ಸುರಕ್ಷತೆಗೆ ಪರ್ಯಾಯ ಲಾಗಿನ್‌

7

ಸುರಕ್ಷತೆಗೆ ಪರ್ಯಾಯ ಲಾಗಿನ್‌

Published:
Updated:
computer

ಕಂಪ್ಯೂಟರ್, ಲ್ಯಾಪ್‌ಟಾಪ್ ಬಳಕೆದಾರರಲ್ಲಿ ಹೆಚ್ಚಿನವರು ಲಾಗ್ ಇನ್ ಹೊಂದಿರುವುದೇ ಇಲ್ಲ. ಎಲ್ಲಾ ಕಡತಗಳು ಎಲ್ಲರಿಗೂ ಲಭ್ಯವಾಗುವಂತೆ ಇರುತ್ತವೆ. ಆದರೆ, ಇದು ಖಾಸಗೀತನ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಅಭ್ಯಾಸವಲ್ಲ. ಕಂಪ್ಯೂಟರ್‌ಗೆ ಲಾಗಿನ್‌ ಇರಿಸುವುದು ಅವಶ್ಯಕ.

ಒಂದು ವೇಳೆ ನಮ್ಮ ಕಂಪ್ಯೂಟರ್‌ಅನ್ನು ಇತರರ ಬಳಕೆಗೆ ನೀಡಬೇಕಾದಲ್ಲಿ ಸ್ವಂತ ಲಾಗಿನ್‌ ಹೊರತಾಗಿ ಪ್ರತ್ಯೇಕ ಲಾಗಿನ್‌ ವ್ಯವಸ್ಥೆ ಇಟ್ಟುಕೊಳ್ಳುವುದು ಜಾಣತನ. ಇಲ್ಲವಾದಲ್ಲಿ ಬೇರೆಯವರು ನಿಮ್ಮ ಕಂಪ್ಯೂಟರ್ ಉಪಯೋಗಿಸಿದಾಗ, ಪಾಸ್‌ವರ್ಡ್‌ಗಳನ್ನು ತಿಳಿದುಕೊಳ್ಳುವ, ಇ-ಮೇಲ್‌ಗಳನ್ನು ಓದುವ, ಕಡತಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅವರ ಬೆನ್ನ ಹಿಂದೆಯೇ ನಿಂತು ಅವರ ಚಟುವಟಿಕೆಗಳನ್ನು ವೀಕ್ಷಿಸುತ್ತಾ ಇರಲು ಸಾಧ್ಯವಿಲ್ಲ.

ಮನೆಗಳಲ್ಲಿ ಅತಿಥಿಗಳಿಗೆ ಪ್ರತ್ಯೇಕ ಕೋಣೆಗಳಿರುವಂತೆಯೇ ಕಂಪ್ಯೂಟರ್‌ನಲ್ಲೂ ಗೆಸ್ಟ್ ಅಕೌಂಟ್ (ಅತಿಥಿ ಖಾತೆ) ಸೌಲಭ್ಯ ಇಟ್ಟುಕೊಳ್ಳಬಹುದು. ಆಗ ನಮ್ಮ ಖಾಸಗೀತನ, ಸುರಕ್ಷತೆಯಲ್ಲಿ ರಾಜಿಯಾಗುವ ಸ್ಥಿತಿ ಬರುವುದಿಲ್ಲ. ವಿಂಡೋಸ್, ಮ್ಯಾಕ್‌ನಿಂದ ಆರಂಭಿಸಿ ಉಬುಂಟು, ಕ್ರೋಮ್, ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳ ತನಕವೂ ಗೆಸ್ಟ್ ಅಕೌಂಟ್ ವ್ಯವಸ್ಥೆ ಲಭ್ಯವಿದೆ. ವಿಂಡೋಸ್‌ನಲ್ಲಿ ಸ್ವಯಂಚಾಲಿತವಾಗಿ ಗೆಸ್ಟ್ ಅಕೌಂಟ್ ವ್ಯವಸ್ಥೆ ಇರುವುದಿಲ್ಲ. ಬಳಕೆದಾರರು ಈ ಸೆಟ್‌ಅಪ್ ಮಾಡಿಕೊಳ್ಳಬೇಕು.

ಗೆಸ್ಟ್ ಅಕೌಂಟ್ ಬಳಸುತ್ತಿರುವವರು ಅಂತರ್ಜಾಲ ಬಳಕೆ ಮಾಡಬಹುದು. ಆದರೆ, ಬಳಕೆದಾರರು ಅಂತರ್ಜಾಲ ಬಳಸಿದ ವಿವರಗಳೆಲ್ಲ ಇವರಿಗೆ ಲಭ್ಯವಾಗುವುದಿಲ್ಲ. ನೀವು ನಂಬಿಕೆ ಇಟ್ಟವರು ಸಹ ಆಕಸ್ಮಿಕವಾಗಿಯೂ ಖಾಸಗಿ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳಲು ಆಸ್ಪದವೇ ಇರುವುದಿಲ್ಲ.

ಸೀಮಿತ ಚಟುವಟಿಕೆ

ಗೆಸ್ಟ್ ಅಕೌಂಟ್‌ನಲ್ಲಿ ಸಾಫ್ಟ್‌ವೇರ್ ಇನ್‌ಸ್ಟಾಲ್‌ ಮಾಡಲು, ಹಾರ್ಡ್‌ವೇರ್ ಬದಲಾಯಿಸಲು, ಸಿಸ್ಟಂ ಸೆಟ್ಟಿಂಗ್ಸ್‌ಗಳನ್ನು ಬದಲಾಯಿಸಲು ಅಥವಾ ಗೆಸ್ಟ್ ಅಕೌಂಟ್‌ಗೆಂದೇ ಪಾಸ್‌ವರ್ಡ್ ಕ್ರಿಯೇಟ್ ಮಾಡಲು ಸಹ ಸಾಧ್ಯವಿಲ್ಲ. ಅಡ್ಮಿನಿಸ್ಟ್ರೇಟರ್ ಎಷ್ಟು ಸೌಲಭ್ಯ ನೀಡಿರುತ್ತಾರೋ ಅಷ್ಟನ್ನು ಮಾತ್ರ ಬಳಸಬಹುದು.

ಹೆಚ್ಚೆಂದರೆ ತಾವು ಬಳಸುತ್ತಿರುವ ಸಿಸ್ಟಂ ಶಟ್‌ಡೌನ್ ಮಾಡುವ ಮಟ್ಟಿಗಿನ ಹಾನಿಯಷ್ಟೇ ಮಾಡಲು ಸಾಧ್ಯ.

ಡೋಸ್, ಮ್ಯಾಕ್ ಅಥವಾ ಲಿನಕ್ಸ್ ಸೇರಿದಂತೆ ಯಾವುದೇ ಕಂಪ್ಯೂಟರ್‌ಗಳಲ್ಲೂ ಅಡ್ಮಿನಿಸ್ಟ್ರೇಟರ್ (ಬಳಕೆದಾರರ) ಅಕೌಂಟ್‌ಗಳ ಸೆಟ್ಟಿಂಗ್ಸ್ ಬದಲಾಯಿಸಲು, ಹೊಸ ಪ್ರೋಗ್ರಾಂಗಳನ್ನು ಇನ್‌ಸ್ಟಾಲ್ ಮಾಡಲು, ಪಾಸ್‌ವರ್ಡ್ ಬದಲಾಯಿಸಲು ಹಾಗೂ ಇತರೆ ಚಟುವಟಿಕೆಗಳನ್ನು ಮಾಡಲು ಸಾಧ್ಯತೆ ಇರುತ್ತದೆ. ಸ್ಟ್ಯಾಂಡರ್ಡ್, ಲಿಮಿಟೆಡ್ ಅಥವಾ ಗೆಸ್ಟ್ ಅಕೌಂಟ್‌ಗಳು ಕಂಪ್ಯೂಟರ್ ಮೇಲೆ ಸೀಮಿತ ನಿಯಂತ್ರಣ ಹೊಂದಿರುತ್ತವೆ.

ಉದಾಹರಣೆಗೆ ಅಕೌಂಟ್‌ಗೆ ಸಂಬಂಧಪಟ್ಟಂತೆ ಡೆಸ್ಕ್‌ಟಾಪ್‌ನ ವಾಲ್ ಪೇಪರ್ ಬದಲಾಯಿಸುವುದು ಸೇರಿದಂತೆ ಕೆಲವು ನಿರ್ದಿಷ್ಟವಾದ ಸಣ್ಣಪುಟ್ಟ ಬದಲಾವಣೆಗಳನ್ನಷ್ಟೆ ಮಾಡುತ್ತವೆ. ಅಡ್ಮಿನಿಸ್ಟ್ರೇಟರ್ ಹೆಸರಿನಲ್ಲಿ ಲಾಗಿನ್‌ ಆದಾಗ ಕಂಪ್ಯೂಟರ್ ಪ್ರವೇಶಿಸುವ ದುರುದ್ದೇಶಪೂರಿತ ಸಾಫ್ಟ್‌ವೇರ್ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಉಂಟುಮಾಡುತ್ತವೆ. ಹಾಗಾಗಿ ಕಂಪ್ಯೂಟರ್‌ಗಳನ್ನು ಕಾಪಾಡಿಕೊಳ್ಳಲು ಗೆಸ್ಟ್ ಅಕೌಂಟ್ ಸೆಟ್ ಅಪ್ ಮಾಡಿಕೊಳ್ಳುವ ಆಯ್ಕೆ ಬಳಸುವುದು ಉತ್ತಮ.

ಸೆಟ್ಟಿಂಗ್ಸ್ ವಿಧಾನ ಭಿನ್ನ

ಆಪರೇಟಿಂಗ್ ಸಿಸ್ಟಂ ಬದಲಾದಂತೆ, ಖಾತೆಗಳನ್ನು ಸೆಟ್ ಅಪ್ ಮಾಡುವ ವಿಧಾನವೂ ಬದಲಾಗುತ್ತದೆ.

ವಿಂಡೋಸ್: ವಿಂಡೋಸ್ 7,8ರಲ್ಲಿ ಸುಲಭವಾಗಿ ಗೆಸ್ಟ್ ಅಕೌಂಟ್ ಕ್ರಿಯೇಟ್ ಮಾಡಬಹುದು. ಸ್ಟಾರ್ಟ್ ಮೆನುಗೆ ಹೋಗಿ ಯೂಸರ್ ಅಕೌಂಟ್ ಎಂದು ಟೈಪ್ ಮಾಡಬೇಕು. ಬಳಿಕ ಅಲ್ಲಿ ಕಾಣಿಸಿಕೊಳ್ಳುವ ಮ್ಯಾನೇಜ್ ಅನದರ್ ಅಕೌಂಟ್ ಕ್ಲಿಕ್ ಮಾಡಿ ಗೆಸ್ಟ್ ಆಯ್ಕೆ ಮಾಡಿ ಟರ್ನ್ ಆನ್ ಕೊಟ್ಟರೆ ಗೆಸ್ಟ್ ಅಕೌಂಟ್ ಕ್ರಿಯೇಟ್ ಆಗುತ್ತದೆ.

ವಿಂಡೋಸ್ 10ರಲ್ಲಿ ಈ ಸೌಲಭ್ಯ ಸುಲಭಕ್ಕೆ ಸಿಗುವುದಿಲ್ಲ. ಎಲ್ಲರೂ ಮೈಕ್ರೊಸಾಫ್ಟ್‌ನ ಅಧಿಕೃತ ಅಕೌಂಟ್‌ಗಳನ್ನು ಬಳಸಲಿ ಎನ್ನುವುದು ಸಹ ಇದಕ್ಕೆ ಒಂದು ಕಾರಣ.

ವಿಂಡೋಸ್ 10 ಹೋಂ ಅಥವಾ ವೃತ್ತಿಪರ ಸಿಸ್ಟಂಗಳಲ್ಲಿ ಗೆಸ್ಟ್ ಅಕೌಂಟ್ ಕ್ರಿಯೇಟ್ ಮಾಡಲು ‘ಫ್ಯಾಮಿಲಿ ಅಂಡ್ ಅದರ್ ಪೀಪಲ್’ ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಬರುವ ಸೂಚನೆಗಳನ್ನು ಅನುಸರಿಸಿ ಖಾತೆ ಸೆಟ್‌ಅಪ್ ಮಾಡಬಹುದು.

ಮ್ಯಾಕ್: ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ಲಾಗ್‌ಇನ್ ಸ್ಕ್ರೀನ್‌ನಲ್ಲಿ ಇರುವ ಗೆಸ್ಟ್ ಯೂಸರ್ ಅಕೌಂಟ್ ಆಯ್ಕೆ ಮಾಡಿಕೊಳ್ಳಬೇಕು. ಈ ವ್ಯವಸ್ಥೆ ಇಲ್ಲವಾದಲ್ಲಿ ಮ್ಯಾಕ್ ಬಳಕೆದಾರರು ಫೈಲ್‌ಗಳನ್ನು ಹಂಚಿಕೊಳ್ಳುವ ಸಲುವಾಗಿ ಷೇರಿಂಗ್ ಓನ್ಲಿ, ಸ್ಟ್ಯಾಂಡರ್ಡ್ ಖಾತೆಗಳನ್ನು ಸ್ವತಃ ರೂಪಿಸಿಕೊಳ್ಳಬಹುದು. ಸಿಸ್ಟಂ ಪ್ರಿಫರೆನ್ಸಸ್‌ಗೆ ಯೂಸರ್ಸ್ ಆಂಡ್ ಗ್ರೂಪ್ಸ್ ಆಯ್ಕೆ ಮಾಡಿಕೊಳ್ಳಬೇಕು.

ಕೆಳಗೆ ಎಡಭಾಗದಲ್ಲಿರುವ ಲಾಕ್ ಚಿಹ್ನೆ ಆಯ್ಕೆ ಮಾಡಿಕೊಂಡು ಅಡ್ಮಿನಿಸ್ಟ್ರೇಟರ್ ಪಾಸ್ ವರ್ಡ್ ಹಾಕಿದರೆ ಅಡ್ವಾನ್ಸ್ಡ್ ಸೆಟ್ಟಿಂಗ್ಸ್ ಕಾಣಿಸಿಕೊಳ್ಳುತ್ತದೆ. ನಂತರ ಗೆಸ್ಟ್ ಯೂಸರ್ ಕ್ಲಿಕ್ ಮಾಡಿದರೆ ಅಲ್ಲಿ ಕಾಣಿಸಿಕೊಳ್ಳುವ ‘Allow guests to log in to this computer’ ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಲಾಗೌಟ್‌ ಮಾಡಿದರೆ ಪಾಸ್ ವರ್ಡ್ ಇಲ್ಲದೆಯೇ ಗೆಸ್ಟ್ ಅಕೌಂಟ್ ಬಳಸಬಹುದು. ಗೆಸ್ಟ್ ಅಕೌಂಟ್ ಲಾಗೌಟ್‌ ಆದ ನಂತರ ಇದರಲ್ಲಿನ ಎಲ್ಲ ಡೇಟಾ ಅಳಿಸಿ ಹೋಗುತ್ತದೆ. ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಇಂತಹ ಸೌಲಭ್ಯ ಇಲ್ಲ.

ಆ್ಯಪಲ್: ಆ್ಯಪಲ್ ಕಂಪ್ಯೂಟರ್‌ನಲ್ಲಿ ಸಿಸ್ಟಂ ಪ್ರಿಫರೆನ್ಸಸ್ ಅಡಿಯಲ್ಲಿರುವ ‘ಯೂಸರ್ಸ್ ಅಂಡ್ ಗ್ರೂಪ್ಸ್ ಬಾಕ್ಸ್‌ನಲ್ಲಿರುವ ಪ್ಯಾಡ್ ಲಾಕ್ ಚಿಹ್ನೆ ಕ್ಲಿಕ್ ಮಾಡಿ ಮ್ಯಾಕ್ ಅಡ್ಮಿನಿಸ್ಟ್ರೇಟರ್ ಪಾಸ್‌ವರ್ಡ್ ನೀಡಬೇಕು ಮತ್ತು + ಚಿಹ್ನೆ ಆಯ್ಕೆ ಮಾಡಿಕೊಂಡು ಖಾತೆ ಸೆಟ್ ಅಪ್ ಮಾಡಿಕೊಳ್ಳಬೇಕು.

-ನ್ಯೂಯಾರ್ಕ್‌ ಟೈಮ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !