‘ಕಮಲ’ದ ಏಟಿಗೆ ‘ಕೈ’ ಎದಿರೇಟು: ಅಖಾಡಕ್ಕಿಳಿದ ಖರ್ಗೆ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ‘ದೋಸ್ತಿ’ಗಳು (ಜೆಡಿಎಸ್–ಕಾಂಗ್ರೆಸ್‌), ‘ನಮ್ಮ ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ’ ಎಂದು ಪದೇ ಪದೇ ಹೇಳುತ್ತಿದ್ದರೆ, ತಮ್ಮ ಶಾಸಕರೆಲ್ಲ ಹಿಡಿತದಲ್ಲಿದ್ದಾರೆಂದು ನಂಬಿರುವ ಬಿಜೆಪಿ, ರಾಜಕೀಯ ದಾಳ ಉರುಳಿಸುತ್ತಲೇ ಇದೆ.

‘ಆಪರೇಷನ್ ಕಮಲ’ದ ಪಟ್ಟಿಯಲ್ಲಿದ್ದಾರೆ ಎನ್ನಲಾದ ಶಾಸಕರಾದ ಆನಂದ್ ಸಿಂಗ್, ಬಿ. ನಾಗೇಂದ್ರ ಮತ್ತು ಪ್ರತಾಪ ಗೌಡ ಪಾಟೀಲ ಅವರನ್ನು ತಮ್ಮ ಪಕ್ಕದಲ್ಲಿ ಕುಳ್ಳಿರಿಸಿಕೊಂಡ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಬೆಂಕಿ ಇಲ್ಲದೇ ಹೊಗೆಯಾಡುತ್ತಿದೆ’ ಎಂದು ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಬುಧವಾರ ಬಣ್ಣಿಸಿದರು.

ಆದರೆ, ಜಾರಕಿಹೊಳಿ ಸಹೋದರರು– ಲಕ್ಷ್ಮಿ ಹೆಬ್ಬಾಳಕರ ಮಧ್ಯೆ ಉಂಟಾದ ಭಿನ್ನಮತ, ಜಿದ್ದಾಜಿದ್ದಿ, ಸಚಿವ ಡಿ.ಕೆ. ಶಿವಕುಮಾರ್ ಮೇಲಿನ ಐಟಿ ದಾಳಿ ಪ್ರಕರಣವನ್ನು ದಾಳವಾಗಿ ಬಳಸಿಕೊಂಡು ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ತಂತ್ರಗಾರಿಕೆ ಮುಂದುವರಿಸಿದೆ. ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಪಕ್ಷದ 30ಕ್ಕೂ ಹೆಚ್ಚು ಶಾಸಕರು ಮತ್ತು ಕೆಲವು ಮುಖಂಡರ ಜೊತೆ ಚರ್ಚೆ ನಡೆಸಿದರು.

ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಜತೆ ಮಾತನಾಡಿದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ದಿನೇಶ್ ಗುಂಡೂರಾವ್ ಸಮಾಧಾನಗೊಳಿಸುವ ಕೆಲಸ ಮುಂದುವರಿಸಿದ್ದಾರೆ. ಜಾರಕಿಹೊಳಿ ಜೊತೆ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಕೂಡಾ ಮಾತುಕತೆ ನಡೆಸಲಿದ್ದಾರೆ. ರಮೇಶ ನಿವಾಸಕ್ಕೆ ಬೆಳಿಗ್ಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರಾದ ಕೆ.ಸಿ. ಕೊಂಡಯ್ಯ, ಆರ್.ಬಿ. ತಿಮ್ಮಾಪೂರ  ಮಾತುಕತೆ ನಡೆಸಿದರು.ರಮೇಶ ಅವರು ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚೆ ನಡೆಸಿದರು.

ಕೊಂಡಯ್ಯ ಕೂಡಾ ಖರ್ಗೆ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿದರು. ಅತೃಪ‍್ತಿ ಶಮನಗೊಂಡಂತೆ ಕಂಡು ಬಂದ ರಮೇಶ, ‘ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪರಮೇಶ್ವರ, ದಿನೇಶ್ ಗುಂಡೂರಾವ್ ಜೊತೆ ಚರ್ಚಿಸಿದ್ದೇನೆ. ಒಂದು ವೇಳೆ ಇದ್ದರೆ ನಮ್ಮ ನಾಯಕರು ಸರಿಪಡಿಸುತ್ತಾರೆ’ ಎಂದರು.

‘ಮಲ್ಲಿಕಾರ್ಜುನ ಖರ್ಗೆ ನಮಗೆ ತಂದೆ ಸಮಾನರು. ಅವರು ನಮ್ಮ ರಾಜಕೀಯ ಗುರುಗಳು. ಖರ್ಗೆ ಅವರು ಹೇಳಿದಂತೆ ಕೇಳುತ್ತೇವೆ. ನಮ್ಮ ಸಮಾಜದವರು ಬಳ್ಳಾರಿ, ರಾಯಚೂರು, ಚಿತ್ರದುರ್ಗದಲ್ಲಿ ಇದ್ದಾರೆ. ನಮ್ಮ ಸಮಾಜದವರು ಏನೇ ಕಷ್ಟದಲ್ಲಿದ್ದರೂ ಭಾಗಿಯಾಗುವುದು ನಮ್ಮ ಕರ್ತವ್ಯ. ಸಮಾಜದವರಿಗೆ ಸಚಿವ ಸ್ಥಾನ ನೀಡುವಂತೆ ನಾಯಕರಿಗೆ ಕೇಳಿದ್ದೇನೆ’ ಎಂದರು.

ರಮೇಶ ಅವರ ಜೊತೆ ಚರ್ಚೆ ನಡೆಸುವುದಕ್ಕೂ ಮೊದಲು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ಬಿಜೆಪಿಯವರು ಸರ್ಕಾರ ರಚಿಸಲು ಹಗಲುಗನಸು ಕಾಣುತ್ತಿದ್ದಾರೆ. ಆದರೆ, ಅದು ಸಾಧ್ಯವೇ ಇಲ್ಲ’ ಎಂದರು.

‘ಜಾರಕಿಹೊಳಿ ಸಹೋದರರು ಹಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದಾರೆ. ಸದ್ಯಕ್ಕೆ ಏನು ಗೊಂದಲಗಳಿವೆಯೊ ಗೊತ್ತಿಲ್ಲ. ರಮೇಶ ಜಾರಕಿಹೊಳಿ ಜೊತೆ ಮಾತನಾಡುತ್ತೇನೆ. ಆದರೆ, ಕೆಲವು ಮಾಧ್ಯಮಗಳು ಇದನ್ನು ವೈಭವೀಕರಿಸುತ್ತಿವೆ’ ಎಂದರು.

‘ಸಣ್ಣಪುಟ್ಟ ವಿಚಾರಕ್ಕೆ ಜಾರಕಿಹೊಳಿ ಅವರಿಗೆ ಬೇಸರವಾಗಿದೆ. ಸರ್ಕಾರ ಬೀಳುವಂಥ ಯಾವುದೇ ಸಮಸ್ಯೆ ಇಲ್ಲ. ಶಾಸಕ ಡಾ. ಸುಧಾಕರ್ ಕೂಡ ಪಕ್ಷ ಬಿಡುವ ಯೋಚನೆ ಮಾಡಿಲ್ಲ’ ಎಂದು ಜಿ. ಪರಮೇಶ್ವರ ಹೇಳಿದರು.

‘ಕೈಯತ್ತ ಇಬ್ಬರು, ದಳದತ್ತ ಐವರು’

‘ಇಬ್ಬರು ಬಿಜೆಪಿ ಶಾಸಕರು ನಮ್ಮಲ್ಲಿಗೆ ಬರಲು, ಐವರು ಬಿಜೆಪಿ ಶಾಸಕರು ಜೆಡಿಎಸ್‌ ಸೇರಲು ತಯಾರಾಗಿದ್ದಾರೆ’ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

‘ಆಂತರಿಕ ಕಚ್ಚಾಟದಿಂದ ಬಿಜೆಪಿ ಶಾಸಕರು ಬೇಸತ್ತಿದ್ದಾರೆ. ನಮ್ಮ ಶಾಸಕರನ್ನು ಅವರು ಸೆಳೆದರೆ ನಾವೂ ತಿರುಗೇಟು ಕೊಡಬೇಕಾಗುತ್ತದೆ. ಇಂಥ ಕೀಳುಮಟ್ಟದ ಕೆಲಸ ಕೈಬಿಡಲಿ. ಅದು ಆ ಪಕ್ಷಕ್ಕೇ ತಿರುಗುಬಾಣ ಆಗಲಿದೆ’ ಎಂದರು.

‘ಪಕ್ಷಕ್ಕೆ ಬರುವಂತೆ ಶಾಸಕರಾದ ಅನಿಲ್ ಚಿಕ್ಕಮಾದು ಮತ್ತು ಬಸನಗೌಡ ಮೇಲೂ ಬಿಜೆಪಿಯವರು ಒತ್ತಡ ಹಾಕಿದ್ದಾರೆ’ ಎಂದರು.

ಜೆಡಿಎಸ್‌ನಲ್ಲೂ ಅಸಮಾಧಾನ

‘ಕೆಲವು ಶಾಸಕರಲ್ಲಿ ಸಣ್ಣ–ಪುಟ್ಟ ಅಸಮಾಧಾನಗಳು ಇರುವುದು ನಿಜ. ತಮ್ಮ ನಿರೀಕ್ಷೆಯಂತೆ ವರ್ಗಾವಣೆಗಳು ಆಗುತ್ತಿಲ್ಲ ಎಂಬ ಬೇಸರವೂ ಇದೆ. ಆದರೆ, ಈ ಕಾರಣಕ್ಕೆ ಪಕ್ಷ ತೊರೆದು ಬಿಜೆಪಿ ಜತೆ ಕೈಜೋಡಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ’ ಎಂದು ಜೆಡಿಎಸ್‌ ಮುಖಂಡರೊಬ್ಬರು ತಿಳಿಸಿದರು

ಪ್ರಮುಖ ಸುದ್ದಿಗಳು