ದೇಶ ಬಿಡುವ ಮುನ್ನ ವಿತ್ತ ಸಚಿವರ ಭೇಟಿಯಾಗಿದ್ದೆ– ಮಲ್ಯ; ಎಲ್ಲ ಸುಳ್ಳು– ಜೇಟ್ಲಿ

ಲಂಡನ್‌: ಅಕ್ರಮ ಹಣ ವರ್ಗಾವಣೆ ಹಾಗೂ ವಂಚನೆ ಆರೋಪಗಳನ್ನು ಎದುರಿಸುತ್ತಿರುವ ಉದ್ಯಮಿ ವಿಜಯ್‌ ಮಲ್ಯ ಭಾರತ ಬಿಟ್ಟು ವಿದೇಶಕ್ಕೆ ಹಾರುವುದಕ್ಕೂ ಮುನ್ನ ವಿತ್ತ ಸಚಿವರನ್ನು ಭೇಟಿ ಮಾಡಿದ್ದಾಗಿ ಬುಧವಾರ ಹೇಳಿದ್ದಾರೆ.

ಸಾವಿರಾರು ರೂಪಾಯಿ ವಂಚನೆ ಆರೋಪದ ಅಡಿ ಮಲ್ಯರನ್ನು ಭಾರತಕ್ಕೆ ಗಡೀಪಾರು ಮಾಡುವ ಪ್ರಕರಣದ ವಿಚಾರಣೆ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಇಂದು ಮಲ್ಯ ಹಾಜರಾದರು. ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ’ನನಗೆ ಜಿನೆವಾದಲ್ಲಿ ಪೂರ್ವ ನಿಗದಿತ ಸಭೆ ಇದ್ದುದರಿಂದ ಭಾರತದಿಂದ ಹೊರಟೆ. ಹೊರಡುವುದಕ್ಕೂ ಮುನ್ನ ಬ್ಯಾಂಕ್‌ಗಳೊಂದಿಗೆ ಸಾಲದ ವಿಚಾರ ಇತ್ಯರ್ಥಗೊಳಿಸುವ ಪ್ರಸ್ತಾವನೆಯೊಂದಿಗೆ ವಿತ್ತ ಸಚಿವರನ್ನು ಭೇಟಿ ಮಾಡಿದ್ದೆ. ಇದು ಸತ್ಯ’ ಎಂದರು. 

’ನಾನು ಈಗಾಗಲೇ ಕರ್ನಾಟಕ ಹೈಕೋರ್ಟ್‌ ಮುಂದೆ ₹15 ಸಾವಿರ ಕೋಟಿ ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟಿದ್ದೇನೆ. ಆದರೆ, ಈ ಪ್ರಕರಣದಲ್ಲಿ ನಾನು ರಾಜಕೀಯ ದಾಳವಾಗಿದ್ದೇನೆ. ಈ ಬಗ್ಗೆ ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ’ ಎಂದರು. ಮಲ್ಯ 2016ರಲ್ಲಿ ಭಾರತದಿಂದ ಹಾರಿ ಪಾರಾಗುವ ವೇಳೆ ಅರುಣ್‌ ಜೇಟ್ಲಿ ವಿತ್ತ ಸಚಿವರಾಗಿದ್ದರು. 

ಎಲ್ಲ ಬರೀ ಸುಳ್ಳು: ಜೇಟ್ಲಿ

ಮಲ್ಯ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅರುಣ್‌ ಜೇಟ್ಲಿ, ಅವರ ಹೇಳಿಕೆ ಅಕ್ಷರಶಃ ಸುಳ್ಳು ಎಂದಿದ್ದಾರೆ. 2014ರಿಂದಲೂ ಅವರಿಗೆ ನನ್ನ ಭೇಟಿಗೆ ಯಾವುದೇ ಸಮಯ ನೀಡಿಲ್ಲ, ಹಾಗಾಗಿ ನಾವು ಭೇಟಿ ಮಾಡಿರುವ ಪ್ರಮೇಯವೇ ಎದುರಾಗಿಲ್ಲ. ಆದರೆ, ರಾಜ್ಯಸಭಾ ಸದಸ್ಯರಾಗಿದ್ದ ಅವರು ಕೆಲವು ಸಂದರ್ಭಗಳಲ್ಲಿ ಮಾತ್ರ ರಾಜ್ಯ ಸಭೆಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ರಾಜ್ಯಸಭಾ ಸದಸ್ಯತ್ವದ ಅವಕಾಶಗಳನ್ನು ದುರುಪಯೋಗ ಪಡಿಸಿಕೊಂಡ ಅವರು, ನಾನು ಒಮ್ಮೆ ನನ್ನ ಕಚೇರಿ ಕೊಠಡಿ ಕಡೆಗೆ ನಡೆದು ಹೋಗುತ್ತಿದ್ದ ಸಮಯದಲ್ಲಿ ದಿಢೀರನೆ ಎದುರಾಗಿ ಮಾತಿಗಿಳಿದರು. ’ಇತ್ಯರ್ಥಗಳೊಸಿಲು ಇರಾದೆ ಇದೆ..’ ಎಂದರು. ಅವರು ಕೈನಲ್ಲಿ ಹಿಡಿದಿದ್ದ ಪತ್ರಗಳನ್ನೂ ಸಹ ನಾನು ಸ್ವೀಕರಿಸದೆ, ’ನಿಮ್ಮ ಇತ್ಯರ್ಥಗಳೇನೇ ಇದ್ದರೂ ಅದು ಬ್ಯಾಂಕರ್‌ಗಳೊಂದಿಗೆ ಮಾಡಿ, ನನ್ನೊಂದಿಗೆ ಮಾತನಾಡುವುದರಿಂದ ಪ್ರಯೋಜನವಿಲ್ಲ’ ಎಂದು ಹೇಳಿದೆ. ಇದನ್ನು ಹೊರತುಪಡಿಸಿ ಬ್ಯಾಂಕ್‌ ವಿಚಾರಗಳಿಗೆ ಸಂಬಂಧಿಸಿದಂತೆ ಅವರ ಭೇಟಿಗೆ ಯಾವುದೇ ಸಮಯ ನಿಗದಿ ಪಡಿಸಿಲ್ಲ ಎಂದು ಹೇಳಿದ್ದಾರೆ. 

ಪ್ರಮುಖ ಸುದ್ದಿಗಳು