ನೀವು ಸಿಹಿಪ್ರಿಯರೇ?

7

ನೀವು ಸಿಹಿಪ್ರಿಯರೇ?

Published:
Updated:
Deccan Herald

ಸಿಹಿ ತಿಂದರೆ ಹಲ್ಲು ಹುಳುಕು ಬೀಳುವುದರ ಜೊತೆಗೆ ಮಧುಮೇಹ, ಬೊಜ್ಜುವಿನಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತದೆ. ಇದಿಷ್ಟೇ ಅಲ್ಲ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್‌ ಹಾಗೂ ಹೃದಯದ ತೊಂದರೆಗಳನ್ನೂ ತರಬಹುದು. ಆದರೆ ಸಿಹಿ ತಿಂದು ಅಭ್ಯಾಸವಾದ ದೇಹಕ್ಕೆ ಅದರಿಂದ ದೂರ ಇರುವುದು ಕಷ್ಟವೇ. ಐಸ್‌ಕ್ರೀಂ, ಚಾಕಲೇಟ್‌ ಹಾಗೂ ಹಣ್ಣಿನ ಸಲಾಡ್‌ಗಳಿಗೆ ಸಿಹಿ ಮಿಶ್ರ ಮಾಡಿ ತಿನ್ನುವುದರಿಂದ ದೇಹದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಟಾಕ್ಸಿನ್‌ ಸಂಗ್ರಹಗೊಳ್ಳುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. 

ಸಕ್ಕರೆ ಅಂಶ  ದೇಹದಲ್ಲಿ  ಶಕ್ತಿಯನ್ನು ಕಡಿಮೆಗೊಳಿಸುತ್ತದೆ ಎಂಬುದು ಯಾರಿಗೂ ಅರಿವಿಲ್ಲ. ಇದಲ್ಲದೇ ಅತಿಯಾದ ಸಿಹಿ ಸೇವನೆಯಿಂದ ಮುಖದಲ್ಲಿ ಮೊಡವೆಗಳು ಹಾಗೂ ಅಕಾಲ ಮುಪ್ಪು ಬರುತ್ತದೆ ಎಂದು ಪೌಷ್ಟಿಕ ತಜ್ಞರು ಎಚ್ಚರಿಸಿದ್ದಾರೆ. 

ತರಕಾರಿ ಹಾಗೂ ಹಣ್ಣುಗಳಲ್ಲಿ ಸಿಹಿ ಅಂಶ ಸ್ವಾಭಾವಿಕವಾಗಿರುತ್ತದೆ. ಆದರೆ ಮಾರುಕಟ್ಟೆಗಳಲ್ಲಿನ ಜ್ಯೂಸ್‌, ತಿಂಡಿ, ಚಾಕಲೇಟ್‌ಗಳಲ್ಲಿ ಸಕ್ಕರೆಯನ್ನು ಬಳಸಿರುತ್ತಾರೆ. ಸ್ವಾಭಾವಿಕ ಹಾಗೂ ಸಂಸ್ಕರಿತ ಸಕ್ಕರೆಗೂ ತುಂಬ ವ್ಯತ್ಯಾಸವಿದೆ. ಬೆಲ್ಲ ಹಾಗೂ ಜೇನು ಸೇವನೆ ಆರೋಗ್ಯಕ್ಕೆ ಉತ್ತಮ. ಆದರೆ ಹೆಚ್ಚಿನವರು ಮಾರುಕಟ್ಟೆಗಳಲ್ಲಿ ಸುಲಭವಾಗಿ ಸಿಗುವ ಸಕ್ಕರೆ ಅಥವಾ ಇತರ ಸಿಹಿ ಪದಾರ್ಥಗಳತ್ತ ಮುಖ ಮಾಡುತ್ತಾರೆ. ಒಬ್ಬ ವ್ಯಕ್ತಿ ದಿನದಲ್ಲಿ ಇಂತಿಷ್ಟೇ ಪ್ರಮಾಣದ ಸಿಹಿ ತಿನ್ನಬೇಕು ಎಂಬ ನಿಯಮವಿದೆ. ಅದರಂತೆ ಸಿಹಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ. ವಿಶ್ವ ಆರೋಗ್ಯ ಸಂಸ್ಥೆಯು ಒಬ್ಬ ಪುರುಷ ದಿನಕ್ಕೆ 9 ಟೀಚಮಚ ಹಾಗೂ ಮಹಿಳೆ 6 ಟೀಚಮಚ ಸಿಹಿ ಸೇವಿಸಬಹುದು ಎಂದು ಹೇಳಿದೆ. ಸಿಹಿ ಸೇವನೆ ನಿಯಂತ್ರಣ ಮಾಡಿ ಸಕ್ಕರೆವ್ಯಸನಿಗಳಾಗುವುದನ್ನು ತಪ್ಪಿಸಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ. 

ಬೆಳಗ್ಗಿನ ತಿಂಡಿಗೆ ಕೇಕ್‌ ಅಥವಾ ಯಾವುದಾದರೂ ಸಿಹಿ ಪದಾರ್ಥ ತಿಂದಿರಿ ಎಂದಿಟ್ಟುಕೊಳ್ಳಿ. ಅದರಲ್ಲಿನ ಸಕ್ಕರೆ ಅಂಶ ಬೇಗ ರಕ್ತದಲ್ಲಿ ಹೀರಿಕೊಳ್ಳುತ್ತದೆ. ಹಾಗಾಗಿ ಬೇಗ ಹಸಿವಾಗುತ್ತದೆ. ಆದರೆ ಇದು ನಿಜವಾದ ಹಸಿವಲ್ಲ. ಹಾಗಾಗಿ ಬೆಳಗ್ಗಿನ ತಿಂಡಿಗೆ ಇಡ್ಲಿ, ದೋಸೆಯಂತಹ ತಿಂಡಿಗಳನ್ನೇ ತಿನ್ನಿ. ಇದು ಪೌಷ್ಟಿಕ ಆಹಾರವೂ ಆಗಿದೆ ಎಂದು ಸಲಹೆ ನೀಡುತ್ತಾರೆ ವೈದ್ಯರು. 

ಮನೆಯಡುಗೆಯೇ ಉತ್ತಮ

ಅಮೆರಿಕದ ಆಹಾರ ಶೈಲಿಗೆ ಹೋಲಿಸಿದರೆ, ವಿಶೇಷವಾಗಿ ಭಾರತೀಯರ ಬೆಳಗ್ಗಿನ ತಿಂಡಿ ಅತ್ಯುತ್ತಮವಾಗಿದೆ. ನಾವು ಏನು ತಿನ್ನುತ್ತೇವೆಯೋ ಅದರಲ್ಲಿ ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಅಗತ್ಯ ಪೋಷಕಾಂಶಗಳು ಲಭ್ಯವಿವೆ. ಬೆಳಗ್ಗಿನ ತಿಂಡಿಗೆ ಇಡ್ಲಿ ಸೇವನೆ ಅತ್ಯುತ್ತಮ. ಇದರಲ್ಲಿ ಕಾರ್ಬೊಹೈಡ್ರೇಟ್‌ಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದಲ್ಲದೇ ಮನೆಯಡುಗೆಯನ್ನೇ ಹೆಚ್ಚು ಸೇವಿಸುವುದರಿಂದ ಸಿಹಿ ಸೇವನೆಯನ್ನು ನಿಯಂತ್ರಿಸಬಹುದು ಎಂಬುದು ವೈದ್ಯರ ಮಾತು.

ಡಯೆಟ್‌

ಬೆಳಗ್ಗಿನ ತಿಂಡಿಗೆ ಇಡ್ಲಿ ಸಾಂಬಾರ್‌, ದೋಸೆಯಂತಹ ಆರೋಗ್ಯಕ್ಕೆ ಹಿತವಾದ ತಿಂಡಿಗಳನ್ನೇ ಸೇವಿಸಬೇಕು. ಹಣ್ಣುಗಳನ್ನು ಜ್ಯೂಸ್‌ ಮಾಡಿದಾಗ ಅದಕ್ಕೆ ಸಕ್ಕರೆ ಬಳಸುವುದುಂಟು. ಹಣ್ಣುಗಳನ್ನು ಇಡಿಯಾಗಿ ತಿನ್ನಿ. ಪ್ಯಾಕೆಟ್‌ ಜ್ಯೂಸ್‌ಗಿಂತ ಎಳನೀರು, ಹರ್ಬಲ್‌ ಟೀ, ಗ್ರೀನ್‌ ಟೀ, ಮಜ್ಜಿಗೆಯನ್ನು ಕುಡಿಯಬಹುದು. ಸಂಜೆ ತಿಂಡಿಗೆ ಹೆಚ್ಚಿನವರು ಬಿಸ್ಕತ್ತುಗಳನ್ನು ತಿನ್ನುತ್ತಾರೆ. ದಿನಾ ತಿನ್ನುವುದು ಒಳ್ಳೆಯದಲ್ಲ. ಅದರ ಬದಲಾಗಿ ಕಾಳುಗಳನ್ನು ನೆನೆಸಿಟ್ಟು, ಮೊಳಕೆ ಬರಿಸಿ ತಿನ್ನಬಹುದು.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !