‘ಪಾನ್‌’ನೋಂದಣಿ ಏಜೆನ್ಸಿ ನೆಪದಲ್ಲಿ ವಂಚನೆ

ಚಿಕ್ಕಮಗಳೂರು: ‘ಪಾನ್‌’ (ಶಾಶ್ವತ ಖಾತೆ ಸಂಖ್ಯೆ) ನೇರ ನೋಂದಣಿ ಏಜೆನ್ಸಿ ಕೊಡಿಸುವುದಾಗಿ ನಂಬಿಸಿ ಕೆಲವು ‘ಡಿಜಿಟಲ್‌ ಸೇವಾ’ (ಸಾಮಾನ್ಯ ಸೇವಾ ಕೇಂದ್ರ– ಸಿಎಸ್‌ಸಿ) ಕೇಂದ್ರದವರಿಂದ ಜಾಲವೊಂದು ಹಣ ಲಪಟಾಯಿಸಿದೆ. ‘ಮೈಂಡ್ಸ್‌ ನೆಟ್‌ವರ್ಕ್ಸ್‌’ ಸಂಸ್ಥೆ ಹೆಸರಿನಲ್ಲಿ ತಂತ್ರ ಹೆಣೆದು ಆನ್‌ಲೈನ್‌ನಲ್ಲಿ ಖಾತೆಗೆ ಹಣ ಪಾವತಿಸಿಕೊಂಡಿದೆ.

ಏಜೆನ್ಸಿ ಕೊಡಿಸುವ ಸೋಗಿನಲ್ಲಿ ತರೀಕೆರೆ ತಾಲ್ಲೂಕು ಕೇಂದ್ರದ ಸಿಎಸ್‌ಸಿ ಕೇಂದ್ರವೊಂದರ ವರ್ತಕ ದಯಾನಂದ ಅವರಿಂದ ₹ 7,500 ವಸೂಲಿ ಮಾಡಿದ್ದಾರೆ. ಎನ್.ಆರ್‌.ಪುರ, ತೀರ್ಥಹಳ್ಳಿ, ಚನ್ನಗಿರಿ, ಶಿವಮೊಗ್ಗ, ದಾವಣಗೆರೆ, ಮೈಸೂರು ಇತರೆಡೆಗಳ ಹಲವಾರು ಕೇಂದ್ರಗಳವರಿಂದಲೂ ಅಷ್ಟೇ ಹಣ ಪಾವತಿಸಿಕೊಂಡಿದ್ದಾರೆ. ಜಾಲವು ತನ್ನದೇ ಮೂಲಗಳಿಂದ ಸಿಎಸ್‌ಸಿ ಕೇಂದ್ರದವರ ಮೊಬೈಲ್‌ ಫೋನ್‌ ಸಂಖ್ಯೆ, ಮಾಹಿತಿಗಳನ್ನು ಸಂಗ್ರಹಿಸಿ ಕಾರ್ಯತಂತ್ರ ರೂಪಿಸಿದೆ.

‘ಬೆಂಗಳೂರಿನ ಮೈಂಡ್‌ ನೆಟ್‌ವರ್ಕ್ಸ್‌ ಡೇಟಾಬೇಸ್‌ ಮ್ಯಾನೇಜ್‌ಮೆಂಟ್‌ ಸರ್ವಿಸ್‌ನವರು ಮೊಬೈಲ್‌ಫೋನ್‌ಗೆ ಕರೆ ಮಾಡಿ ನ್ಯಾಷನಲ್‌ ಸೆಕ್ಯುರಿಟಿಸ್‌ ಡಿಪಾಸಿಟರಿ ಲಿಮಿಟೆಡ್‌ (ಎನ್‌ಎಸ್‌ಡಿಎಲ್‌) ಮೂಲಕ ‘ಪಾನ್‌’ ನೇರ ನೋಂದಣಿ ಏಜೆನ್ಸಿ ಕೊಡಿಸುವುದಾಗಿ ಪುಸಲಾಯಿಸಿದರು. 82967 60849, 78920 20376 ಸಂಖ್ಯೆಗಳಿಂದ ಕರೆ ಮಾಡಿದ್ದರು. ಹಲವರು ಈಗಾಗಲೇ ಏಜೆನ್ಸಿ ಆರಂಭಿಸಿದ್ದಾರೆ ಎಂದು ಉದಾಹರಣೆ ನೀಡಿದರು. ಏಜೆನ್ಸಿ ಕಾರ್ಯನಿರ್ವಹಣೆ ಕುರಿತು ಆನ್‌ಲೈನ್‌ನಲ್ಲಿ ಪ್ರಾತ್ಯಕ್ಷಿಕೆ ತೋರಿಸಿದರು. ‘ಇ–ಮೇಲ್‌’ ಮೂಲಕ ವ್ಯವಹರಿಸಿ
ದರು. ಸಿಎಸ್‌ಸಿ ಕೇಂದ್ರದ ವಿವರ, ಪಾನ್‌, ಆಧಾರ್‌ ದಾಖಲೆ ಆಧರಿಸಿ ಒಪ್ಪಂದ ಮಾಡಿಕೊಂಡರು. ನಮ್ಮ ಡಿಜಿಟಲ್‌ ಸಹಿ ಪಡೆದುಕೊಂಡರು’ ಎಂದು ದಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಾಖಲೆ ಪ್ರಕ್ರಿಯೆ ಪೂರ್ಣಗೊಂಡಿದೆ. ಏಜೆನ್ಸಿಯ ಗುರುತಿನ ಸಂಖ್ಯೆ (ಐಡಿ) ಸಿದ್ಧಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ₹ 7,500 ಶುಲ್ಕವನ್ನು ಆನ್‌ಲೈನ್‌ನಲ್ಲಿ ಖಾತೆಗೆ ಪಾವತಿಸಬೇಕು ಎಂದು ಮೈಂಡ್ಸ್‌ ನೆಟ್‌ವರ್ಕ್ಸ್‌ನವರು ತಿಳಿಸಿದರು. ಖಾತೆಗೆ ಹಣ ಪಾವತಿಸಿದ ನಂತರ ಸಂಸ್ಥೆಯವರು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ಮೈಸೂರು, ದಾವಣಗೆರೆ ಇತರೆಡೆಗಳ ನೂರಾರು ಮಂದಿಗೆ ಇದೇ ರೀತಿ ವಂಚಿಸಿದ್ದಾರೆ. ಡಿ.ಎಸ್‌.ಗೋಪಿನಾಥ ಎಂಬಾತ ‘ಮೈಂಡ್ಸ್‌ ನೆಟ್‌ವರ್ಕ್ಸ್‌’ ಸಂಸ್ಥೆಯ ಮುಖ್ಯಸ್ಥ. ಮುರುಗೇಶ್‌ ಎಂಬಾತ ಪಾಲುದಾರ. ಇಬ್ಬರು ಮಹಿಳೆಯರು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡುತ್ತೇನೆ’ ಎಂದು ಅವರು ತಿಳಿಸಿದರು.

‘ಡಿಜಿಟಲ್‌ ಸಹಿ, ಕರಾರು ದಾಖಲೆಗಗಳನ್ನು ಬಳಸಿಕೊಂಡು ಬೇರೆ ಏನಾದರೂ ಮೋಸ ಮಾಡಬಹುದು ಎಂಬ ಭಯ ಆವರಿಸಿದೆ. ಗೋಪಿನಾಥ್‌ ಆಂಧ್ರಪ್ರದೇಶದವ. ಎರಡು ತಿಂಗಳಿನಿಂದ ‘ಮೈಂಡ್ಸ್‌ ನೆಟ್‌ವರ್ಕ್ಸ್‌’ ಬಾಗಿಲು ಮುಚ್ಚಿದೆ’ ಎಂದು ಮೈಸೂರಿನ ರವಿಚಂದ್ರ ಅವರು ಗೋಳು ತೋಡಿಕೊಂಡರು.

ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ಸಿ.ಎನ್‌.ಹೇಮಂತಕುಮಾರ್‌ ಮಾತನಾಡಿ, ‘ಸಿಎಸ್‌ಸಿ ಕೇಂದ್ರದವರಿಗೆ ಆಮಿಷವೊಡ್ಡಿರುವ ಸಾಧ್ಯತೆ ಇದೆ. ಈಗ ಮೋಸ ಮಾಡುವವರೇ ಹೆಚ್ಚು. ಮೋಸ ಆಗಿರುವ ಬಗ್ಗೆ ಕೆಲವರು ಫೋನ್‌ ಮೂಲಕ ತಿಳಿಸಿದ್ದಾರೆ. ಸಿಎಸ್‌ಸಿ ಕೇಂದ್ರದವರೂ ಆ ಸಂಸ್ಥೆಯವರನ್ನು ಸಂಪರ್ಕಿಸಿ ಏಜೆನ್ಸಿ ಕೊಡುವಂತೆ ಬೇಡಿಕೆ ಇಟ್ಟಿರುವ ಸಾಧ್ಯತೆಯೂ ಇದೆ. ದೂರವಾಣಿ ಸಂಖ್ಯೆ, ‘ಇ–ಮೇಲ್‌’ ವಿವರಗಳನ್ನು ನೀಡಿದರೆ ಸಂಬಂಧ
ಪಟ್ಟವರಿಗೆ ದೂರು ದಾಖಲಿಸಲು ಕ್ರಮ ವಹಿಸುತ್ತೇನೆ. ಆ ಸಂಸ್ಥೆಯವರು ಸಿಎಸ್‌ಸಿ ಕೇಂದ್ರಗಳವರ ಮೊಬೈಲ್‌ ಸಂಖ್ಯೆಗಳನ್ನು ಹೇಗೆ ಸಂಗ್ರಹಿಸಿದರು ಎಂಬುದನ್ನು ಮೊದಲು ಪತ್ತೆ ಹಚ್ಚಬೇಕಿದೆ’ ಎಂದು ತಿಳಿಸಿದರು.

‘ಮೈಂಡ್ಸ್‌ ನೆಟ್‌ವರ್ಕ್ಸ್‌’ ಸಂಸ್ಥೆಯವರನ್ನು ‘ಪ್ರಜಾವಾಣಿ’ ಸಂಪರ್ಕಿಸಲು ಪ್ರಯತ್ನಿಸಿತು. ಮೊಬೈಲ್‌ ಸಂಖ್ಯೆಗಳು ಸ್ವಿಚ್‌ ಆಫ್‌ ಆಗಿದ್ದವು.

ಪ್ರಮುಖ ಸುದ್ದಿಗಳು