ರಾಜಕಾರಣಿಗಳ ಶೋಕಿಗೆ ಸರ್ಕಾರಿ ಸಂಸ್ಥೆ ಬಡವಾಗದಿರಲಿ

ರಿಯಾಯಿತಿ ದರದಲ್ಲಿ ಮೈಸೂರು ಸಿಲ್ಕ್‌ ಸೀರೆಯನ್ನು ನೀಡುವುದಾಗಿ ಪ್ರಕಟಿಸಿದ್ದರಿಂದ ಮೈಸೂರು ಮತ್ತು ಬೆಂಗಳೂರಿನಲ್ಲಿ ಕೆಎಸ್ಐಸಿ ಮಳಿಗೆಗಳ ಮುಂದೆ ಸಾವಿರಾರು ಮಹಿಳೆಯರ ಜಟಾಪಟಿ ನಡೆದಿದೆ. ₹ 14 ಸಾವಿರ ಬೆಲೆಯ ಸೀರೆಯನ್ನು ₹ 4500ಕ್ಕೆ ಕೊಳ್ಳುವ ಆಸೆಯಿಂದ ಬಂದ ಎಲ್ಲ ಮಹಿಳೆಯರಿಗೆ ಸೀರೆ ಸಿಗಲಿಲ್ಲ. ಬೆಂಗಳೂರಿನಲ್ಲಿ 800 ಮಹಿಳೆಯರಿಗೆ ಸೀರೆ ನೀಡಲು ಸಾಧ್ಯವಾಗಿದೆ. ಮೈಸೂರಿನಲ್ಲಿ ಅದೂ ಸಾಧ್ಯವಾಗಲಿಲ್ಲ. ಇರುವುದೇ 1500 ಸೀರೆ. ಯಾರಿಗೆಲ್ಲ ಹಂಚುವುದು ಎಂದು ಕೆಎಸ್ಐಸಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ರಿಯಾಯಿತಿ ದರದಲ್ಲಿ ಸೀರೆ ಪಡೆದುಕೊಳ್ಳಲು ಆಧಾರ್‌ ಸಂಖ್ಯೆ ಕಡ್ಡಾಯ ಮಾಡಲಾಗಿತ್ತು. ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಬಂದಿದ್ದರಿಂದ ಲಾಟರಿ ಮೂಲಕ ಸೀರೆ ವಿತರಣೆ ಮಾಡುವುದಾಗಿ ಪ್ರಕಟಿಸಲಾಯಿತು. ಅದು ಕೂಡ ಗೊಂದಲದಲ್ಲಿಯೇ ಮುಕ್ತಾಯವಾಯಿತು. ಕಡಿಮೆ ದರದಲ್ಲಿ ಸೀರೆ ವಿತರಿಸುವ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಮೈಸೂರಿನಲ್ಲಿ ಚಾಲನೆ ನೀಡಿದ್ದರು. ಆಗ ಹಾಜರಿದ್ದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಸರತಿ ಸಾಲಿನಲ್ಲಿ ನಿಂತ ಎಲ್ಲ ಮಹಿಳೆಯರಿಗೂ ಸೀರೆ ವಿತರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರ ಭರವಸೆ ಹುಸಿಯಾಯಿತು. ಸೀರೆ ಸಿಗದ ಮಹಿಳೆಯರು ಸರ್ಕಾರಕ್ಕೆ ಹಿಡಿಶಾಪ ಹಾಕಿದರು. ಇದೆಲ್ಲವೂ ಒಂದು ಪ್ರಹಸನದಂತೆ ನಡೆಯಿತು. ಯಾವುದೇ ಪೂರ್ವಸಿದ್ಧತೆ ಇಲ್ಲದೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದೇ ಇದಕ್ಕೆಲ್ಲ ಕಾರಣ. ಸಾ.ರಾ.ಮಹೇಶ್ ಅವರು ಪ್ರವಾಸೋದ್ಯಮ ಸಚಿವರಾದ ಹೊಸತರಲ್ಲಿ ಇಂತಹ ಯೋಜನೆಯನ್ನು ಪ್ರಕಟಿಸಿದ್ದರು. ಸ್ವಾತಂತ್ರ್ಯೋತ್ಸವ ಮತ್ತು ವರಮಹಾಲಕ್ಷ್ಮಿ ಹಬ್ಬದ ಕೊಡುಗೆಯಾಗಿ ದುಬಾರಿ ಬೆಲೆಯ ಸೀರೆಯನ್ನು ಕಡಿಮೆ ದರಕ್ಕೆ ಮಾರಾಟ ಮಾಡುವುದಾಗಿ ಅವರು ಪ್ರಕಟಿಸಿದ್ದರು. ಮಧ್ಯಮ ವರ್ಗದ ಮಹಿಳೆಯರಿಗೆ ಕಡಿಮೆ ದರದಲ್ಲಿ ಮೈಸೂರು ಸಿಲ್ಕ್ ಸೀರೆ ಒದಗಿಸುವುದು ಈ ಯೋಜನೆಯ ಗುರಿ ಎಂದು ಅವರು ಹೇಳಿದ್ದರು. ಹೇಳುವಾಗ ಎಲ್ಲ ಚೆನ್ನಾಗಿತ್ತು. ಆದರೆ ಅನುಷ್ಠಾನ ಮಾಡುವಾಗ ಎಲ್ಲ ವಿಫಲವಾಯಿತು. ರಿಯಾಯಿತಿ ದರದಲ್ಲಿ ಸೀರೆ ನೀಡುವುದಕ್ಕೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದರು. ಇದರ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆಯೂ ನಡೆದಿತ್ತು. ಇದನ್ನು ಲೆಕ್ಕಿಸದೆ, ಸೂಕ್ತ ತಯಾರಿಯನ್ನೂ ಮಾಡಿಕೊಳ್ಳದೆ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಇಂತಹ ಜನಪ್ರಿಯ ಯೋಜನೆ ಜಾರಿಗೊಳಿಸಲು ಮುಂದಾದ ಸರ್ಕಾರ ಈಗ ನಗುವವರ ಮುಂದೆ ಎಡವಿ ಬಿದ್ದಿದೆ.

ಮೈಸೂರು ರೇಷ್ಮೆ ಸೀರೆಗೆ ಶತಮಾನಗಳ ಇತಿಹಾಸ ಇದೆ. ಸಾಂಪ್ರದಾಯಿಕವಾಗಿಯೂ ಘನತೆಯನ್ನು ಹೊಂದಿದೆ. ಪ್ರಾದೇಶಿಕ ಮಾನ್ಯತೆಯೂ ಇದೆ. ಬಹಳ ಕಾಲದಿಂದಲೂ ಇದು ಮಹಿಳೆಯರ ಅಚ್ಚುಮೆಚ್ಚಿನ ಸೀರೆ. ಅವರ ಕನಸಿನ ಸೀರೆಯೂ ಹೌದು. ಈ ಸೀರೆಗೆ ದೇಶದಾದ್ಯಂತ ಬೇಡಿಕೆ ಇದೆ. ಬೆಲೆ ದುಬಾರಿಯಾದರೂ ಗುಣಮಟ್ಟದಲ್ಲಿ ರಾಜಿ ಇಲ್ಲ. ಇಂತಹ ಸೀರೆಯನ್ನು ಅಗ್ಗದ ಪ್ರಚಾರದ ಯೋಜನೆಗೆ ಬಳಸಿಕೊಳ್ಳುವುದು ಸರ್ವಥಾ ಸಲ್ಲ. ₹ 14 ಸಾವಿರ ಬೆಲೆಯ ಸೀರೆಯನ್ನು ₹ 4500ಕ್ಕೆ ನೀಡುವುದು ರಾಜಕಾರಣಿಗಳ ಜನಪ್ರಿಯ ಯೋಜನೆಯಾಗಬಹುದೇ ವಿನಾ ಕಾರ್ಯಸಾಧು ಯೋಜನೆಯಲ್ಲ. ಅಲ್ಲದೆ ಕೆಎಸ್ಐಸಿಯನ್ನು ಆರ್ಥಿಕ ನಷ್ಟಕ್ಕೆ ತಳ್ಳುವ ಯೋಜನೆ ಇದು. ರಾಜಕಾರಣಿಗಳು ಶೋಕಿಗಾಗಿ ಇಂತಹ ಯೋಜನೆ ಪ್ರಕಟಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ನಿಗಮದ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತಹ ಕೆಲಸವನ್ನು ಮಾಡಬೇಕು. ಇಂತಹ ಜನಪ್ರಿಯ ಯೋಜನೆ ಪ್ರಕಟಿಸುವ ಮೊದಲು ನಿಗಮದ ಆರ್ಥಿಕ ಪರಿಸ್ಥಿತಿ, ಅಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿಗಳ ಬಗ್ಗೆಯೂ ಕಾಳಜಿ ಇರಬೇಕು. ದುಬಾರಿ ಬೆಲೆಯ ಸೀರೆಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವ ಯೋಚನೆ ಸರ್ಕಾರಕ್ಕೆ ಇದ್ದರೆ ಅದಕ್ಕೆ ಸೂಕ್ತ ಯೋಜನೆಯನ್ನು ಸಿದ್ಧಪಡಿಸಬೇಕು. ಅದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ಯೋಜನೆ ಜಾರಿಗೊಳಿಸಿದರೆ ಸರ್ಕಾರದ ಘನತೆಗೆ ಕುಂದು ಉಂಟಾಗುತ್ತದೆ. ಸರ್ಕಾರದ ಹಣ ರಚನಾತ್ಮಕ ಕೆಲಸಕ್ಕೆ ಬಳಕೆಯಾಗಬೇಕೇ ವಿನಾ ಇಂತಹ ಶೋಕಿ ಯೋಜನೆಗಳಿಗೆ ಅಲ್ಲ. ಇದು ಮಹಿಳೆಯರಿಗೆ ಮುಜುಗರವನ್ನು ಉಂಟು ಮಾಡುತ್ತದೆಯೇ ವಿನಾ ಅವರಲ್ಲಿ ಅಭಿಮಾನವನ್ನಂತೂ ಖಂಡಿತಾ ಮೂಡಿಸುವುದಿಲ್ಲ.

ಪ್ರಮುಖ ಸುದ್ದಿಗಳು