ಎಲ್ಲೆಡೆ ಗೌರಿ ಹಬ್ಬದ ಸಂಭ್ರಮ

ಯಳಂದೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಬುಧವಾರ ಗೌರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಪಟ್ಟಣದ ಭೂಲಕ್ಷ್ಮಿ ವರಾಹಸ್ವಾಮಿ, ಬಳೇಪೇಟೆಯ ಬಲಮುರಿ ವಿನಾಯಕ ದೇಗುಲದಲ್ಲಿ ಮಣ್ಣಿನ ಗೌರಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಮಹಿಳೆಯರು ಮೊರದಲ್ಲಿ ಬಾಗಿನ ಅರ್ಪಿಸಿ, ಕುಂಕುಮ ವಿನಿಮಯ ಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು. ಚಿಣ್ಣರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು.

ಹಬ್ಬದ ಸಂತೆ: ಪಟ್ಟಣದಲ್ಲಿ ಪ್ರತಿ ಭಾನುವಾರ ಸಂತೆ ನಡೆಯುತ್ತದೆ. ಆದರೆ, ಗೌರಿ– ಗಣೇಶ ಹಬ್ಬ ಯಾವ ದಿನವೇ ಬರಲಿ, ಅಂದು ಸಂತೆ ಕಟ್ಟುತ್ತದೆ. ಬುಧವಾರವೂ ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿ ಸಂತೆ ಕಟ್ಟಿತ್ತು.

ತರಕಾರಿ, ಹಣ್ಣು, ಕಾಯಿ, ಬಾಳೆ ಎಲೆ, ಮಾವಿನಸೊಪ್ಪು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು. ಹೂವಿನ ಬೆಲೆ ಹೆಚ್ಚಿದ್ದರೂ ಹೂವು ಹಾಗೂ ಹಾರಗಳ ಖರೀದಿ ಭರಾಟೆಯೂ ಹೆಚ್ಚಾಗಿತ್ತು.

ಪಿಒಪಿ ಗಣೇಶ: ಪಟ್ಟಣದಲ್ಲಿ ಎಲ್ಲಿಯೂ ಕೂಡ ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳು ಕಾಣಸಿಗಲಿಲ್ಲ. ಬಣ್ಣದ ಬಣ್ಣದ ಪಿಒಪಿ ಗಣೇಶನ ಮೂರ್ತಿಗಳೇ ರಾರಾಜಿಸುತ್ತಿದ್ದವು. ಸಾರ್ವಜನಿಕರು ಸಹ ಇದನ್ನೇ ಖರೀದಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು. 

ಸಂಚಾರ ದಟ್ಟಣೆ: ಸಂತೆ ಹಳೇ ಅಂಚೆ ಕಚೇರಿಯ ರಸ್ತೆಯಲ್ಲಿ ಸಂತೆ ಇದ್ದಿದ್ದರಿಂದ ಇಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಹಾಗಾಗಿ, ದೊಡ್ಡ ಅಂಗಡಿ ಬೀದಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಇದೇ ರಸ್ತೆಯಲ್ಲಿ ಸಂಚರಿಸಬೇಕಾದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಮಡಕೆಗಳಿಗೆ ಬೇಡಿಕೆ

ಗೌರಿ ಹಬ್ಬಕ್ಕೆ ಹೊಸ ಮಡಕೆಗಳಲ್ಲಿ ಅಡುಗೆ ತಯಾರಿಸಿ ಉಣಬಡಿಸುವ ಸಂಪ್ರದಾಯ ಇನ್ನೂ ಜೀವಂತವಾಗಿದೆ. ಹಾಗಾಗಿ, ಸಂತೆಯ ಒಂದು ಬದಿಯಲ್ಲಿ ಮಣ್ಣಿನ ಮಡಕೆ ಹಾಗೂ ಒಲೆಗಳ ಮಾರಾಟವೂ ಜೋರಾಗಿತ್ತು. ಖರೀದಿದಾರರು ಮಡಕೆಯನ್ನು ಕೊಳ್ಳಲು ಮುಗಿಬಿದ್ದರು.

‘ಗೌರಿ ಹಬ್ಬಕ್ಕೆ ಮಾತ್ರ ಮಡಕೆಗೆ ಬೇಡಿಕೆ ಇರುತ್ತದೆ. ಈ ಹಿಂದೆ ಪಟ್ಟಣದ ಕುಂಬಾರ ಬೀದಿಯಲ್ಲಿ ಮಡಕೆ ತಯಾರು ಮಾಡುವ ನಮ್ಮದೇ ಭಟ್ಟಿಗಳಿದ್ದವು. ಆದರೆ, ಈಚೆಗೆ ಕುಂಬಾರಿಕೆ ನೇಪಥ್ಯಕ್ಕೆ ಸರಿಯುತ್ತಿದ್ದು, ನಾವು ತಿ.ನರಸೀಪುರ, ಆಲಗೂಡಿನಿಂದ ಮಡಕೆಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ. ಅದರ ಅಳತೆಯ ಆಧಾರದ ಮೇಲೆ ₹40ರಿಂದ ₹70ರವರೆಗೆ ಮಾರಾಟ ಮಾಡುತ್ತೇವೆ. ಇದರಿಂದ ನಮ್ಮ ಲಾಭವ ಪ್ರಮಾಣವೂ ಕಡಿಮೆಯಾಗಿದೆ’ ಎಂದು ಮಾರಾಟಗಾರ ನಾಗರಾಜು ತಿಳಿಸಿದರು.

ಪ್ರಮುಖ ಸುದ್ದಿಗಳು