ವಿಶೇಷ ಮಕ್ಕಳಿಗೆ ‘ಅರಿವು’ ನೆರವು

7

ವಿಶೇಷ ಮಕ್ಕಳಿಗೆ ‘ಅರಿವು’ ನೆರವು

Published:
Updated:
Prajavani

ಪುಟ್ಟ ಹುಡುಗಿ ಪ್ರಣಮ್ಯ ತನ್ನ ಸಾಮರ್ಥ್ಯವನ್ನು ಮೀರಿ ಕೈಗಳನ್ನೆತ್ತಿ ಶುಭಾಶಯ ಕೋರುತ್ತಾಳೆ. ಮೊದಲು ಯಾವುದಕ್ಕೂ ಪ್ರತಿಕ್ರಿಯಿಸದೆ ಮಂಕಾಗಿರುತ್ತಿದ್ದ ಪ್ರಣಮ್ಯ, ಈಗ ತಮಾಷೆ ಮಾಡಿದರೆ ನಗುತ್ತಾಳೆ. ಅವಳು ನಗುವಾಗ ಕಣ್ಣುಗಳಲ್ಲಿನ ಹೊಳಪು ಅವಳಲ್ಲಿನ ಭರವಸೆಯನ್ನು ಪ್ರಜ್ವಲಿಸುತ್ತದೆ. ಇಂಥ ಹಲವು ವಿಶೇಷ ಮಕ್ಕಳಲ್ಲಿ ಭರವಸೆ ಬದುಕು ತುಂಬುತ್ತಿರುವ ಸಂಸ್ಥೆ ಅರಿವು.

ಮಂಗಳೂರಿನ ಶಕ್ತಿನಗರದ ಪ್ರಶಾಂತ ವಾತಾವರಣದಲ್ಲೊಂದು ಮನೆಯಿದೆ. ಅದೇ ಅರಿವು ಸಂಸ್ಥೆ. ಆ ಮನೆಯ ತುಂಬಾ ಮಕ್ಕಳು. ಒಂದೊಂದು ಮಕ್ಕಳು ವಿಶೇಷ, ವಿಶಿಷ್ಟ ಸಾಮರ್ಥ್ಯದಿಂದ ಕಾಣಿಸುತ್ತಾರೆ. 2015ರಲ್ಲಿ ಒಂದು ಮಗುವಿನಿಂದ ಪ್ರಾರಂಭವಾದ ಅರಿವು ಸಂಸ್ಥೆ ಇಂದು 70 ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ. ಆಟಿಸಂ, ಎಡಿಎಚ್‌ಡಿ, ಓದಲು, ಬರೆಯಲು ಏಕಾಗ್ರತೆ ಕೊರತೆಯಿಂದ ಎದುರಿಸುತ್ತಿರುವವರು, ಮಾನಸಿಕ ದೈಹಿಕ ಬೆಳವಣಿಗೆಯ ಸಮಸ್ಯೆಗಳಿಂದ‌ ಬಳಲುತ್ತಿರುವ ಮಕ್ಕಳು ಇಲ್ಲಿನ ಅತಿಥಿಗಳು. ಮಕ್ಕಳನ್ನು ಆರೈಕೆ ಮಾಡುವುದಲ್ಲದೆ, ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಈ ಸಂಸ್ಥೆ ಅವಿರತವಾಗಿ ಶ್ರಮಿಸುತ್ತಿದೆ. ಪೂರ್ಣಿಮಾ ಭಟ್ ಹಾಗೂ ರಾಧಾಕೃಷ್ಣ ಭಟ್ ಈ ಸಂಸ್ಥೆಯ ರೂವಾರಿಗಳು.

ವಿಶೇಷ ಮಕ್ಕಳ ಆಲಯ

ಬುದ್ಧಿಮಾಂದ್ಯ, ಬಲಹೀನ ಮಕ್ಕಳು ಹುಟ್ಟಿದಾಗ ಧೃತಿಗೆಡುವ ಪೋಷಕರೇ ಹೆಚ್ಚು. ’ಮಕ್ಕಳು ಏನು ಹೇಳಿದರೂ ಕೇಳುವುದಿಲ್ಲ. ಶಾಲೆಯಲ್ಲಿ ಕಲಿಯುವುದರಲ್ಲಿ ಹಿಂದಿದ್ದಾನೆ’ ಎಂಬ ಪೋಷಕರ ದೂರುಗಳು. ‘ಯಾರ ಜತೆಯೂ ಮಾತನಾಡುವುದಿಲ್ಲ. ಇಷ್ಟು ದೊಡ್ಡವನಾದರೂ ಪುಟ್ಟ ಮಕ್ಕಳಂತೆ ವರ್ತಿಸುತ್ತಾನೆ’ ಎಂದು ಬೇಸರಪಟ್ಟುಕೊಳ್ಳುವ ಹೆತ್ತವರು.ಮಕ್ಕಳ ಮೇಲಿನ ಇಂಥ ದೂರುಗಳನ್ನು ಕಡಿಮೆಗೊಳಿಸಲು ಸ್ವತಃ ಪೋಷಕರನ್ನೂ ಒಳಗೊಂಡು, ಇಂಥ ವಿಶೇಷ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುವುದೇ ಅರಿವು ಸಂಸ್ಥೆಯ ಕಾರ್ಯವೈಖರಿ.

‘ಮಕ್ಕಳು ಸಂಸ್ಥೆಗೆ ವಿಶೇಷ ತರಬೇತಿಗಾಗಿ ಬಂದರೂ, ಅವರು ಹೆಚ್ಚು ಹೊತ್ತು ಮನೆಯಲ್ಲೇ ಇರುತ್ತಾರೆ. ಹಾಗಿರುವಾಗ ಅವರ ಪೋಷಕರಿಗೂ ತರಬೇತಿ ನೀಡುವುದು ಮುಖ್ಯ. ಹಾಗೆಂದು ನಮ್ಮಲ್ಲಿ ಮಾತ್ರ ವಿಶೇಷ ತರಬೇತಿ ಪಡೆದರೂ ಮನೆಯಲ್ಲಿ ಎಂದಿನಂತೆ ಇದ್ದರೆ ಸಮಸ್ಯೆ ಕಡಿಮೆಯಾಗುವುದಿಲ್ಲ. ಇದೊಂದು ಸುದೀರ್ಘ ಪಯಣ. ತಾಳ್ಮೆ ಬೇಕು. ಹೆತ್ತವರೂ ಮಕ್ಕಳೊಂದಿಗೆ ಹೇಗಿರಬೇಕು. ಯಾವ ಥೆರಪಿಗಳನ್ನು ಕಡ್ಡಾಯವಾಗಿ ಮಾಡಬೇಕು ಎಂಬುದನ್ನು ಹೇಳಿಕೊಡುತ್ತೇನೆ. ಆಗ ಮಾತ್ರ ಮಕ್ಕಳಲ್ಲಿ ಉತ್ತಮ ಫಲಿತಾಂಶ ಕಂಡು ಬರಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಪೂರ್ಣಿಮಾಭಟ್.

‘ಕೆಲವೊಮ್ಮೆ ಪೋಷಕರು ಮಕ್ಕಳಿಗೆ ಥೆರಪಿಗಳನ್ನು ಮಾಡದೇ ಇದ್ದರೆ, ಅದರ ಪರಿಣಾಮ ನಾವು ಥೆರಪಿಗಳನ್ನು ಮಾಡುವಾಗ ಗೊತ್ತಾಗುತ್ತದೆ. ಆಗ ಪೋಷಕರನ್ನು ನಾವು ವಿಚಾರಿಸಲೇಬೇಕಾಗುತ್ತದೆ. ಹಾಗಾಗಿ ನಮ್ಮೊಂದಿಗೆ ಪೋಷಕರೂ ಕೈಜೋಡಿಸಬೇಕು’ ಎನ್ನುತ್ತಾರೆ ಅವರು.

ಸಂಸ್ಥೆಯಲ್ಲಿ ನಿತ್ಯ 70 ಮಕ್ಕಳಿಗೆ ತರಬೇತಿ ನೀಡುತ್ತಾರೆ. ಇಲ್ಲಿರುವ ವಿಶೇಷ ಚೈತನ್ಯ ಮಕ್ಕಳ ಕೈಯಲ್ಲಿ ದೀಪಗಳು ಬೆಳಗುತ್ತವೆ. ಹೂವುಗಳು ಅರಳುತ್ತವೆ. ಬಣ್ಣಗಳು ಮಾತಾಡುತ್ತವೆ. ಸುಂದರವಾದ ಕರಕುಶಲ ವಸ್ತುಗಳು ತಯಾರಾಗುತ್ತವೆ.

ಮೊದ ಮೊದಲಿಗೆ ಸಂಸ್ಥೆ ಸೇರುವ ಇಂಥ ವಿಶೇಷ ಮಕ್ಕಳನ್ನು ಸಂಬಾಳಿಸುವುದು ಕಷ್ಟ. ಅಂಥ ಮಕ್ಕಳನ್ನೂ ನಿಧಾನವಾಗಿ ಒಲಿಸಿಕೊಂಡು, ಅವರಿಗೆ ತರಬೇತಿ ನೀಡುವುದೇ ಕೌಶಲ್ಯ. ಇದಕ್ಕಾಗಿಯೇ ಈ ಸಂಸ್ಥೆಯಲ್ಲಿ ಒಟ್ಟು 6 ಶಿಕ್ಷಕರಿದ್ದಾರೆ. ಕೆಲವು ಎಂಎಸ್‌ಡಬ್ಲ್ಯೂ, ನರ್ಸಿಂಗ್‌ ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ಬಂದು ಇಲ್ಲಿ ಕೆಲಸ ಮಾಡುತ್ತಾರೆ. ಸಂಸ್ಥೆಯಿಂದ ದೂರವಿರುವ ಮಕ್ಕಳನ್ನು ಕರೆದುಕೊಂಡು ಬರಲು ಮತ್ತು ಬಿಡಲು ವಾಹನದ ವ್ಯವಸ್ಥೆಯೂ ಇದೆ.

ಪುಸ್ತಕ–ಪೆನ್ಸಿಲ್ ರಹಿತ ಶಿಕ್ಷಣ

ಮಕ್ಕಳಿಗೆ ಇಂದೊಂದು ಎರಡನೆಯ ಮನೆಯೂ ಹೌದು. ಪಾಠಶಾಲೆಯೂ ಹೌದು. ಪುಸ್ತಕ ಪೆನ್ಸಿಲ್‌ಗಳಿಲ್ಲದೆ ಶಿಕ್ಷಣ. ಹಲವಾರು ಶೈಕ್ಷಣಿಕ ಸಲಕರಣೆಗಳಿಂದ ಮಕ್ಕಳಿಗೆ ಇಂಗ್ಲಿಷ್, ಗಣಿತ, ಸಮಾಜ ಪಾಠ. ಪೆಟ್ಟಿಗೆಗಳನ್ನು ಜೋಡಿಸಿ ಮನೆಗಳನ್ನು, ವಿಮಾನ, ಹಡಗು, ಕಟ್ಟಡಗಳನ್ನು ನಿರ್ಮಿಸುವ ತಾಕತ್ತು ಇವರದು. ಅವುಗಳಿಂದಲೇ ಸಾಮಾಜಿಕ ಜೀವನ ಕ್ರಮಗಳ ಅನುಭವ. ಪುಟ್ಟ ಪ್ರಾಸ ಪದ್ಯಗಳನ್ನು ಹಾಡುವುದು, ಭಜನೆ, ನೃತ್ಯದಲ್ಲೂ ಮಕ್ಕಳು ತಲ್ಲೀನರಾಗುತ್ತಾರೆ. ಇವೆಲ್ಲ ಮಕ್ಕಳ ಬುದ್ಧಿಶಕ್ತಿ ಹಾಗೂ ದೈಹಿಕ ಸಾಮರ್ಥ್ಯವನ್ನು ವೃದ್ಧಿಸುತ್ತವೆ. ಸಾಮಾಜಿಕ ಭಾವನೆಗಳನ್ನೂ ಚಿಗುರಿಸುತ್ತವೆ.ಮಕ್ಕಳು ಮರೆತಿರುವ, ಅವರಲ್ಲಿ ಇನ್ನೂ ಬೆಳೆಯದಿರುವ ಕೆಲವೊಂದು ಸಾಮಾಜಿಕ ವರ್ತನೆಗಳನ್ನು ಅಭಿವೃದ್ಧಿ ಪಡಿಸಲೆಂದೇ ಸ್ಪೀಚ್, ಆಕ್ಯುಪೇಶನಲ್, ಬಿಹೇವಿಯರ್, ಬರೆಯುವ, ಓದುವ ಥೆರಪಿಗಳನ್ನು ಮಾಡಲಾಗುತ್ತದೆ. ಪ್ರತಿದಿನ ಮೆದುಳಿನ ವಿಕಾಸಕ್ಕೆ ಪೂರಕವಾದ ಚಟುವಟಿಕೆಗಳಿವೆ.

ವಿಶೇಷವೆಂದರೆ ಮಕ್ಕಳಿಗೆ ಕೋಣೆಯೊಳಗಿನ ಥೆರಪಿಯಷ್ಟೇ ಅಲ್ಲದೇ, ಸಾಮಾನ್ಯ ಮಕ್ಕಳಂತೆ ಶಾಲೆಯ ಅನುಭವವನ್ನು ಕೊಡುವ ಪ್ರಯತ್ನವೂ ನಡೆಯುತ್ತಿದೆ. ಮಕ್ಕಳಿಗೆ ವಾರದಲ್ಲಿ ಒಂದು ದಿನ ಸಾಮಾನ್ಯ ಶಾಲೆ, ಅಂಗನವಾಡಿಗಳಲ್ಲಿ ಶಿಕ್ಷಣ ಕೊಡಿಸುತ್ತಾರೆ. ಇತರ ಮಕ್ಕಳೊಂದಿಗೆ ಬೆರೆಯುವ, ಸ್ನೇಹ ಬೆಳೆಸುವ ಅವಕಾಶಕಲ್ಪಿಸಲಾಗಿದೆ.

ಸಂಸ್ಥೆ ಹುಟ್ಟಿಗೆ ಕಾರಣ

ಪೂರ್ಣಿಮಾ ಭಟ್ ಹಾಗೂ ರಾಧಾಕೃಷ್ಣ ದಂಪತಿಗೆ ಅರಿವು ಸಂಸ್ಥೆಯನ್ನು ಹುಟ್ಟು ಹಾಕುವುದಕ್ಕೆ ಅವರ ಮಗನೇ ಕಾರಣ. ಮಗ ಡೌನ್ ಸಿಂಡ್ರೋಮ್ ಎಂಬ ಕಾಯಿಲೆಗೆ‌ ಒಳಪಟ್ಟವನು. ಇಂಥ ಮಕ್ಕಳಿಗೆ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಪೂರ್ಣಿಮಾ ಅವರಿಗೆ ಮಗನನ್ನು ನೋಡಿದಾಗ ಮಗ ಎಲ್ಲರಂತೆ ಇಲ್ಲ ಎಂಬುದಷ್ಟೇ ಗೊತ್ತಿತ್ತು. ವೈದ್ಯರು ಮಗನಿಗೆ ಡೌನ್ ಸಿಂಡ್ರೋಮ್ ಎಂದು ಹೇಳಿದಾಗ, ಅದೊಂದು ಔಷಧಿಯ ಹೆಸರು ಎಂದುಕೊಂಡಿದ್ದರು. ಈಗ ಅಂಥ ಹಲವಾರು ಮಕ್ಕಳನ್ನು ಅವರು ಆರೈಕೆ ಮಾಡುತ್ತಿದ್ದಾರೆ. ಇವರಿಗೆ ಬೆನ್ನೆಲುಬಾಗಿ ಪತಿ ರಾಧಾಕೃಷ್ಣ ನಿಂತಿದ್ದಾರೆ.

ಪೂರ್ಣಿಮಾ ಎಲೆಕ್ಟ್ರಾನಿಕ್ಸ್‌ನಲ್ಲಿ ಪದವೀಧರೆ. ಅಮೇರಿಕಾದ ರೈಟ್ ಸ್ಟೇಟ್ ವಿಶ್ವ ವಿದ್ಯಾಲಯದಿಂದ ರಿಹ್ಯಾಬಿಲಿಟೇಶನ್‌ ಮತ್ತು ಕೌನ್ಸಿಲಿಂಗ್‌ನಲ್ಲಿ ಎಂ.ಎಸ್. ಪದವಿ ಪಡೆದರು. ಅವರ ಪತಿಗೆ ಅಮೇರಿಕಾಕ್ಕೆ ವರ್ಗಾವಣೆಯಾದಾಗ ಪೂರ್ಣಿಮಾ ಕೂಡ ಅಲ್ಲಿಗೆ ಹೋದರು. ಮಗಳು ಕಾಲೇಜಿಗೆ ಹೋಗುವಾಗ ಪೂರ್ಣಿಮಾ  ಎಂ.ಎಸ್‌ ಮಾಡಿದರು. ಮಗ ವಿಶೇಷ ಚೇತನ ಆಗಿದ್ದರಿಂದ, ಈ ಕಲಿಕೆಯನ್ನು ಅವರು ಅದಮ್ಯವಾಗಿ ಪ್ರೀತಿಸಿದರು. ಮಗನಿಗೂ ಇವರೇ ತರಬೇತುದಾರರಾದರು.

ಎಲೆಕ್ಟ್ರಾನಿಕ್‌ ಸೈನ್ಸ್‌ ಓದಿದ್ದರೂ ಮಗನಿಗಾಗಿ, ಹೊಸ ವಿಷಯದಲ್ಲಿ ಪದವಿ ಪಡೆದರು. ಇಂಥ ಅನೇಕ ಮಕ್ಕಳಿಗೆ ತರಬೇತಿ, ನೆರವು , ಪ್ರೀತಿಯ ಅಗತ್ಯ ಇರುವುದು ಅವರಿಗೆ ಸ್ಪಷ್ಟವಾಯಿತು. ತಡ ಮಾಡದೇ ಅವರು ಅರಿವು ಸಂಸ್ಥೆಯನ್ನು ಹುಟ್ಟು ಹಾಕಿದರು. ಗಳಿಕೆ, ವೃತ್ತಿಬದುಕು ಎಂಬ ಸಾಮಾನ್ಯ ಓಟದ ಹಾದಿಯನ್ನು ಬಿಟ್ಟ ಪೂರ್ಣಿಮಾ, ಸಮಾಜ ಮುಖಿಯಾಗಿ ತೊಡಗಿಸಿಕೊಂಡರು. ಸ್ಪರ್ಧಾತ್ಮಕ ಜಗತ್ತಿನ ಹಂಗಿಗೆ ಬೀಳದೇ ನೆರವು ಅಗತ್ಯ ಇರುವವರಿಗೆ ಆಸರೆಯ ಕೈ ಚಾಚಲು ಮುಂದಾದರು. ಹಾಗಾಗಿ ಅರಿವು ಸಂಸ್ಥೆಯ ತುಂಬಾ ಮಕ್ಕಳಿದ್ದಾರೆ. ಪೂರ್ಣಿಮಾ ಅವರ ಪ್ರೀತಿಯನ್ನು ಪಡೆದು ವಿಕಾಸದ ಹಾದಿಯಲ್ಲಿ ಅವರೆಲ್ಲ ಹೆಜ್ಜೆ ಇಡುವುದು ಸಾಧ್ಯವಾಗಿದೆ. ಪೂರ್ಣಿಮಾ ಭಟ್ ಅವರ ಸಂಪರ್ಕ ಸಂಖ್ಯೆ: 8971237669 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !