ಮೂರ್ಖನಾಗಿಸುವ ಮೋಜು

ಬುಧವಾರ, ಏಪ್ರಿಲ್ 24, 2019
34 °C

ಮೂರ್ಖನಾಗಿಸುವ ಮೋಜು

Published:
Updated:
Prajavani

ಏಪ್ರಿಲ್‌ ಫೂಲ್‌ ಬನಾಯಾ, ತುಮ್ಕೊ ಗುಸ್ಸಾ ಆಯಾ...

ಹಿಂದಿಯ ಹಳೆಯ ಚಿತ್ರದ ಹಾಡು ಎಷ್ಟೇ ವರ್ಷವಾದರೂ ಪ್ರತಿ ಏಪ್ರಿಲ್‌ ಒಂದರಂದು ಚಿರನೂತನ. ಏಪ್ರಿಲ್‌ ಫೂಲ್‌ ಅನ್ನು ಅದೇಕೇ ಕಂಡು ಹಿಡಿದರೋ ಎಂಬ ಗೋಚು ಬೇಡವೇ ಬೇಡ. ‘ಇದು ನಮ್ಮ ಆಚರಣೆಯಲ್ಲ, ನಾವು ಆಚರಿಸುವುದಿಲ್ಲ’ ಎನ್ನುವವರೂ ಇದ್ದಾರೆ. ‘ನಾವು ಖಂಡಿತಾ ಆಚರಿಸುತ್ತೇವೆ’ ಎನ್ನುವರರಿಗೇನೂ ಕಡಿಮೆ ಇಲ್ಲ. ಹೀಗಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಮೂರ್ಖರನ್ನಾಗಿ ಮಾಡಲು ಈ ದಿನ ಮೀಸಲು.

ಏಪ್ರಿಲ್ ಫೂಲ್‌ ಅನ್ನು ಅತ್ಯಂತ ಗಂಭೀರವಾಗಿ ಆಚರಿಸುವುದೂ ಬೇಡ. ಮೋಜಿಗೊಂದು ದಿನ, ಸ್ನೇಹಿತರ ಕಾಲೆಳೆಯಲು ಒಂದು ಅವಕಾಶ. ಎಲ್ಲರೂ ಸೇರಿ ಬಿದ್ದುಬಿದ್ದು ನಗಲು ಒಂದು ಸದವಕಾಶ ಅಷ್ಟೇ.

‘ಇಲ್ಲಿ ನೋಡೋ ನಿಮ್ಮ ಅಮ್ಮ–ಅಪ್ಪ ಇಬ್ಬರೂ ಬಂದಿದ್ದಾರೆ’ ಎಂದು ಸ್ನೇಹಿತರು ‘ಫೂಲ್‌’ ಮಾಡುವುದು ಅತ್ಯಂತ ತೀರಾ ಸಾಮಾನ್ಯ ವಿಷಯ. ಶಾಲೆ–ಕಾಲೇಜುಗಳು ಬಹುತೇಕ ರಜೆ ಇರುವುದರಿಂದ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಕಾವಿರುತ್ತದೆ. ಇದಕ್ಕಾಗಿ ಸಾಕಷ್ಟು ವ್ಯಕ್ತಿಗಳ ಹೆಸರೂ ಬಳಕೆಯಾಗುತ್ತವೆ. ಇಂತಹ ‘ಫೂಲ್‌’ ವಿಷಯಗಳು ಸಾಕಷ್ಟು ಮೋಜು ತಂದರೂ, ಅದನ್ನು ಮಾಡಿದವರೆಡೆಗೆ ಒಂದು ಆಕ್ರೋಶದ ಭಾವ ಬರುತ್ತದೆ. ಜೊತೆಗೆ ಅವರನ್ನೂ ಫೂಲ್‌ ಮಾಡಬೇಕು ಎಂಬ ಹಟವೂ ಹುಟ್ಟುತ್ತದೆ.

ಏಪ್ರಿಲ್‌ 1ರಂದು ಸ್ನೇಹಿತರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನವೂ ನಡೆಯುತ್ತದೆ. ಯಾರು ಏನು ಹೇಳಿದರೂ ನಂಬುವುದಿಲ್ಲ. ‘ಹೌದಾ, ಹಂಗಾಗಿದೆಯೇ, ಹೋಗಲಿ ಬಿಡು’ ಎಂಬ ಮಾತು ಫೂಲ್‌ ಆಗುವುದನ್ನು ತಪ್ಪಿಸಿಕೊಳ್ಳುವ ಪ್ರಥಮ ಅಸ್ತ್ರ. ಇಂತಹ ರಕ್ಷಣಾ ತಂತ್ರದಿಂದ ಕೆಲವು ಬಾರಿ ನಿಜ ಹೇಳಿದಾಗಲೂ ನಂಬದಿರುವಂತಹ ಸ್ಥಿತಿಗೆ ತಲುಪಿರುತ್ತಾರೆ. ಫೂಲ್‌ ಆದೆ ಎಂಬ ಅಸಮಾಧಾನದಲ್ಲಿ ಸ್ನೇಹಿತರು, ಕುಟುಂಬದ ಸದಸ್ಯರೊಂದಿಗೆ ಸಾಕಷ್ಟು ಜಗಳ ನಡೆಯುವುದೂ ಉಂಟು. ಆದರೆ, ಇದನ್ನೆಲ್ಲ ಅತಿಯಾಗಿ ಮಾಡದೆ ಒಂದು ಮೋಜಿನ ಚಟುವಟಿಕೆಯಾಗಿ ಪರಿಗಣಿಸಿದರೆ ಎಲ್ಲರಿಗೂ ಸಂತಸ.

ಇತಿಹಾಸ ಏನನ್ನುತ್ತೆ?

ಇನ್ನು ಇಂತಹ ಏಪ್ರಿಲ್‌ ಫೂಲ್‌ ದಿನಕ್ಕೆ ಶತಮಾನಗಳ ಇತಿಹಾಸವಿದೆಯಂತೆ. 1392ರರಲ್ಲಿ ಜೆಫ್ರಿ ಚೌಸರ್‌ ಅವರ ‘ದ ಕ್ಯಾಂಟರ್‌ಬ್ಯುರಿ ಟೇಲ್ಸ್’ ನಲ್ಲಿ ಮೂರ್ಖರ ದಿನದ ಪ್ರಸ್ತಾಪವಿದೆ ಎಂದು ನಂಬಲಾಗಿದೆ. ಆದರೆ ಇದನ್ನು ಸಾಕಷ್ಟು ಮಂದಿ ನಂಬುವುದಿಲ್ಲ. ಏಕೆಂದರೆ ಅದರಲ್ಲಿ ‘32 ಮಾರ್ಚ್‌’ ಎಂದು ನಮೂದಿಸಲಾಗಿದೆ. ಮಾರ್ಚ್‌ನಲ್ಲಿ 32 ಇರದ ಕಾರಣ ಏಪ್ರಿಲ್‌ 1ರನ್ನೇ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

1508ರಲ್ಲಿ ಫ್ರೆಂಚ್‌ ಕವಿ ಇಲಾಯ್‌ ಡಿ’ಅಮೆರ್ವಲ್‌ ಅವರು ‘ಪಾಯ್ಸನ್‌ ಡಿ’ಅವ್ರಿಲ್‌’ ಕವಿತೆಯಲ್ಲಿ ಏಪ್ರಿಲ್‌ ಫೂಲ್‌ ಅನ್ನು ಉಲ್ಲೇ
ಖಿಸಿದ್ದು, ಫ್ರಾನ್ಸ್‌ನಲ್ಲಿ ಇದರ ಆಚರಣೆ ಇತ್ತು ಎಂದು ನಂಬಲಾಗಿದೆ. ಇದರ ನಂತರ ಬ್ರಿಟನ್‌, ನೆದರ್‌ಲೆಂಡ್‌, ಐರ್ಲೆಂಡ್‌ಗಳಲ್ಲಿ ಮೋಜಿಗಾಗಿ ಜನರನ್ನು ಮೂರ್ಖರನ್ನಾಗಿಸುವ ದಿನವನ್ನು ಆಚರಿಸಲಾಯಿತು. ಪಾಶ್ಚಾತ್ಯರ ಸಾಕಷ್ಟು ದಿನಗಳನ್ನು ಆಚರಿಸಿಕೊಳ್ಳುತ್ತಿರುವ ಭಾರತದಲ್ಲೂ ಶತಮಾನಗಳ ಹಿಂದಿನಿಂದಲೂ ಆಚರಣೆಯಲ್ಲಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 1

  Sad
 • 3

  Frustrated
 • 1

  Angry

Comments:

0 comments

Write the first review for this !