ಕುದೇರು: ಸ್ವರ್ಣಗೌರಿ ಪ್ರತಿಷ್ಠಾಪನೆ

ಸಂತೇಮರಹಳ್ಳಿ: ಸಮೀಪದ ಕುದೇರು ಗ್ರಾಮದಲ್ಲಿ ಗೌರಿ– ಗಣೇಶ ಹಬ್ಬದ ಅಂಗವಾಗಿ ಗೌರಿ ದೇವಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಬುಧವಾರ ಮಾಡಲಾಯಿತು. ಇಲ್ಲಿ ಗಣೇಶ ಮೂರ್ತಿ ಬದಲಿಗೆ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಿಶೇಷ.

ಗ್ರಾಮದ ಮುಂಭಾಗವಿರುವ ಯಮುನಾ ತಡಿಯಲ್ಲಿ ಮರಳಿನ ಗೌರಿ ಮೂರ್ತಿಯನ್ನು ತಯಾರಿಸಿ ಪಲ್ಲಕ್ಕಿಯಲ್ಲಿ ಕೂರಿಸಲಾಯಿತು. ಗ್ರಾಮದ ಪ್ರತಿ ಸಮುದಾಯದ ಮಹಿಳೆಯರು ಪಲ್ಲಕ್ಕಿಯಲ್ಲಿದ್ದ ಗೌರಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿದರು.

ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ, ದೇವಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. ಇದರ ಜೊತೆಗೆ ಕಡಲೆ ಹಿಟ್ಟಿನ ಗೌರಿಯನ್ನು ಇಡಲಾಯಿತು.

5ನೇ ದಿನದ ನಂತರ ಸ್ವರ್ಣ ಕವಚದ ಗೌರಿಯನ್ನು ಅಲಂಕರಿಸಿ 12ನೇ ದಿನದವರೆಗೂ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ, ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿ, ಪೂಜೆ ನೆರವೇರಿಸಿದ ನಂತರ ವಿಸರ್ಜಿಸಲಾಗುತ್ತದೆ.

ಪ್ರಮುಖ ಸುದ್ದಿಗಳು