ಜೀವನಶಿಕ್ಷಣ

ಭಾರತೀಯ ದರ್ಶನಪರಂಪರೆಯಲ್ಲಿ ಉಪನಿಷತ್ತುಗಳಿಗೆ ತುಂಬ ಪ್ರಾಶಸ್ತ್ಯವಿದೆ. ಇಡಿಯ ಪರಂಪರೆಯ ಜ್ಞಾನಶಿಖರಗಳೇ ಉಪನಿಷತ್ತುಗಳು ಎಂಬ ಪ್ರಸಿದ್ಧಿಯೂ ಇದೆ. ನೂರಾರು ಉಪನಿಷತ್ತುಗಳ ಎಣಿಕೆ ಉಂಟು; ಆದರೆ ಪ್ರಾಚೀನವಾದ ಹತ್ತು ಉಪನಿಷತ್ತುಗಳಿಗೆ ಹೆಚ್ಚಿನ ಮನ್ನಣೆಯಿರುವುದು. ಈ ಉಪನಿಷತ್ತುಗಳಲ್ಲಿ ಒಂದು ತೈತ್ತಿರೀಯ ಉಪನಿಷತ್‌.

ತೈತ್ತಿರೀಯೋಪನಿಷತ್‌ ಹಲವು ಕಾರಣಗಳಿಂದ ತುಂಬ ಮಹತ್ವವಾಗಿದೆ. ಇದರಲ್ಲಿ ಮೂರು ‘ವಲ್ಲಿ’ಗಳಿವೆ; ಅವೇ ಶೀಕ್ಷಾವಲ್ಲೀ, ಬ್ರಹ್ಮವಲ್ಲೀ ಮತ್ತು ಭೃಗುವಲ್ಲೀ. ಇವುಗಳಲ್ಲಿ ‘ಶೀಕ್ಷಾವಲ್ಲಿ’ಯನ್ನು ಸದ್ಯಕ್ಕೆ ನಾವು ಪರಿಚಯಿಸಿಕೊಳ್ಳಬಹುದು. ಈ ಉಪನಿಷತ್ತಿನ ಬಗ್ಗೆ ‘ತೈತ್ತಿರೀಯೋಪನಿಷತ್‌ ಪ್ರವಚನ’ ಎಂಬ ಕೃತಿಯನ್ನು ಎನ್‌. ರಂಗನಾಥಶರ್ಮಾ ಅವರು ಪ್ರಕಟಿಸಿದ್ದಾರೆ. ಅಲ್ಲಿಂದ ಕೆಲವೊಂದು ವಿವರಗಳನ್ನು ಎತ್ತಿಕೊಂಡು ಇಲ್ಲಿ ವಿಶ್ಲೇಷಿಸಬಹುದು. ‘ಶೀಕ್ಷಾವಲ್ಲಿಯು ಗುರುಕುಲದಿಂದ ನಿರ್ಗಮಿಸುತ್ತಿರುವ ತರುಣಶಿಷ್ಯರಿಗೆ ಈ ಕಾಲದಲ್ಲಿ ವಿಶ್ವವಿದ್ಯಾಲಯದವರು ಏರ್ಪಡಿಸುವ ದೀಕ್ಷಾಂತಭಾಷಣದಂತಿದೆ. ಹಿತೋಪದೇಶಗಳಿಂದ ಅರ್ಥಪುಷ್ಟವಾಗಿದ್ದು ಈ ಕಾಲದ ದೀಕ್ಷಾಂತಭಾಷಣವನ್ನು ಸರ್ವವಿಧದಲ್ಲಿಯೂ ಮೀರಿಸುವ ಸೌಭಾಗ್ಯ ಇದರಲ್ಲಂಟು.’ ಶರ್ಮಾ ಅವರ ಈ ಮಾತುಗಳು ನಮಗೆ ಇಂದು ಈ ಉಪನಿಷತ್ತು ಏಕೆ ಬೇಕು – ಎಂಬ ಪ್ರಶ್ನೆಗೆ ಉತ್ತರದಂತಿದೆ.

ಇಂದಿನ ಶಿಕ್ಷಣವ್ಯವಸ್ಥೆಯನ್ನು ಇಲ್ಲೊಮ್ಮೆ ಅವಲೋಕಿಸಬಹುದು. ಪದವಿಯನ್ನು ನೀಡುವುದು, ನೌಕರರನ್ನು ಸೃಷ್ಟಿಸುವುದು – ಇವೇ ಇಂದಿನ ವ್ಯವಸ್ಥೆಯ ಪ್ರಧಾನ ಗುರಿಯಾಗಿರುವುದು ಸುಳ್ಳಲ್ಲ. ಶಿಕ್ಷಣ ಎಂದರೆ ಅರಿವು, ಬದುಕಿಗೆ ಬೇಕಾದ ಬೆಳಕು – ಎಂಬ ನಿಲುವು ಇಂದು ಮಾಯವಾಗಿರುವುದೂ ಸುಳ್ಳಲ್ಲ. ಆದುದರಿಂದಲೇ ಕುಟುಂಬದಲ್ಲೂ ಸಮಾಜದಲ್ಲೂ ಆದರ್ಶವ್ಯಕ್ತಿಯಾಗಬೇಕಿದ್ದ ಪದವೀಧರ ಇಂದು ದಾರಿ ತಪ್ಪಿದ ಮಗನಂತಾಗಿದ್ದಾನೆ. ‘ಸಾಕ್ಷರಾ ವಿಪರೀತಾಶ್ಚೇತ್‌ ರಾಕ್ಷಸಾ ಏವ ಕೇವಲಂ’ ಎಂಬ ಮಾತೊಂದಿದೆ. ಸಾಕ್ಷರಾ – ಎಂದರೆ ಅಕ್ಷರವನ್ನು ಬಲ್ಲವ, ವಿದ್ಯಾವಂತ, ಪದವೀಧರ. ಅವನು ವಿಪರೀತನಾದರೆ, ಎಂದರೆ ‘ಉಲ್ಟಾ ಆದರೆ’ – ಹಿಂದುಮುಂದಾದರೆ – ರಾಕ್ಷಸನೇ ಆಗಿಬಿಡುತ್ತಾನೆ – ಎಂಬುದು ಇದರ ಅರ್ಥ. ‘ಸಾಕ್ಷರಾ’ ಎಂಬ ಪದವನ್ನು ಹಿಂದಿನಿಂದ ಓದಿದರೆ ಅದು ‘ರಾಕ್ಷಸಾ’ ಎಂದಾಗುತ್ತದೆಯಲ್ಲವೆ? ವಿದ್ಯೆಯನ್ನು ಕಲಿತ ಮಾತ್ರಕ್ಕೆ ಒಬ್ಬ ವ್ಯಕ್ತಿ ಸಂಸ್ಕೃತನೂ ಆಗುತ್ತಾನೆ ಎನ್ನುವ ವಿಶ್ವಾಸವೇನಿಲ್ಲವಷ್ಟೆ. ಇಂದಿನ ಶಿಕ್ಷಣವ್ಯವಸ್ಥೆಯೂ ಅದರತ್ತ ಗಮನ ಕೊಡುವುದಿಲ್ಲವೆನ್ನಿ!

ಆದರೆ ಉಪನಿಷತ್ತು ಇಲ್ಲಿ ಹೇಳಲು ಹೊರಟಿರುವುದು ವಿದ್ಯಾವಂತನಾದವನು ಮನೆಯಲ್ಲಿ, ಸಮಾಜದಲ್ಲಿ ಹೇಗೆ ಬದುಕಬೇಕು ಎಂದು. ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡಾಗಲೇ ವಿದ್ಯೆ ಸಾರ್ಥಕತೆ ಒದಗುವುದು ಎನ್ನುವುದು ಅದರ ಸಿದ್ಧಾಂತ. ‘ಶೀಕ್ಷಾವಲ್ಲಿ’ಯ ಉದ್ದಕ್ಕೂ ಈ ಸಂದೇಶವನ್ನು ಕಾಣಬಹುದು.

ಶಿಷ್ಯನಿಗೂ ಗುರುವಿಗೂ ಇಬ್ಬರಿಗೂ ಕೀರ್ತಿ ಮತ್ತು ಬ್ರಹ್ಮವರ್ಚಸ್ಸುಗಳು ಪ್ರಾಪ್ತವಾಗಲಿ ಎಂಬ ಹಾರೈಕೆಯೊಂದಿಗೆ ಉಪನಿಷತ್ತು ಆರಂಭವಾಗುವುದು ಕೂಡ ಮನನೀಯವಾಗಿದೆ.

ಋತಂ ಚ ಸ್ವಾಧ್ಯಾಯಪ್ರವಚನೇ ಚ | ಸತ್ಯಂ ಚ ಸ್ವಾಧ್ಯಾಯ ಪ್ರವಚನೇ ಚ | ತಪಶ್ಚಸ್ವಾಧ್ಯಾಯ ಪ್ರವಚನೇ ಚ | ದಮಶ್ವ ಸ್ವಾಧ್ಯಾಯ ಪ್ರವಚನೇ ಚ | ಶಮಶ್ಚ ಸ್ವಾಧ್ಯಾಯ ಪ್ರವಚನೇ ಚ | – ಭಾಗಗಳ ಅರ್ಥಾನುಸಂಧಾನ ಮಾಡಬಹುದು. ‘ಋತ’ ಎಂದರೆ ಯಾವುದನ್ನು ಶಾಸ್ತ್ರವು ಕರ್ತವ್ಯ ಎಂದು ಹೇಳುತ್ತದೆಯೋ ಅದು. ಅಂಥ ಋತದ ಆಚರಣೆಯನ್ನು ಬಿಡಬಾರದು. ವೇದಗಳ ಅಧ್ಯಯನವನ್ನು ಬಿಡಬಾರದು. ಅಧ್ಯಾಪನವನ್ನು ಬಿಡಬಾರದು. ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಮನಸ್ಸನ್ನೂ ಸಂಯಮದಲ್ಲಿರಿಸಿಕೊಳ್ಳಬೇಕು. ಇದು ಈ ಮಂತ್ರಗಳ ತಾತ್ಪರ್ಯ.

‘ಡಿಗ್ರಿ ಸರ್ಟಿಫಿಕೇಟ್‌’ ಪಡೆದಮೇಲೆ ಓದುವುದೆಲ್ಲವೂ ಮುಗಿಯಿತು ಎಂದೇ ಅರ್ಥ ಎಂಬುದು ಇಂದಿನ ಮನೋಧರ್ಮವಾಗಿದೆ. ಆದರೆ ಜೀವನದುದ್ದಕ್ಕೂ ವಿದ್ಯಾರ್ಥಿಯಾಗಿರುವಂತೆ ಉಪನಿಷತ್ತು ಉಪದೇಶಿಸುತ್ತಿದೆ. ಸ್ವಾಧ್ಯಾಯ ಎಂದರೆ ಕೇವಲ ವೇದಾಧ್ಯಯನವಷ್ಟೆ ಅಲ್ಲ; ಅದು ನಮ್ಮ ಬಗ್ಗೆ ನಾವು ವಹಿಸುವ ಎಚ್ಚರಿಕೆ – ಆತ್ಮಶಿಕ್ಷಣವೂ ಸ್ವಾಧ್ಯಾಯವೇ ಹೌದು. ಶಾಸ್ತ್ರಗಳು ನಾವು ಮನೆಯಲ್ಲಿ ಹೇಗಿರಬೇಕು, ಸಮಾಜದಲ್ಲಿ ಹೇಗಿರಬೇಕು; ನಮ್ಮ ಕರ್ತವ್ಯಗಳೇನು; ಯಾವ ನೀತಿ–ನಿಯಮಗಳನ್ನು ನಾವು ಪಾಲಿಸಬೇಕು – ಎಂದೆಲ್ಲ ನಿರ್ದೇಶಿಸುತ್ತವೆ. ಆ ಎಲ್ಲ ಮೌಲ್ಯಗಳನ್ನೂ ನಾವು ಅಳವಡಿಸಿಕೊಳ್ಳಬೇಕು ಎನ್ನುವುದು ಉಪನಿಷತ್ತಿನ ಆಗ್ರಹ. ನಮಗೆ ವಿದ್ಯೆಯೂ ಇರಬಹುದು; ಆ ವಿದ್ಯೆಯಿಂದ ಧನ–ಕೀರ್ತಿಗಳೂ ಬಂದಿರಬಹುದು. ಆದರೆ ನಮ್ಮ ನೆಮ್ಮದಿಗೆ ಬೇಕಾದ್ದು ನಮ್ಮ ಮೇಲೆ ನಾವು ಎಷ್ಟು ನಿಯಂತ್ರಣವನ್ನು ಸಾಧಿಸಿದ್ದೇವೆ ಎನ್ನುವುದೇ ಸರಿ. ಆದುದರಿಂದಲೇ ಉಪನಿಷತ್ತು ಶಮ ಮತ್ತು ದಮಗಳ ಬಗ್ಗೆ ಒತ್ತನ್ನು ನೀಡಿರುವುದು.

ಮಾತೃದೇವೋ ಭವ | ಪಿತೃದೇವೋ ಭವ |ಆಚಾರ್ಯದೇವೋ ಭವ | ಅತಿಥಿದೇವೋ ಭವ | – ಈ ಮಾತುಗಳನ್ನು ನಾವು ಕೇಳಿರುವ ಸಂಭವವುಂಟು. ‘ತಾಯಿ, ತಂದೆ, ಗುರು ಮತ್ತು ಅತಿಥಿ – ಇವರೆಲ್ಲರೂ ದೇವರಿಗೆ ಸಮಾನ, ಅವರನ್ನು ದೈವದಂತೆ ಶ್ರದ್ಧಾ–ಭಕ್ತಿಗಳಿಂದ ಸೇವಿಸಬೇಕು’ ಎಂಬುದು ಈ ಮಂತ್ರದ ಆಶಯ.

ವಿದ್ಯೆ ನಮಗೆ ಇಂದು ಸ್ವಾರ್ಥವನ್ನು ಕಲಿಸುತ್ತಿದೆ. ನಾನು ಚೆನ್ನಾಗಿದ್ದರೆ ಸಾಕು – ಎಂಬಂಥ ವಿಪರೀತಬುದ್ಧಿಯನ್ನು ಇಂದಿನ ಶಿಕ್ಷಣವ್ಯವಸ್ಥೆ ಪ್ರಶ್ನಿಸಲು ಹೋಗುವುದಿಲ್ಲ. ಹಾಗೆ ಸ್ವಕೇಂದ್ರಿತವಾಗಿ ಬದುಕನ್ನು ರೂಪಿಸಿಕೊಳ್ಳುವುದೇ ದಿಟವಾದ ಬುದ್ಧಿವಂತತನ – ಎಂದೂ ಅದು ಘೋಷಿಸುತ್ತದೆ. ಆದರೆ ‘ನಾನು ಈ ಸಮಾಜದ ಒಂದು ಭಾಗ; ಸಮಾಜ ಚೆನ್ನಾಗಿದ್ದರೆ ಮಾತ್ರ ನಾನು ಚೆನ್ನಾಗಿರಲು ಸಾಧ್ಯ. ಈ ಕಾರಣದಿಂದ ನನ್ನ ಮನೆಯೂ ಚೆನ್ನಾಗಿರಬೇಕು, ನಾನಿರುವ ಪರಿಸರವೂ ಚೆನ್ನಾಗಿರಬೇಕು’ ಎಂಬ ವಿಶ್ವಮಾನವಸಂದೇಶವನ್ನು ಉಪನಿಷತ್ತು ರವಾನಿಸುತ್ತಿದೆ. ವೃದ್ಧಾಶ್ರಮಗಳು ಹೆಚ್ಚುತ್ತಿರುವ ಇಂದಿನ ಸಮಾಜವನ್ನು ಆತ್ಮಾವಲೋಕಮಾಡಿಕೊಳ್ಳುವಂತೆ ಉಪನಿಷತ್ತು ಒತ್ತಾಯಿಸುತ್ತಿದೆ. ಇದೇ ಉಪನಿಷತ್ತು ಮುಂದಿನ ವಲ್ಲಿಗಳಲ್ಲಿ ನಿಜವಾದ ಆನಂದ ಯಾವುದು – ಎನ್ನುವುದನ್ನೂ ವಿಶ್ಲೇಷಿಸುತ್ತದೆ. ಹೀಗಾಗಿ ಜೀವನದ ದಿಟವಾದ ಸಾರ್ಥಕತೆ ಏನು ಎನ್ನುವುದನ್ನು ತಿಳಿದುಕೊಂಡು ಅದಕ್ಕೆ ತಕ್ಕ ರೀತಿಯಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಕುಶಲತೆಯೇ ಶಿಕ್ಷಣ ಎಂದು ಉಪನಿಷತ್ತು ಘೋಷಿಸುತ್ತದೆ. ಇಂದಿನ ಶಿಕ್ಷಣವ್ಯಸ್ಥೆಯು ಉಪನಿಷತ್ತಿನ ವಿವೇಕವನ್ನು ಅಳವಡಿಸಿಕೊಳ್ಳುವ ಉತ್ಸಾಹವನ್ನು ಪಡೆದುಕೊಂಡೀತೆ?

 – ಹಾರಿತಾನಂದ

ಪ್ರಮುಖ ಸುದ್ದಿಗಳು