ಸಂಚಾರಿ ತಾರಾಲಯಗಳಿಗೂ ಅಡ್ಡಿಯಾದ ‘ಸಾಲ ಮನ್ನಾ’

ಬೆಂಗಳೂರು:ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದ ‘ಶಾಲೆಯ ಅಂಗಳದಲ್ಲೇ ತಾರಾಲಯ’ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ತಡೆ ನೀಡಿದೆ.

ಇದಕ್ಕೆ ಕಾರಣ ರೈತರ ಸಾಲ ಮನ್ನಾ. ಸಾಲ ಮನ್ನಾಗೆ ಹಣ ಹೊಂದಿಸಲು ‘ಅನಗತ್ಯ’ ಖರ್ಚುಗಳಿಗೆ ಕಡಿವಾಣ ಹಾಕಬೇಕೆಂದು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲ್ಲದೇ, ಮೊದಲ ಹಂತದಲ್ಲಿ ಹೈದರಾಬಾದ್‌– ಕರ್ನಾಟಕ ವಿಭಾಗದ ಜಿಲ್ಲೆಗಳಿಗೆ 9 ಸಂಚಾರಿ ತಾರಾಲಯಗಳ ಖರೀದಿಗಾಗಿ ನಡೆಸಬೇಕಿದ್ದ ಟೆಂಡರ್‌ ಪ್ರಕ್ರಿಯೆಗೂ ತಡೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಐಟಿ– ಬಿಟಿ ಸಚಿವರಾಗಿದ್ದ ಎಸ್‌.ಆರ್‌.ಪಾಟೀಲ ಮತ್ತು ಎಂ.ಆರ್‌.ಸೀತಾರಾಂ ಅವರ ವಿಶೇಷ ಆಸಕ್ತಿಯಿಂದ ಈ ಯೋಜನೆ ಜಾರಿ ಆಗಿತ್ತು. ರಾಜ್ಯದ ಮೂಲೆ– ಮೂಲೆಗಳಲ್ಲಿರುವ ಗ್ರಾಮಾಂತರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ತಾರಾಲಯಗಳು ತಲುಪಬೇಕು. ಇದರಿಂದ ಅವರಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಲು ಕಾರಣವಾಗುತ್ತದೆ ಎಂಬುದು ಯೋಜನೆ ಹಿಂದಿನ ಮುಖ್ಯ ಉದ್ದೇಶ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಾರ ಸೊಸೈಟಿ ಮತ್ತು ವರ್ಣಾಜ್ ಟೆಕ್ನಾಲಜಿ ಸಂಸ್ಥೆಯ ‘ತಾರೇ ಜಮೀನ್ ಪರ್‌’ ಸಹಯೋಗದೊಂದಿಗೆ ತಾರಾಲಯಗಳನ್ನು ಹಳ್ಳಿ– ಹಳ್ಳಿಗಳ ಶಾಲೆಗಳಿಗೆ ಪ್ರದರ್ಶನಕ್ಕಾಗಿ ಒಯ್ಯಲಾಗುತ್ತಿದೆ.

‘ಸದ್ಯಕ್ಕೆ ಐದು ಸಂಚಾರಿ ತಾರಾಲಯಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈವರೆಗೆ 25 ಜಿಲ್ಲೆಗಳ  ಸುಮಾರು 2 ಲಕ್ಷ ವಿದ್ಯಾರ್ಥಿಗಳಿಗೆ ತಾರಾಲಯದ ಮೂಲಕ ವಿಜ್ಞಾನದ  ಪ್ರದರ್ಶನ ವೀಕ್ಷಿಸಿದ್ದಾರೆ’ ಎಂದು ವರ್ಣಾಜ್ ಟೆಕ್ನಾಲಜಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿನೇಶ್‌ ಬಡಗಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

2017 ರ ಆಗಸ್ಟ್‌ನಲ್ಲಿ ಸಂಚಾರಿ ತಾರಾಲಯಗಳಿಗೆ ಚಾಲನೆ ನೀಡಿದ್ದ ಅಂದಿನ ಐಟಿ– ಬಿಟಿ ಸಚಿವ ಎಂ.ಆರ್‌.ಸೀತಾರಾಂ  ಜಿಲ್ಲೆಗೊಂದು ಸಂಚಾರಿ ತಾರಾಲಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಬಜೆಟ್‌ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ಹೈದರಾಬಾದ್‌– ಕರ್ನಾಟಕ ಪ್ರದೇಶಕ್ಕಾಗಿ ಒಟ್ಟು 9 ಸಂಚಾರಿ ತಾರಾಲಯಗಳನ್ನು ಖರೀದಿಸುವುದಾಗಿ ಪ್ರಕಟಿಸಿದ್ದರು ಎಂದು ಐಟಿ–ಬಿಟಿ ಇಲಾಖೆ ಮೂಲಗಳು ತಿಳಿಸಿವೆ.

‘ಸಂಚಾರಿ ತಾರಾಲಯ ಖರೀದಿ ಪ್ರಕ್ರಿಯೆಗೆ ಟೆಂಡರ್‌ ಕರೆದು, ಟೆಕ್ನಿಕಲ್‌ ಬಿಡ್‌ ತೆರೆಯುವುದಕ್ಕೆ ಮೊದಲೇ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಆಯಿತು. ಇದರಿಂದ ಟೆಂಡರ್‌ ಪ್ರಕ್ರಿಯೆಗೆ ತಡೆ ನೀಡಲಾಯಿತು. ಆದರೆ, ಹೊಸ ಸರ್ಕಾರ ಬಂದ ಮೇಲೆ ಟೆಂಡರ್‌ ಪ್ರಕ್ರಿಯೆಗೆ ಮರು ಚಾಲನೆ ನೀಡಲೇ ಇಲ್ಲ. ಅಷ್ಟೇ ಅಲ್ಲ, ತಮ್ಮ ಭಾಗಕ್ಕೆ ಸಿಗಬೇಕಿದ್ದ 9 ಸಂಚಾರಿ ತಾರಾಲಯಗಳಿಗೆ ಹೈದರಾಬಾದ್‌– ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕೆಲವು ಅಧಿಕಾರಿಗಳೇ ಅಡ್ಡಿಯಾಗಿದ್ದಾರೆ. ಸಂಚಾರಿ ತಾರಾಲಯಗಳಿಗೆ ಹಣವಿಲ್ಲ ಎಂಬ ಉತ್ತರ ನೀಡುತ್ತಾರೆ. ಸಿದ್ದರಾಮಯ್ಯ ಸರ್ಕಾರ ನಿಗದಿ ಮಾಡಿದ್ದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿರಲೂ ಬಹುದು’ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಮೂಲಗಳು ತಿಳಿಸಿವೆ. 

 

 

ಪ್ರಮುಖ ಸುದ್ದಿಗಳು