಕೊಂಡು ದಾಖಲಿಸಿಕೊಂಡರು.

ಹಟ್ಟಿಹೊಳೆಯ ಬಳಿ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಸಂಪರ್ಕ ಸುಧಾರಣೆಗೆ ತಾತ್ಕಾಲಿಕವಾಗಿ ಕೈಗೊಂಡಿರುವ ಕ್ರಮದ ಬಗ್ಗೆ ಅನಿಲ್‌ ಮಲ್ಲಿಕ್‌ ಅವರು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರಿಂದ ಮಾಹಿತಿ ಪಡೆದುಕೊಂಡರು.

‘ಈಗಿರುವ ನಿಯಮಾವಳಿಯಂತೆ ಪರಿಹಾರ ನೀಡಿದರೆ ತೋಟ ಕಳೆದುಕೊಂಡ ರೈತರಿಗೆ ಹೆಕ್ಟೇರ್‌ಗೆ ಕೇವಲ ₹ 36 ಸಾವಿರ ಸಿಗಲಿದೆ. ಹೆಕ್ಟೇರ್‌ಗೆ ₹ 10 ಲಕ್ಷ ಪರಿಹಾರ ಘೋಷಣೆ ಮಾಡಬೇಕು’ ಎಂದು ಕಾಫಿ ಬೆಳೆಗಾರರು ಕೇಂದ್ರ ತಂಡಕ್ಕೆ ಮನವಿ ಸಲ್ಲಿಸಿದರು.

ಹಾನಿ ಮಾಹಿತಿ: ಗುಡ್ಡ ಕುಸಿದು 354 ಮನೆಗಳು ಸಂಪೂರ್ಣ ಹಾನಿಯಾಗಿದ್ದು ₹ 3.36 ಕೋಟಿ ನಷ್ಟವಾಗಿದೆ. 726 ಮನೆಗಳು ಭಾಗಶಃ ಹಾನಿಯಾಗಿದ್ದು ₹ 6.90 ಕೋಟಿ, 520 ಮನೆಗಳಿಗೆ ಅಲ್ಪಪ್ರಮಾಣದ ಹಾನಿ ಆಗಿದ್ದು, ₹ 4.94 ಕೋಟಿ ನಷ್ಟವಾಗಿದೆ.

4 ಸಾವಿರ ಎಕರೆ ಕಾಫಿ ತೋಟ ಸಂಪೂರ್ಣ ನಾಶವಾಗಿದೆ. ಮಳೆಯಿಂದ 1 ಲಕ್ಷ ಎಕರೆಯಲ್ಲಿ ಬೆಳೆದಿದ್ದ ಕಾಫಿ ಫಸಲು ಉದುರಿದ್ದು, ಅಂದಾಜು ₹ 386 ಕೋಟಿ ನಷ್ಟವಾಗಿದೆ ಎಂದು ತಂಡಕ್ಕೆ ಮಾಹಿತಿ ನೀಡಲಾಯಿತು.  

15,800 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕರಿಮೆಣಸು ಬೆಳೆಗೆ ಹಾನಿಯಾಗಿದ್ದು, ₹ 53 ಕೋಟಿ ನಷ್ಟ ಉಂಟಾಗಿದೆ. 30,500 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆಗೆ ಹಾನಿಯಾಗಿದೆ. 4,513 ಎಕರೆ ಅಡಿಕೆ ತೋಟಕ್ಕೆ ಹಾನಿಯಾಗಿದ್ದು, ₹ 22.56 ಕೋಟಿ ನಷ್ಟವಾಗಿದೆ. 61 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾಗಿದ್ದು, ದುರಸ್ತಿಗೆ ₹ 531 ಕೋಟಿ ಅಗತ್ಯವಿದೆ ಎಂದು ಜಿಲ್ಲಾಡಳಿತ ತಂಡಕ್ಕೆ ತಿಳಿಸಿತು.

ಕೊಡಗಿನಲ್ಲಿ ಮಳೆ ಹಾಗೂ ಭೂಕುಸಿತದಿಂದ ಅಪಾರ ನಷ್ಟವಾಗಿದ್ದು ₹ 4 ಸಾವಿರ ಕೋಟಿಯ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಅವರು ಕೋರಿದರು. 

‘ಗುರುವಾರ ದೇವಸ್ತೂರು, ಮದೆನಾಡು, ಕಾಲೂರು, ಹೆಬ್ಬಟ್ಟಗೇರಿ, ಮಾಂದಲ್‌ಪಟ್ಟಿ, ಕಾಲೂರು, ಗಾಳಿಬೀಡು ಗ್ರಾಮದಲ್ಲಿ ಹಾನಿಗೆ ಒಳಗಾದ ಪ್ರದೇಶಕ್ಕೆ ತಂಡವು ಭೇಟಿ ನೀಡಲಿದ್ದು ಸ್ಥಿತಿಗತಿ ಅಧ್ಯಯನ ನಡೆಸಲಿದೆ. ಶುಕ್ರವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆಗೆ ಸಮಾಲೋಚಿಸಿ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಹೇಳಿದರು.

ಪ್ರಮುಖ ಸುದ್ದಿಗಳು