ಹಲವು ಅವತಾರಗಳಲ್ಲಿ ಗಣೇಶ

ಬೀದರ್: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಗಣೇಶ ಪ್ರತಿಷ್ಠಾಪನೆ ಆಗಲಿದ್ದು, ಮನೆ ಮನೆಗಳಲ್ಲೂ ಭರದ ಸಿದ್ಧತೆಗಳು ನಡೆದಿವೆ.

ವಿಘ್ನ ನಿವಾರಕನನ್ನು ಶ್ರದ್ಧೆ, ಭಕ್ತಿಯಿಂದ ಬರಮಾಡಿಕೊಳ್ಳಲು ಭಕ್ತರು ಉತ್ಸುಕರಾಗಿದ್ದಾರೆ. ಮಾರುಕಟ್ಟೆಯಲ್ಲಿ ಗಣಪನ ಮೂರ್ತಿ ಹಾಗೂ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿಯಲ್ಲಿ ನಿರತರಾಗಿದ್ದಾರೆ.

ನಗರಕ್ಕೆ ನೆರೆಯ ತೆಲಂಗಾಣದ ಹೈದರಾಬಾದ್, ಮಹಾರಾಷ್ಟ್ರದ ಉಸ್ಮಾನಾಬಾದ್ ಸೇರಿದಂತೆ ವಿವಿಧೆಡೆಯಿಂದ ಲಂಬೋದರನ ವಿಭಿನ್ನ ಭಾವ, ಭಂಗಿಗಳ ಮೂರ್ತಿಗಳು ಬಂದಿವೆ.

ಆನೆಯ ಸೊಂಡಿಲು, ಸರ್ಪ, ಹುಲಿ, ಸಿಂಹಾಸನದ ಮೇಲೆ ಕುಳಿತ, ಕೈಯಲ್ಲಿ ತ್ರಿಶೂಲ ಹಿಡಿದ, ಬೆರಳುಗಳಲ್ಲಿ ಸುದರ್ಶನ ಚಕ್ರ ಇಟ್ಟುಕೊಂಡ ಹೀಗೆ ಹಲವು ಅವತಾರಗಳಲ್ಲಿ ಇರುವ ಏಕದಂತನ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ.

ಶಿವನಗರ, ಗುರುನಾನಕ ಗೇಟ್, ಮಡಿವಾಳ ಮಾಚಿದೇವ ವೃತ್ತ, ನೆಹರೂ ಕ್ರೀಡಾಂಗಣ, ಹರಳಯ್ಯ ವೃತ್ತ, ಅಂಬೇಡ್ಕರ್ ವೃತ್ತ, ಜನವಾಡ ರಸ್ತೆ, ಬಸವೇಶ್ವರ ವೃತ್ತ, ರಾಮ ಚೌಕ, ಗುಂಪಾ ಸೇರಿದಂತೆ ನಗರದ ವಿವಿಧೆಡೆ ನೂರಾರು ಗಣಪನ ಮೂರ್ತಿಗಳ ತಾತ್ಕಾಲಿಕ ಅಂಗಡಿಗಳು ತೆರೆದುಕೊಂಡಿವೆ.

‘ಜನ ಮನೆಗಳಲ್ಲಿ ಕೂಡಿಸಲು ಚಿಕ್ಕ ಗಾತ್ರದ ಮೂರ್ತಿಗಳನ್ನು ಕೊಂಡುಕೊಂಡರೆ, ಗಣೇಶ ಮಂಡಳಿ ಹಾಗೂ ಯುವಕ ಸಂಘದವರು ಬೃಹತ್ ಗಾತ್ರದ ಅತ್ಯಾಕರ್ಷಕ ಮೂರ್ತಿಗಳನ್ನು ಒಯ್ಯುತ್ತಿದ್ದಾರೆ’ ಎಂದು ಹೇಳುತ್ತಾರೆ ಗಣೇಶ ಮೂರ್ತಿಗಳ ವ್ಯಾಪಾರಿ ರಾಜಕುಮಾರ ಹಳ್ಳದಕೇರಿ.

‘ಪಿಒಪಿ ಮೂರ್ತಿಗಳಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿರುವ ಕಾರಣ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ಅಲ್ಲಲ್ಲಿ ನಡೆಯುತ್ತಿವೆ. ಆದರೂ ಮಾರುಕಟ್ಟೆಯಲ್ಲಿ ಮಣ್ಣಿನಿಂದ ತಯಾರಿಸಿದ ಗಣಪನ ಮೂರ್ತಿಗಳು ಅಧಿಕ ಸಂಖ್ಯೆಯಲ್ಲಿ ಇಲ್ಲ. ಇರುವ ಅಲ್ಪ ಸಂಖ್ಯೆಯ ಮೂರ್ತಿಗಳ ಬೆಲೆ ಜಾಸ್ತಿ ಇದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ನಗರದ ನಿವಾಸಿ ಪ್ರಕಾಶ ಪಿ.

ಗಣೇಶನ ಪ್ರತಿಷ್ಠಾಪನೆ ಪ್ರಯುಕ್ತ ಮಾರುಕಟ್ಟೆಯಲ್ಲಿ ಹಣ್ಣು, ಹೂವುಗಳ ಮಾರಾಟ ಜೋರಾಗಿದೆ. ಪೂಜಾ ಸಾಮಗ್ರಿ, ಸಿಹಿ ತಿನಿಸುಗಳ ಅಂಗಡಿಗಳಲ್ಲಿಯೂ ಜನರ ದಂಡು ಕಂಡು ಬರುತ್ತಿದೆ.

ಪ್ರಮುಖ ಸುದ್ದಿಗಳು