ವಿಶ್ವಕರ್ಮ ಜಯಂತಿ ಅರ್ಥಪೂರ್ಣವಾಗಿ ಆಚರಿಸಿ

ಕೋಲಾರ: ‘ವಿಶ್ವಕರ್ಮ ಜಯಂತಿಯನ್ನು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೆ.17ರಂದು ಅರ್ಥಪೂರ್ಣವಾಗಿ ಆಚರಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ವಿಶ್ವಕರ್ಮ ಜಯಂತಿ ಸಿದ್ಧತೆ ಸಂಬಂಧ ಇಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಸರ್ಕಾರವು ವಿಶ್ವಕರ್ಮ ಜಯಂತಿಗೆ ₹ 69 ಸಾವಿರ ಅನುದಾನ ನೀಡಿದೆ. ಈ ಅನುದಾನ ಸದ್ಬಳಕೆ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.

‘ಪಲ್ಲಕ್ಕಿ ಮೆರವಣಿಗೆ ಸಾಗುವ ಮಾರ್ಗದ ಬಗ್ಗೆ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ಕಾಲಾವಕಾಶ ಕಡಿಮೆ: ‘ಜಯಂತಿಗೆ ಕಾಲಾವಕಾಶ ತುಂಬಾ ಕಡಿಮೆಯಿದೆ. ಜಿಲ್ಲಾಡಳಿತವು 15 ದಿನ ಮುಂಚಿತವಾಗಿ ಸಭೆ ನಡೆಸಬೇಕಿತ್ತು. ಜಯಂತಿ ಅಂಗವಾಗಿ ಸರ್ಕಾರಿ ಕಚೇರಿಗಳಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವಂತೆ ಎಲ್ಲಾ ಇಲಾಖೆಗಳಿಗೆ ಆದೇಶ ಹೊರಡಿಸಬೇಕು’ ಎಂದು ವಿಶ್ವಕರ್ಮ ಸಮುದಾಯ ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣು ಮನವಿ ಮಾಡಿದರು.

‘ಜಯಂತಿ ದಿನ ಸಮುದಾಯದ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಬೇಕು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಬೇಕು’ ಎಂದು ಕೋರಿದರು.

ಕುಲಕಸುಬು ಮುಂದುವರಿಕೆ: ‘ಜಿಲ್ಲೆಯ ಶಿವಾರಪಟ್ಟಣ ಹಾಗೂ ಅನಂತಪುರ ಗ್ರಾಮದಲ್ಲಿನ ಸಮುದಾಯದ ವ್ಯಕ್ತಿಗಳು ಹಲವು ವರ್ಷಗಳಿಂದ ಕುಲಕಸುಬು ಮುಂದುವರಿಸಿಕೊಂಡು ಬಂದಿದ್ದಾರೆ. ಅವರನ್ನು ಸನ್ಮಾನಿಸಬೇಕು’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಸನ್ಮಾನಿತರ ಆಯ್ಕೆ ವಿಚಾರದಲ್ಲಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿದರೆ ಸಮುದಾಯದಲ್ಲಿ ತೊಂದರೆಯಾಗುತ್ತದೆ. ಆದ ಕಾರಣ ಸಮುದಾಯದ ಮುಖಂಡರೇ ಸನ್ಮಾನಿತರನ್ನು ಆಯ್ಕೆ ಮಾಡಬೇಕು’ ಎಂದು ಸಲಹೆ ನೀಡಿದರು.

ಕೋಲಾರ ನಗರ ಬಸ್ ನಿಲ್ದಾಣ ಸಮೀಪದ ಕಾಳಿಕಾಂಭ ರಸ್ತೆ ವೃತ್ತಕ್ಕೆ ವಿಶ್ವಕರ್ಮ ಸಮುದಾಯ ವೃತವೆಂದು ನಾಮಕರಣ ಮಾಡುವಂತೆ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಸಾದುಲ್ಲಾ ಖಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್‌, ಸಮುದಾಯದ ಮುಖಂಡರಾದ ಎ.ಪ್ರಭಾಕರ್, ನಾಗೇಶ್, ಸೋಮಶೇಖರ್, ಕೆ.ವಿ.ನಂದಕುಮಾರ್‌, ಮೋಹನ್, ಮಂಜುನಾಥ್, ಸುರೇಶ್ ಹಾಜರಿದ್ದರು.

ಪ್ರಮುಖ ಸುದ್ದಿಗಳು