ದೇವಾನಂದ ಕ್ಷಮೆಗೆ ಅಪ್ಪು ಆಗ್ರಹ

ಗುರುವಾರ , ಏಪ್ರಿಲ್ 25, 2019
22 °C
ಪಂಚಮಸಾಲಿ ಸಮಾಜ ರಮೇಶ ಜಿಗಜಿಣಗಿ ವಿರುದ್ಧವಿಲ್ಲ; ಸುರೇಶ ಬಿರಾದಾರ

ದೇವಾನಂದ ಕ್ಷಮೆಗೆ ಅಪ್ಪು ಆಗ್ರಹ

Published:
Updated:

ವಿಜಯಪುರ: ‘ಹಿರಿಯ ಮುತ್ಸದ್ಧಿ ರಮೇಶ ಜಿಗಜಿಣಗಿ ಅವರನ್ನು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಭಯೋತ್ಪಾದಕ ಎಂದು ಕರೆದಿದ್ದು, ತಕ್ಷಣವೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು’ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಗ್ರಹಿಸಿದರು.

‘ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಿರುವೆ ಎಂದು ದೇವಾನಂದ ದೇಶಕ್ಕೆ ಅಪಮಾನಕಾರಿ ಎಂಬಂಥಹ ಪದ ಬಳಸಿದ್ದಾರೆ. ಇದು ಚುನಾವಣಾ ರಾಜಕಾರಣಕ್ಕೆ ಶೋಭೆಯಲ್ಲ’ ಎಂದು ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಪ್ಪು ಹೇಳಿದರು.

‘ಜಿಗಜಿಣಗಿ ಸಂಸ್ಕಾರವಂತರು. ಎಲ್ಲರನ್ನೂ ಗೌರವಿಸುವ ಸ್ವಭಾವದವರು. ಆರಂಭದಿಂದಲೂ ಎಲ್ಲರಿಗೂ ಗೌರವದಿಂದಲೇ ಮಾತನಾಡಿಸುವವರು. ಯಾರಿಗೂ ಅಧಿಕಾರದ ಮದದಿಂದ ಏಕ ವಚನದಲ್ಲಿ ಮಾತನಾಡಿಲ್ಲ. ಅದು ಅವರ ಪದ್ಧತಿ. ಕೆಲವರು ಇದನ್ನೇ ನೆಪವಾಗಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಮಾಜಿ ಸಚಿವರು ತಿಳಿಸಿದರು.

‘ರಮೇಶ ಜಿಗಜಿಣಗಿ ಅಭಿವೃದ್ಧಿ ಮಾಡಿಲ್ಲ ಎಂದು ಟೀಕಿಸುವವರಿಗೆ ಬಹಿರಂಗ ಸವಾಲು ಹಾಕುತ್ತೇವೆ. ಇನ್ನಾದರೂ ಸುಳ್ಳು ಹೇಳುವುದನ್ನು ಬಿಡಿ. ನಮ್ಮ ಸಂಸದರು, ಸಚಿವರ ಸಾಧನೆಯ ಹೊತ್ತಿಗೆ ಪ್ರಕಟಿಸಿದ್ದೇವೆ. ಒಮ್ಮೆ ಪರಾಮರ್ಶಿಸಿ’ ಎಂದು ಹೇಳಿದರು.

‘ಜಿಗಜಿಣಗಿ ಸಜ್ಜನ ರಾಜಕಾರಣಿ. ಜನರ ಪ್ರೀತಿ, ವಿಶ್ವಾಸದಿಂದಲೇ ನಾಲ್ಕು ದಶಕದಿಂದ ರಾಜಕಾರಣದಲ್ಲಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ವ್ಯಕ್ತಿ ಇವರೊಬ್ಬರೇ. ಆದರೆ ಈಚೆಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸಚಿವರು ಪಂಚಮಸಾಲಿ ಸಮಾಜದ ವಿರುದ್ಧವಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

ಆರಂಭದ ದಿನದಿಂದಲೂ ಇಲ್ಲಿವರೆಗೂ ಜಿಗಜಿಣಗಿ ಪಂಚಮಸಾಲಿ ಸಮಾಜಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಹಲವರನ್ನು ಮುಖಂಡರನ್ನಾಗಿ ಬೆಳೆಸಿ, ಸ್ಥಾನಮಾನ ಕೊಡಿಸಿದ್ದಾರೆ. ವಿನಾಃ ಕಾರಣ ತಪ್ಪು ಮಾಹಿತಿ ಹಬ್ಬಿಸಬೇಡಿ’ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ ಬಿರಾದಾರ ಪಂಚಮಸಾಲಿ ಸಮಾಜಕ್ಕೆ ಮನವಿ ಮಾಡಿದರು.

ಪಾಲಿಕೆ ಸದಸ್ಯ ಪ್ರಕಾಶ ಮಿರ್ಜಿ, ಪದಾಧಿಕಾರಿಗಳಾದ ಮಳುಗೌಡ ಪಾಟೀಲ, ಶಿವಾಜಿ ಪಾಟೀಲ, ಸತೀಶ ಡೋಬಳೆ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !