ಹೆಸರಿಗಷ್ಟೇ ಧರ್ಮ, ಸಂಸ್ಕಾರ ಆಚರಣೆ ಸಲ್ಲದು: ಶಿವಾಚಾರ್ಯ ಸ್ವಾಮೀಜಿ

ಬೆಂಗಳೂರು: ‘ದೇಹ ಮತ್ತು ಮನಸ್ಸು ಆರೋಗ್ಯವಾಗಿರಲು ಪ್ರತಿನಿತ್ಯ ಶ್ರದ್ಧಾ ಭಕ್ತಿಯಿಂದ ಶಿವಪೂಜೆ ಮಾಡಿ’ ಎಂದು ವಿಭೂತಿಪುರ ವೀರಸಿಂಹಾಸನ ಮಠದ ಪಟ್ಟಾಧ್ಯಕ್ಷ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮಹದೇವಪುರ ಕ್ಷೇತ್ರದ ವರ್ತೂರು ಗ್ರಾಮದಲ್ಲಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ, ವಿಳಂಬಿನಾಮ ಸಂವತ್ಸರದ ಶ್ರಾವಣ ಮಾಸದ ಮನೆ-ಮನಗಳಲ್ಲಿ ಶಿವಪೂಜೆ ಶಿವಾನುಭವ ಹಾಗೂ ಸಿದ್ಧಾಂತ ಶಿಖಾಮಣಿ-ವಚನ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಧರ್ಮ ಸಂಸ್ಕಾರಗಳನ್ನು ನಾಮಕಾವಸ್ಥೆ ಆಚರಿಸುತ್ತಿರುವುದು ಬೇಸರದ ಸಂಗತಿ. ಶ್ರದ್ಧಾ ಭಕ್ತಿಯಿಂದ ದಿನನಿತ್ಯ ಶಿವಪೂಜೆ ಮಾಡಿದರೆ ಮನಸ್ಸು ಮತ್ತು ದೇಹ ಆರೋಗ್ಯದಿಂದ ಕೂಡಿರುತ್ತದೆ’ ಎಂದರು.

ನಂತರ ಮಾತನಾಡಿದ ನಿವೃತ್ತ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ, ‘ಸಮಾಜದ ಸಂಘಟನೆಗೆ ಎಲ್ಲರೂ ಕೈ ಜೋಡಿಸುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸಂಘಟನೆಯ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದಾಗ ಮಾತ್ರ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ’ ಎಂದರು.

ಮಹದೇವಪುರ ಕ್ಷೇತ್ರದ ವೀರಶೈವ ಲಿಂಗಾಯತ ಸಮಾಜದ ನೋಂದಣಿಗೆ ನೆರವಾಗುವ ಮಿಸ್ಡ್‌ಕಾಲ್‌ ಮೊಬೈಲ್‌ ಸಂಖ್ಯೆಯನ್ನು ಮಿರ್ಜಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಮಹೇಂದ್ರ ಮೋದಿ ಇದ್ದರು.

ಪ್ರಮುಖ ಸುದ್ದಿಗಳು