ಈತ ಬೆಂಗಳೂರಿನ ಸಿರಿವಂತ ಗಣಪ!

ಮುಂಬೈ, ಪುಣೆ, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಅದ್ಧೂರಿ ಗಣೇಶ ಉತ್ಸವಕ್ಕೆ ಹೆಸರುವಾಸಿ. ರಾಜಾಜಿ ನಗರದ ಮಿಲ್ಕ್ ಕಾಲೊನಿಯ ಸ್ವಸ್ತಿಕ್ ಯುವಕರ ಸಂಘದ ಗಣೇಶ ಉತ್ಸವ ಕೂಡ ಅದೇ ವೈಭವವನ್ನು ನೆನಪಿಸುತ್ತದೆ.

ಅದ್ಧೂರಿತನ ಮತ್ತು ಹೊಸತನಕ್ಕೆ ಹೆಸರುವಾಸಿಯಾದ ಸ್ವಸ್ತಿಕ್‌ ಯುವಕರ ಸಂಘದ ಗಣೇಶ ಬೆಂಗಳೂರಿನ ಅತ್ಯಂತ ಶ್ರೀಮಂತ ಗಣಪ ಎಂಬ ಹೆಗ್ಗಳಿಕೆ ಹೊಂದಿದ್ದಾನೆ.

ಈ ಉತ್ಸವ ಶ್ರೀಮಂತಿಕೆಯಿಂದ ಮಾತ್ರ ಗುರುತಿಸಿಕೊಂಡಿಲ್ಲ. ಕಲೆ, ಸಂಗೀತ, ಸಂಸ್ಕೃತಿ, ಸದಭಿರುಚಿಯ ಸಂಕೇತವಾಗಿಯೂ ಮನೆಮಾತಾಗಿದೆ.

ಅಮೃತೇಶ್ವರ ದೇಗುಲದ ಪ್ರತಿರೂಪ

ಮಿಲ್ಕ್ ಕಾಲೊನಿ ಮೈದಾನದಲ್ಲಿ ಈ ಬಾರಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಮೃತಾಪುರದ ಐತಿಹಾಸಿಕ ಅಮೃತೇಶ್ವರ ದೇವಾಲಯದ ಪ್ರತಿರೂಪ ತಲೆ ಎತ್ತಿದೆ.

ಸಿನಿಮಾಗಳ ಭರ್ಜರಿ ಸೆಟ್‌ಗಳನ್ನೂ ಮೀರಿಸುವ ಈ ವೈಭವಯುತ ಸೆಟ್‌ಗೆ ಅಂದಾಜು ₹15 ಲಕ್ಷ ಖರ್ಚಾಗಿದೆ.

ಕನ್ನಡ ಚಿತ್ರರಂಗದ ಕಲಾ ನಿರ್ದೇಶಕ ಮೋಹನ್ ಬಿ. ಕೆರೆ ನೇತೃತ್ವದಲ್ಲಿ ರಾಜಸ್ಥಾನದ ಕಲಾವಿದರು 15 ದಿನಗಳಿಂದ ಹಗಲು, ರಾತ್ರಿ ಶ್ರಮವಹಿಸಿ ಅಮೃತೇಶ್ವರ ದೇಗುಲದ ವೈಭವವನ್ನು ಮರು ಸೃಷ್ಟಿಸಿದ್ದಾರೆ.

ದೇವಾಲಯದ ಸೊಬಗನ್ನು ಕಣ್ತುಂಬಿಕೊಂಡು ಒಳ ಹೊಕ್ಕರೆ ₹7.20 ಲಕ್ಷ ಮೌಲ್ಯದ ಮಿರಿ, ಮಿರಿ ಮಿನುಗುವ ಅಮೆರಿಕನ್ ಡೈಮಂಡ್‌ (ಕೃತಕ ವಜ್ರ), ನವರತ್ನ, ಹವಳ, ಮುತ್ತು ಮತ್ತು ಬಣ್ಣದ ಹರಳುಗಳಿಂದ ಕಂಗೊಳಿಸುವ 5.5 ಅಡಿ ಎತ್ತರದ ಸಂಕಷ್ಟಹರ ಗಣಪನ ದರ್ಶನವಾಗುತ್ತದೆ.  

ಬಹುರೂಪಿ ಗಣಪನ ರೈಲು ಪಯಣ

ಹುಬ್ಬಳ್ಳಿಯ ಬಮ್ಮಾಪುರ ಓಣಿಯ ಮುರುಗೋಡ ಆರ್ಟ್ಸ್ ನ ಕಲಾವಿದ ಮಹೇಶ್ ಮುರುಗೋಡ ಹಾಗೂ ಸಂಗಡಿಗರು ಗಣೇಶ ಮೂರ್ತಿ ತಯಾರಿಸಿದ್ದಾರೆ. ಇವರ ಬಳಿ ಸ್ವಸ್ತಿಕ್ ಯುವಕರ ಸಂಘ 15 ವರ್ಷಗಳಿಂದಲೂ ಮೂರ್ತಿಗಳನ್ನು ಖರೀದಿಸುತ್ತಿದೆ.

ವಿಘ್ನೇಶನಿಗೆ ಒಂದಿಷ್ಟೂ ವಿಘ್ನವಾಗದಂತೆ ಹುಬ್ಬಳ್ಳಿಯಿಂದ ರೈಲಿನಲ್ಲಿ ಬೆಂಗಳೂರಿಗೆ ತರುವುದೇ ದೊಡ್ಡ ಸವಾಲು ಎನ್ನುತ್ತಾರೆ ಸಂಘದ ಸದಸ್ಯರು.

 ‌ಮೊದಲ ವರ್ಷ ವೈರಮುಡಿ, ನಂತರದ ಎರಡು ವರ್ಷ ತಿರುಪತಿ ತಿರುಮಲ ನಿಜಪಾದ ಬಾಲಾಜಿ, ನವರತ್ನ ಹರಳುಗಳ ವಿಷ್ಣುರೂಪಿ ಗಣೇಶ, ಮಲೇಷ್ಯಾದ ಪ್ರಸಿದ್ಧ ಸುಬ್ರಮಣ್ಯನನ್ನು ಹೋಲುವ ಐದೂವರೆ ಅಡಿ ಎತ್ತರದ ಗಣೇಶ... ಹೀಗೆ ಪ್ರತಿ ಬಾರಿಯೂ ಬಹುರೂಪಿ ಗಣೇಶ ಎಲ್ಲರನ್ನೂ ಸೆಳೆಯುತ್ತಾನೆ.

ಈ ಹಿಂದೆ ಬಾದಾಮಿ –ಐಹೊಳೆ ಗುಹಾಂತರ ದೇವಾಲಯ, ಬೇಲೂರು–ಹಳೆಬೀಡು ಚನ್ನಕೇಶವ ದೇವಸ್ಥಾನ, ತಿರುಪತಿ ದೇವಸ್ಥಾನದ ಪ್ರತಿಕೃತಿಗಳು ಜನಮನ ಸೆಳೆದಿದ್ದವು.

ಬಡಾವಣೆ ಚಿತ್ರಣ ಬದಲು

ಸಂಜೆಯಾಗುತ್ತಿದ್ದಂತೆ ದೀಪಾಲಂಕಾರ, ದೃಶ್ಯ ರೂಪಕ, ಸಂಗೀತದ ರಸದೌತಣದಿಂದ ಈ ಐದು ದಿನ ಬಡಾವಣೆ ಕಳೆಕಟ್ಟುತ್ತದೆ.

ಕೇರಳದ ಚಂಡೆ ವಾದ್ಯ, ಕುಪ್ಪುಂನ ನಾದಸ್ವರ, ತಮಿಳುನಾಡಿನ ಕೀಲುಕುದುರೆ ಮತ್ತು ಹೂವಿನ ಪಲ್ಲಕ್ಕಿ, ನೈಯಂಡಿ ಮೇಳ, ವೇಲೂರು, ದಿಂಡಿಗಲ್, ಪಾಲ್ಗಾಟ್‌ ಡ್ರಮ್ಸ್ ಮತ್ತು ಬ್ಯಾಂಡ್, ಕಲ್ಲಡ್ಕದ ಗಾರುಡಿ ಗೊಂಬೆಗಳು, ಮಂಗಳೂರಿನ ಹುಲಿವೇಷ ಸೇರಿ ಹೆಸರಾಂತ ಕಲಾ ತಂಡಗಳು ಉತ್ಸವದ ವೈಭವ ಇಮ್ಮಡಿಗೊಳಿಸುತ್ತವೆ.

ಗಣೇಶ ವಿಸರ್ಜನೆಯ ದಿನ ವಿಶೇಷ ಸಿಡಿಮದ್ದು ಪ್ರದರ್ಶನ ಆಕರ್ಷಣೆಯ ಕೇಂದ್ರ ಬಿಂದು. ಸಿಡಿಮದ್ದು ಸುಡುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಸೇರುತ್ತಾರೆ.

ಪ್ರಮುಖ ಸುದ್ದಿಗಳು