ಮೂಲ ಕಾಂಗ್ರೆಸ್ಸಿಗರು ಉಳಿದಿಲ್ಲ; ಕೋರೆ

ಬೆಳಗಾವಿ: ‘ಕಾಂಗ್ರೆಸ್‌ದಲ್ಲಿ ಈಗ ಮೂಲ ಕಾಂಗ್ರೆಸ್ಸಿಗರಾರೂ ಉಳಿದಿಲ್ಲ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೂ ಮೂಲ ಕಾಂಗ್ರೆಸ್ಸಿಗರಲ್ಲ’ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿಯ ಮುಖಂಡ ಪ್ರಭಾಕರ ಕೋರೆ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹಿಂದೊಮ್ಮೆ ನಾನೂ ಕಾಂಗ್ರೆಸ್‌ನಲ್ಲಿದ್ದೆ. ಆಗ ಇದ್ದ ಕಾಂಗ್ರೆಸ್‌ಗೂ ಈಗಿನ ಕಾಂಗ್ರೆಸ್‌ಗೂ ಅಜಗಜಾಂತರ ವ್ಯತ್ಯಾಸವಿದೆ’ ಎಂದು ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಜಿಲ್ಲೆಗೆ ವಿಶೇಷ ಸ್ಥಾನವಿದೆ. ಸರ್ಕಾರವನ್ನು ರಚಿಸುವಲ್ಲಿ ಹಾಗೂ ಉರುಳಿಸುವಲ್ಲಿ ಜಿಲ್ಲೆಯ ಪಾತ್ರ ಇದ್ದೇ ಇದೆ. ಹಿಂದೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಹಾಗೂ ರಾಮಕೃಷ್ಣ ಹೆಗಡೆ ಸರ್ಕಾರ ಬೀಳಲು ಜಿಲ್ಲೆಯವರೇ ಕಾರಣರಾಗಿದ್ದರು. ಆದರೆ, ಇದುವರೆಗೆ ಜಿಲ್ಲೆಯವರು ಮುಖ್ಯಮಂತ್ರಿಯಾಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

‘ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಯಾರು ಬೇಕಾದವರೂ ಬರಬಹುದು. ಯಾರೇ ಬಂದರೂ ಸ್ವಾಗತ ಮಾಡುತ್ತೇವೆ. ಕಾಂಗ್ರೆಸ್ಸಿನ ಜಾರಕಿಹೊಳಿ ಸಹೋದರರು ನನ್ನ ಜೊತೆ ಸಂಪರ್ಕದಲ್ಲಿಲ್ಲ’ ಎಂದು ಹೇಳಿದರು.

 

 

ಪ್ರಮುಖ ಸುದ್ದಿಗಳು