50 ಕಡೆ ಸಿ.ಸಿ.ಟಿ.ವಿ.ಕ್ಯಾಮೆರಾ ಅಳವಡಿಕೆ

ಹೊಸಪೇಟೆ: ಗಣೇಶ ಉತ್ಸವದ ವೇಳೆ ನಡೆಯುವ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡಲು ಪೊಲೀಸ್‌ ಇಲಾಖೆಯು ನಗರದ ಪ್ರಮುಖ ಭಾಗಗಳಲ್ಲಿ 50 ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿದೆ.

‘ಮೆರವಣಿಗೆ ಹಾದು ಹೋಗುವ ವಾಲ್ಮೀಕಿ ವೃತ್ತ, ರಾಮಾ ಟಾಕೀಸ್‌, ಆಂಜನೇಯ ದೇವಸ್ಥಾನ, ಮೂರಂಗಡಿ ಮಸೀದಿ, ಚರ್ಚ್‌ ಬಳಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಲ್ಲೆಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗುತ್ತದೆಯೋ ಅಲ್ಲಿ ಆಯಾ ಮಂಡಳಿಯವರಿಗೆ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲಿ ಪೊಲೀಸ್‌ ಸಿಬ್ಬಂದಿ ಕೂಡ ನಿಯೋಜಿಸಲಾಗುತ್ತದೆ. ಅಲ್ಲದೇ ಮೇಲಿಂದ ಮೇಲೆ ಪೊಲೀಸರು ಗಸ್ತು ತಿರುಗುತ್ತಾರೆ’ ಎಂದು ಡಿ.ವೈ.ಎಸ್‌.ಪಿ. ಶಿವಾರೆಡ್ಡಿ ಕೆ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಣೇಶನ ಪ್ರತಿಷ್ಠಾಪನೆಯಿಂದ ವಿಸರ್ಜನೆಯ ವರೆಗೆ ಪೊಲೀಸರು ಹಗಲು–ರಾತ್ರಿ ಕೆಲಸ ನಿರ್ವಹಿಸುವರು. ಸೌಹಾರ್ದತೆಯಿಂದ ಹಬ್ಬ ಆಚರಿಸುವಂತೆ ತಿಳಿಸಲಾಗಿದೆ. ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಖರೀದಿ ಭರಾಟೆ:

ಗಣೇಶ ಚತುರ್ಥಿಯ ಮುನ್ನ ದಿನವಾದ ಬುಧವಾರ ಮಧ್ಯಾಹ್ನದಿಂದ ರಾತ್ರಿ ವರೆಗೆ ಜನಸಂದಣಿ ಕಂಡು ಬಂತ್ತು. ನಗರದ ವಾಲ್ಮೀಕಿ ವೃತ್ತ, ಮೇನ್‌ ಬಜಾರ್‌, ಸೋಗಿ ಮಾರುಕಟ್ಟೆ, ಮಹಾತ್ಮ ಗಾಂಧಿ ವೃತ್ತ, ಬಳ್ಳಾರಿ ರಸ್ತೆಯಲ್ಲಿ ಗಣಪನ ಪ್ರತಿಮೆ ಹಾಗೂ ಪೂಜಾ ವಸ್ತುಗಳ ಖರೀದಿಗೆ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು. ಇದರಿಂದಾಗಿ ವಾಹನ ಹಾಗೂ ಜನದಟ್ಟಣೆ ಇತ್ತು.

ಜನ ಮಣ್ಣಿನ ಗಣಪ, ಅದರಲ್ಲೂ ಬಣ್ಣರಹಿತವಾದ ಪ್ರತಿಮೆಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುತ್ತಿರುವುದು ಕಂಡು ಬಂತು. ಹೂ, ಹಣ್ಣು, ಕಾಯಿ, ಕರ್ಪೂರ, ಬಾಳೆದಿಂಡು, ಶಲ್ಯ, ಕೇಸರಿ ವರ್ಣದ ಗಾಂಧಿ ಟೋಪಿಗಳನ್ನು ಖರೀದಿಸಿದರು. ಸೋಗಿ ತರಕಾರಿ ಮಾರುಕಟ್ಟೆಯಲ್ಲೂ ಸಂಜೆ ಜನಜಾತ್ರೆ ಕಂಡು ಬಂತು. ಸುಗಮ ವಾಹನ ಸಂಚಾರಕ್ಕೆ ಪೊಲೀಸರು ಪರದಾಟ ನಡೆಸಿದರು.

ಗಣೇಶ ಮಂಡಳಿಯವರು ವಾಹನಗಳಲ್ಲಿ ಬೃಹತ್‌ ಗಣಪನ ಪ್ರತಿಮೆಗಳನ್ನು ಕೊಂಡೊಯ್ದರು. ‘ಗಣಪತಿ ಬೊಪ್ಪ ಮೋರ್‍ಯಾ’ ಎಂಬ ಘೋಷಣೆ ಕೂಗುತ್ತ ಪ್ರತಿಮೆಗಳನ್ನು ತೆಗೆದುಕೊಂಡು ಹೋದರು.

ಪ್ರಮುಖ ಸುದ್ದಿಗಳು