ವಿವಿಧೆಡೆಯ ಗಣಪತಿ ದೇವಾಲಯ

ನಗರದ ಬಹುತೇಕ ಬಡಾವಣೆಗಳಲ್ಲಿ ಒಂದಲ್ಲಾ ಒಂದು ಗಣಪತಿ ದೇವಾಲಯಗಳಿವೆ. ಅಲ್ಲದೆ ಬಹುತೇಕ ದೇವಾಲಯಗಳಲ್ಲಿ ಗಣಪತಿ ಮೂರ್ತಿಯ ಆರಾಧನೆಯೂ ನಿರಂತರವಾಗಿ ನಡೆಯುತ್ತಿರುತ್ತದೆ. ಇದಲ್ಲದೆ ನಗರದ ಕೆಲವೆಡೆಯ ಗಣಪತಿ ದೇವಾಲಯಗಳು  ಹೆಚ್ಚು ಜನಪ್ರಿಯವಾಗಿದ್ದು, ಹಲವು ಕಡೆಗಳಿಂದ ಭಕ್ತರು ಬರುತ್ತಾರೆ.

ದೊಡ್ಡ ಗಣಪತಿ ದೇವಾಲಯ: ಬಸವನಗುಡಿಯಲ್ಲಿರುವ ದೊಡ್ಡ ಗಣೇಶನ ಗುಡಿ ಸುಮಾರು 450ರಿಂದ 480 ವರ್ಷಗಳಷ್ಟು ಹಳೆಯದು. ಕಹಳೆ ಬಂಡೆ ಅಥವಾ ಬ್ಯೂಗಲ್ ರಾಕ್ ಉದ್ಯಾನಕ್ಕೆ ಹೊಂದಿಕೊಂಡಿರುವ ವಿಶಾಲ ಪ್ರದೇಶದಲ್ಲಿ ದೊಡ್ಡ ಗಣೇಶನ ಸುಂದರ ದೇವಾಲಯವಿದೆ. ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿ ಕಡೆದ 8 ಅಡಿ ಎತ್ತರ ಹಾಗೂ 12 ಅಡಿ ಅಗಲ ಇರುವ ಸುಂದರವಾದ ಗಣೇಶನ ವಿಗ್ರಹವಿದೆ. ಈ ಗಣಪ ಸ್ವಯಂಭು, ಉದ್ಭವ ಗಣಪ ಎಂತಲೂ ಹೇಳುತ್ತಾರೆ.

ಸತ್ಯ ಗಣಪತಿ ಮತ್ತು ಶಕ್ತಿ ಗಣಪತಿ ಎಂದೆಲ್ಲ ಕರೆಯಲಾಗುವ ದೊಡ್ಡ ಗಣಪತಿ ದೇವಾಲಯವನ್ನು ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ ಕ್ರಿ.ಶ 1537ರಲ್ಲಿ ಕಟ್ಟಿಸಿದರು. ರಾಜ್ಯ ಪ್ರವಾಸೋದ್ಯಮ ಇಲಾಖೆ ಇದನ್ನು ‘ಬೆಂಗಳೂರು ದರ್ಶನ’ ಪಟ್ಟಿಯಲ್ಲಿ ಸೇರಿಸಿದೆ. ಈ ದೇವಾಲಯ ವಿಜಯನಗರ ಶೈಲಿಯಲ್ಲಿ ಮುಖಮಂಟಪದಿಂದ ಕೂಡಿದೆ.

ಜಯನಗರದ ಜೈನ್‌ ದೇವಾಲಯದ ಎದುರುಗಡೆ ಇರುವ ಗಣಪನ ದೇವಾಲಯ, ಕೋರಮಂಗಲದ ಕೆಎಚ್‌ಬಿ ಬಡಾವಣೆಯ ಗಣಪ, ಹನುಮಂತನಗರದ ಪಂಚಮುಖಿ ಗಣಪತಿ ದೇವಾಲಯ, ಕಸ್ತೂರಬಾ ರಸ್ತೆಯ ಗಣಪತಿ ದೇವಾಲಯಗಳು ಜನಪ್ರಿಯವಾಗಿವೆ. ಕೆಂಗೇರಿ ಸಮೀಪ ವಿಶ್ವ ಒಕ್ಕಲಿಗ ಸಂಸ್ಥಾನದ ಆವರಣದಲ್ಲಿರುವ ಪಂಚಮುಖಿ ಗಣಪತಿ ಮೂರ್ತಿ ಜನರ ಆಕರ್ಷಣೆಗಳಲ್ಲಿ ಒಂದಾಗಿದೆ.

ಕಸ್ತೂರಬಾ ರಸ್ತೆಯಲ್ಲಿರುವ ಗಣೇಶ ದೇವಾಲಯ ಕೂಡ ಕೆಂಪೇಗೌಡನಿಂದ ನಿರ್ಮಿತವಾದದ್ದು. 1950 ಮತ್ತು 1960ರ ದಶಕದಲ್ಲಿ ಈ ದೇವಾಲಯಕ್ಕೆ ಚಾಮರಾಜ ಒಡೆಯರ್‌ ಅವರು ಹೆಚ್ಚಾಗಿ ನಡೆದುಕೊಳ್ಳುತ್ತಿದ್ದರು. ನಗರಕ್ಕೆ ಬರುತ್ತಿದ್ದ ಸರ್ಕಸ್‌ ಕಂಪೆನಿಯವರು ತಮ್ಮಲ್ಲಿನ ಆನೆ ಮತ್ತು ಒಂಟೆಗಳನ್ನು ಈ ದೇವಾಲಯದ ಬಳಿ ತಂದು, ಪೂಜಿಸಿ ಕರೆದುಕೊಂಡು ಹೋಗುತ್ತಿದ್ದರು. ಸರ್ಕಸ್‌ ಸುಸೂತ್ರವಾಗಿ ನಡೆಯಲಿ, ಆನೆ, ಒಂಟೆಗಳು ಅಂಜಿಕೆಯಿಲ್ಲದೆ ಉತ್ತಮವಾಗಿ ಜನರನ್ನು ಮನರಂಜಿಸಲಿ ಎಂಬುದು ಅದರ ಉದ್ದೇಶವಾಗಿತ್ತು. ಕೆಲ ದಶಕಗಳಿಂದೀಚೆಗೆ ನಗರದ ನಿವಾಸಿಗಳು ತಮ್ಮ ಹೊಸ ಕಾರು, ಬೈಕು, ವಾಹನಗಳನ್ನು ಖರೀದಿಸಿದಾಗ ಇಲ್ಲಿ ಬಂದು ಪೂಜಿಸಿಕೊಂಡು ಹೋಗಲು ಹೋಗುತ್ತಿದ್ದಾರೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಈ ದೇವಾಲಯದಲ್ಲಿ ವಾಹನಗಳ ಪೂಜೆ ಹೆಚ್ಚಾಗಿ ನಡೆಯುತ್ತದೆ.

ಪ್ರಮುಖ ಸುದ್ದಿಗಳು