ಭಾಗವತ್‌ ಭಾಷಣಕ್ಕೆ 500 ಗಣ್ಯರು

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಇದೇ 17ರಿಂದ 19ರವರೆಗೆ ನೀಡಲಿರುವ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ 500ಕ್ಕೂ ಹೆಚ್ಚು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ.

‘ಭಾರತದ ಭವಿಷ್ಯ; ಆರ್‌ಎಸ್‌ಎಸ್‌ ದೃಷ್ಟಿಕೋನ’ ಎಂಬ ವಿಷಯ ಕುರಿತು ಭಾಗವತ್‌ ಉಪನ್ಯಾಸ ನೀಡಲಿದ್ದಾರೆ.

ಎಲ್ಲ ಧರ್ಮಗಳ ಮುಖಂಡರು, ಚಲನಚಿತ್ರ ನಟರು, ಕ್ರೀಡಾಪಟುಗಳು, ಉದ್ಯಮಿಗಳು, ನಿವೃತ್ತ ನ್ಯಾಯಾಧೀಶರು, ಭದ್ರತಾ ಪಡೆಗಳ ಮಾಜಿ ಮುಖ್ಯಸ್ಥರು, 60 ದೇಶಗಳ ರಾಯಭಾರಿಗಳು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ. 500 ಗಣ್ಯರ ಪಟ್ಟಿ ತಯಾರಿಸಲಾಗಿದ್ದು, ಎಲ್ಲರಿಗೂ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ. ಕಾರ್ಯಕ್ರಮದ ಕೊನೆಯ ದಿನ ಸಂವಾದ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸೇರಿದಂತೆ ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸುವ ಸಾಧ್ಯತೆ ಇದೆ.

‘ರಾಷ್ಟ್ರೀಯ ಪ್ರಾಮುಖ್ಯತೆಯ ವಿವಿಧ ವಿಷಯಗಳ ಕುರಿತು ಸಂಘದ ಅಭಿಪ್ರಾಯಗಳನ್ನು ಭಾಗವತ್‌ ಮಂಡಿಸುವರು’ ಎಂದು ಆರ್‌ಎಸ್‌ಎಸ್‌ ಪ್ರಚಾರ ಪ್ರಮಖ ಅರುಣ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳು