ವಾಸ್ತು ಸಿರಿವಂತಿಕೆಯ ಹೊಯ್ಸಳರ ದೇಗುಲ

7

ವಾಸ್ತು ಸಿರಿವಂತಿಕೆಯ ಹೊಯ್ಸಳರ ದೇಗುಲ

Published:
Updated:
Prajavani

ಹಾ ಸನ ನಗರದಿಂದ 12 ಕಿಮೀ ದೂರವಿರುವ ಕೋರವಂಗಲ ಒಂದು ಪುಟ್ಟ ಹಳ್ಳಿ. ಇಲ್ಲಿಯ ಕೆರೆಯ ದಡದಲ್ಲಿ ಭವ್ಯತಮವಾಗಿ ನಿಂತಿದೆ ಬೂಚೇಶ್ವರ ದೇವಾಲಯ. (ಹಳ್ಳಿಯ ಹೆಸರು ಕೋರಮಂಗಲವಾದರೂ, ಜನರ ಬಾಯಲ್ಲಿ ದೇವಾಲಯ ಭೂತೇಶ್ವರ ಎಂದೂ ಆಗಿದೆ). ಇದು ಎಲ್ಲ ಭೂತೇಶ್ವರ ದೇಗುಲದಂತೆ ಸಾಮಾನ್ಯವಲ್ಲ. ಇದಕ್ಕೆ ಶತಮಾನಗಳ ಇತಿಹಾಸವಿದೆ. ಇದು ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ದೇಗುಲ.

ಹೊಯ್ಸಳ ದೊರೆ ಎರಡನೆ ಬಲ್ಲಾಳನ ಪಟ್ಟಾಭಿಷೇಕದ ನೆನಪಿಗಾಗಿ ಬೂಚಿರಾಜ ಎಂಬ ಅಧಿಕಾರಿ 1173ರಲ್ಲಿ ಕಟ್ಟಿಸಿದ. ಆಗೆಲ್ಲಾ ತಮ್ಮ ರಾಜರನ್ನು ಸಂಪ್ರೀತಿಗೊಳಿಸಲು ಸಾಮಂತರು, ಪಾಳೆಯಗಾರರು, ಮಾಂಡಲೀಕರು, ಹಿರಿಯ ಅಧಿಕಾರಿಗಳು ಕೆರೆಕಟ್ಟೆಗಳನ್ನು ದೇವಾಲಯಗಳನ್ನು ಕಟ್ಟಿಸುತ್ತಿದ್ದರು. ಇದರಿಂದ ಪ್ರಜೆಗಳಿಗೆ ಉದ್ಯೋಗವೂ ಆಗುತ್ತಿತ್ತು. ಜನರಿಗೆ ಉಪಯೋಗಕ್ಕೂ ಬರುತ್ತಿತ್ತು. ಇದೂ ಕೂಡ, ಹಾಗೆಯ ಜನರಿಗಾಗಿ ಕಟ್ಟಿಸಿದ ದೇವಾಲಯ. ಬೂಚಿರಾಜ ಕಟ್ಟಿಸಿದ ಶಿವನ ದೇವಾಲಯವಾದ್ದರಿಂದ ಇದು ಬೂಚೇಶ್ವರ ದೇವಾಲಯ ಎಂಬ ಹೆಸರಿದೆ.

ಹೊಯ್ಸಳರ ವಾಸ್ತುಶಿಲ್ಪ ‘ನಕ್ಷತ್ರಾಕಾರ’. ಈ ದೇವಾಲಯ ಕೂಡ ನಕ್ಷತ್ರಾಕಾರದ ಜಗಲಿಯ ಮೇಲೆ ನಿಂತಿದೆ. ದೇವಾಲಯಕ್ಕೆ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಪ್ರವೇಶದ್ವಾರಗಳಿವೆ. ದ್ವಾರದ ಅಕ್ಕಪಕ್ಕ ದ್ವಾರಪಾಲಕರಿದ್ದಾರೆ. ದಕ್ಷಿಣ ದ್ವಾರದ (ಈಗ ಪ್ರವೇಶಕ್ಕೆ ಉಪಯೋಗಿಸುತ್ತಿರುವುದು ಇದೇ ದ್ವಾರವನ್ನು) ಮೆಟ್ಟಿಲುಗಳ ಎರಡೂ ಬದಿಯಲ್ಲಿ ಅಲಂಕೃತ ಆನೆಗಳಿವೆ. ಮೂರ್ನಾಲ್ಕು ಮೆಟ್ಟಿಲುಗಳನ್ನು ಹತ್ತಿದರೆ ನವರಂಗ ಪ್ರವೇಶಿಸುತ್ತೇವೆ. ಈ ನವರಂಗವು ಹೊಳಪು ನುಣುಪುಳ್ಳ ಹದಿನೆಂಟು ಸುಂದರ ಕಂಬಗಳನ್ನು ಹೊಂದಿದ್ದು ಒಂದೊಂದು ಕಂಬವೂ ವಿಭಿನ್ನವಾಗಿದೆ. 

ಎಡಕ್ಕೆ ಹೊರಳಿ ಸುಕನಾಸಿಯನ್ನು ಹಾದು ಮುಂದಕ್ಕೆ ಹೋದರೆ ಬೂಚೇಶ್ವರ ದೇವರ ಗರ್ಭಗುಡಿಯಿದೆ. ಇಲ್ಲಿ ದೊಡ್ದದಾದ ಲಿಂಗವಿದೆ. ಗರ್ಭಗುಡಿಯ ಹೊರಭಾಗದಲ್ಲಿ ಸಪ್ತಮಾತೃಕೆಯರು, ಗಣಪತಿಯ ವಿಗ್ರಹಗಳೂ ಇವೆ. ಗರ್ಭಗುಡಿಯ ಎದುರಿಗೆ ನಂದಿಯ ಸುಂದರ ಮೂರ್ತಿಯಿದೆ. ವಿಶೇಷವೆಂದರೆ ಇದು ತಿರುಗುವ ಬಸವಣ್ಣ ಎಂದೇ ಹೆಸರುಪಡೆದಿದೆ. ಬಸವಣ್ಣನನ್ನು ಇರಿಸಿರುವ ಕಂಬವು ಎರಡು ಭಾಗಗಳನ್ನು ಹೊಂದಿದ್ದು ಒಂದರೊಳಗೊಂದನ್ನು ಇರಿಸಲಾಗಿದೆ. ಹಾಗಾಗಿ ಬಸವಣ್ಣ ಕುಳಿತಿರುವ ಮೇಲಿನ ಭಾಗವನ್ನು ಅತ್ತಿತ್ತ ತಿರುಗಿಸಬಹುದಾಗಿದೆ.

ಶಿವನಿಗೆ ನಮಿಸಿ ಬಸವಣ್ಣನನ್ನು ಸುತ್ತಿಸಿ ನಾವು ಹಿಂದೆ ಬಂದರೆ ಮತ್ತೆ ಅದೇ ನವರಂಗಕ್ಕೆ ಬರುತ್ತೇವೆ. ಹಾಗೆಯೇ ಮುಂದುವರಿದರೆ ಬೂಚೇಶ್ವರ ಗರ್ಭಗುಡಿಯ ಎದುರಿಗೆ, ನವರಂಗದ ಇನ್ನೊಂದು ಬದಿಯಲ್ಲಿ ಚಿಕ್ಕ ಗರ್ಭಗುಡಿ ಸಿಗುತ್ತದೆ. ಇಲ್ಲಿ ನಾವು ಅಪರೂಪದ ವಿಗ್ರಹವೊಂದನ್ನು ಕಾಣುತ್ತೇವೆ. ಅದೇ ಸೂರ್ಯನಾರಾಯಣನ ಸುಂದರ ಮೂರ್ತಿ. ಜಗತ್ತಿಗೇ ಬೆಳಕು ಕೊಡುವ ಸೂರ್ಯದೇವರ ವಿಗ್ರಹವನ್ನು ಕಾಣುವುದು ಅಪರೂಪ. ಇಲ್ಲಿಗೆ ಬಂದರೆ, ಸೂರ್ಯದೇವನ ವಿಗ್ರಹದ ದರ್ಶನವಾಗುತ್ತದೆ.

ಸೂರ್ಯದೇವರಿಗೆ ನಮಿಸಿ ಹೊರಬರುವ ಮುಂಚೆ ಒಮ್ಮೆ ಕತ್ತೆತ್ತಿ ನೋಡಬೇಕು. ನವರಂಗ ಹಾಗೂ ಸುಕನಾಸಿಯಲ್ಲಿ ಸುಂದರ ವಿನ್ಯಾಸದ ಭುವನೇಶ್ವರಿಗಳಿವೆ. ಅವುಗಳ ಸೌಂದರ್ಯವನ್ನು ಕಣ್ತುಂಬಿಕೊಂಡರೆ ಒಳಭಾಗದ ನೋಟ ಪೂರ್ಣವಾಗುತ್ತದೆ. ಅಲ್ಲಿಗೆ ಮುಗಿಯುವುದಿಲ್ಲ, ಹೊಯ್ಸಳ ದೇಗುಲಗಳ ಕಲಾಸಂಪತ್ತಿರುವುದೇ ಹೊರಭಾಗದ ಭಿತ್ತಿಯಲ್ಲಿ, ಗೋಪುರಗಳಲ್ಲಿ. ಹಾಗಾಗಿ ದೇವಾಲಯವನ್ನು ಹೊರಬದಿಯಿಂದ ಪ್ರದಕ್ಷಿಣೆ ಮಾಡುವುದು ಅಗತ್ಯ.

ಹೊಯ್ಸಳ ದೇವಾಲಯಗಳ ವಿಶೇಷತೆಯೆಂದರೆ ಹೊರಭಾಗದ ಭಿತ್ತಿಯ ಅಲಂಕರಣ. ಬೂಚೇಶ್ವರ ದೇವಾಲಯವೂ ಇದಕ್ಕೆ ಹೊರತಾಗಿಲ್ಲ. ಭಾಗವತ, ಮಹಾಭಾರತ ಮತ್ತಿತರ ಪೌರಾಣಿಕ ಕತೆಗಳ ಸನ್ನಿವೇಶಗಳು, ಸಾಮಾಜಿಕ ಧಾರ್ಮಿಕ ಜೀವನ ನಿರೂಪಿಸುವ ಕೆತ್ತನೆಗಳು, ದೇವಾನುದೇವತೆಗಳ ವಿಗ್ರಹಗಳನ್ನು ನಾವಿಲ್ಲಿ ನೋಡಬಹುದು. ಶಿಖರವುಳ್ಳ ಪ್ರಭಾವಳಿಯಂಥ ರಚನೆಯಿಂದಾಗಿ ಪ್ರತಿಯೊಂದು ವಿಗ್ರಹವೂ ತನ್ನದೇ ಆದ ಪುಟ್ಟಗುಡಿಯಲ್ಲಿ ಇರುವಂತೆ ಭಾಸವಾಗುತ್ತದೆ. ದೇವಾಲಯ ನಕ್ಷತ್ರಾಕಾರದ ವಾಸ್ತುವಿರುವುದರಿಂದ ನೆರಳು ಬೆಳಕಿನ ಪ್ರಭಾವದಿಂದ ಮೂರ್ತಿಗಳ ವಿಭಿನ್ನ ಭಾವಮುದ್ರೆಗಳು ಸಮರ್ಥವಾಗಿ ತೋರಿಬರುವಂತೆ ಸೂಕ್ತ ಸ್ಥಳಗಳಲ್ಲಿ ಅವುಗಳನ್ನು ಶಿಲ್ಪಿಗಳು ಇರಿಸಿದ್ದಾರೆ.

ದೇಗುಲದ ಈಶಾನ್ಯಕ್ಕೆ ಚಿಕ್ಕ ಗುಡಿಯಲ್ಲಿ ಅಂಧಕಾಸುರನನ್ನು ಸಂಹರಿಸುತ್ತಿರುವ ಕಾಲಭೈರವನ ಸುಂದರ ಮೂರ್ತಿಯಿದೆ. ಈ ಗುಡಿಯ ಎದುರಿಗೆ, ಬೂಚೇಶ್ವರ ದೇವಾಲಯದ ಹೊರಭಾಗದಲ್ಲಿ, ಅಂದರೆ ಸೂರ್ಯದೇವರ ಗರ್ಭಗುಡಿಯ ಹಿಂಭಾಗದಲ್ಲಿ, ರುದ್ರಕಾಳಿಯ ವಿಗ್ರಹವಿದೆ. ಕಾಲಭೈರವನ ಗುಡಿಯ ಹಿಂದೆ ವೀರಗಲ್ಲು, ದೇವಾಲಯದ ದಕ್ಷಿಣ ದ್ವಾರದ ಪಕ್ಕದಲ್ಲಿ ಶಿಲಾಶಾಸನವೊಂದನ್ನು ಕಾಣಬಹುದು. ಬೂಚೇಶ್ವರ ದೇವಾಲಯದ ಅನತಿ ದೂರದಲ್ಲಿ ನಾಗೇಶ್ವರ ಮತ್ತು ಗೋವಿಂದೇಶ್ವರ ದೇವಾಲಯಗಳಿವೆ. ಅವು ಪಾಳುಬಿದ್ದಿದ್ದು, ಈಚೆಗೆ ಸ್ವಲ್ಪ ದುರಸ್ತಿ ಮಾಡಲಾಗಿದೆ. ಆದರೆ ಹೆಚ್ಚಿನ ಕೆತ್ತನೆಗಳಿಲ್ಲ. ಅಲ್ಲಿಯೂ ಶಿಲಾಶಾಸನವನ್ನು ಕಾಣಬಹುದು. ಚಿಕ್ಕ ಕಲ್ಯಾಣಿಯನ್ನೂ ನಾವಲ್ಲಿ ನೋಡಬಹುದು.

ಬೂಚೇಶ್ವರ ದೇವಾಲಯದ ಅಂಗುಲ ಅಂಗುಲವೂ ನೋಡಬೇಕಾದದ್ದೇ. ಪ್ರಾಚ್ಯವಸ್ತು ಇಲಾಖೆಯವರು ದೇವಾಲಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಹಾಸನದ ಸನಿಹದಲ್ಲೇ ಇದ್ದರೂ ಪ್ರಚಾರದ ಕೊರತೆಯಿಂದಾಗಿ ಪ್ರವಾಸಿಗರಿಗೆ ಅಜ್ಞಾತವಾಗಿ ಉಳಿದಿದೆ ಈ ದೇಗುಲ.

ಕೋರವಂಗಲ ತಲುಪುವುದು

ಹಾಸನದಿಂದ ಅರಸಿಕೆರೆ ರಸ್ತೆಯಲ್ಲಿ ಎಂಟು ಕಿಲೋಮೀಟರ್ ಸಾಗಿದಾಗ ದೊಡ್ಡಪುರ ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿ ಮೂರು ಕಿಲೋಮೀಟರ್ ಸಾಗಿ ಮತ್ತೆ ಎಡಕ್ಕೆ ಹೊರಳಿ ಸ್ವಲ್ಪ ಮುಂದೆ ಹೋದರೆ ಕೋರವಂಗಲ ಸಿಗುತ್ತದೆ.

ಹೀಗೂ ಹೋಗಬಹುದು: ಹಾಸನದಿಂದ ಅರಸಿಕೆರೆ‌ಗೆ ಹೋಗುವ ಮಾರ್ಗದಲ್ಲಿ 10 ಕಿಲೋಮೀಟರ್ ಕ್ರಮಿಸಿದ ನಂತರ ಕೋರವಂಗಲ ಗೇಟ್ ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿ ಸಾಗಿದರೆ ಕೋರವಂಗಲ ತಲುಪಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !