ರಾಜ್ಯ ರಾಜಕಾರಣದ ಸುತ್ತ...

ರಮೇಶ್‌ ಜಿಗಜಿಣಗಿ ಜೆಡಿಎಸ್‌ನಿಂದ ಸ್ಪರ್ಧೆ?
ಕೊಪ್ಪ (ಮಂಡ್ಯ): ಕೇಂದ್ರ ಸಚಿವ ರಮೇಶ್‌ ಜಿಗಜಿಣಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ಬಯಸಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಮಂಗಳವಾರ ಹೇಳಿದರು.

‘ನಮ್ಮ ಸರ್ಕಾರ ಉರುಳುವುದಿಲ್ಲ. ಉರುಳಿಸುತ್ತೇವೆ ಎನ್ನುವವರಿಗೆ ಉರುಳು ಹಾಕಲು ಸಿದ್ಧತೆ ಮಾಡಿಕೊಂಡಿದ್ದೇವೆ. ರಮೇಶ್‌ ಜಿಗಜಿಣಗಿ ನಮ್ಮ ಜತೆ ಮಾತುಕತೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಬಿಜೆಪಿಗೆ ಬರುತ್ತಿದ್ದಾರೆ ಎಂದು ಆ ಪಕ್ಷದವರು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಸರ್ಕಾರ ಉರುಳುತ್ತದೆ ಎಂದು ಆಗಾಗ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಮ್ಮ ಪಕ್ಷದಿಂದ ಬಿಜೆಪಿಗೆ ಹೋಗುವವರು ಯಾರೂ ಇಲ್ಲ. ಅಲ್ಲಿಂದಲೇ ನಮ್ಮ ಪಕ್ಷಕ್ಕೆ ಬರಲು ಹಲವರು ಸಿದ್ಧರಿದ್ದಾರೆ’ ಎಂದರು.

***
ಕಾಂಗ್ರೆಸ್ ತೊರೆಯುವರೇ ಶಾಸಕ ಸುಧಾಕರ್?
ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದ ಬಗ್ಗೆ ಆಗಾಗ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಶಾಸಕ ಡಾ.ಕೆ.ಸುಧಾಕರ್ ಅವರು ಜಾರಕಿಹೊಳಿ ಸಹೋದರರ ಜತೆ ಬಿಜೆಪಿ ಸೇರುತ್ತಾರೆ ಎಂಬ ವದಂತಿ ಕ್ಷೇತ್ರದಲ್ಲಿ ಹೆಚ್ಚಿದೆ.

ಇತ್ತೀಚಿಗೆ ಸುಧಾಕರ್ ಅವರು ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿ ಚರ್ಚಿಸಿದ್ದಾರೆ ಎನ್ನಲಾಗಿದ್ದು, ಅದೀಗ ಕ್ಷೇತ್ರದಲ್ಲಿ ಸಂಚಲನ‌ ಮೂಡಿಸಿದೆ.

‘ಮೂರು ತಿಂಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಸಿಕ್ಕಿಲ್ಲ. ಸಮ್ಮಿಶ್ರ ಸರ್ಕಾರದ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಸುಧಾಕರ್ ಅವರು ಹೇಳಿಕೊಂಡಿದ್ದಾರೆ’ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸುಧಾಕರ್ ಅವರನ್ನು ಹಲವು ಬಾರಿ ಸಂಪರ್ಕಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

***
ಎಣ್ಣೆ ಬಂದಾಗ ಕಣ್ಣು ಮುಚ್ಚಿ ಬಿಜೆಪಿ ಕೂರಲ್ಲ: ಸಿ.ಟಿ.ರವಿ
ಚಿಕ್ಕಮಗಳೂರು: ‘ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರಿಂದಲೇ ಸಮ್ಮಿಶ್ರ ಸರ್ಕಾರ ಉರುಳಲಿದೆ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡು ಬಿಜೆಪಿ ಕೂರುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.‌

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘37 ಶಾಸಕರನ್ನು ಹೊಂದಿರುವ ಜೆಡಿಎಸ್‌ ಪಕ್ಷದವರು ಮುಖ್ಯಮಂತ್ರಿ ಆಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಅದೃಷ್ಟದಿಂದ ಮುಖ್ಯಮಂತ್ರಿ ಆಗಿದ್ದಾರೆ. ಅದೃಷ್ಟ ಕಡಿಮೆಯಾದರೆ ಕೆಳಗಿಳಿಯುತ್ತಾರೆ. ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ಯತ್ನಿಸುವುದಿಲ್ಲ. ಪತನವಾದರೆ ನಿಶ್ಚಿತವಾಗಿ ಬಿಜೆಪಿ ದಾಳ ಉರುಳಿಸುತ್ತದೆ’ ಎಂದರು.

‘ರಾಜಕಾರಣ ನಿಂತ ನೀರಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ. ಸರ್ಕಾರ ರಚನೆ ಬಗ್ಗೆ ಆ ಪಕ್ಷಗಳ ಶಾಸಕರಲ್ಲಿ ಅಸಮಾಧಾನ ಇದೆ’ ಎಂದು ಅಭಿಪ್ರಾಯಪಟ್ಟರು.

‘ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಾರ್ವಜನಿಕ ಪತ್ರ ಬರೆದಿರುವುದರಲ್ಲೇ ಅವರ ಮನಸ್ಸಿನ ನೋವು ತಿಳಿಯುತ್ತದೆ. ಬೆಳಗಾವಿ ರಾಜಕೀಯದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪಕ್ಕೆ ಆ ಭಾಗದ ಶಾಸಕರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಬ್ಬರ ಸಿಟ್ಟು ಸ್ಫೋಟವಾದರೆ ಸರ್ಕಾರ ಉರುಳುತ್ತದೆ’ ಎಂದು ವಿಶ್ಲೇಷಿಸಿದರು. 

‘ಈ ಸಮ್ಮಿಶ್ರ ಸರ್ಕಾರಕ್ಕೆ ಬದ್ಧತೆ ಇಲ್ಲ. ರೈತರ ಸಾಲ ಮನ್ನಾ ಆದೇಶ ರಾಷ್ಟ್ರೀಕೃತ ಬ್ಯಾಂಕುಗಳಿಗೆ ತಲುಪಿಲ್ಲ. ರೈತರ ಸಾಲಮನ್ನಾ ಬಾಬ್ತಿನ ಹಣವನ್ನು ಸಹಕಾರಿ ಬ್ಯಾಂಕುಗಳಿಗೆ ಬಿಡುಗಡೆ ಮಾಡಿಲ್ಲ. ರೈತರಿಗೆ ಮರು ಸಾಲ ದೊರೆಯುತ್ತಿಲ್ಲ’ ಎಂದು ಹೇಳಿದರು.

***
‘ರಾಜಕೀಯ ಉದ್ವಿಗ್ನತೆ ಸೃಷ್ಟಿ: ವಿಶ್ವನಾಥ್ ಬೇಸರ
ಹುಣಸೂರು:
‘ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎದ್ದಿದೆ ಎಂದು ಮಾಧ್ಯಮಗಳು ಬಿಂಬಿಸುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಇಲ್ಲಿ ಬುಧವಾರ ಹೇಳಿದರು.

‘ರಾಜ್ಯದಲ್ಲಿ ಸರ್ಕಾರಕ್ಕೆ ಯಾವುದೇ ತೊಂದರೆ ಎದುರಾಗಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿದೆ. ವಸ್ತುಸ್ಥಿತಿ ತಿಳಿಯದೆ ಕೆಲವೊಂದು ಊಹಾಪೋಹಗಳಿಗೆ ಆದ್ಯತೆ ನೀಡಿ ದೃಶ್ಯಮಾಧ್ಯಮಗಳಲ್ಲಿ ಸಿನಿಮಾ ರೀತಿ ತೋರಿಸಿ ರಾಜಕೀಯ ಉದ್ವಿಗ್ನತೆ ಸೃಷ್ಟಿ ಮಾಡಲಾಗುತ್ತಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ರಾಜಕಾರಣಿಗಳು ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಮತದಾರರ ಸಮಸ್ಯೆಗಳತ್ತ ಗಮನ ನೀಡಬೇಕಾಗಿದೆ. ಅಧಿಕಾರ ಸಿಕ್ಕಿದೆ ಎಂದು  ಮನಬಂದಂತೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ, ಉತ್ತಮ ಆಡಳಿತ ನಡೆಸಲು ಸರ್ಕಾರಕ್ಕೆ ಸಹಕಾರ ನೀಡಬೇಕು’ ಎಂದರು.

ಬ್ಯಾಂಕ್ ಹಗರಣ: ಎಂಡಿಸಿಸಿ ಬ್ಯಾಂಕ್‌ ಹುಣಸೂರು ಮತ್ತು ಬಿಳಿಕೆರೆ ಶಾಖೆಯಲ್ಲಿ ನಡೆದಿರುವ ₹27 ಕೋಟಿ ಅವ್ಯವಹಾರದ ತನಿಖೆಗೆ ಎರಡು ತನಿಖಾ ತಂಡ ರಚಿಸಲಾಗಿದೆ. ವರದಿ ಬಂದ ಬಳಿಕ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.

***
ಅಭಿವೃದ್ಧಿಗೆ  ಸ್ಪಂದಿಸದಿದ್ದರೆ ವ್ಯತಿರಿಕ್ತ ಪರಿಣಾಮ: ಶಾಸಕ ಜೆ.ಎನ್. ಗಣೇಶ್
ಕುರುಗೋಡು (ಬಳ್ಳಾರಿ ಜಿಲ್ಲೆ): ಕಂಪ್ಲಿ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ಸರಿಯಾಗಿ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಕಠಿಣ ನಿಲುವು ತಾಳಬೇಕಾಗುತ್ತದೆ ಎಂದು ಶಾಸಕ ಜೆ.ಎನ್. ಗಣೇಶ್ ಬುಧವಾರ ಇಲ್ಲಿ ಎಚ್ಚರಿಸಿದರು.

‘ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಲ್ಲಿ ಪ್ರಸ್ತಾವ ಸಲ್ಲಿಸಲಾಗಿದೆ. ಬೇಡಿಕೆಗೆ ಸ್ಪಂದನೆ ದೊರೆಯದಿದ್ದರೆ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದರು.

‘ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರುವ ಉದ್ದೇಶ ನಮಗಿಲ್ಲ. ಪರಿಶಿಷ್ಟ ಪಂಗಡ ಮೀಸಲಾತಿ ಅಡಿಯಲ್ಲಿ ಗೆದ್ದಿರುವ ಪಕ್ಷದ ಶಾಸಕರು, ಸಮುದಾಯದ ಜನರಿಗೆ ಶೇ 7.5 ಮೀಸಲಾತಿ ಕಲ್ಪಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರಲು ಒಟ್ಟಾಗಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
 

ಪ್ರಮುಖ ಸುದ್ದಿಗಳು