ಬುಧವಾರ, ಅಕ್ಟೋಬರ್ 16, 2019
21 °C
ಆರೋಗ್ಯ ಭಾರತಿ; ಅಖಿಲ ಭಾರತೀಯ ಪ್ರತಿನಿಧಿ ಮಂಡಲ್ ಬೈಠಕ್

ಹಂತ ಹಂತವಾಗಿ ಅಭಿವೃದ್ಧಿ: ಡಾ.ಹರ್ಷವರ್ಧನ್

Published:
Updated:
Prajavani

ಮೈಸೂರು: ‘ದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ನಡೆದಿದ್ದು, ಹಂತ ಹಂತವಾಗಿ ವೈದ್ಯಕೀಯ ಸಿಬ್ಬಂದಿ ಸೇವೆ ಹೆಚ್ಚಿಸುವ ಜತೆ, ಅತ್ಯಾಧುನಿಕ ಉಪಕರಣಗಳನ್ನು ಒದಗಿಸಲಾಗುವುದು’ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸಭಾಂಗಣದಲ್ಲಿ ಶನಿವಾರ ನಡೆದ ಆರೋಗ್ಯ ಭಾರತಿಯ, ಅಖಿಲ ಭಾರತೀಯ ಪ್ರತಿನಿಧಿ ಮಂಡಲ್ ಬೈಠಕ್‌ನಲ್ಲಿ ಮಾತನಾಡಿದ ಕೇಂದ್ರ ಸಚಿವರು ಆರೋಗ್ಯಕ್ಕೆ ಎಲ್ಲರೂ ಹೆಚ್ಚಿನ ಒತ್ತು ನೀಡಬೇಕಿದೆ. ಸಮುದಾಯದ ಜತೆ ಆರೋಗ್ಯ ಭಾರತಿಯೂ ಈ ನಿಟ್ಟಿನಲ್ಲಿ ಕೈ ಜೋಡಿಸಿದೆ ಎಂದು ಹೇಳಿದರು.

ಬೈಠಕ್ ಉದ್ಘಾಟಿಸಿದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ‘ಯೋಗವನ್ನು ಅಳವಡಿಸಿಕೊಂಡರೆ ಹೆಚ್ಚು ಚಟುವಟಿಕೆಯಿಂದ ಇರಲು ಸಾಧ್ಯ’ ಎಂದರು.

‘ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಎಲ್ಲರಿಗೂ ಆರೋಗ್ಯ ದೊರೆಯಬೇಕೆನ್ನುವ ದೃಷ್ಟಿಯಿಂದ ಆಸ್ಪತ್ರೆಗಳನ್ನು ತೆರೆದಿದ್ದರು. ಹೆಲ್ತ್ ಕೇರ್‌ಗಳನ್ನು ನಿರ್ಮಿಸಿದ್ದರು. ಆಯುರ್ವೇದಿಕ್ ಮೆಡಿಕಲ್ ಕಾಲೇಜು ಕೂಡ ನಿರ್ಮಿಸಲ್ಪಟ್ಟಿದ್ದವು’ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ ‘ಎಲ್ಲ ಸಾಧನೆಗೂ ಶರೀರವೇ ಮೂಲ ಮಾಧ್ಯಮ. ಶರೀರದ ಆಧಾರವಿಲ್ಲದೇ ಆತ್ಮವಿಲ್ಲ. ಶರೀರವನ್ನು ಸ್ವಸ್ಥವಾಗಿಟ್ಟುಕೊಳ್ಳಬೇಕು. ಶರೀರ ಸ್ವಸ್ಥವಾಗಿದ್ದರೆ ಬುದ್ದಿ ಮತ್ತು ಮನಸ್ಸು ಸ್ವಸ್ಥವಾಗಿರುತ್ತದೆ. ಮನಸ್ಸು ಸ್ವಸ್ಥವಾಗಿದ್ದರೆ ಬಲ ಪ್ರಾಪ್ತಿಯಾಗುತ್ತದೆ. ತನಗೆ ಪ್ರಾಪ್ತಿಯಾದ ಬಲವನ್ನು ಲೋಕಕಲ್ಯಾಣಕ್ಕಾಗಿ ಬಳಸಬೇಕು’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ‘ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ಬಗ್ಗೆ ಆರೋಗ್ಯ ಭಾರತಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ನಮ್ಮ ಆಹಾರ, ನಿತ್ಯದ ಚಟುವಟಿಕೆಗಳು (ವ್ಯವಹಾರ), ಆಲೋಚನೆ (ವಿಚಾರ), ಸೇವೆ (ಸೇವಾ), ಸಾಧನಾ, ಸತ್ಸಂಗ ಸೇರಿದಂತೆ ಜೀವನದ ಎಲ್ಲಾ ಅಂಶಗಳು ಬಹಳ ಮುಖ್ಯವಾದವು. ಇವುಗಳ ಬಗ್ಗೆ ನಾವು ಜಾಗರೂಕರಾಗಿರಬೇಕು’ ಎಂದರು.

ಆರೋಗ್ಯ ಭಾರತಿಯ ಸುಹಾಸ್‌ ಹಿರೇಮಠ, ಡಾ.ಪ್ರವೀಣ್ ಭಾವುಸಾರ, ಸುನೀಲ್ ಜೋಷಿ ಉಪಸ್ಥಿತರಿದ್ದರು.

Post Comments (+)