ಪೂಜಿ ಪೂರ್ಣಾಂಕ, ಬೊಬ್ಬಿ ಶಂಖಾಂಶ!

7

ಪೂಜಿ ಪೂರ್ಣಾಂಕ, ಬೊಬ್ಬಿ ಶಂಖಾಂಶ!

Published:
Updated:

ಉತ್ತರ ಕರ್ನಾಟಕದ ಕಡೆ ಪಾಲಕರು ತಮ್ಮ ಮಕ್ಕಳು ಶಾಲೆಯಲ್ಲಿ ಹೇಗೆ ಓದುತ್ತಿದ್ದಾರೆ ಎಂದು ಶಾಲಾ ಮಾಸ್ತರರನ್ನು ಕೇಳಿದರೆ ಅವರು ‘ಪೂಜಿ ಪೂರ್ಣಾಂಕ, ಬೊಬ್ಬಿ ಶಂಖಾಂಶ’ ಎಂದು ಹೇಳುತ್ತಾರೆ. ಇನ್ನು ಕೆಲವು ಮೇಷ್ಟ್ರುಗಳು ‘ದಡ್ಡ ದಶಾಂಶ, ಮೊಡ್ಡ ಪೂರ್ಣಾಂಕ’ ಎಂದೂ ಹೇಳುತ್ತಾರೆ. ಇದರ ಒಟ್ಟರ್ಥ ಮಗ ಏನೂ ಕಲಿಯುತ್ತಿಲ್ಲ. ದಡ್ಡ, ಶತದಡ್ಡ ಎಂದೇ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಣೆಯನ್ನು ಕುಂಟು ನೆಪವೊಡ್ಡಿ ಮುಂದೂಡಿದ ರಾಜ್ಯ ಸರ್ಕಾರದ ಕ್ರಮವನ್ನೂ ಹೀಗೆಯೇ ವ್ಯಾಖ್ಯಾನಿಸಬಹುದು. ಚುನಾವಣೆ ನೀತಿ ಸಂಹಿತೆಯ ಕಾರಣದಿಂದ ಪ್ರಶಸ್ತಿ ಪ್ರಕಟಣೆಯನ್ನು ಮುಂದೂಡಿದ್ದಾಗಿ ರಾಜ್ಯ ಸರ್ಕಾರ ಹೇಳುತ್ತದೆ. ‘ಏಳು ಜಿಲ್ಲೆಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆ ಜಿಲ್ಲೆಗಳ ಯಾರಿಗಾದರೂ ಪ್ರಶಸ್ತಿ ನೀಡಿದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ’ ಎಂದೂ ಸರ್ಕಾರ ಹೇಳಿದೆ. ಇದನ್ನು ನಂಬುವುದಕ್ಕೆ ಜನರು ಕಿವಿಯಲ್ಲಿ ಹೂವು ಇಟ್ಟುಕೊಂಡಿಲ್ಲ. ಕುಂಟು ನೆಪ ಹೇಳಿ ಜನರನ್ನು ಯಾಮಾರಿಸಬಹುದು ಎಂದು ಯಾವುದೇ ರಾಜಕಾರಣಿ ತಿಳಿದಿದ್ದರೆ ಅವರನ್ನು ‘ಪೂಜಿ ಪೂರ್ಣಾಂಕ’ ಎಂದೇ ಹೇಳಬೇಕಾಗುತ್ತದೆ.

ಯಾರಿಗಾದರೂ ಪ್ರಶಸ್ತಿ ನೀಡಿದರೆ ಒಂದು ಮತಹೆಚ್ಚು ಬರುತ್ತದೆ ಎಂದಾಗಲೀ ಅಥವಾ ಯಾರಿಗಾದರೂ ಪ್ರಶಸ್ತಿ ಕೊಡದೇ ಇದ್ದರೆ ಒಂದು ಮತ ಕಡಿಮೆಯಾಗುತ್ತದೆ ಎಂದು ಯಾರಿಗೂ ಅನ್ನಿಸುವುದಿಲ್ಲ. ಕನ್ನಡ ರಾಜ್ಯೋತ್ಸವ ಆಚರಿಸುವುದು ಹಾಗೂ ಅದರ ಅಂಗವಾಗಿ ಪ್ರಶಸ್ತಿ ನೀಡುವುದು ಬಹಳ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯ. ಅದನ್ನು ರಾಜಕೀಯ ಕಾರಣಕ್ಕಾಗಿ ಮುಂದೂಡುವುದು ಸರಿಯಲ್ಲ. 1989ರಲ್ಲಿ ಇಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ ಆಗ ರಾಜ್ಯಪಾಲರ ಆಡಳಿತ ಇತ್ತು. ಹೊಸ ಸರ್ಕಾರ ಇನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲ. ಆಗ ಕೊಂಚ ಎಡವಟ್ಟಾಗಿತ್ತು ನಿಜ. ಆದರೆ ರಾಜ್ಯೋತ್ಸವದ ಸಮಾರಭಕ್ಕೆ ಅಡ್ಡಿಯೇನೂ ಆಗಿರಲಿಲ್ಲ.

ಪ್ರಶಸ್ತಿ ಘೋಷಣೆಯ ಬಗ್ಗೆ ಚುನಾವಣಾ ಆಯೋಗವನ್ನು ಕೇಳದೆ ತನ್ನಷ್ಟಕ್ಕೆ ತಾನೇ ಇಂತಹ ನಿರ್ಧಾರವನ್ನು ಕೈಗೊಂಡಿದ್ದು ಒಪ್ಪುವ ಮಾತೇ ಅಲ್ಲ. ಪ್ರಶಸ್ತಿ ಘೋಷಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನನ್ನು ಕೇಳಿಲ್ಲ ಎಂದು ಚುನಾವಣಾ ಆಯೋಗವೇ ಹೇಳಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಗುದ್ದಾಟದಿಂದ ಪ್ರಶಸ್ತಿ ನಿರ್ಣಯ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರೆ ಅಷ್ಟರಮಟ್ಟಿಗೆ ಇವರು ಪ್ರಾಮಾಣಿಕವಾಗಿದ್ದಾರೆ ಎಂದು ನಂಬಬಹುದಾಗಿತ್ತು. ಮತ್ತು ಅದೇ ನಿಜವೂ ಆಗಿತ್ತು. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ನೋಡಲು ಮುಖ್ಯಮಂತ್ರಿಗೆ ಬಿಡುವು ಇರಲಿಲ್ಲ ಎಂದರೆ ಅದೂ ಕೂಡ ಸಮರ್ಥನೀಯ ಅಲ್ಲ.

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಒಂದು ಸಮಿತಿ ರಚಿಸಲಾಗುತ್ತದೆ. ಆ ಸಮಿತಿ ಸಾಕಷ್ಟು ಕಸರತ್ತು ನಡೆಸಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ. ಅಷ್ಟರ ಮೇಲೆ ಅದನ್ನು ಮುಖ್ಯಮಂತ್ರಿ ಪರಿಶೀಲಿಸಬೇಕು, ಬದಲಾಯಿಸಬೇಕು ಎಂದರೆ ಆ ಸಮಿತಿ ರಚಿಸಿದ ಉದ್ದೇಶವಾದರೂ ಏನು? ಸಮಿತಿ ಕೊಟ್ಟ ಹೆಸರುಗಳಿಗೆ ಒಪ್ಪಿಗೆ ಸೂಚಿಸುವುದಷ್ಟೇ ಮುಖ್ಯಮಂತ್ರಿಯ ಕೆಲಸ. ಅಷ್ಟು ಮಾಡಿದರೆ ಅವರಿಗೂ ಗೌರವ, ಪ್ರಶಸ್ತಿಗೂ ಗೌರವ. ಸಮಿತಿ ಕೊಟ್ಟ ಪಟ್ಟಿಯನ್ನು ಬದಲಾಯಿಸಿದರೆ ಅದು ಸಮಿತಿಗೆ ಮಾಡಿದ ಅವಮಾನವಲ್ಲವೇ? ಹೆಸರುಗಳು ಬದಲಾಗುತ್ತವೆ, ಇಲ್ಲ ಇನ್ನು ಯಾರೊದ್ದೋ ಹೆಸರು ಪಟ್ಟಿಗೆ ಸೇರುತ್ತದೆ ಎಂದಾದರೆ ಸಮಿತಿ ರಚಿಸುವದಕ್ಕೆ ಅರ್ಥವೇ ಇಲ್ಲ.

ತಮಗೆ ಬೇಕಾದಾಗ ಬೇಕಾದ ರೀತಿಯಲ್ಲಿ ರಾಜಕಾರಣಿಗಳು ವರ್ತಿಸುತ್ತಾರೆ ಎನ್ನುವುದಕ್ಕೆ ತಾಜಾ ಉದಾಹರಣೆ ಎಂದರೆ ವಾಲ್ಮೀಕಿ ಪ್ರಶಸ್ತಿಯನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರಿಗೆ ನೀಡಿದ್ದು. ಈ ಪ್ರಶಸ್ತಿ ಘೋಷಣೆ ಮಾಡುವಾಗಲೂ ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇತ್ತು. ಆಗ ಪ್ರಶಸ್ತಿ ಪ್ರಕಟಣೆಗೆ ಅಡ್ಡಿಯಾಗದ ನೀತಿ ಸಂಹಿತೆ, ರಾಜ್ಯೋತ್ಸವ ಪ್ರಶಸ್ತಿ ಪ್ರಕಟಣೆಗೆ ಅಡ್ಡಿಯಾಗಿದ್ದು ಯಾಕೆ?

ದೇವೇಗೌಡರಿಗೆ ಪ್ರಶಸ್ತಿ ಘೋಷಣೆಯಾದಾಗ ಕೆಲವರು ಆಕ್ಷೇಪಿಸಿದ್ದರು. ಅದಕ್ಕೆ, ‘ಇದು ನಮ್ಮ ತೀರ್ಮಾನ ಅಲ್ಲ. ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ನೇತೃತ್ವದ ಸಮಿತಿ ಇದನ್ನು ಆಯ್ಕೆ ಮಾಡಿದೆ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಆಗ ಸಮಿತಿ ನೀಡಿದ್ದು ಸರಿಯಾಗಿತ್ತು. ಈಗ ಸಮಿತಿ ವರದಿಯನ್ನು ಮುಖ್ಯಮಂತ್ರಿ ಪರಿಶೀಲಿಸಬೇಕು ಎಂದರೆ ಏನರ್ಥ? ಪ್ರಶಸ್ತಿ ಆಯ್ಕೆ ಸಮಿತಿಗಳು ನೀಡುವ ಹೆಸರನ್ನು ಬದಲಾಯಿಸುವುದೂ ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿದೆ. ಇತ್ತೀಚೆಗೆ ಚಲನಚಿತ್ರ ಪ್ರಶಸ್ತಿ ಪ್ರಕಟವಾದಾಲೂ ಆಯ್ಕೆ ಸಮಿತಿ ಶಿಫಾರಸು ಮಾಡಿದ ಹೆಸರು ಒಂದಾಗಿತ್ತು. ಪ್ರಶಸ್ತಿ ಬಂದಿದ್ದು ಇನ್ನೊಬ್ಬರಿಗಾಗಿತ್ತು.

ಪ್ರಧಾನಿ ಹುದ್ದೆಯನ್ನು ಏರಿದ್ದ ದೇವೇಗೌಡರಿಗೆ ವಾಲ್ಮೀಕಿ ಪ್ರಶಸ್ತಿ ಕೊಟ್ಟು ಅವರನ್ನು ದೊಡ್ಡದು ಮಾಡಬೇಕಿರಲಿಲ್ಲ. ಇದರಿಂದ ವಾಲ್ಮೀಕಿ ಪ್ರಶಸ್ತಿಯ ಗೌರವವೂ ಹೆಚ್ಚಾಗುವುದಿಲ್ಲ. ದೇವೇಗೌಡರ ಗೌರವ ಕೂಡ ಹೆಚ್ಚಾಗುವುದಿಲ್ಲ. ಪ್ರಶಸ್ತಿಯೊಂದರಿಂದ ಗೌರವ ಹೆಚ್ಚಿಸಿಕೊಳ್ಳುವ ಅಗತ್ಯ ಕೂಡ ದೇವೇಗೌಡರಿಗೆ ಇಲ್ಲ. ಆದರೆ ಮಗ ಮುಖ್ಯಮಂತ್ರಿಯಾಗಿದ್ದಾಗ ಅಪ್ಪನಿಗೆ ಪ್ರಶಸ್ತಿ ನೀಡುವುದು ಮಗನಿಗೆ ಮುಜುಗರವಾಗಬೇಕು. ಅದನ್ನು ತೆಗೆದುಕೊಳ್ಳಲು ಅಪ್ಪನಿಗೂ ಹಾಗೆಯೇ ಆಗಬೇಕು. ಆದರೆ ಹಾಗೆ ಆಗಿಲ್ಲ. ಈಗಿನ ರಾಜಕಾರಣಿಗಳಿಗೆ ಯಾವುದಕ್ಕೂ ಮುಜುಗರ ಆಗುವುದಿಲ್ಲ. ಇನ್ಯಾರೋ ಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡರಿಗೆ ಪ್ರಶಸ್ತಿ ಕೊಟ್ಟಿದ್ದರೆ ಅದಕ್ಕೊಂದು ಗೌರವ, ಘನತೆ ಬರುತ್ತಿತ್ತು. ದೇವೇಗೌಡರ ಮೇಲಿನ ಗೌರವವೂ ಹೆಚ್ಚಾಗುತ್ತಿತ್ತು.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವಾಗಲೇ ವಿಧಾನಪರಿಷತ್‌ಗೆ ಇಬ್ಬರು ಸದಸ್ಯರನ್ನು ನೇಮಕ ಮಾಡಲಾಗಿದೆ. ವಿಧಾನ ಸಭೆಗೆ ಆಂಗ್ಲೊ ಇಂಡಿಯನ್ ಸದಸ್ಯೆ ನೇಮಕವಾಗಿದೆ. ಇದಕ್ಕೆ ರಾಜ್ಯಪಾಲರು ಅಂಕಿತವನ್ನೂ ಹಾಕಿದ್ದಾರೆ. ಸಮಾಜ ಸೇವೆಯ ಹೆಸರಿನಲ್ಲಿ ಅಪ್ಪಟ ರಾಜಕಾರಣಿಗಳನ್ನು ವಿಧಾನಪರಿಷತ್‌ಗೆ ನೇಮಕ ಮಾಡುವಾಗ ಅಡ್ಡಿಯಾಗದ ಚುನಾವಣಾ ನೀತಿ ಸಂಹಿತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡುವಾಗ ಮಾತ್ರ ಅಡ್ಡಿಯಾಗುವುದು ದುರಂತ. ರಾಜಕಾರಣಿಗಳಿಗೆ ಪುರುಸೊತ್ತು ಇದ್ದಾಗ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಹುಟ್ಟು ಹಾಕುವುದು ಮರ್ಯಾದೆ ತರುವ ಕೆಲಸವಲ್ಲ. ಅಂದ ಹಾಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲೇ ಬೇಕು ಎಂದೇನೂ ಇಲ್ಲ. ಅತ್ಯಂತ ಸೂಕ್ತವಾದ ಕಾರಣವಿದ್ದರೆ ಅದನ್ನು ಸ್ಥಗಿತಗೊಳಿಸಬಹುದು. ಇಲ್ಲವೇ ಮುಂದಕ್ಕೆ ಹಾಕಲೂಬಹುದು. ಆದರೆ ಇದಕ್ಕೆ ಜನ ಒಪ್ಪುವಂತಹ ಕಾರಣ ಇರಬೇಕು ಅಷ್ಟೆ.

‘ರಾಜ್ಯದಲ್ಲಿ ಭಾರೀ ಮಳೆಯಿಂದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಕ್ಕಮಗಳೂರು ಜಿಲ್ಲೆಗಳು ತತ್ತರಿಸಿ ಹೋಗಿವೆ. ರಾಜ್ಯದ 110ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಕಾಡುತ್ತಿದೆ. ಅನ್ನದಾತರ ಸಾಲ ಮನ್ನಾ ಮಾಡಲು ₹ 48 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಈ ಎಲ್ಲ ಕಾರಣಗಳಿಗಾಗಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿಲ್ಲ’ ಎಂದು ಹೇಳಿದ್ದರೆ ಅದನ್ನು ಒಪ್ಪಬಹುದಿತ್ತು. ಆದರೆ ರಾಜಕಾರಣಿಗಳು ಜನರ ಕಣ್ಣುಕುಕ್ಕುವ ಹಾಗೆ ಖರ್ಚು ಮಾಡುತ್ತಾ ಐಷಾರಾಮಿ ಜೀವನವನ್ನೇ ಮುಂದುವರಿಸಿತ್ತಾ ಕನ್ನಡದ ಪ್ರಶಸ್ತಿಯ ಬಗ್ಗೆ ಮಾತ್ರ ಕುಂಟು ನೆಪ ಹೇಳಿದರೆ ಅದನ್ನು ಜನ ನಂಬುವುದೂ ಇಲ್ಲ. ಅಧಿಕಾರದಲ್ಲಿ ಇರುವವರನ್ನು ಕ್ಷಮಿಸುವುದೂ ಇಲ್ಲ.

ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಆಚರಣೆಯ ವಿಷಯ ಅಲ್ಲ. ಅಲ್ಲಿ ಆತ್ಮಾಭಿಮಾನವೂ ಇದೆ. ಭಾಷಾಭಿಮಾನವೂ ಇದೆ. ಅದು ಭಾವಾನಾತ್ಮಕ ವಿಷಯವೂ ಹೌದು. ಇದನ್ನು ಕೆಣಕುವುದು ಸರಿಯಲ್ಲ. ‘ಸಕಾಲ’ ಯೋಜನೆ ರಾಜ್ಯೋತ್ಸವ ಪ್ರಶಸ್ತಿಗೂ ಅನ್ವಯವಾಗಲಿ.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !