ಹೊಸ ರನ್‌ವೇಗೆ ಎಲ್‌ಇಡಿ ಬೆಳಕು

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ನಿರ್ಮಾಣ ಹಂತದಲ್ಲಿರುವ ಎರಡನೇ ರನ್‌ವೇಗೆ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ.

‘ರನ್‌ವೇಯಲ್ಲಿ ವಿಮಾನ ಸಂಚಾರ ಹಾಗೂ ಸುರಕ್ಷತಾ ಕ್ರಮಗಳಿಗಾಗಿ ದೇಶದಲ್ಲೇ ಮೊದಲ ಬಾರಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ’ ಎಂದು ಕೆಐಎ ಮುಖ್ಯ ಯೋಜನಾ ಅಧಿಕಾರಿ ಟಾಮ್‌ ಶಿಮ್ಮಿನ್‌ ತಿಳಿಸಿದರು.

‘ಸೇಫ್‌ ಎಲ್‌ಇಡಿ ಏರ್‌ಫೀಲ್ಡ್‌ ಲೈಟಿಂಗ್‌ ವ್ಯವಸ್ಥೆಯಿಂದಾಗಿ ವಿದ್ಯುತ್‌ ಹಾಗೂ ನಿರ್ವಹಣಾ ವೆಚ್ಚದಲ್ಲಿ ಗಣನೀಯ ಇಳಿಕೆಯಾಗಲಿದೆ. ಉನ್ನತಮಟ್ಟದ ಸುರಕ್ಷತೆ ಮತ್ತು ದಕ್ಷ ಕಾರ್ಯಾಚರಣೆಗೆ ಈ ದೀಪಗಳು ಪೂರಕವಾಗಲಿವೆ’ ಎಂದು ಅವರು ಹೇಳಿದರು. 

‘2008ರಲ್ಲಿ 90 ಲಕ್ಷ ಪ್ರಯಾಣಿಕರು ಈ ನಿಲ್ದಾಣದ ಮೂಲಕ ಪ್ರಯಾಣಿಸಿದ್ದರು. 2018ರಲ್ಲಿ 3.2 ಕೋಟಿ ಮಂದಿ ಇಲ್ಲಿಂದ ಸಂಚರಿಸುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.

ಎರಡನೇ ರನ್‌ವೇ ಪೂರ್ಣಗೊಂಡ ಬಳಿಕ ಇಲ್ಲಿ ಪ್ರತಿ ಗಂಟೆಗೆ 55 ವಿಮಾನಗಳ ಹಾರಾಟ ನಡೆಸುವ ಗುರಿ ಇದೆ. ಎಲ್‌ ಆ್ಯಂಡ್‌ ಟಿ ಕಂಪನಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದೆ. ದೀಪ ಅಳವಡಿಕೆ ಕಾಮಗಾರಿಯನ್ನು ಎಡಿಬಿ ಸೇಫ್‌ಗೇಟ್‌ ಕಂಪನಿ ವಹಿಸಿಕೊಂಡಿದೆ.

ಹೊಸ ರನ್‌ವೇ ಸುಧಾರಿತ ‘ಕ್ಯಾಟ್‌ – III’ (CAT -III) ಇನ್‌ಸ್ಟ್ರುಮೆಂಟ್‌ ಲ್ಯಾಂಡಿಂಗ್‌ ಸಿಸ್ಟಂ ಹೊಂದಿದೆ. ಇದರಿಂದ ಏರ್‌ಬಸ್‌ ಎ380 ಮತ್ತು ಬೋಯಿಂಗ್‌ 747–8 ಸಹಿತ ಎಲ್ಲ ಬಗೆಯ ವಿಮಾನ ಸಂಚಾರವನ್ನು ನಿರ್ವಹಿಸಬಹುದು. ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಹೊಸ ರನ್‌ವೇ ಕಾರ್ಯಾಚರಿಸುವ ನಿರೀಕ್ಷೆಯಿದೆ.

ದಕ್ಷಿಣ ಭಾರತದ ನಿಲ್ದಾಣಗಳ ಪೈಕಿ ಕೆಐಎ ಹೆಚ್ಚು ಪ್ರಯಾಣಿಕರ ದಟ್ಟಣೆಯಿಂದ ಕೂಡಿದ ನಿಲ್ದಾಣವಾಗಿದೆ. ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಎರಡನೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ರೂಟ್ಸ್‌ ಆನ್‌ಲೈನ್‌ ಸಂಸ್ಥೆ ರ‍್ಯಾಂಕಿಂಗ್‌ ನೀಡಿದೆ. ಪ್ರಸಕ್ತ ವರ್ಷ ಸ್ಕೈಟ್ರ್ಯಾಕ್ಸ್‌ ಸಂಸ್ಥೆಯು ಈ ನಿಲ್ದಾಣವನ್ನು ಭಾರತ ಮತ್ತು ಮಧ್ಯ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂದು ಗುರುತಿಸಿದೆ. 

ಪ್ರಮುಖ ಸುದ್ದಿಗಳು