ಉತ್ತರ ಕೊಡದ ಗುರು

ನರಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್|
ಬರಿ ಸಮಸ್ಯೆಯೆ? ಅದರ ಪೂರಣವದೆಲ್ಲಿ ?||
ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ|
ಗುರುವೆಂದು ಕರೆಯುವೆಯ? - ಮಂಕುತಿಮ್ಮ|| 33||

ಪದ-ಅರ್ಥ: ಬೊಮ್ಮನಾಶಯವೆ = ಬೊಮ್ಮನ (ಭಗವಂತನ) +ಆಶಯವೆ, ಪೂರಣ=ಹೂರಣ, ಸತ್ವ, ಪ್ರಶ್ನೆಗಳನುತ್ತರವ=ಪ್ರಶ್ನೆಗಳನ್ನು+ಉತ್ತರವ, ಕುಡೆ=ಕೊಡಲು, ಬಾರದನ=ಬಾರದಂತಿರುವನ
ವಾಚ್ಯಾರ್ಥ: ಭಗವಂತನ ಇಚ್ಛೆ ಕೇವಲ ಮನುಷ್ಯರನ್ನು ಪರೀಕ್ಷೆ ಮಾಡುವುದೇ? ನಮ್ಮ ಬದುಕು ಬರೀ ಸಮಸ್ಯೆಯೇ? ಈ ಬದುಕಿನ ಸತ್ವವದೆಲ್ಲಿ? ಹೀಗೆ ಒಂದೇ ಸಮನೆ ನಮ್ಮ ಮನದಲ್ಲಿ ಪ್ರಶ್ನೆಗಳನ್ನು ಸುರಿದು ಉತ್ತರ ನೀಡಲು ಬಾರದವನನ್ನು ಗುರುವೆಂದು ಕರೆಯಬೇಕೇ?

ವಿವರಣೆ: ಜೀವನದ ಜಂಜಾಟಗಳಲ್ಲಿ ಬೆಂದು, ನೊಂದ ಮನುಷ್ಯನ ಮಾತುಗಳಿವು. ದೇವರು ಭಕ್ತವತ್ಸಲ, ಕೇಳಿದ್ದನ್ನು ಕೊಡುವವನು ಎಂದು ವರ್ಣಿಸುತ್ತಾರಲ್ಲವೇ? ಇದಕ್ಕೆ ಉದಾಹರಣೆಯಾಗಿ ಧ್ರುವ, ಗಜೇಂದ್ರ, ಪ್ರಲ್ಹಾದರ ಹೆಸರುಗಳನ್ನು ಹೇಳುವುದಿಲ್ಲವೇ? ಅವರ ಪ್ರಾರ್ಥನೆಗಳನ್ನು ಕೇಳಿದ ದೇವರು ನಮ್ಮ ಬೇಡಿಕೆಗಳನ್ನು ಯಾಕೆ ಪೂರೈಸುವುದಿಲ್ಲ? ಬರೀ ನಮ್ಮನ್ನು ಪರೀಕ್ಷೆ ಮಾಡುವುದೇ ಅವನ ಇಚ್ಛೆಯೇ? ನಮ್ಮ ಬಾಳು ಸಮಸ್ಯೆಗಳ ಆಗರವಾಗಿದೆ. ರೋಗ, ವಿಯೋಗ, ದಾರಿದ್ರ್ಯಗಳಿಂದ ಜನ ಪೀಡಿತರಾಗಿದ್ದಾರೆ. ಈ ಬಾಳಿಗೆ ಕಷ್ಟಗಳಲ್ಲದೇ ಬೇರೆ ಸತ್ವ ಇದೆಯೇ? ಭಗವಂತ ನಮ್ಮ ಮುಂದೆ ಪರೀಕ್ಷೆಗಳ ಪ್ರಶ್ನೆಗಳನ್ನೇ ಸುರಿಯುತ್ತಾನೆ ಆದರೆ ಅವುಗಳಿಗೆ ಉತ್ತರವನ್ನೇ ಕೊಡುವುದಿಲ್ಲ ಎನ್ನಿಸುತ್ತದೆ. ಇಂಥವನನ್ನು ಗುರು ಎಂದು ಕರೆಯುವುದು ಸರಿಯೇ ಎಂಬುದು ಕಗ್ಗದ ಪ್ರಶ್ನೆ. ಹಿಂದೆ ಹೇಳಿದ ಹಾಗೆ ಇವು ಸಂದೇಹದ, ನಿರಾಸೆಯ ಉದ್ಗಾರಗಳಲ್ಲ. ಶಾಲೆಯಲ್ಲಿ ಗುರುಗಳು ಉತ್ತರ ಕೊಡಲಾಗದ ಇಂಥವನನ್ನು ಗುರುವೆಂದು ಕರೆಯುವೆಯಾ? ಎಂದು ಕೇಳಿದರೆ ಅದು ಅವರ ಸಂದೇಹದ ಮಾತಲ್ಲ. ವಿದ್ಯಾರ್ಥಿಗಳನ್ನು ಪ್ರಚೋದಿಸುವ, ವಿಚಾರಕ್ಕೆ ಹಚ್ಚುವ ಮಾತು. ಪ್ರತಿಯೊಂದಕ್ಕೂ ಭಗವಂತನಿಂದ ಉತ್ತರ ಅಪೇಕ್ಷಿಸಬೇಕೇ ಎನ್ನುವ ಸೂಚನೆಯೂ ಇದೆ. ಬದುಕಿನಲ್ಲಿ ಎಲ್ಲದಕ್ಕೂ ಉತ್ತರ ದೊರಕಲಾರದು. ಕೆಲವು ಕೇವಲ ಅನುಭವಕ್ಕೆ ಮಾತ್ರ ನಿಲುಕುವಂತಹವು.

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಒಂದು ಸೊಗಸಾದ ಪ್ರಸಂಗ. ಗಾರ್ಗಿ ತನ್ನ ಗಂಡ ಯಾಜ್ಞವಲ್ಕ್ಯ ಮಹರ್ಷಿಗೆ ಭೂಮಿಯ ರಚನೆ, ಕಾರ್ಯದ ಬಗ್ಗೆ ಪ್ರಶ್ನೆ ಕೇಳಿದಾಗ ಭೂಲೊಕದಿಂದ ಬ್ರಹ್ಮಲೋಕದ ವರೆಗಿನ ಎಲ್ಲದರ ಬಗ್ಗೆ ವಿವರವಾಗಿ ತಿಳಿಸುತ್ತಾರೆ. ಆಕೆ ಕುತೂಹಲದಿಂದ ಬ್ರಹ್ಮಲೋಕದ ರಚನೆಯ ಬಗ್ಗೆ ಕೇಳಿದಾಗ ಯಾಜ್ಞವಲ್ಕ್ಯರು -ಮಾತಿಪ್ರಾಕ್ಷೀ|| ಎಂದರೆ ಅತಿಯಾದ ಪ್ರಶ್ನೆ ಕೇಳಬೇಡ ಎನ್ನುತ್ತಾರೆ. ಪ್ರಶ್ನೆ, ಪರೀಕ್ಷೆಗಳು ಒಂದು ಮಿತಿಯವರೆಗೆ ಪ್ರಸ್ತುತ. ಅನಂತರ ಪ್ರಶ್ನೆಗಳಿಗೆ ಅರ್ಥವಿಲ್ಲ. ಯಾಕೆಂದರೆ ನಂತರ ಬರುವುದು ಮಾತಿಗೆ ನಿಲುಕದ್ದು, ಅನುಭವವೇ ಅದಕ್ಕೆ ಗತಿ.

ಪ್ರಮುಖ ಸುದ್ದಿಗಳು