ಅತ್ಯಾಚಾರ: ಬಿಷಪ್‌ಗೆ ಸಮನ್ಸ್‌

ಕೊಚ್ಚಿ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಜಲಂಧರ್‌ನ ರೋಮನ್‌ ಕ್ಯಾಥೋಲಿಕ್‌ ಬಿಷಪ್‌ ಫ್ರಾಂಕೊ ಮುಲ್ಲಕಲ್‌ ಅವರಿಗೆ ತನಿಖಾ ತಂಡದ ಮುಂದೆ ಇದೇ 19ರಂದು ಹಾಜರಾಗಲು ಸೂಚಿಸಲಾಗಿದೆ.

ಐಜಿಪಿ ವಿಜಯ್‌ ಸಾಖರೆ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಫ್ರಾಂಕೊ ಅವರಿಗೆ ಸಮನ್ಸ್‌ ನೀಡುವ ನಿರ್ಧಾರ ಕೈಗೊಳ್ಳಲಾಯಿತು. ಕೋಟಯಂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿಶಂಕರ್‌ ಮತ್ತು ವೈಕಮ್‌ ಡಿವೈಎಸ್ಪಿ ಕೆ. ಸುಭಾಷ್‌ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಿಷಪ್‌ ಫ್ರಾಂಕೊ ಅವರನ್ನು ಬಂಧಿಸುವಂತೆ ಒತ್ತಡ ಹೆಚ್ಚಿದ್ದರಿಂದ ಹಿರಿಯ ಪೊಲೀಸ್‌ ಅಧಿಕಾರಿಗಳು  ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

'ಚರ್ಚ್‌ಗಳ ಶುದ್ಧೀಕರಣಕ್ಕೆ ಅವಕಾಶ’
ತಿರುವನಂತಪುರ: ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಖಂಡಿಸಿ ತಿರುವನಂತಪುರದ ಸಚಿವಾಲಯದ ಬಳಿ ನಡೆಯುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರಿದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಸ್ಟರ್‌ ಜೆಸ್ಮೆ, ‘ಅತ್ಯಾಚಾರ ಪ್ರಕರಣದಿಂದ ಚರ್ಚ್‌ಗಳ ಶುದ್ಧೀಕರಣಕ್ಕೆ ಕರೆ‌ ನೀಡಿದಂತಾಗಿದೆ’ ಎಂದು ಹೇಳಿದ್ದಾರೆ. ‘ಚರ್ಚ್‌ಗಳಿಂದ ಕ್ರಿಸ್ತ ದೂರವಾಗುತ್ತಿದ್ದು, ಹಣದ ಪ್ರಭಾವವೇ ಹೆಚ್ಚಾಗುತ್ತಿದೆ ಎಂದು ಹೇಳಿದರು.

ವಿಷಾದ ವ್ಯಕ್ತಪಡಿಸಿದ ಶಾಸಕ
ಕ್ರೈಸ್ತ ಸನ್ಯಾಸಿನಿಯನ್ನು ನಿಂದಿಸಿ ಹೇಳಿಕೆ ನೀಡಿದ್ದಕ್ಕಾಗಿ ಶಾಸಕ ಪಿ.ಸಿ. ಜಾರ್ಜ್‌ ವಿಷಾದ ವ್ಯಕ್ತಪಡಿಸಿದ್ದಾರೆ. ’ಮನಸ್ಸಿಗೆ ನೋವು ಉಂಟು ಮಾಡುವ ಶಬ್ದಗಳನ್ನು ಬಳಸಬಾರದಿತ್ತು. ಇದಕ್ಕಾಗಿ ನನಗೂ ನೋವಾಗಿದೆ. ಸಾಕ್ಷ್ಯಗಳಿದ್ದರೆ ಬಿಷಪ್‌ ಫ್ರಾಂಕೊ ಮುಲಕ್ಕಲ್‌ ಅವರನ್ನು ತಕ್ಷಣವೇ ಬಂಧಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. 'ಕ್ರೈಸ್ತ ಸನ್ಯಾಸಿನಿ 12 ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ ಮೌನವಹಿಸಿ, 13ನೇ ಬಾರಿ ಅದು ಅತ್ಯಾಚಾರ ಎಂದು ಆರೋಪಿಸಿದ್ದಾರೆ. ಮೊದಲ ಬಾರಿಯೇ ಏಕೆ ದೂರು ನೀಡಲಿಲ್ಲ' ಎಂದು ಶಾಸಕ ಪಿ.ಸಿ. ಜಾರ್ಜ್ ಅವಹೇಳನಕಾರಿಯಾಗಿ ನಿಂದಿಸಿದ್ದರು.
 

 

ಪ್ರಮುಖ ಸುದ್ದಿಗಳು