‘ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದೇನೆ’

7
ಮೀ– ಟೂ ಪ್ರಕರಣ; ನಟ ಅರ್ಜುನ್ ಸರ್ಜಾ ವಿಚಾರಣೆ

‘ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದೇನೆ’

Published:
Updated:
Deccan Herald

ಬೆಂಗಳೂರು: ನಟಿ ಶ್ರುತಿ ಹರಿಹರನ್ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ದಾಖಲಾಗಿರುವ ಪ್ರಕರಣ ಸಂಬಂಧ, ನಟ ಅರ್ಜುನ್ ಸರ್ಜಾ ಅವರನ್ನು ಕಬ್ಬನ್ ಪಾರ್ಕ್ ಪೊಲೀಸರು ಸೋಮವಾರ ವಿಚಾರಣೆಗೆ ಒಳಪಡಿಸಿದರು.

ಅಳಿಯಂದಿರಾದ ಚಿರಂಜೀವಿ, ಧ್ರುವ್ ಹಾಗೂ ಆಪ್ತ ಪ್ರಶಾಂತ್ ಸಂಬರಗಿ ಜೊತೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಠಾಣೆಗೆ ಬಂದಿದ್ದ ಸರ್ಜಾ, ಮಧ್ಯಾಹ್ನ 1.40 ಗಂಟೆವರೆಗೆ ವಿಚಾರಣೆ ಎದುರಿಸಿದರು.

ಶ್ರುತಿ ಅವರ ದೂರು ಆಧರಿಸಿ ಸಂಜ್ಞೆ ಮೂಲಕ ಮಹಿಳೆ ಗೌರವಕ್ಕೆ ಧಕ್ಕೆ (354,509) ಲೈಂಗಿಕ ಕಿರುಕುಳ (ಐಪಿಸಿ 354ಎ) ಹಾಗೂ ಜೀವಬೆದರಿಕೆ (ಐಪಿಸಿ 506) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅವೆಲ್ಲ ಆರೋಪಕ್ಕೆ ಸಂಬಂಧಪಟ್ಟಂತೆ ಇನ್‌ಸ್ಪೆಕ್ಟರ್‌ ಐಯ್ಯಣ್ಣ ರೆಡ್ಡಿ ನೇತೃತ್ವದ ತಂಡವು ಸರ್ಜಾರಿಂದ ಲಿಖಿತವಾಗಿ ಹೇಳಿಕೆ ಪಡೆಯಿತು. 

ವಿಚಾರಣೆ ಮುಗಿಸಿ ಠಾಣೆಯಿಂದ ಹೊರಬಂದ ಸರ್ಜಾ, ಸುದ್ದಿಗಾರರಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟು ಹೋದರು. 

ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್‌ ಅಧಿಕಾರಿಯೊಬ್ಬರು, ‘ಶ್ರುತಿ ನೀಡಿದ್ದ ದೂರಿನ ಅಂಶಗಳು ಹಾಗೂ ಸಾಕ್ಷಿದಾರರ ಹೇಳಿಕೆ ಆಧರಿಸಿ ಸುಮಾರು 60 ಪ್ರಶ್ನೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿತ್ತು. ಅವುಗಳಿಗೆಲ್ಲ ಸರ್ಜಾ ಅವರಿಂದ ಉತ್ತರ ಪಡೆದುಕೊಂಡಿದ್ದೇವೆ. ಜೊತೆಗೆ, ಶ್ರುತಿಯವರ ಹೇಳಿಕೆಯನ್ನು ನ್ಯಾಯಾಧೀಶರ ಎದುರು ದಾಖಲಿಸಿಕೊಳ್ಳುವ ಪ್ರಕ್ರಿಯೆ ಬಾಕಿ ಇದೆ. ಅದಾದ ನಂತರ ಪುನಃ ವಿಚಾರಣೆಗೆ ಬರಬೇಕಾಗುತ್ತದೆ ಎಂದು ಸರ್ಜಾರಿಗೆ ಹೇಳಿ ಕಳುಹಿಸಿದ್ದೇವೆ’ ಎಂದು ಹೇಳಿದರು. 

ಸರ್ಜಾ ಹೇಳಿದ್ದಿಷ್ಟು? 

ನನ್ನ ಮೂಲ ಹೆಸರು ಶ್ರೀನಿವಾಸ್ ಸರ್ಜಾ, ಈಗ ಎಲ್ಲರೂ ಅರ್ಜುನ್ ಸರ್ಜಾ ಅಂತಾ ಕರೆಯುತ್ತಾರೆ. ಹಲವು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಕಲಾವಿದನಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ, ತೆಲುಗು, ತಮಿಳು ಭಾಷೆಯ 150ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದೇನೆ. ತಾಯಿ, ಪತ್ನಿ ಹಾಗೂ ಮಗಳ ಜೊತೆಯಲ್ಲಿ ಚೆನ್ನೈನಲ್ಲಿ ವಾಸವಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಇದುವರೆಗೂ ಯಾರೊಂದಿಗೂ ಕೆಟ್ಟದಾಗಿ ನಡೆದುಕೊಂಡಿಲ್ಲ’ ಎಂದು ಸರ್ಜಾ ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

‘ವಿಸ್ಮಯ ಸಿನಿಮಾ ಚಿತ್ರೀಕರಣದ ವೇಳೆ ಒಪ್ಪಂದದಂತೆ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದೇನೆ. ಅದು ನನಗೆ ವೃತ್ತಿ. ನನಗೂ ಮಗಳಿದ್ದಾಳೆ. ಹೀಗಾಗಿ, ಕೆಲವು ದೃಶ್ಯಗಳನ್ನು ಚಿತ್ರೀಕರಿಸುವುದು ಬೇಡವೆಂದು ನಾನೇ ನಿರ್ದೇಶಕರಿಗೆ ಹೇಳಿದ್ದೆ. ಆ ಸಿನಿಮಾ ಚಿತ್ರೀಕರಣ ಮುಗಿದ ಹಲವು ವರ್ಷಗಳ ನಂತರ, ನನ್ನ ಮೇಲೆ ನಟಿ ಶ್ರುತಿ ಹರಿಹರನ್ ‌ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಅವರ ಆರೋಪದ ವಿರುದ್ಧ ನಾನೇ ಮೊದಲಿಗೆ ಕಾನೂನು ಹೋರಾಟ ಆರಂಭಿಸಿದ್ದೇನೆ. ಅದಾದ ನಂತರವೇ ಅವರು ದೂರು ನೀಡಿದ್ದಾರೆ. ನೀವು ಈಗಾಗಲೇ ಪಡೆದಿರುವ ಸಾಕ್ಷಿದಾರರರು, ಶ್ರುತಿ ಕಡೆಯವರು. ಅವರ ಹೇಳಿಕೆ ಮೇಲೆಯೇ ನನಗೆ ಅನುಮಾನವಿದೆ’.

‘ಸಿನಿಮಾದ ಕಲಾವಿದರ ಆಯ್ಕೆಗಾಗಿ ಆಡಿಷನ್‌ ಮಾಡಿದ್ದ ನಿರ್ದೇಶಕರೇ, ಶ್ರುತಿ ಅವರನ್ನು ಪತ್ನಿಯ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಅವರು ಸೆಟ್‌ಗೆ ಬಂದಾಗಲೇ ಮೊದಲ ಬಾರಿಗೆ ನಾನು ನೋಡಿದ್ದು. ಅದಕ್ಕೂ ಮುನ್ನ ಅವರ ಪರಿಚಯವೇ ಇರಲಿಲ್ಲ. ಅವರೇ ಮೊದಲಿಗೆ ನನ್ನ ಬಳಿ ಬಂದು ಪರಿಚಯ ಮಾಡಿಕೊಂಡರು. ಅವರನ್ನು ಎಂದಿಗೂ ನಾನು ಕೆಟ್ಟ ದೃಷ್ಟಿಯಿಂದ ನೋಡಿಲ್ಲ. ನ್ಯಾಯಾಲಯ ಹಾಗೂ ಪೊಲೀಸರನ್ನು ನಾನು ಗೌರವಿಸುತ್ತೇನೆ. ನೀವು ನೋಟಿಸ್‌ನಲ್ಲಿ ತಿಳಿಸಿರುವಂತೆ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಠಾಣೆಗೆ ಬಂದಿದ್ದೇನೆ. ನಿಮ್ಮ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇನೆ. ಯಾವಾಗ ಬೇಕಾದರೂ ಕರೆದರೆ ಬರಲು ಸಿದ್ಧನಿದ್ದೇನೆ’ ಎಂದು ಸರ್ಜಾ ತಿಳಿಸಿರುವುದಾಗಿ ಮೂಲಗಳು ಹೇಳಿವೆ. 

ಠಾಣೆ ಎದುರು ಜಮಾಯಿಸಿದ್ದ ಅಭಿಮಾನಿಗಳು

ಅರ್ಜುನ್ ಸರ್ಜಾ ಬರುವ ಮಾಹಿತಿ ತಿಳಿದಿದ್ದ ಅವರ ಅಭಿಮಾನಿಗಳು, ಕಬ್ಬನ್‌ ಪಾರ್ಕ್ ಠಾಣೆ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸರ್ಜಾ ಬರುತ್ತಿದ್ದಂತೆ ಘೋಷಣೆ ಕೂಗಲಾರಂಭಿಸಿದ್ದ ಅಭಿಮಾನಿಗಳು, ಠಾಣೆಯೊಳಗೆ ನುಗ್ಗಲು ಯತ್ನಿಸಿದ್ದರು. ಅವರನ್ನು ಪೊಲೀಸರು ಹೊರದಬ್ಬಿದರು.

ಠಾಣೆ ಒಳಗೆ ಸರ್ಜಾರನ್ನು ಪ್ರತ್ಯೇಕ ಕೊಠಡಿಗೆ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸಿದರು. ಸರ್ಜಾ ಜೊತೆ ಬಂದಿದ್ದ ಚಿರಂಜೀವಿ, ಧ್ರುವ್ ಹಾಗೂ ಪ್ರಶಾಂತ್‌ ಸಂಬರಗಿ, ಠಾಣೆಯ ಸ್ವಾಗತಕಾರರ ಕೊಠಡಿಯಲ್ಲೇ ಕುಳಿತುಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 32

  Happy
 • 4

  Amused
 • 1

  Sad
 • 2

  Frustrated
 • 0

  Angry

Comments:

0 comments

Write the first review for this !