ತಾರೆಗಳಷ್ಟೇ ಮೀ– ಟೂ ಅಂದರೆ ಸಾಕೇ?

7

ತಾರೆಗಳಷ್ಟೇ ಮೀ– ಟೂ ಅಂದರೆ ಸಾಕೇ?

Published:
Updated:

ಆಸ್ಟ್ರಿಯಾ ದೇಶದಲ್ಲಿ ಒಬ್ಬ ಮಹಾಶಯ ತನ್ನ ಮಗಳನ್ನು ನೆಲಮಾಳಿಗೆಯಲ್ಲಿ ಕೂಡಿ ಹಾಕಿ 24 ವರ್ಷ ನಿರಂತರ ಅತ್ಯಾಚಾರ ನಡೆಸಿದ. ಇದರಿಂದ ಆಕೆಗೆ ಏಳು ಜನ ಮಕ್ಕಳೂ ಹುಟ್ಟಿದವು. ಅಂತೂ ಕೊನೆಗೊಂದು ದಿನ ಇದು ಬಹಿರಂಗವಾಯಿತು. ಆತನಿಗೆ ಆಜೀವ ಜೀವಾವಧಿ ಶಿಕ್ಷೆಯೂ ಆಯಿತು. ಆತನಿಗೆ ಶಿಕ್ಷೆ ವಿಧಿಸುವ ಮುನ್ನ ನ್ಯಾಯಾಧೀಶರು, ‘ತಾನು ಹುಟ್ಟಿರುವುದೇ ಅತ್ಯಾಚಾರ ಮಾಡುವು
ದಕ್ಕಾಗಿ ಎಂಬ ಭಾವನೆ ಈ ಮನುಷ್ಯನಲ್ಲಿದೆ. ಆದ್ದರಿಂದ ಈತನಿಗೆ ಚಿಕಿತ್ಸೆಯ ಅಗತ್ಯವಿದೆ’ ಎಂದು ಹೇಳಿದರು.

ಇದು ಆಸ್ಟ್ರಿಯಾ ದೇಶದಲ್ಲಿ ಮಾತ್ರ ನಡೆಯುವ ಕ್ರಿಯೆ ಅಲ್ಲ. ಇತ್ತೀಚೆಗೆ ಮುಂಬೈಯಲ್ಲಿ ಯುವತಿಯೊಬ್ಬಳು ಪೊಲೀಸ್ ಠಾಣೆಗೆ ಹೋಗಿ ತನ್ನ ತಂದೆ ನಿರಂತರ 9 ವರ್ಷಗಳಿಂದ ಅತ್ಯಾಚಾರ ನಡೆಸುತ್ತಿರುವುದಾಗಿ ದೂರು ನೀಡಿದ್ದಳು. ಹರಿಯಾಣದ ಟೆನಿಸ್ ಆಟಗಾರ್ತಿ, 14 ವರ್ಷದ ಬಾಲಕಿಯೊಬ್ಬಳ ಮೇಲೆ ಪೊಲೀಸ್ ಅಧಿಕಾರಿಯೇ ಅತ್ಯಾಚಾರ ನಡೆಸಿದ್ದ. ಇವೆಲ್ಲ ಏನನ್ನು ಹೇಳುತ್ತವೆ?

ಬಾಲಿವುಡ್ ಸೇರಿ ನಮ್ಮ ದೇಶದ ಚಿತ್ರರಂಗ ಹಾಗೂ ಮಾಧ್ಯಮರಂಗದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕತೆಗಳೆಲ್ಲಾ ಈಗ ಒಂದೊಂದಾಗಿ ಹೊರಬರುತ್ತಿವೆ. ನಮ್ಮ ದೇಶದಲ್ಲಿ ಈಗ ಎದ್ದಿರುವ ‘ಮೀ– ಟೂ’ ಹವಾವನ್ನು ಗಮನಿಸಿದರೆ ‘ಪುರುಷರೆಲ್ಲರೂ ಹುಟ್ಟಿರುವುದು ಲೈಂಗಿಕ ದೌರ್ಜನ್ಯ ನಡೆಸುವುದಕ್ಕಾಗಿ’ ಎಂಬ ಭಾವನೆ ಬರುವಂತಿದೆ. ಈಗಲಾದರೂ ಪುರುಷರಿಗೆ ಮಾನಸಿಕ ಚಿಕಿತ್ಸೆ ಅಗತ್ಯ ಎಂದು ಯಾರಿಗಾದರೂ ಅನ್ನಿಸುತ್ತದೆ. ಅಂದರೆ, ಎಲ್ಲ ಪುರುಷರಿಗೂ ಈ ರೋಗ ಇದೆ ಎಂದು ಅರ್ಥವಲ್ಲ. ಆದರೆ ಈ ಸಾಂಕ್ರಾಮಿಕ ರೋಗಕ್ಕೆ ಮದ್ದಿನ ಅಗತ್ಯವಂತೂ ಇದೆ.

ಸಮಾಜದಲ್ಲಿ ಅತ್ಯಂತ ಗೌರವದ ಸ್ಥಾನ ಇರುವ ನ್ಯಾಯಾಲಯಗಳಲ್ಲಿ ಕೂಡ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದರೆ ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಗಿದೆ ಎನ್ನುವುದು ಅರ್ಥವಾಗುತ್ತದೆ. ಈ ಹಿಂದೆ ರಾಜ್ಯಪಾಲರ ವಿರುದ್ಧ ಕೂಡ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗಿದ್ದವು. ಇದರಿಂದ ರಾಜ್ಯಪಾಲರು ಅಧಿಕಾರ ಕಳೆದುಕೊಂಡ ಉದಾಹರಣೆಯೂ ನಮ್ಮ ಮುಂದೆ ಇದೆ. ಮೊದಲೆಲ್ಲಾ ಯಾರಾದರೂ ಹೆಣ್ಣುಮಕ್ಕಳಿಗೆ ತೊಂದರೆ ಕೊಟ್ಟರೆ ‘ಯಾಕೆ ನಿನಗೆ ಯಾರೂ ಅಕ್ಕ ತಂಗಿಯರು ಇಲ್ಲವಾ’ ಎಂದು ಕೇಳುತ್ತಿದ್ದರು. ಈಗ ಅಕ್ಕ, ತಂಗಿ, ಮಗಳು ಎಂಬ ಯಾವ ಭೇದವೂ ಇಲ್ಲದೆ ಲೈಂಗಿಕ ದೌರ್ಜನ್ಯದ ಪ್ರಕರಣಗಳು ನಡೆಯುತ್ತಲೇ ಇವೆ. ಅಬ್ಬಾ ಇದೆಂತಹ ಮನಸ್ಥಿತಿ!

ಮೀ– ಟೂ ಅಭಿಯಾನದ ನಂತರ ಬಹುತೇಕ ಬಾಲಿವುಡ್ ತಾರೆಯರೆಲ್ಲಾ ಈಗ ಇದನ್ನೇ ಮಾತನಾಡುತ್ತಿದ್ದಾರೆ. ನಟಿ ತನುಶ್ರೀ ದತ್ತಾ ಅವರಿಂದ ಆರಂಭವಾದ ಈ ಆಂದೋಲನ ಈಗ ಎಲ್ಲ ಕಡೆಗೂ ವಿಸ್ತರಿಸಿದೆ. ಪ್ರತಿ ದಿನ ಬೆಳಿಗ್ಗೆ ಪತ್ರಿಕೆ ನೋಡಿದರೆ ಮೀ– ಟೂ ಅಭಿಯಾನದಲ್ಲಿ ಹೊಸ ಹೊಸ ಹೆಸರೇ ಕೇಳಿಬರುತ್ತಿದೆ. ಕೇಂದ್ರ ಸಚಿವರನ್ನೂ ಅದು ಬಿಟ್ಟಿಲ್ಲ. ಸೆಲಿಬ್ರಿಟಿಗಳ ಮುಖವಾಡಗಳು ಕಳಚಿ ಬೀಳುತ್ತಿವೆ. ಅತ್ಯಾಚಾರದ ಸುದ್ದಿಗಳು ಪತ್ರಿಕೆಗಳಲ್ಲಿ ಮಿಂಚುತ್ತಿವೆ. ಕುಟುಂಬ ವ್ಯವಸ್ಥೆಯ ಕಪಾಟಿನಲ್ಲಿ ಬಚ್ಚಿಟ್ಟ ಸತ್ಯಗಳೆಲ್ಲ ಈಗ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ.

ಮೀ– ಟೂ ಅಭಿಯಾನ ಬಹುತೇಕ ತಾರೆಗಳಿಂದ ಕೇಳಿಬರುತ್ತಿದೆ. ಆದರೆ ಶತಮಾನಗಳ ಕಾಲದಿಂದಲೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಇತರ ಮಹಿಳೆಯರು ಇನ್ನೂ ಬಾಯಿ ಬಿಟ್ಟಿಲ್ಲ ಅವರು ಧೈರ್ಯದಿಂದ ಬಾಯಿಬಿಟ್ಟರೆ ‘ಪುರುಷ ಪುಂಗವ’ ಎನ್ನಿಸಿಕೊಂಡ ಬಹಳಷ್ಟು ಮಂದಿಯ ನಿಜವಾದ ಬಂಡವಾಳ ಹೊರಗೆ ಬರುತ್ತದೆ. ಹೆದ್ದಾರಿಯಲ್ಲಿ ಪುರುಷ ಬೆತ್ತಲಾಗಿ ನಿಲ್ಲುತ್ತಾನೆ.

ನಿತ್ಯ ಸಂಕಷ್ಟ ಅನುಭವಿಸುವ ರೈತ ಮಹಿಳೆಯರಾಗಲೀ, ಬಸ್ಸಿನ ನೂಕು ನುಗ್ಗಲಿನಲ್ಲಿ ಚಿತ್ರಹಿಂಸೆ ಅನುಭವಿಸುವ ಮಹಿಳಾ ಕಂಡಕ್ಟರ್‌
ಗಳಾಗಲೀ, ಹಗಲಿರುಳು ದೌರ್ಜನ್ಯಕ್ಕೆ ಒಳಗಾಗುವ ಗಾರ್ಮೆಂಟ್ ನೌಕರರಾಗಲಿ, ವಿದ್ಯಾ ದೇವತೆ ಎಂದು ಕರೆಸಿಕೊಳ್ಳುವ ನಮ್ಮ ಸಹಸ್ರಾರು ಶಿಕ್ಷಕಿಯರಾಗಲಿ ಇನ್ನೂ ಮೀ– ಟೂ ಅಭಿಯಾನದ ಭಾಗವಾಗಿಲ್ಲ. ದಲಿತ ಮಹಿಳೆಯರು, ಪೌರಕಾರ್ಮಿಕ ಮಹಿಳೆಯರೂ ತಮ್ಮ ಸಂಕಟವನ್ನು ಹೊರ ಹಾಕಿಲ್ಲ. ಅವರಿಗೆಲ್ಲ ಇದೇ ಬದುಕು ಎನ್ನುವಂತಾಗಿದೆ. ಬದುಕೆಂದರೆ ಹೀಗೆಯೇ ಇರುತ್ತದೆ ಎಂದು ಅವರು ಅಂದುಕೊಂಡಿದ್ದರೆ ಅದು ಅವರ ತಪ್ಪಲ್ಲ.

ಈ ಸಮಾಜದ ಕ್ರೌರ್ಯ ಅದು. ಈ ಮಹಿಳೆಯರು ಸದ್ಯಕ್ಕೆ ಮೀ– ಟೂ ಅಭಿಯಾನದ ಭಾಗವಾಗುವ ಲಕ್ಷಣಗಳೂ ಕಾಣುತ್ತಿಲ್ಲ. ‘ಅಯ್ಯೋ ನಮ್ಮಂತಹ ಬಡವರ ಪಾಡು ಇಷ್ಟೇ’ ಎಂದು ಅವರು ಸುಮ್ಮನಿದ್ದಾರೆ. ಆದರೆ ಅವರ ಮೌವದ ಹಿಂದೆ ಮಣದಷ್ಟು ಕತೆಗಳು ಅಡಗಿ ಕುಳಿತಿವೆ. ಸತ್ಯ ಅಲ್ಲಿ ಹೊರಬರಲಾಗದೇ ಮಿಸುಕಾಡುತ್ತಿದೆ. ದಲಿತ ಮಹಿಳೆಯರು, ಕೃಷಿ ಕೂಲಿ ಕಾರ್ಮಿಕ ಮಹಿಳೆಯರು ತಮ್ಮ ಒಡಲನ್ನು ಬಿಚ್ಚಿಟ್ಟರೆ ಅದನ್ನು ಎದುರಿಸುವ ಧೈರ್ಯ ಪುರುಷ ಸಿಂಹಕ್ಕೆ ಕಷ್ಟವಾಗುತ್ತದೆ.

ಮಹಿಳೆಯರ ಬದುಕನ್ನು ನಾವೆಷ್ಟು ಭೀಕರಗೊಳಿಸಿದ್ದೇವೆ ಎಂದರೆ ಮನೆಯಲ್ಲಿಯೂ ಆಕೆ ಸುರಕ್ಷಿತವಲ್ಲ. ರಸ್ತೆಯಲ್ಲಿ ರಕ್ಷಣೆ ಇಲ್ಲ. ಕೆಲಸ ಮಾಡುವ ಕಡೆಯೂ ಆಕೆಗೆ ಲೈಂಗಿಕ ಕಿರುಕುಳ ತಪ್ಪಿದ್ದಲ್ಲ. ಪೊಲೀಸ್ ಠಾಣೆ, ವಿಧಾನಸೌಧ, ರಾಜಭವನ... ಎಲ್ಲಿಯೂ ಆಕೆ ಸುರಕ್ಷಿತವಾಗಿಲ್ಲ. ಅವಳ ಸ್ಥಿತಿಯನ್ನು ನೋಡಿ ಆಕೆಗೆ ಎಲ್ಲಿಯೂ ತಲೆ ಎತ್ತಲು ಅವಕಾಶ ನೀಡಿಲ್ಲ ಎಂದು ಪುರುಷ ಬೀಗಬಹುದು. ಆದರೆ ಇಂತಹ ಸ್ಥಿತಿಗೆ ಪುರುಷನೇ ನಾಚಿಕೆಯಿಂದ ತಲೆ ತಗ್ಗಿಸಬೇಕು.

ಮೀ– ಟೂ ಅಭಿಯಾನದಲ್ಲಿ ಮಹಿಳೆಯರು ಹೇಳುವುದೆಲ್ಲ ಸತ್ಯ ಅಲ್ಲ ಎಂಬ ವಾದವೊಂದಿದೆ. ಪ್ರತಿಷ್ಠಿತರನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರವೂ ಇದರಲ್ಲಿ ಅಡಗಿದೆ ಎಂದು ವಾದಿಸುವವರೂ ಇದ್ದಾರೆ. ಅದು ನಿಜವೂ ಇರಬಹುದು. ಆದರೆ ಮಹಿಳೆಯರಿಗೆ ಎಲ್ಲ ಕಡೆ ತೊಂದರೆಯಾಗುತ್ತಿದೆ ಎನ್ನುವುದನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ಅಷ್ಟರ ಮಟ್ಟಿಗೆ ಇದು ಕೇವಲ ಮಹಿಳೆಯರ ಸಮಸ್ಯೆ ಅಲ್ಲ. ನಿಜವಾದ ಅರ್ಥದಲ್ಲಿ ಇದು ಪುರುಷರ ಸಮಸ್ಯೆ.

ಪ್ರಕೃತಿಯಲ್ಲಿ ಇರುವ ಎಲ್ಲ ಪ್ರಾಣಿಗಳಿಗೂ ಲೈಂಗಿಕ ಕಾರ್ಯ ಕೈಗೊಳ್ಳಲು ಒಂದು ನಿರ್ದಿಷ್ಟ ಸಮಯ ಇದೆ. ಇದಕ್ಕೆ ಕಾಲಮಿತಿ ಇಲ್ಲದೆ ಇರುವುದು ಮನುಷ್ಯರಿಗೆ ಮಾತ್ರ. ಲೈಂಗಿಕ ದೌರ್ಜನ್ಯಕ್ಕೆ ಸದಾ ಸಿದ್ಧನಾಗಿರುವ ಪುರುಷ ಸಿಂಹನನ್ನು ಪಳಗಿಸುವುದು ಹೇಗೆ? ಈ ಪುರುಷ ಸಿಂಹನ ಅಹಂಕಾರ ಎಷ್ಟು ಇದೆ ಎಂದರೆ ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದರೆ, ‘ದೇವಾಲಯ ಪ್ರವೇಶ ಮಾಡುವ ಮಹಿಳೆಯನ್ನು ಅಡ್ಡ ಅಡ್ಡ ಸೀಳಿ ಒಂದು ಭಾಗವನ್ನು ದೆಹಲಿಗೂ ಇನ್ನೊಂದು ಭಾಗವನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೂ ಕಳಿಸಿಕೊಡಬೇಕು’ ಎಂದು ಹೇಳುವಷ್ಟಿದೆ. ನಿಜವಾಗಿಯೂ ಇದಕ್ಕೆ ಔಷಧಿ ಸಾಕಾಗಲ್ಲ. ಶಸ್ತ್ರ ಚಿಕಿತ್ಸೆಯೇ ಬೇಕು.

ಮಹಿಳೆಯನ್ನು ನಾವು ದೇವಿ ಎನ್ನುತ್ತೇವೆ. ಆದರೆ ಆ ದೇವಿಯ ಮೇಲೆ ಅತ್ಯಾಚಾರ ಮಾಡುತ್ತೇವೆ. ಆಕೆಯನ್ನು ಪ್ರಕೃತಿ ಎನ್ನುತ್ತೇನೆ. ಆದರೂ ಪ್ರಕೃತಿಯನ್ನು ಕೆಡಿಸುತ್ತೇವೆ. ಮಾತೆ ಎಂದು ಪೂಜಿಸುತ್ತೇವೆ. ಲೈಂಗಿಕ ದೌರ್ಜನ್ಯ ನಡೆಸುವಾಗ ಮಾತೆ ಎನ್ನುವವಳು ಬರೀ ಭೋಗದ ವಸ್ತುವಾಗುತ್ತಾಳೆ. ಅವಳಿಗೆ ದೇವತೆಯ ಸ್ಥಾನ ಬೇಡ. ಪ್ರಕೃತಿ ಎಂಬ ಪೂಜೆಯೂ ಬೇಡ. ಮಾತೆ ಎಂಬ ಮರ್ಯಾದೆಯೂ ಬೇಡ. ಅವಳಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಅವಳನ್ನು ಘನತೆಯಿಂದ ಬದುಕಲು ಬಿಟ್ಟರೆ ಅದಕ್ಕಿಂತ ದೊಡ್ಡ ಉಪಕಾರ ಇನ್ನೊಂದಿಲ್ಲ. ಮಹಿಳೆಗೆ ಘನತೆಯ ಬದುಕು ಕೊಟ್ಟೆ ಎಂದು ಪುರುಷರೆಲ್ಲ ಮೀ– ಟೂ ಅಭಿಯಾನ ನಡೆಸಿದರೆ ಅದಕ್ಕಿಂತ ದೊಡ್ಡ ಅಭಿಯಾನ ಇನ್ನೊಂದಿಲ್ಲ.

ಬರಹ ಇಷ್ಟವಾಯಿತೆ?

 • 33

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !