ಸೋಮವಾರ, ಸೆಪ್ಟೆಂಬರ್ 20, 2021
23 °C

ಮರಳುಗಾಡಿನ ವಾಸ್ತುಶಿಲ್ಪದ ಸಿರಿ

ಬಿಂಡಿಗನವಿಲೆ ಭಗವಾನ್ Updated:

ಅಕ್ಷರ ಗಾತ್ರ : | |

Prajavani

ಅರಬ್‌ ಸಂಯುಕ್ತ ರಾಷ್ಟ್ರಗಳ ರಾಜಧಾನಿ ಅಬುದಾಬಿ. ಇಲ್ಲಿನ ಕಟ್ಟಡಗಳೇ ವಿಶಿಷ್ಟ. ಒಂದು ಕಟ್ಟಡಕ್ಕಿಂತ ಇನ್ನೊಂದು ವಿಶಿಷ್ಟವಾಗಿದೆ. ವಿನ್ಯಾಸ, ಭವ್ಯತೆ ಎಲ್ಲವುದರಲ್ಲೂ ವೈವಿಧ್ಯವೇ. ಒಂದರ ಮೇಲೆ ಒಂದು ಇಟ್ಟಿಗೆ ಪೇರಿಸಿದಂತೆ ಕಾಣುವ ಉಪ್ಪರಿಗೆಗಳನ್ನು ಎಣಿಸುತ್ತಿದ್ದರೆ, ಖಂಡಿತ ಕ್ರಮಸಂಖ್ಯೆ ತಪ್ಪುತ್ತೇವೆ.

ಕೆಲವು ಕಟ್ಟಡಗಳು ಬೃಹದಾಕಾರದ ಚಕ್ರದಂತೆ, ಇನ್ನೊಂದು ಪೈನಾಪಲ್‍, ಸೇಬು ಹಣ್ಣನ್ನು ಹೋಲುತ್ತಿದ್ದರೆ, ಮತ್ತೊಂದು ಕಟ್ಟಡ ಹಾವಿನ ಹಡೆಯಂತೆ ಕಾಣುತ್ತದೆ. ಅರ್ಧಚಂದ್ರ, ಪತಂಗದ ವಿನ್ಯಾಸದ ಕಟ್ಟಡಗಳೂ ಅಲ್ಲಿ ಕಂಡವು. ಮರುಭೂಮಿಯಲ್ಲಿ ಇಂಥ ವೈಭವದ ವಾಸ್ತುಶಿಲ್ಪದ ಕಟ್ಟಡಗಳು ತಲೆ ಎತ್ತಿರುವುದು ಹೇಗೆ? ಹೀಗೊಂದು ಅಚ್ಚರಿಯ ಪ್ರಶ್ನೆ ತಲೆಯಲ್ಲಿ ಮೂಡಿತು.

ಅರಬ್‌ ಸಂಯುಕ್ತ ರಾಷ್ಟ್ರಗಳ ಇತರೆ ಪ್ರಾಂತ್ಯಗಳಂತೆ ಅಬುದಾಬಿಯಲ್ಲಿ ವರ್ಷದಲ್ಲಿ ಎರಡು ದಿನ ಮಳೆ ಬಂದರೆ ಹೆಚ್ಚು. ಆದರೆ, ಅಭಿವೃದ್ಧಿ ವಿಷಯದಲ್ಲಿ ತುಂಬಾ ಮುಂದಿದೆ ಈ ನಗರ. ಇಲ್ಲಿ ಸಮುದ್ರದ ನೀರು ಶುದ್ಧೀಕರಣಗೊಂಡು, ಕುಡಿಯಲು ಬಳಕೆಯಾಗುತ್ತದೆ. ಹಡಗುಗಳು ಹೊರಗಡೆಯಿಂದ ಮಣ್ಣು ಹೇರಿಕೊಂಡು ಬರುತ್ತವೆ. ಪಾಮ್ ಮತ್ತು ಇತರೆ ಗಿಡ, ಮರಗಳನ್ನು ಬೆಳೆಸಿ ಉದ್ಯಾನಗಳನ್ನಾಗಿಸಿದ್ದಾರೆ. ಇಷ್ಟೆಲ್ಲ ನೋಡಿದ ಮೇಲೆ ಇದನ್ನೊಂದು ಶಿಸ್ತಿನ ನಗರ ಎನ್ನದಿರಲು ಸಾಧ್ಯವೇ?

ಅಬುದಾಬಿಗೆ ಭೇಟಿ ನೀಡಿದವರು ಶೇಕ್ ಝಾಯಿದ್ ಮೋಸ್ಕ್ ಸ್ಥಳಕ್ಕೆ ಹೋಗಿಬರಲೇ ಬೇಕು. ಅದು 115 ಮೀಟರ್ ಎತ್ತರದ ಭವ್ಯ ಮಸೀದಿ. ಇಸ್ಲಾಂ ಮೊಗಲ್ ಹಾಗೂ ಮೊರಿಶ್ ವಾಸ್ತು ಶೈಲಿಯಲ್ಲಿದೆ. ಶ್ವೇತವರ್ಣದ ಅಮೃತಶಿಲೆಯ 82 ಗುಮ್ಮಟಗಳು, ಆಗಷ್ಟೆ ಹಾಲಿನಲ್ಲಿ ಮಿಂದೆದ್ದಂತೆ ಕಾಣುತ್ತವೆ. ಜಗತ್ತಿನಲ್ಲಿ ಎಲ್ಲೆಲ್ಲಿ ಅತ್ಯುತ್ತಮ ಅಮೃತಶಿಲೆಗಳಿವೆಯೋ ಅಲ್ಲಿಂದ ಅವನ್ನು ತರಿಸಿ ಇದರ ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳಲಾಗಿದೆ. 1996 ರಲ್ಲಿ ಆರಂಭವಾದ ನಿರ್ಮಾಣ 2008 ರಲ್ಲಿ ಪೂರ್ಣಗೊಂಡಿತು. ಆದ ವೆಚ್ಚ 545 ದಶಲಕ್ಷ ಡಾಲರ್‌. ಜಗತ್ತಿನ 38 ನಿರ್ಮಾಣ ಸಂಸ್ಥೆಗಳ 3000 ಕುಶಲ ಕರ್ಮಿಗಳು ರಚನೆಯಲ್ಲಿ ತೊಡಗಿದ್ದರಂತೆ. 2,24,12 ಚ. ಮೀ. ವಿಸ್ತೀರ್ಣದ ಈ ಮಸೀದಿ ವಿಶ್ವದಲ್ಲೇ ಮೂರನೇಯ ಅತಿ ದೊಡ್ಡದು. ಒಮ್ಮೆಗೆ ಲಕ್ಷ ಮಂದಿ ಕುಳಿತು ಪ್ರಾರ್ಥನೆ ಸಲ್ಲಿಸಬಹುದು. ಬೃಹತ್ ಮಸೀದಿಯನ್ನು ಯಾರು ಬೇಕಾದರೂ ಸಂದರ್ಶಿಸಬಹುದು. ಆದರೆ ಅಡಿಯಿಂದ ಮುಡಿವರೆಗೆ ಉಡುಪು ಧರಿಸಿರಬೇಕು. ಬಿಗಿ ದಿರಸು ನಿಷಿದ್ಧ. ನಿಶ್ಶಬ್ದ ಪಾಲಿಸಬೇಕು.

ಅಬುದಾಬಿಯಲ್ಲಿನ ವಿಶೇಷವಾಗಿ ಗಮನ ಸೆಳೆಯುವ ಮತ್ತೊಂದು ಕಟ್ಟಡವೆಂದರೆ ‘ಆಲ್ ಬಹಾರ್ ಟವರ್ಸ್’ ಅಥವಾ ‘ಜೋಡಿ ಪೈನಾಪಲ್ ಗೋಪುರಗಳು’. ಯುಎಇ 46ನೇ ರಾಷ್ಟ್ರೀಯ ದಿನದ ನೆನಪಿಗೆ ನಿರ್ಮಿಸಿದ ಕಟ್ಟಡವಿದು. ಒಂದೊಂದು ಕಟ್ಟಡದಲ್ಲಿ 25 ಮಹಡಿಗಳಿವೆ. ವಿವಿಧ ಕಚೇರಿಗಳ ನೆಲೆಯಾಗಿರುವ ಈ ಕಟ್ಟಡ ಸಮುಚ್ಛಯದಲ್ಲಿ ಸುಮಾರು 2000 ನೌಕಕರು ಕೆಲಸ ನಿರ್ವಹಿಸುತ್ತಾರೆ.

ಉಳಿದಂತೆ ಅಬುದಾಬಿಯಲ್ಲಿ ‘ಹೆರಿಟೇಜ್ ವಿಲೇಜ್’, ‘ಡೆಸರ್ಟ್ ಸಫಾರಿ’,‘ಕಾರ್ನಿಚ್ ಸೀಶೋರ್’ ನೋಡಲೇಬೇಕಾದ ತಾಣ ಗಳು. ಕಡಲ ತೀರದಾದ್ಯಂತ 200 ಕ್ಕೂ ಹೆಚ್ಚಿನ ನಡು ಗಡ್ಡೆಗಳು ಹರಡಿಕೊಂಡಿವೆ. ಅಬುದಾಬಿಯ ಸಾಗರ ಪ್ರದೇಶದಲ್ಲಿ ‘ಸಾದಿಯಟ್ ದ್ವೀಪ’, ‘ ಕಲಾ ಮತ್ತು ಸಾಂಸ್ಕೃತಿಕ ಲೋಕ’ ಇವೆಲ್ಲ ಚಾಲ್ತಿಯಲ್ಲಿರುವ ಯೋಜನೆಗಳು. ಹಾಗೆಯೇ ಸರ್ಕಾರದ ಮಹತ್ತರ ಯೋಜನೆಗಳು ಕೂಡ. ಇವೆಲ್ಲವೂ 2020ರ ವೇಳೆಗೆ ಮುಗಿಯಬೇಕು ಎಂಬ ನಿಯಮವಿದೆ. ಹಾಗಾಗಿ ಮುಂದಿನ ವರ್ಷ ಅಬುದಾಬಿಗೆ ಭೇಟಿ ನೀಡುವವರಿಗೆ ಈ ಎಲ್ಲ ವಿಶೇಷಗಳನ್ನು ನೋಡಬಹುದೇನೋ.

ಕಾನೂನು ಪಾಲನೆಯ ಶಿಸ್ತಿನ ನಗರ

ಅಬುದಾಬಿಯಲ್ಲಿ ಹುಡುಕಿದರೂ ಏರು–ತಗ್ಗುಗಳ ರಸ್ತೆ ಕಾಣುವುದಿಲ್ಲ. ಅಷ್ಟು ಮಟ್ಟಸವಾದ, ಸ್ವಚ್ಛವಾದ ಅಗಲ ರಸ್ತೆಗಳು.

ಅಲ್ಲಿನ ಕಾನೂನು ಕಟ್ಟಳೆಗಳು ಬಲು ಕಟ್ಟುನಿಟ್ಟು. ರಸ್ತೆಗಳಲ್ಲಿ ಬೆರಳೆಣಿಕೆಯಷ್ಟೂ ಪೋಲೀಸರಿಲ್ಲ. ಜನ ಸ್ವಯಂ ಪ್ರೇರಣೆಯಿಂದ ಸಂಚಾರ ನಿಯಮ ಪಾಲಿಸುತ್ತಾರೆ. ಬಸ್ಸಿನಲ್ಲಿ ನಿಂತು ಪ್ರಯಾಣಿಸಿದರೆ, ಪೋಲೀಸರ, ಆಂಬುಲೆನ್ಸ್ ಅಥವಾ ಶಾಲಾ ವಾಹನ ಓವರ್ ಟೇಕ್ ಮಾಡಿದರೆ ದಂಡ ವಿಧಿಸಲಾಗುತ್ತದೆ.

ಕಸ, ರದ್ದಿಯನ್ನು ಕಸದ ಡಬ್ಬಿಯ ಅಕ್ಕ ಪಕ್ಕ ಹಾಕಿದರೂ ಕಿಸೆಗೆ ತ್ರಾಸ. ವಾಹನಗಳು ಹಾರ್ನ್ ಮಾಡುವಂತಿಲ್ಲ. ಶಾಲೆಯ ಶುಲ್ಕ ದುಬಾರಿ. ನಗರದಲ್ಲಿ ಹಸಿರುಮಯ ಆವರಣದಲ್ಲೇ ಕ್ರೀಡಾಂಗಣ, ಜಿಮ್, ಸುಸಜ್ಜಿತ ಗ್ರಂಥಾಲಯ, ಈಜುಕೊಳದಂತಹ ಸೌಲಭ್ಯವಿದೆ. ಅಬುದಾಬಿಯಲ್ಲಿ 5000ಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಮಕ್ಕಳಿಗೆ ಕನ್ನಡ ಕಲಿಸುವ ವ್ಯವಸ್ಥೆಯೂ ಇದೆ.

ಹೋಗುವುದು ಹೇಗೆ?

ಬೆಂಗಳೂರಿನಿಂದ ದುಬೈ ಮೂಲಕ ಅಬುದಾಬಿಗೆ ವಿಮಾನ ಸೌಲಭ್ಯವಿದೆ. ಪ್ರಯಾಣದ ಅವಧಿ ಮೂರೂವರೆ ಗಂಟೆಗಳು. ಬೆಂಗಳೂರಿನಿಂದ ದುಬೈ ತಲುಪಿ, ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಅಲ್ಲಿಂದ ಅಬುದಾಬಿಗೆ ಟ್ಯಾಕ್ಸಿಯಲ್ಲಿ ಪಯಣಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು