ನಿರ್ದಿಷ್ಟ ದಾಳಿಗೆ ಚಿರತೆಯ ಮಲ–ಮೂತ್ರ ಬಳಕೆ

ಪುಣೆ: ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಪಾಕಿಸ್ತಾನ ಪ್ರದೇಶದಲ್ಲಿರುವ ಉಗ್ರರ ತಾಣಗಳ ಮೇಲೆ 2016ರ ಸೆಪ್ಟೆಂಬರ್‌ನಲ್ಲಿ ನಡೆಸಿದ ನಿರ್ದಿಷ್ಟ ದಾಳಿ ಸಂದರ್ಭದಲ್ಲಿ ಭಾರತೀಯ ಯೋಧರು ಬಂದೂಕುಗಳ ಜತೆಗೆ ವಿಚಿತ್ರವಾದ ಆಯುಧವನ್ನು ಬಳಸಿಕೊಂಡಿದ್ದರು. ಅದು ಚಿರತೆಯ ಮಲ– ಮೂತ್ರ.

‘ಉಗ್ರರ ತಾಣಗಳ ಬಳಿಯ ಗ್ರಾಮಗಳಲ್ಲಿದ್ದ ನಾಯಿಗಳು ಯೋಧರು ಕಂಡು ಬೊಗಳುವ ಸಾಧ್ಯತೆ ಇತ್ತು. ಹಾಗೆ ಅವು ಬೊಗಳಿದ್ದರೆ ಉಗ್ರರಿಗೆ ನಮ್ಮ ದಾಳಿಯ ಸುಳಿವು ದೊರೆಯುತ್ತಿತ್ತು. ಹಾಗಾಗಿ ನಾಯಿಗಳನ್ನು ದೂರ ಓಡಿಸುವುದಕ್ಕಾಗಿ ಚಿರತೆಯ ಮಲ–ಮೂತ್ರವನ್ನು ದಾರಿಯುದ್ದಕ್ಕೂ ಸಿಂಪಡಿಸಲಾಯಿತು’ ಎಂದು ನಿವೃತ್ತ ಲೆಫ್ಟಿನಂಟ್‌ ಜನರಲ್‌ ರಾಜೇಂದ್ರ ನಿಂಭೋರ್ಕರ್‌ ಹೇಳಿದರು.

ದಾಳಿಯ ಸಮಯದಲ್ಲಿ ನಿಂಭೋರ್ಕರ್‌ ಅವರು ಎಲ್‌ಒಸಿ ಸಮೀಪ ಭದ್ರತೆಗೆ ನಿಯೋಜನೆಗೊಂಡಿದ್ದ 15 ಕೋರ್‌ನ ಮುಖ್ಯಸ್ಥರಾಗಿದ್ದರು ಹಾಗೂ ನಿರ್ದಿಷ್ಟ ದಾಳಿ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಥೋರ್ಲೆ ಬಾಜಿರಾವ್ ಪೇಶ್ವೆ ಪ್ರತಿಷ್ಠಾನ (ಟ್ರಸ್ಟ್‌) ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದಾಳಿ ಸಂದರ್ಭದಲ್ಲಿ ಗ್ರಾಮಗಳಲ್ಲಿರುವ ನಾಯಿಗಳು ದಾಳಿ ಮಾಡಬಹುದು ಎಂಬುದು ಆರಂಭದಲ್ಲಿಯೇ ಗೊತ್ತಿತ್ತು. ಹಾಗಾಗಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದ್ದೆವು ಎಂದು ಹೇಳಿದ್ದಾರೆ. 

‘ನೌಶೇರಾ ವಲಯದಲ್ಲಿ ಬ್ರಿಗೇಡ್‌ ಕಮಾಂಡರ್‌ ಆಗಿದ್ದ ಸಂದರ್ಭದಲ್ಲಿ ರಾತ್ರಿ ಸಮಯದಲ್ಲಿ ಚಿರತೆಗಳಿಂದ ತಪ್ಪಿಸಿಕೊಳ್ಳಲು ನಾಯಿಗಳು ಓಡಿಹೋಗುತ್ತಿದ್ದುದನ್ನು ಕಂಡಿದ್ದೆ. ಈ ಅನುಭವವನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು. ಯೋಧರು ಸಾಗುವ ಮಾರ್ಗದ ಉದ್ದಕ್ಕೂ ಚಿರತೆಯ ಮೂತ್ರವನ್ನು ಸಿಂಪಡಿಸಿ ನಾಯಿಗಳನ್ನು ದೂರ ಇರಿಸಲಾಯಿತು’ ಎಂದು ಹೇಳಿದರು.

‘ದಾಳಿಯ ಯೋಜನೆಯ ಬಗ್ಗೆ ಗೋಪ್ಯತೆ ಕಾಪಾಡಲಾಗಿತ್ತು. ಅಂದಿನ ರಕ್ಷಣಾ ಸಚಿವರಾಗಿದ್ದ ಮನೋಹರ ಪರ್ರಿಕರ್‌ ಅವರು ಯೋಜನೆ ಅನುಷ್ಠಾನಕ್ಕೆ ಒಂದು ವಾರ ಕಾಲಾವಕಾಶ ನೀಡಿದ್ದರು. ನಮ್ಮ ತಂಡದಲ್ಲಿದ್ದ ಯೋಧರಿಗೆ ಯೋಜನೆ ಬಗ್ಗೆ ಮಾಹಿತಿ ನೀಡಿದ್ದೆ. ಆದರೆ ದಾಳಿ ನಡೆಸುವ ಸ್ಥಳಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ದಾಳಿ ನಡೆಸುವ ಒಂದು ದಿನ ಮುಂಚೆ ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದೆ’ ಎಂದು ನಿಂಭೋರ್ಕರ್‌ ಹೇಳಿದರು.

‘ಉಗ್ರರ ಶಿಬಿರಗಳಲ್ಲಿನ ಚಲನವಲನಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗಿತ್ತು. ನಸುಕಿನ ಜಾವ 3.30ಕ್ಕೆ ದಾಳಿ ನಡೆಸಲು ಸೂಕ್ತ ಸಮಯ ಎಂದು ನಿರ್ಧರಿಸಿದ್ದೆವು. ನಿಗದಿತ ಸಮಯಕ್ಕೆ ಎಲ್‌ಒಸಿ ದಾಟಿದ ಪ್ಯಾರಾಟ್ರೂಪ್ಸ್‌ ಮತ್ತು ಇನ್ಫೆಂಟ್ರಿ ಯೋಧರು, ಮೂರು ಶಿಬಿರಗಳನ್ನು ಧ್ವಂಸಗೊಳಿಸಿದರು. 29 ಉಗ್ರರನ್ನು ಕೊಂದು ಹಾಕಿದರು’ ಎಂದು ಅವರು ಹೇಳಿದರು.

2016ರ ಸೆಪ್ಟೆಂಬರ್‌ 28 ಮತ್ತು 29ರ ರಾತ್ರಿ ನಡೆದ ನಿರ್ದಿಷ್ಟ ದಾಳಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್‌ ಎ ತಯಬ (ಎಲ್‌ಇಟಿ) ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಲಾಯಿತು ಎಂದು ಭಾರತೀಯ ಸೇನೆ ಹೇಳಿತ್ತು.

ಪ್ರಮುಖ ಸುದ್ದಿಗಳು