Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 1 ಜುಲೈ 2023

ಪ್ರಜಾವಾಣಿ ವಿಶೇಷ

ಬಿಜೆಪಿ ಸರ್ಕಾರವು ಕೃಷಿ ಕ್ಷೇತ್ರ ಮತ್ತು ರೈತರ ಕಲ್ಯಾಣಕ್ಕಾಗಿ ವಾರ್ಷಿಕ ₹6.5 ಲಕ್ಷ ಕೋಟಿ ಹಣವನ್ನು ವ್ಯಯ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು. ಅಡುಗೆ ಎಣ್ಣೆ ವಿಚಾರದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸಲು ಸಹಕಾರಿ ಸಂಸ್ಥೆಗಳು ಸಹಾಯ ಮಾಡಬೇಕೆಂದು ಕರೆ ನೀಡಿದರು.

ಖಾಸಗಿ ಬಸ್‌ವೊಂದಕ್ಕೆ ಬೆಂಕಿಹೊತ್ತಿಕೊಂಡ ಪರಿಣಾಮ ಅದರಲ್ಲಿದ್ದ 25 ಪ್ರಯಾಣಿಕರು ಮೃತಪಟ್ಟಿರುವ ದುರಂತ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇನಲ್ಲಿ ಇಂದು (ಜುಲೈ 1ರಂದು) ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸತ್‌ನ ಮುಂಗಾರು ಅಧಿವೇಶನ ಜುಲೈ 20 ರಿಂದ ಆಗಸ್ಟ್‌ 11 ರವರೆಗೆ ನಡೆಯಲಿದೆ. ಈ ಕುರಿತು ಟ್ವೀಟ್‌ ಮಾಡಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ‘ರಚನಾತ್ಮಕ ಚರ್ಚೆಗೆ ಎಲ್ಲ ರಾ‌ಜಕೀಯ ಪಕ್ಷಗಳು ಸಹಕಾರ ನೀಡಬೇಕು‘ ಎಂದು ಮನವಿ ಮಾಡಿದ್ದಾರೆ.

ಬುಲ್ಧಾನ್‌ ಬಸ್‌ ದುರಂತದಲ್ಲಿ 25 ಜನರು ಮೃತಪಟ್ಟಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನಾಗ್ಪುರ–ಮುಂಬೈ ಸಮೃದ್ಧಿ ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್ ದರವನ್ನು ಶನಿವಾರ ಹೆಚ್ಚಿಸಿವೆ. ದೆಹಲಿಯನ್ನು ಹೊರತುಪಡಿಸಿ ಪ್ರಮುಖ ನಗರಗಳಲ್ಲಿ ಏರಿಕೆ ಕಂಡಿದೆ. ‘ಬೆಂಗಳೂರಿನಲ್ಲಿ ₹8ರಷ್ಟು ಏರಿಕೆ ಕಂಡಿದ್ದು, ₹1,860ಕ್ಕೆ ತಲುಪಿದೆ’ ಎಂದು ಹೋಟೆಲ್‌ ಉದ್ಯಮದ ಮೂಲಗಳು ತಿಳಿಸಿವೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಜೂನ್‌ ತಿಂಗಳಿನಲ್ಲಿ ₹1.61 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ.

ಐಎಸ್‌ ಉಗ್ರ ಸಂಘಟನೆಯ ಜೊತೆ ಸೇರಿ ದೇಶದಾದ್ಯಂತ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ಒಂಬತ್ತು ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಮೊದಲ ಪೂರಕ ಆರೋಪಪಟ್ಟಿ ಸಲ್ಲಿಸಿದೆ.

ಆನ್‌ಲೈನ್‌ ಫ್ಯಾಂಟಸಿ ಗೇಮಿಂಗ್ ಫ್ಲಾಟ್‌ಫಾರ್ಮ್‌ 'ಡ್ರೀಮ್‌11' ಇನ್ನುಮುಂದೆ ಭಾರತ ಕ್ರಿಕೆಟ್‌ ತಂಡದ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ.

₹500 ಕೋಟಿಗೂ ಅಧಿಕ ಬೇನಾಮಿ ಆಸ್ತಿಗಳನ್ನು ಹೊಂದಿರುವ ಆರೋಪದಡಿ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿರುವ ಕೆ.ಆರ್‌.ಪುರ ತಾಲ್ಲೂಕಿನ ಹಿಂದಿನ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತು ಮಾಡಲಾಗಿದೆ.

ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಜುಲೈ 27ರಂದು ಹಾಜರಾಗುವಂತೆ ‘ಆದಿಪುರುಷ್‌’ ಚಿತ್ರತಂಡಕ್ಕೆ ಅಲಹಾಬಾದ್‌ ಹೈಕೋರ್ಟ್‌ ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.