ಸ್ಕ್ರೂಡ್ರೈವ್‌ನಿಂದ ಇರಿದು ಟೆಕ್ಕಿ ಹತ್ಯೆ: ಬಂಧನ

ಬೆಂಗಳೂರು: ಕಲರ್‌ ಪ್ರಿಂಟ್‌ ಮಾಡಿಸಿದಾಗ ಹೆಚ್ಚುವರಿ ಹಣ ನೀಡದಿದ್ದಕ್ಕೆ ವಿಪ್ರೊ ಕಂಪನಿಯ ಹಾರ್ಡ್‌ವೇರ್ ಎಂಜಿನಿಯರ್ ಗುರುಪ್ರಶಾಂತ್‌ (34) ಎಂಬುವರನ್ನು ಸ್ಕ್ರೂ ಡ್ರೈವ್‌ನಿಂದ ಇರಿದು ಕೊಲೆ ಮಾಡಿದ ಸೈಬರ್‌ಕೆಫೆ ಕೆಲಸಗಾರರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾರ್ತಿಕ್‌ ಬಂಧಿತ ಆರೋಪಿ. ಗಿರಿನಗರದ ಮುನೇಶ್ವರ ದೇವಾಲಯ ಸಮೀಪ ತಮ್ಮ ಪತ್ನಿ ಮಮತಾ ಹಾಗೂ ಪೋಷಕರ ಜೊತೆಗೆ ಗುರುಪ್ರಶಾಂತ್‌ ನೆಲೆಸಿದ್ದರು.

ಗುರುಪ್ರಶಾಂತ್‌ ತಮ್ಮ ಮನೆಯ ಬಳಿಯೇ ಇದ್ದ ಸೈಬರ್ ಕೆಫೆಗೆ ಸೆ.6ರಂದು ಕೆಲ ದಾಖಲೆಗಳನ್ನು ಕಲರ್‌ ಪ್ರಿಂಟ್‌ ಮಾಡಿಸಲು ಹೋಗಿದ್ದರು. ದಾಖಲೆಗಳ ನಾಲ್ಕೈದು ಪ್ರಿಂಟ್‌ಗಳನ್ನು ತೆಗೆದುಕೊಂಡಿದ್ದರು. ಅದರಲ್ಲಿ ಎರಡು ಕಲರ್‌ ಪ್ರಿಂಟ್‌ ಮಾಡಿಸಿದ್ದರು.

ಈ ಕಲರ್‌ ಪ್ರಿಂಟ್‌ಗೆ ಇನ್ನೂ ₹ 10 ಹೆಚ್ಚಿಗೆ ಕೊಡಬೇಕು ಎಂದು ಸೈಬರ್‌ ಕೆಫೆಯ ಕೆಲಸಗಾರ ಕಾರ್ತಿಕ್ ತಿಳಿಸಿದ್ದ. ಇದನ್ನು ವಿರೋಧಿಸಿದ ಗುರುಪ್ರಶಾಂತ್‌, ‘ಕೇವಲ ಎರಡು ಪ್ರಿಂಟ್‌ ಮಾಡಿಸಿದ್ದೇನೆ. ಇದಕ್ಕೇಕೆ ಹೆಚ್ಚಿನ ಹಣ ನೀಡಬೇಕು’ ಎಂದು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ನಡೆದ ಜಗಳ ತಾರಕ್ಕೇರಿತು. ಈ ವೇಳೆ ಕೋಪಗೊಂಡು ಗುರುಪ್ರಶಾಂತ್‌, ಕಾರ್ತಿಕ್‌ಗೆ ಹೊಡೆದಿದ್ದರು.

‘ಕಾರ್ತಿಕ್‌, ಕುಪಿತಗೊಂಡು ಗುರುಪ್ರಶಾಂತ್‌ ಕಿವಿಗೆ ಸ್ಕ್ರೂಡ್ರೈವ್‌ನಿಂದ ಇರಿದಿದ್ದ. ಇರಿತಕ್ಕೆ ಒಳಗಾದ ಅವರು ಪ್ರಜ್ಞೆ ತಪ್ಪಿಬಿದ್ದಿದ್ದರು. ಅವರನ್ನು ಸ್ಥಳೀಯರೇ ಸಮೀಪದ ರಾಧಾಕೃಷ್ಣ ಆಸ್ಪತ್ರೆಗೆ ಸೇರಿಸಿದ್ದರು. ಅವರ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೆಂಗೇರಿಯ ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟರು’ ಎಂದು ಪೊಲೀಸರು ಹೇಳಿದರು.

‘ಕಾರ್ತಿಕ್‌, ಸೈಬರ್‌ನಲ್ಲಿ ಕೆಲಸ ಮಾಡಿಕೊಂಡೇ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ’ ಎಂದರು.

‘ನಾನು ಹೆಚ್ಚುವರಿಯಾಗಿ ₹ 10 ನೀಡುವಂತೆ ಹೇಳಿದೆ. ನನಗೆ ಬೈದಿದ್ದಲ್ಲದೆ, ಹೆಚ್ಚಿನ ಹಣ ಪೀಕಲು ಮುಂದಾಗಿದ್ದಾರೆ ಎಂದು ಬೇರೆ ಗ್ರಾಹಕರಿಗೂ ಪ್ರಿಂಟ್‌ ತೋರಿಸಿದರು. ಅವರೇ ಜಗಳ ಮಾಡಿದರು. ಸ್ಕ್ರೂಡ್ರೈವ್‌ನಿಂದ ಇರಿದೆ. ನನಗೆ ಕೊಲ್ಲುವ ಉದ್ದೇಶವಿರಲಿಲ್ಲ ಎಂಬುದಾಗಿ ಆರೋಪಿ ಹೇಳಿಕೆ ಕೊಟ್ಟಿದ್ದಾನೆ’ ಎಂದು ಹೇಳಿದರು.

ಪ್ರಮುಖ ಸುದ್ದಿಗಳು