ಚಾಮರಾಜನಗರ ಜಿಲ್ಲೆಯಲ್ಲೂ ದಸರಾ ಆಚರಣೆ

ಚಾಮರಾಜನಗರ: ಪ್ರಸಿದ್ಧ ನಾಡಹಬ್ಬ ದಸರಾ ಮಹೋತ್ಸವ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಅದರ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಅಧಿಕಾರಿಗಳಿಗೆ ಮಂಗಳವಾರ ಸೂಚಿಸಿದರು.

ಪಟ್ಟಣದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಸರಾ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮೈಸೂರು ದಸರಾ ಮಹೋತ್ಸವವನ್ನು ಜಿಲ್ಲೆಗೂ ವಿಸ್ತರಿಸಲಾಗಿದೆ. ಈ ಹಿಂದೆ ನಡೆದ ಕಾರ್ಯಕ್ರಮಗಳಂತೆ ಹಾಗೂ ಸಮಿತಿಗಳ ತೀರ್ಮಾನದಂತೆ ಕಾರ್ಯ ನಿರ್ವಹಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಇತರೆ ಸಿದ್ಧತೆಗಳು ನಡೆಯಬೇಕು. ಅರ್ಥಪೂರ್ಣ ದಸರಾ ಆಚರಣೆಗೆ ಅವಶ್ಯವಿರುವ ಏರ್ಪಾಡುಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಶಾಸಕರಾದ ಆರ್.ನರೇಂದ್ರ ಹಾಗೂ ಸಿ.ಎಸ್.ನಿರಂಜನ ಕುಮಾರ್ ಮಾತನಾಡಿ, ‘ದಸರಾ ಆಚರಣೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು. ಗೊಂದಲಕ್ಕೆ ಅವಕಾಶವಾಗದಂತೆ ಕಾರ್ಯಕ್ರಮ ನಡೆಯಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ದಸರಾ ಆಚರಣೆಗೆ ಅಗತ್ಯವಿರುವ ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ, ಸ್ಥಳೀಯ ಕಲಾವಿದರ ಹಾಗೂ ರಾಜ್ಯ ಮಟ್ಟದ ಕಲಾವಿದರ ಆಯ್ಕೆ ಸಮಿತಿ, ವೇದಿಕೆ ಸಮಿತಿ, ಶಾಲಾ-ಕಾಲೇಜು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಆಯ್ಕೆ ಸಮಿತಿಗಳನ್ನು ರಚಿಸಬೇಕು’ ಎಂದರು.

ದಸರಾಗೆ ಪೂರಕವಾಗಿ ಆಹಾರ ಸಮಿತಿ, ವೇದಿಕೆ, ಸ್ವಚ್ಛತೆ, ಆರೋಗ್ಯ, ಪ್ರಚಾರ, ಸಂಚಾರ ನಿಯಂತ್ರಣ ಮತ್ತು ಭದ್ರತಾ ಸಮಿತಿಗಳು ಕಾರ್ಯನಿರ್ವಹಿಸಬೇಕಿದೆ. ಕಾರ್ಯಕ್ರಮಗಳ ಆಯ್ಕೆ ಸೇರಿದಂತೆ ಇತರೆ ಅವಶ್ಯ ಆಯೋಜನೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಅಕ್ಟೋಬರ್ 14ರಿಂದ 17ರವರೆಗೆ ದಸರಾ ನಡೆಯುವ ಸಾಧ್ಯತೆ ಇದೆ. ಜಿಲ್ಲಾಡಳಿತ ಅಧಿಕೃತ ದಿನಾಂಕವನ್ನು ನಂತರ ಪ್ರಕಟಿಸಲಿದೆ.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್ ಇದ್ದರು.

ಪ್ರಮುಖ ಸುದ್ದಿಗಳು