ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ದೂರು

ಬೆಂಗಳೂರು: ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ‘ಅಧಿಸೂಚಿತ ದೇವಸ್ಥಾನಗಳ ಪಟ್ಟಿ’ಯಿಂದ ಹೊರತೆಗೆದು ರಾಮಚಂದ್ರಾಪುರಮಠದ ಸ್ವಾಧೀನಕ್ಕೆ ಕೊಟ್ಟಿದ್ದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್‌ ತೀರ್ಪು ಪ್ರಕಟಗೊಂಡು ತಿಂಗಳಾದರೂ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲಾಗಿದೆ.

’ಕಮಿಟಿ ಆನ್‌ ಜ್ಯುಡಿಷಿಯಲ್‌ ಅಕೌಂಟಬಲಿಟಿ’ ಸಂಘಟನೆ ನೀಡಿರುವ ದೂರಿನಲ್ಲಿ, ಕಂದಾಯ ಇಲಾಖೆಯ (ಮುಜರಾಯಿ, ಸ್ಟ್ಯಾಂಪ್ಸ್‌ ಮತ್ತು ನೋಂದಣಿ) ಪ್ರಧಾನ ಕಾರ್ಯದರ್ಶಿ ಗಂಗಾರಾಂ ಬಡೇರಿಯಾ, ಆಯುಕ್ತೆ ಸಿ.ಪಿ. ಶೈಲಜಾ, ಉತ್ತರ ಕನ್ನಡದ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಚ್‌. ಹಾಲಪ್ಪ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಪ್ರಕರಣದ ತೀರ್ಪು ಹೊರಬಿದ್ದ ದಿನದಿಂದಲೇ ಅಧಿಸೂಚಿತ ದೇವಸ್ಥಾನಗಳ ಪಟ್ಟಿಗೆ ಮಹಾಬಲೇಶ್ವರ ಸೇವಾಲಯ ಸೇರ್ಪಡೆಯಾಗಬೇಕು ಎಂದು ಕೋರ್ಟ್‌ ಹೇಳಿದೆ. ಅಲ್ಲದೆ, ಉತ್ತರ ಕನ್ನಡದ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ದೇವಸ್ಥಾನ ಉಸ್ತುವಾರಿಗೆ ಸಮಿತಿ ರಚಿಸಿದೆ. ಸೆಪ್ಟೆಂಬರ್‌ 10ರಿಂದ ಸಮಿತಿ ಕೆಲಸ ಮಾಡಲಿದೆ ಎಂದೂ ತೀರ್ಪಿನಲ್ಲಿ ಹೇಳಿದೆ.

ಈಗಲೂ ರಾಮಚಂದ್ರಪುರದ ಮಠದ ಸುಪರ್ದಿನಲ್ಲೇ ದೇವಸ್ಥಾನ ಇದೆ. ಪೂಜೆ– ಪುನಸ್ಕಾರಕ್ಕೆ ಸಂಬಂಧಿಸಿದ ರಶೀದಿಗಳನ್ನು ಮಠವೇ ವಿತರಿಸುತ್ತಿದೆ. ಆಡಳಿತವನ್ನು ಅದೇ ನೋಡಿಕೊಳ್ಳುತ್ತಿದೆ ಎಂದು  ದೂರಿನಲ್ಲಿ ಆರೋಪಿಸಲಾಗಿದೆ. ಮಠ ಸಂಗ್ರಹಿಸಿರುವ ಹಣವನ್ನು ವಸೂಲು ಮಾಡುವಂತೆಯೂ ಮನವಿ ಮಾಡಲಾಗಿದೆ. 

ದೇವಸ್ಥಾನವನ್ನು ಸ್ವಾಧೀನಕ್ಕೆ ಪಡೆದು ಕಾರ್ಯನಿರ್ವಾಹಕ ಅಧಿಕಾರಿ ನೇಮಿಸಿರುವುದಾಗಿ ರಾಜ್ಯ ಸರ್ಕಾರ ಆಗಸ್ಟ್‌ 28ರಂದು ಆದೇಶ ಹೊರಡಿಸಿದೆ. ಆದರೆ, ಅದು ತೋರಿಕೆಗೆ ಮಾತ್ರ ಎಂದು ವಿವರಿಸಲಾಗಿದೆ. ಹೈಕೋರ್ಟ್‌ ತೀರ್ಪಿನ ವಿರುದ್ಧ ಮಠವು ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಸುಪ್ರೀಂ ಕೋರ್ಟ್‌ ಈ ತೀರ್ಪಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಇಷ್ಟಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಹೇಳಲಾಗಿದೆ. ಶಿವಕುಮಾರ್‌ ಎಸ್‌ ಹಾಗೂ ಪ್ರವೀಣ್‌ ಜಿ ಎಂಬುವವರು ದೂರಿಗೆ ಸಹಿ ಹಾಕಿದ್ದಾರೆ.

ಪ್ರಮುಖ ಸುದ್ದಿಗಳು