ಶನಿವಾರ, ಡಿಸೆಂಬರ್ 7, 2019
16 °C
ಬ್ಯಾಟರಾಯನಪುರ ವಾರ್ಡ್‌ನ ಅಮೃತಹಳ್ಳಿ ಕೆರೆಯ ದುಸ್ಥಿತಿ ಇದು.

ಒಡಲು ತುಂಬಿದೆ ವಿಷಯುಕ್ತ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಂಡೆಯಲ್ಲಿ ನಿಂತು ನೋಡಿದರೆ ಈ ಕೆರೆಯಲ್ಲಿ ನೀರೇ ಕಾಣಿಸುವುದಿಲ್ಲ. ಶೇ 70ರಷ್ಟು ಭಾಗವನ್ನು ಪಾಚಿ, ಕಳೆಗಿಡಗಳೇ ‌ಆವರಿಸಿಕೊಂಡಿವೆ. ಮಲಿನಗೊಂಡಿರುವ ಈ ಕೆರೆಯ ನೀರು ದುರ್ನಾತ ಬೀರುತ್ತಿದೆ. ರಾಸಾಯನಿಕಯುಕ್ತ ತ್ಯಾಜ್ಯ ಕೆರೆಯ ಒಡಲನ್ನು ಸೇರಿದ್ದರಿಂದ ನೀರಿನ ಬಣ್ಣವೇ ಬದಲಾಗಿದೆ. 

ಬ್ಯಾಟರಾಯನಪುರ ವಾರ್ಡ್‌ನ ಕೆರೆಯ ದುಸ್ಥಿತಿ ಇದು. ಇದರ ಹೆಸರೇನೋ ‘ಅಮೃತ’ಹಳ್ಳಿ ಕೆರೆ. ಆದರೆ, ಇದರ ಒಡಲಲ್ಲಿರುವುದೆಲ್ಲ ವಿಷಯುಕ್ತ ನೀರು. ಇದರ ದಂಡೆಯ ಬಳಿ ಪ್ಲಾಸ್ಟಿಕ್‌ ಬಾಟಲಿ, ಚೀಲ, ಕಾಗದ ಮೊದಲಾದ ಕಸ ಕಶ್ಮಲಗಳು ರಾಶಿ ಬಿದ್ದಿವೆ.

‘ಇದರ ನೀರು ಕಲುಷಿತಗೊಂಡಿರುವುದರಿಂದ ಜೀವ ಸಂಕುಲಕ್ಕೂ ಕುತ್ತು ಬಂದಿದೆ. ಮೀನುಗಳು, ಕಪ್ಪೆಗಳು ಸೇರಿದಂತೆ ಜೀವರಾಶಿಗಳು ಸಾವನ್ನಪ್ಪಿವೆ. ವಲಸೆ ಪಕ್ಷಿಗಳ ಪ್ರಮಾಣವೂ ಕಡಿಮೆ ಆಗಿದೆ’ ಎನ್ನುತ್ತಾರೆ ಈ ಜಲಮೂಲದ ಪಕ್ಕದಲ್ಲೇ ಇರುವ ಅಮೃತನಗರದ ನಿವಾಸಿಗಳು.

ಈ ಕೆರೆಯ ನೀರು ಸ್ವಚ್ಛವಾಗಿರಬೇಕು ಎಂಬುದು ಸ್ಥಳೀಯರ ಆಶಯ. ಸ್ಥಳೀಯರ ಒತ್ತಾಯಕ್ಕೆ ಮಣಿದು ಕೊನೆಗೂ ಕೆರೆಯ ಒಡಲಿಗೆ ಕಲುಷಿತ ನೀರು ಸೇರದಂತೆ ತಡೆಯುವ ಪ್ರಯತ್ನ ಸಾಗಿದೆ. ಕೆರೆಗೆ ಕಲುಷಿತ ನೀರು ಹರಿದುಬರುತ್ತಿದ್ದ ಕಾಲುವೆ ಮುಚ್ಚಲಾಗಿದೆ.

‘ಕೊಳಚೆ ನೀರು ಈಗ ಕೆರೆಗೆ ಸೇರುತ್ತಿಲ್ಲ. ಅದರ ಹರಿವಿಗಾಗಿಯೇ ಪ್ರತ್ಯೇಕ ಚರಂಡಿ ನಿರ್ಮಿಸಲಾಗಿದೆ. ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬಾಕಿ ಕಾಮಗಾರಿಯನ್ನೂ ಶೀಘ್ರವೇ ಪೂರ್ಣಗೊಳಿಸಲಾಗುತ್ತದೆ’ ಎಂದು ಅಮೃತನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವರಾಜ್‌ಗೌಡ ಹೇಳಿದರು.

‘ಅಮೃತನಗರದ 7ನೇ ಅಡ್ಡರಸ್ತೆಯ ಸಮೀಪ ಸೇತುವೆ ನಿರ್ಮಿಸಲಾಗುತ್ತಿದೆ. ಆ ಕಾಮಗಾರಿ ಪೂರ್ಣಗೊಂಡ ಬಳಿಕ ತೆರವು ಮಾಡುವುದಾಗಿ ಇಲ್ಲಿನ ಪಾಲಿಕೆ ಸದಸ್ಯರು ಭರವಸೆ ನೀಡಿದ್ದಾರೆ. ಬಳಿಕ ಇಲ್ಲಿ ದೋಣಿವಿಹಾರವನ್ನೂ ಆರಂಭಿಸುವ ಚಿಂತನೆ ಇದೆ’ ಎಂದು ಹೇಳಿದರು. ‘ಕೆರೆಯ ಕಳೆಗಳನ್ನು ಸ್ವಚ್ಛ ಮಾಡಿದರೆ ಈ ಪರಿಸರವೂ ಸುಂದರವಾಗಲಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ, ಸುತ್ತಲೂ ಹಣ್ಣಿನ ಗಿಡಗಳನ್ನು ನೆಡಬೇಕು. ಇದು ಪಕ್ಷಿಗಳನ್ನು ಆಕರ್ಷಿಸಲಿದೆ’ ಎಂದು ಸಂಘದ ಉಪಾಧ್ಯಕ್ಷ ಚಂದ್ರಶೇಖರ್‌ ಹೇಳಿದರು.

‘ಸಿದ್ಧಗೊಳ್ಳುತಿದೆ ಸುಸಜ್ಜಿತ ಉದ್ಯಾನ’

‘ಕೆರೆಯ ಅಂಗಳದಲ್ಲಿ ಸುಸಜ್ಜಿತ ನಡಿಗೆ ಪಥ, ಉದ್ಯಾನ, ಕೆರೆಯ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಅವರು 2015ರಲ್ಲಿ ಚಾಲನೆ ನೀಡಿದ್ದರು. ಕುಂಟುತ್ತಾ ಸಾಗಿದ್ದ ಕಾಮಗಾರಿ ಈಗ ಒಂದು ಹಂತಕ್ಕೆ ಬಂದಿದೆ. ‌

ಕೆರೆ ದಂಡೆಯಲ್ಲಿ ಕಳೆ ಗಿಡಗಳು ಬೆಳೆದು ನಡೆಯಲಾಗದ ಪರಿಸ್ಥಿತಿ ಇತ್ತು. ಕಳೆ ತೆಗೆಸಿ ದಂಡೆಗೆ ಹೊಸ ರೂಪ ಕೊಡಲಾಗಿದೆ. ನಡಿಗೆ ಪಥಕ್ಕೆ ಚ‍ಪ್ಪಡಿ ಹಾಸುವ ಕೆಲಸ ಮಾತ್ರ ಬಾಕಿಯಿದೆ. ಕಿತ್ತುಹೋಗಿದ್ದ ತಂತಿ ಬೇಲಿ ಸರಿಪಡಿಸಲಾಗಿದೆ. ಪಕ್ಕದಲ್ಲಿ ಉದ್ಯಾನದ ಕಾಮಗಾರಿ ಪೂರ್ಣಗೊಂಡರೆ ಈ ಕೆರೆ ಜನಾಕರ್ಷಣೆಯ ಕೇಂದ್ರವಾಗಲಿದೆ’ ಎಂದು ದೇವರಾಜ್‌ಗೌಡ ತಿಳಿಸಿದರು.

 ***

ಅಂಕಿ ಅಂಶ

24 ಎಕರೆ

ಅಮೃತ ಹಳ್ಳಿ ಕೆರೆಯ ವಿಸ್ತೀರ್ಣ

₹ 5.50 ಕೋಟಿ

ಕೆರೆ ಅಭಿವೃದ್ಧಿಗೆ ಮಂಜೂರಾಗಿರುವ ಮೊತ್ತ

***

ಕೆರೆಗೆ ಕಲುಷಿತ ನೀರು ಸೇರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೊಳಚೆನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಿಸುವ ಚಿಂತನೆ ಇದೆ. ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ ಬಳಿಕ ಎಸ್‌ಟಿಪಿ ನಿರ್ಮಿಸುತ್ತೇವೆ

–ಪಿ.ವಿ.ಮಂಜುನಾಥ ಬಾಬು, ‍‍ಬ್ಯಾಟರಾಯನಪುರ ವಾರ್ಡ್‌ನ ಪಾಲಿಕೆ ಸದಸ್ಯ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು