ಪರಿಸರ ಸ್ನೇಹಿ ಪರ್ವತಾರೋಹಿ ಗಣಪ

ಬೆಂಗಳೂರು: 40 ದಿನ, ಐದು ಜನರ ತಂಡದ ಶ್ರಮದ ಫಲವಾಗಿ 25 ಅಡಿ ಎತ್ತರದ ಪರ್ವತಾರೋಹಿ ಗಣೇಶ ಎಚ್ಎಸ್ಆರ್ ಬಡಾವಣೆಯ ಬಿಬಿಎಂಪಿ ಮೈದಾನದಲ್ಲಿ ಎದ್ದು ನಿಂತಿದ್ದಾನೆ. ಎಚ್ಎಸ್ಆರ್ ಯೂತ್ ಕ್ಲಬ್ ಗೆಳೆಯರು ಇಂಥದ್ದೊಂದು ಸಾಹಸಕ್ಕೆ ಮುಂದಾದವರು.

ಗಂಗಾನದಿ ದಂಡೆಯಿಂದ ಮೂರೂವರೆ ಟನ್ ಮಣ್ಣು, ಎರಡು ಟನ್ ಜೇಡಿ ಮಣ್ಣು, ಕೃಷ್ಣಗಿರಿಯಿಂದ ತರಲಾದ ಒಣಹುಲ್ಲು, ಗೋಣಿತಾಟು, ಸುಣ್ಣ, ನೈಸರ್ಗಿಕ ಬಣ್ಣಗಳನ್ನು ಬಳಸಿ ಈ ಬೃಹತ್ ಗಣೇಶನನ್ನು ತಯಾರಿಸಲಾಗಿದೆ. ಯಾವುದೇ ರಾಸಾಯನಿಕಗಳನ್ನು ಬಳಸದೇ ಶುದ್ಧ ಪರಿಸರ ಸ್ನೇಹಿಯಾಗಿ ಮಾಡಲಾಗಿದೆ.

ಲಲಿತ್ ಗೋಯಲ್ ಮತ್ತು ಸರ್ಜಿತ್ ದೇವ್ ಎಂಬ ಕೋಲ್ಕತ್ತದ ಇಬ್ಬರು ಕಲಾವಿದರು ಮೂರ್ತಿಯ ನಿರ್ಮಾತೃಗಳು. ‘ಮಹಾರಾಷ್ಟ್ರದ ನಾಸಿರ್‌ನಲ್ಲಿ ಇದೇ ಮಾದರಿಯ ತ್ರಿಮುಖ ಗಣಪನ ಮೂರ್ತಿಯನ್ನು ನಿರ್ಮಾಣ ಮಾಡಿದ್ದರು. ಈ ಮಾದರಿಯನ್ನು ತೋರಿಸಿದಾಗ ಎಲ್ಲರೂ ಒಪ್ಪಿದರು. ಅದರಂತೆ ಮಾಡಿದ್ದೇವೆ’ ಎನ್ನುತ್ತಾರೆ ಕಲಾವಿದ ಸರ್ಜಿತ್ ದೇವ್.

‘15 ವರ್ಷಗಳಿಂದಲೂ ಗಣೇಶ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದೇವೆ. ಈ ಬಾರಿ ವಿಶೇಷವಾಗಿ ಮಾಡಬೇಕೆಂಬ ಯೋಚನೆಯಲ್ಲಿದ್ದಾಗ ಗೆಳೆಯ ಗೋಯಲ್, ನಾಸಿರ್‌ನ ‘ಅನ್ನ ಗಣಪ’ನ ಮಾದರಿ ತೋರಿಸಿದರು. 4 ಲಕ್ಷ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದೇವೆ’ ಎನ್ನುತ್ತಾರೆ ಸಂಘದ ಸಂಸ್ಥಾಪಕ ಅಧ್ಯಕ್ಷ ರವಿ.

ಪ್ರಮುಖ ಸುದ್ದಿಗಳು