ಗಣೇಶ ಉತ್ಸವಕ್ಕೆ ನಗರ ಸಜ್ಜು

ಹೊಸಪೇಟೆ: ಗಣೇಶ ಉತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲು ನಗರ ಸಜ್ಜುಗೊಂಡಿದೆ.

‘ಗಣೇಶ’ನನ್ನು ಬರಮಾಡಿಕೊಳ್ಳಲು ನಗರದ ಬಡಾವಣೆಗಳು ಮದುವೆ ಮನೆಯಂತೆ ಸಿದ್ಧಗೊಂಡಿವೆ. ಗಣಪನ ಪ್ರತಿಷ್ಠಾಪನೆಗೆ ಇಲ್ಲಿನ ಬಹುತೇಕ ಬಡಾವಣೆಗಳಲ್ಲಿ ಈಗಾಗಲೇ ಪೆಂಡಾಲ್‌ ಹಾಕಲಾಗಿದೆ. ಅವುಗಳಿಗೆ ತಳಿರು ತೋರಣ, ಹೂ, ಬಾಳೆದಿಂಡು, ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಬಡಾವಣೆಯ ಮುಖ್ಯರಸ್ತೆಯಿಂದ ವಕ್ರದಂತನನ್ನು ಪ್ರತಿಷ್ಠಾಪಿಸುವ ಪೆಂಡಾಲ್‌ ವರೆಗೆ ವಿದ್ಯುದ್ದೀಪಗಳನ್ನು ಹಾಕಲಾಗಿದೆ. ಕೊನೆಯ ಹಂತದ ಸಿದ್ಧತೆಗೆ ಬುಧವಾರ ಸಂಜೆ ಯುವಕರು ಸರಬರ ಓಡಾಡುತ್ತಿರುವುದು ಕಂಡು ಬಂತು. ಮದುವೆ ಮನೆಯಲ್ಲಿ ಕಂಡುಬರುವ ದೃಶ್ಯದಂತೆ ಗೋಚರಿಸುತ್ತಿತ್ತು. ಬಡಾವಣೆಗಳಿಗೆ ವಿಶೇಷ ಕಳೆ ಬಂದಿದೆ.

ಕೆಲವು ಕಡೆ ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ಮತ್ತೆ ಕೆಲವೆಡೆ ಕೊನೆಯ ಹಂತದ ಸಿದ್ಧತಾ ಕೆಲಸ ನಡೆದಿದೆ. ಆಯಾ ಗಣೇಶ ಮಂಡಳಿಯ ಯುವಕರು ಮೂರು ತಿಂಗಳಿಂದ ಹಗಲು, ರಾತ್ರಿ ಬೆವರು ಹರಿಸಿ ಕೆಲಸ ಮಾಡುತ್ತಿದ್ದಾರೆ. ಗಣೇಶನ ಪ್ರತಿಷ್ಠಾಪನೆಗೆ ಮಂಡಳಿಯವರು, ಮನೆ– ಮಳಿಗೆಗಳು, ವ್ಯಾಪಾರಿಗಳು ಹಾಗೂ ರಾಜಕಾರಣಿಗಳಿಂದ ಚಂದಾ (ಹಣ) ಸಂಗ್ರಹಿಸಿದ್ದಾರೆ. ಕೆಲವು ಮಂಡಳಿಯ ಯುವಕರು ಸ್ವಂತ ತಾವೇ ಕೈಯಾರೆ ಹಣ ಹಾಕಿದ್ದಾರೆ.

ನಗರದ ರಾಣಿಪೇಟೆ, ಟಿ.ಬಿ. ಡ್ಯಾಂ, ಅಮರಾವತಿ, ಚಿತ್ತವಾಡ್ಗಿ, ದೇವಾಂಗಪೇಟೆ, ಎಂ.ಜೆ. ನಗರ, ಪಟೇಲ್‌ ನಗರ, ಸಂಡೂರು ರಸ್ತೆ, ಬಳ್ಳಾರಿ ರಸ್ತೆ, ಎಂ.ಪಿ. ಪ್ರಕಾಶ ನಗರ, ಪಾಂಡುರಂಗ ಕಾಲೊನಿಗಳು ವಿದ್ಯುದ್ದೀಪಗಳಿಂದ ಝಗಮಗಿಸುತ್ತಿವೆ. ಕೆಲವು ಗಣೇಶ ಮಂಡಳಿಗಳು ಗುರುವಾರ ಬೆಳಿಗ್ಗೆಯೇ ಗಣಪನನ್ನು ಪ್ರತಿಷ್ಠಾಪಿಸಲು ನಿರ್ಧರಿಸಿರುವುದರಿಂದ ಬುಧವಾರ ಸಂಜೆಯೇ ಪ್ರತಿಮೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಮತ್ತೆ ಕೆಲವರು ಗುರುವಾರ ಮಧ್ಯಾಹ್ನ, ಕೆಲವರು ಸಂಜೆ ವೇಳೆಯಲ್ಲಿ ಮೆರವಣಿಗೆಯಲ್ಲಿ ಗಣಪನನ್ನು ಕರೆದೊಯ್ಯಲು ತೀರ್ಮಾನಿಸಿದ್ದಾರೆ.

ರಾಣಿಪೇಟೆಯ ಏಕದಂತ ಮಿತ್ರವೃಂದ ಮಂಡಳಿಯು ಗುರುವಾರ ಬೆಳಿಗ್ಗೆ 9ಕ್ಕೆ ಗಣೇಶನ ಪ್ರತಿಷ್ಠಾಪನೆ ಹಾಗೂ ಗಣ ಹೋಮ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದೇ 14ರಂದು ಸಂಜೆ 6.30ಕ್ಕೆ ವಾಸು ದೀಕ್ಷಿತ್‌ ತಂಡ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದೆ. 15ರಂದು ಸಂಜೆ 5.30ಕ್ಕೆ ವಿವಿಧ ಕಲಾ ತಂಡಗಳ ಮೆರವಣಿಗೆಯೊಂದಿಗೆ ಸಾಗಿ ಗಣೇಶನ ಪ್ರತಿಮೆ ವಿಸರ್ಜನೆ ಮಾಡಲಿದೆ.

ದೇವಾಂಗಪೇಟೆಯ ಉದ್ಭವ ಯುವಕರ ಮಂಡಳಿಯ ಯುವಕರು ಗೋಧಿ ಕಾಳುಗಳಿಂದಲೇ ತಯಾರಿಸಿರುವ ಗಣೇಶ, ಎಂ.ಜೆ. ನಗರದ ಹರಳಿನ ಗಣಪ ಸಂಜೆ ವೇಳೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಚಲುವಾದಿಕೇರಿಯಲ್ಲಿ ಅಲ್ಲಿನ ಯುವಕ ಮಂಡಳಿಯವರು ಪ್ರಕೃತಿಯ ಮಾದರಿ ನಿರ್ಮಿಸಿದ್ದು, ಅಲ್ಲಿ ಗಣೇಶನನ್ನು ಕೂರಿಸಲಿದ್ದಾರೆ.

ಪ್ರಮುಖ ಸುದ್ದಿಗಳು