ಆತ್ಮಹತ್ಯೆಯಲ್ಲಿ ಕರ್ನಾಟಕ ನಂ.1

ನವದೆಹಲಿ: ದೇಶದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣ ವರದಿಯಾಗುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ತ್ರಿಪುರಾ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

ಭಾರತದಲ್ಲಿ ಆತ್ಮಹತ್ಯೆ ಪ್ರವೃತ್ತಿ ಕುರಿತು ಬುಧವಾರ ಪ್ರಕಟವಾದ ಜಾಗತಿಕ ವರದಿ ಈ ಆತಂಕಕಾರಿ ಬೆಳವಣಿಗೆ ಬಗ್ಗೆ ಬೆಳಕು ಚೆಲ್ಲಿದೆ.

ಈ ರಾಜ್ಯಗಳಲ್ಲಿ ಆತ್ಮಹತ್ಯೆಗೆ ಶರಣಾಗುವ ಮಹಿಳೆಯರು ಮತ್ತು ಪುರುಷರ ಪ್ರಮಾಣದಲ್ಲಿ ಹೆಚ್ಚಿನ ಅಂತರವಿಲ್ಲ. ಕೇರಳ ಮತ್ತು ಛತ್ತೀಸಗಡದಲ್ಲಿ ಮಾತ್ರ ಪುರುಷರ ಸಂಖ್ಯೆ ಹೆಚ್ಚಿದೆ.

‘1990–2016ರ ಅವಧಿಯಲ್ಲಿ ಜಾಗತಿಕ ಆರೋಗ್ಯ  ಸಮಸ್ಯೆಗಳು ಮತ್ತು ಪರಿಣಾಮ’ ಕುರಿತ ಈ ಅಧ್ಯಯನ ವರದಿ ಲ್ಯಾನ್ಸೆಟ್‌ ಪಬ್ಲಿಕ್‌ ಹೆಲ್ತ್‌ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ನಿಯಂತ್ರಣಕ್ಕೆ ಸಿಗದ ಆತ್ಮಹತ್ಯೆ ಮತ್ತು ಅಸಹಜ ಸಾವಿನ ಪ್ರಕರಣ ದೇಶದ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಚಿಕ್ಕ ವಯಸ್ಸಿನಲ್ಲಿ ಮದುವೆ, ಎಳೆಯ ವಯಸ್ಸಿನಲ್ಲಿಯೇ ತಾಯ್ತನ, ಕೌಟುಂಬಿಕ ದೌರ್ಜನ್ಯ, ಆರ್ಥಿಕವಾಗಿ ಪರಾವಲಂಬನೆ, ಬಡತನ, ಅನಕ್ಷರತೆ ಮುಂತಾದವು ಮಹಿಳೆಯರ ದುಡುಕಿನ ನಿರ್ಧಾರಕ್ಕೆ ಕಾರಣವಾಗಿವೆ ಎಂದು ವರದಿ ಹೇಳಿದೆ.

 * * * *

ವರದಿಯ ಹೂರಣ

* ಭಾರತದಲ್ಲಿ ವರದಿಯಾಗುವ ಸಾವುಗಳ ಪೈಕಿ ಆತ್ಮಹತ್ಯೆಯಿಂದ ಸಂಭವಿಸುವ ಸಾವಿನ ಸಂಖ್ಯೆ ಅತಿ ಹೆಚ್ಚು

* ಪುರುಷರಿಗೆ ಹೋಲಿಸಿದರೆ ಆತ್ಮಹತ್ಯೆಗೆ ಶರಣಾಗುವವರಲ್ಲಿ ಮಹಿಳೆಯರ ಪ್ರಮಾಣ ಹೆಚ್ಚು.

* 2016ರಲ್ಲಿ ಜಾಗತಿಕ ಮಟ್ಟದಲ್ಲಿ ವರದಿಯಾದ ಮಹಿಳೆಯರ ಆತ್ಮಹತ್ಯೆ ಪ್ರಕರಣಗಳಲ್ಲಿ ಭಾರತದ ಶೇ 37ರಷ್ಟು ಮಹಿಳೆಯರಿದ್ದಾರೆ. ಪುರುಷರ ಪ್ರಮಾಣ ಶೇ 24ರಷ್ಟಿದೆ.

* ದೇಶದಲ್ಲಿ ವರದಿಯಾದ ಶೇ 63ರಷ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಪೈಕಿ 15 ರಿಂದ 39 ವರ್ಷದೊಳಗಿನವರೇ ಹೆಚ್ಚು

* 15–19 ವಯೋಮಾನದ ಬಾಲಕಿಯರಲ್ಲಿ ಈ ಪ್ರವೃತ್ತಿ  ಹೆಚ್ಚು

* ಭಾರತದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವವರಲ್ಲಿ ವಿವಾಹಿತ ಮಹಿಳೆಯರ ಸಂಖ್ಯೆ ಅತಿ ಹೆಚ್ಚು

* ಜಾಗತಿಕ ಮಟ್ಟದಲ್ಲಿ 15 ರಿಂದ 39 ವರ್ಷದೊಳಗಿನವರ ಆತ್ಮಹತ್ಯೆಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ

* ಆತ್ಮಹತ್ಯೆಗಳ ನಿಗ್ರಹಕ್ಕೆ ವಿಶ್ವಸಂಸ್ಥೆ ಸೂಚಿಸಿರುವ ಕ್ರಮಗಳ ಜಾರಿಗೆ ತರಲು ಬಹುತೇಕ ರಾಜ್ಯಗಳು ವಿಫಲ

 * 2030ರ ವೇಳೆಗೆ ಆತ್ಮಹತ್ಯೆ ಪ್ರಕರಣಗಳನ್ನು ಮೂರನೇ ಒಂದು ಭಾಗಕ್ಕೆ ಇಳಿಸುವ ಗುರಿಯನ್ನು ವಿಶ್ವಸಂಸ್ಥೆ ನಿಗದಿಪಡಿಸಿದೆ

 * * * *

ರಾಜ್ಯಗಳಲ್ಲಿ ವರದಿಯಾದ ಆತ್ಮಹತ್ಯೆ ಪ್ರಮಾಣ (ಶೇಕಡವಾರು)

ಕರ್ನಾಟಕ 30.7

ತ್ರಿಪುರಾ 30.3

ತಮಿಳುನಾಡು 29.8

ಆಂಧ್ರ ಪ್ರದೇಶ 25.0

ತೆಲಂಗಾಣ 22.4

ಪಶ್ಚಿಮ ಬಂಗಾಳ 23.6

* * * *

2016ರಲ್ಲಿ ವರದಿಯಾದ ಆತ್ಮಹತ್ಯೆ ಪ್ರಕರಣ (ಸರಾಸರಿ ಪ್ರಮಾಣ ಒಂದು ಲಕ್ಷ ಜನಸಂಖ್ಯೆ)

40% -  1990–2016 ಅವಧಿಯಲ್ಲಿ ಹೆಚ್ಚಳವಾದ ಆತ್ಮಹತ್ಯೆ ಪ್ರಮಾಣ

15% - 25 ವರ್ಷಗಳಲ್ಲಿ (1990–2016) ಇಳಿಮುಖಗೊಂಡ ಮಹಿಳೆಯರ ಆತ್ಮಹತ್ಯೆ ಪ್ರಮಾಣ

36% - ಕರ್ನಾಟಕದಲ್ಲಿ ಮಹಿಳೆಯರ ಆತ್ಮಹತ್ಯೆ ಪ್ರಮಾಣ (ಸರಾಸರಿ ಒಂದು ಲಕ್ಷ ಜನಸಂಖ್ಯೆ)

23.5 % - ಕರ್ನಾಟಕದಲ್ಲಿ ಪುರುಷರ ಆತ್ಮಹತ್ಯೆ ಪ್ರಮಾಣ

 * * * *

ಆತ್ಮಹತ್ಯೆ ತಡೆಗೆ ಭಾರತ ಸಮಗ್ರ ಯೋಜನೆ ರೂಪಿಸಬೇಕಾಗದ ಅಗತ್ಯ ತುರ್ತಾಗಿದೆ
– ರಾಖಿ ದಂಡೋನಾ , ಪ್ರಾಧ್ಯಾಪಕಿ, ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನ

ಪ್ರಮುಖ ಸುದ್ದಿಗಳು