ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಕೃತಿ | ನೀನು ಚೆಲ್ಲಿದ ಬಣ್ಣದಿಂದ ಚಿತ್ರ ಚಂದವಾಯಿತು...

ಮಧುಬನಿ ಕಲಾವಿದ ಶ್ರವಣ್‌ ಪಾಸ್ವಾನ್‌ ಅಂತರಂಗ
Published 4 ಜೂನ್ 2023, 0:36 IST
Last Updated 4 ಜೂನ್ 2023, 0:36 IST
ಅಕ್ಷರ ಗಾತ್ರ

‘ಸಹಜ ಬಣ್ಣಗಳಿಂದ ಮಾಡುವ ಮಧುಬನಿ ಕಲಾಕೃತಿಯಲ್ಲಿ ಹೇಗೆ ರಾಮಾಯಣದ ಕಥೆಗಳಿವೆಯೋ, ಹಾಗೆಯೇ ಈ ಬಣ್ಣಗಳೆಡೆಯಲ್ಲಿ ದಲಿತವರ್ಗದ ಇತಿಹಾಸವೂ ಇದೆ’ ಎನ್ನುವ ಕಲಾವಿದ ಶ್ರವಣ್‌ ಪಾಸ್ವಾನ್‌ ಅವರ ಬದುಕಿನ ಆಸಕ್ತಿದಾಯಕ ಕಥೆ ಇಲ್ಲಿದೆ...

‘ಇಲ್ಲಿ ನೋಡಿ, ಚಿಕ್ಕಂದಿನಲ್ಲಿ ಕೆರೆಯ ನೀರು ಮುಟ್ಟಿದ್ದಕ್ಕೆ ನಂಗೆ ಮೇಲ್ಜಾತಿಯವರು ಹೊಡೆದ ಗುರುತು ಈಗಲೂ ಇದೆ’ ಎಂದು ತಮ್ಮ ಉದ್ದನೆಯ ಹಿಂಡುಗೂದಲನ್ನು ತಳ್ಳಿ, ನೆತ್ತಿಯಲ್ಲಿರುವ ಗಾಯದ ಗುರುತೊಂದನ್ನು  ತೋರಿಸುತ್ತ ಮಧುಬನಿ ಕಲಾವಿದ ಶ್ರವಣ್‌ ಪಾಸ್ವಾನ್‌ ಮುಗುಳು ನಕ್ಕರು.

‘ಸಹಜ ಬಣ್ಣಗಳಿಂದ ಮಾಡುವ ಈ ಮಧುಬನಿ ಕಲಾಕೃತಿಯಲ್ಲಿ ಹೇಗೆ ರಾಮಾಯಣದ ಕಥೆಗಳಿವೆಯೋ, ಹಾಗೇಯೇ ಈ ಬಣ್ಣಗಳೆಡೆಯಲ್ಲಿ ದಲಿತವರ್ಗದ ಇತಿಹಾಸವೂ ಇದೆ. ಬಣ್ಣಗಳನ್ನು ನಾವೇ ತಯಾರಿಸುತ್ತೇವೆ. ಈ ಪ್ರಕೃತಿಯು ಆ ಮಟ್ಟಿಗೆ ನಮಗೆ ಯಾವುದೇ ಮೋಸ ಮಾಡಲಿಲ್ಲ. ಪಾರಿಜಾತದ ತೊಟ್ಟು,  ಕಡುಗುಲಾಬಿ ಬಣ್ಣದ ಸಂಜೆಮಲ್ಲಿಗೆಯ ಎಸಳು, ನಮ್ಮೂರಲ್ಲಿ ಸಿಗುವ ಕರಿಬೀಜ..ಹೀಗೆ ಬಣ್ಣಗಳನ್ನು ಮಾಡುವುದೊಂದು ದೀರ್ಘವಾದ ಕಾಯಕ. ಹಸಿರೆಂದರೆ ಬರೀ ಒಂದೇ ನಮೂನೆ ಹಸಿರಲ್ಲ. ಕೆಂಪೆಂದರೆ ಬರೀ ಕೆಂಪಲ್ಲ. ಕೆಳಜಾತಿ ಎಂದು ಗುರುತಿಸಿಕೊಂಡ ನಮ್ಮವರ ವಿಭಿನ್ನ ಅನುಭವಗಳಂತೆ, ಈ ಬಣ್ಣಗಳು. ಹೊಳಪು..ಮಸುಕು..ಎಲ್ಲವೂ ಭಿನ್ನ. ಕೆಲವೊಮ್ಮೆ ಇವೆಲ್ಲ ಪದಗಳಿಗೆ ನಿಲುಕುವುದೇ ಅಲ್ಲ ಎಂದು ಅನಿಸುತ್ತದೆ. ಹೌದು ಮತ್ತೆ, ಪದಗಳಿಗೆ ನಿಲುಕದೇ ಇರುವುದಕ್ಕೆ ದೇವರು ನಮಗೆ ಈ ಕಲೆಯ ಕೌಶಲವನ್ನು ದಯಪಾಲಿಸಿದ್ದಾನೆ..’ ಎಂದು ಮಾತನಾಡುತ್ತ ಆಡುತ್ತ ಶ್ರವಣ್‌ ಎತ್ತಲೋ ದಿಟ್ಟಿಸಲಾರಂಭಿಸುತ್ತಾರೆ.

ಪುಟ್ಟದೊಂದು ಪೋನಿಟೇಲ್‌ ಜುಟ್ಟು ಕಟ್ಟಿಕೊಂಡ ಶ್ರವಣ್‌ ಅವರದು ಎತ್ತರದ ವ್ಯಕ್ತಿತ್ವ. ಕೌಶಲದಲ್ಲಿಯೂ. ಆಲೋಚನೆಯಲ್ಲಿಯೂ. ಬದುಕಿನ ಅನುಭವ ಶ್ರೀಮಂತವಾದುದು. ಅವರ ಬಾಲ್ಯ, ಯೌವ್ವನ, ಹೋರಾಟ, ಯಶಸ್ಸು, ಸೋಲು...ಏನೇ ಆಗಲಿ, ಅದರಲ್ಲಿ ಬಣ್ಣಗಳ ಪಾತ್ರವಿದೆ. ಅವರ ಬದುಕಿನಲ್ಲಿ ಅಕ್ಕ, ತಮ್ಮ, ಅಣ್ಣ..ತಂಗಿ, ತಂದೆ ತಾಯಿ ಎಂಬ ಸಂಬಂಧಗಳು ಇರುವಂತೆಯೇ ‘ಬಣ್ಣ’ಎಂಬುದೊಂದು ಸಂಬಂಧಿಯೇ ಆಗಿದೆಯೇನೋ.

ಜಾತಿತಾರತಮ್ಯವು ಬಾಲ್ಯದಲ್ಲಿ ತೊಡಕಾಗಿದ್ದರೂ, ಅದನ್ನೇ ಊರುಗೋಲಾಗಿಸಿಕೊಂಡು ಅವರು ಪುಟಿದೆದ್ದು ಬದುಕು ಕಟ್ಟಿಕೊಂಡಿದ್ದಾರೆ. ‘ಈ ಮಧುಬನಿ ಕಲಾಕೃತಿಗಳ ಯಶಸ್ಸು ಮತ್ತು ಆಕರ್ಷಣೆಯ ದೆಸೆಯಿಂದಾಗಿ ಮೇಲ್ಜಾತಿಯವರು ಎಂದು ಗುರುತಿಸಿಕೊಂಡವರು ನಮ್ಮ ಬಳಿಗೆ ಬರಲಾರಂಭಿಸಿದರು. ಎಲೆಗಳು ಮತ್ತು ಹೂವುಗಳಿಂದ, ತರಕಾರಿಯ ಸಿಪ್ಪೆಗಳಿಂದ ಬಣ್ಣಗಳನ್ನು ತಯಾರಿಸುವ ಕೌಶಲವನ್ನು ನಮ್ಮಿಂದ ಕಲಿತುಕೊಳ್ಳತೊಡಗಿದರು. ಕಲಿಯುವ ಈ ದೀರ್ಘ ಪ್ರಕ್ರಿಯೆಯೇ ಅಸ್ಪೃಶ್ಯತೆಯನ್ನು ಹೋಗಲಾಡಿಸಿರಬೇಕು. ಯಾಕೆಂದರೆ ಕಲಿಯುವುದಕ್ಕೆ ನಮ್ಮ ಬಳಿಗೆ ಬಂದ ಮೇಲ್ಜಾತಿಯವರು ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದಿಲ್ಲ. ಅವರಾಗಿಯೇ ನಮ್ಮ ಮನೆಗೆ ಬಂದಮೇಲೆ ಅಸ್ಪೃಶ್ಯತೆಯ ಮಾತೆಲ್ಲಿ.. ಕಲೆಯೊಂದು ತನ್ನ ಶಕ್ತಿಯಿಂದಲೇ ಅಸ್ಪೃಶ್ಯತೆಯನ್ನು ತೊಡೆದು ಹಾಕುತ್ತಿದೆಯಲ್ಲಾ ಎಂದು ನಾನು ಎಷ್ಟೋ ಬಾರಿ ಅಚ್ಚರಿಪಟ್ಟಿದ್ದೇನೆ. ಹಾಗೆಂದು  ಇಂದಿಗೂ ನಮ್ಮನ್ನು ಕೀಳು ಜಾತಿಯವರೆಂದು ಬಗೆಯುವ ಮನಸ್ಥಿತಿ ಪೂರ್ತಿ ಬದಲಾಗಿದೆ ಎನ್ನುವಂತಿಲ್ಲ ’ ಎನ್ನುವ ಶ್ರವಣ್‌ ಅಂತರಂಗದಲ್ಲಿ ಬದಲಾವಣೆಯ ಕಥೆಗಳ ಕಣಜವೇ ಇದೆ.

‘ಈಗೇನೋ ಯಶಸ್ಸು ದೊರೆಯಿತು ಎಂದ ಮಾತ್ರಕ್ಕೆ, ನಾನು ಅನುಭವಿಸಿದ ನೋವುಗಳು ಮಾಸುವುದಿಲ್ಲ. ಕೇರಳದಲ್ಲೊಮ್ಮೆ ನಡೆದ ಕಾರ್ಯಾಗಾರದಲ್ಲಿ ಮಹಾಭಾರತ ಕುರಿತು ಚಿತ್ರಗಳನ್ನು ಬಿಡಿಸುವಂತೆ ಹೇಳಿದರು. ನನಗೋ, ಕೆರೆಯಲ್ಲಿ ಮಿಂದಿರುವುಕ್ಕೆ ಹೊಡೆಸಿಕೊಂಡ ಅವೇ ನೆನಪುಗಳೇ ಆ ಹೊತ್ತಿನಲ್ಲಿ ಕಾಡಲಾರಂಭಿಸಿತು. ಇನ್ನೇನು ಚಿತ್ರ ಬರೆಯುವುದಕ್ಕಾಗುವುದಿಲ್ಲ ಎಂದು ಕೈ ಚೆಲ್ಲುತ್ತಿದ್ದೆನೋ ಏನೋ.  ಕಣ್ಣ ಹನಿಯನ್ನೇ ಚಿತ್ರವಾಗಿಸುವ ಉದ್ದೇಶದಿಂದ ಕುಂಚವೆತ್ತಿಕೊಂಡೆ. ನೋವುಗಳೆಲ್ಲ ಚಿತ್ರಗಳಾಗಿ ಮೂಡಿಬಂದವು. ಮಹಾಭಾರತವಾದರೇನಾಯಿತು, ಜಾತಿಯ ದೆಸೆಯಿಂದ ಅವಮಾನಿತರಾದವರು ಅಂದೂ ಇದ್ದರಲ್ಲ ! ಅಂದು ನಾನು ಬಿಡಿಸಿದ ಚಿತ್ರಕ್ಕೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ ದೊರೆಯಿತು.’ ಎನ್ನುತ್ತಾರೆ. ಅವರಿಗೆ ಕಾಲಿದಾಸ್‌ ಸಮ್ಮಾನ್‌, ವಿದ್ಯಾಪತಿ ಪುರಸ್ಕಾರಗಳೂ ಸಂದಿವೆ. ಬಿಹಾರದ ಮಧುಬನಿ ಜಿಲ್ಲೆಯ ಜಿತ್‌ವಾರ್‌ಪುರ್‌ ಅವರ ಹುಟ್ಟೂರು. ಅವರ ಕಲಾಕೃತಿಗಳು ಜಪಾನ್‌, ಜರ್ಮನಿ, ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌, ಚೀನಾ, ಆಸ್ಟ್ರೇಲಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರದರ್ಶನಗೊಂಡಿವೆ. ಮಾರಾಟವಾಗುತ್ತಿವೆ. ಗೋದ್ನಾ ಕಲೆಯ ಮೌಲ್ಯವರ್ಧನೆ ಮಾಡುವ ಶ್ರವಣ್‌ ಹೆಸರು ಈಗ ಅಂತರರಾಷ್ಟ್ರೀಯವಾಗಿ ಗುರುತಿಸಿಕೊಂಡಿದೆ.  

ಶ್ರವಣ್‌ ಅವರದ್ದು ಪಾಸ್ವಾನ್‌ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಕುಟುಂಬ. ಅವರ ಅಮ್ಮ ಉರ್ಮಿಳಾದೇವಿ ಅದ್ಭುತವಾದ ‌‌ಗೋದ್ನಾ ಕಲಾವಿದೆ. ಅವರೇ ಮಗನಿಗೆ ಗುರುವೂ ಹೌದು. ಸಹಕಲಾವಿದೆಯೂ ಹೌದು. ಉರ್ಮಿಳಾದೇವಿ ಅವರಿಗೆ ಗೋದ್ನಾ ಕಲಾಜಗತ್ತಿನ ದಂತಕತೆಯೆಂದೇ ಪ್ರಸಿದ್ಧರಾದ ಚಾನೋದೇವಿ ಮತ್ತು ರೌದೀ ಪಾಸ್ವಾನ್‌ ಗುರುಗಳು. ಮಿಥಿಲಾ ಶೈಲಿಯನ್ನು ಸೀತಾದೇವಿ ಅವರಿಂದ ಕಲಿತರು. ಮಧುಬನಿ ಕಲಾಕೃತಿಗಳಲ್ಲಿ ಮಿಥಿಲಾ ಲೋಕಚಿತ್ರಗಳು ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳಿದರೆ, ಗೋದ್ನಾ ಕೆಲಯು ಬಿಹಾರದ ಜನಪದ ಕಥೆಗಳ ನಾಯಕ ರಾಜಾ ಶೈಲೇಶನ ಕಥೆಗಳನ್ನು ಗೋದ್ನಾ ಕಲೆಯು ಹೇಳುತ್ತದೆ. ಅಂದಹಾಗೆ ಗೋದ್ನಾ ಎಂದರೆ ಹಚ್ಚೆಯ ಮೂಲಕ ಅರಳುವ ಚಿತ್ರಗಳು. ಸೂಜಿಯ ಮೊನೆಯಲ್ಲಿ ಅರಳುತ್ತಿದ್ದ ಕಲಾಕೃತಿಗಳನ್ನು, ಬಟ್ಟೆಯ ಮೇಲೆ ತಯಾರಿಸಿದಾಗ ಕಲಾ ಜಗತ್ತು ಅದರ ಸೌಂದರ್ಯವನ್ನು ಕಂಡು ಬೆರಗಾಯಿತು. ಸೆಗಣಿ ನೀರಿನಲ್ಲಿ ಅದ್ದಿದ ಮಸುಕು ಹಸಿರು ಬಣ್ಣದ ಬಟ್ಟೆಯಲ್ಲಿ ಗೋದ್ನಾಕಲೆಯು ಸುಂದರವಾಗಿ ಮೂಡುವುದನ್ನು ನೋಡುವುದೇ ಚಂದ. ಚಿತ್ರಗಳ ಆ ಪಟಕ್ಕೆ ಕಥೆಗಳೂ ಸುತ್ತಿಕೊಂಡು ಒಟ್ಟುಕಲಾಕೃತಿಯು ಜೀವದಳೆದು ಗೋಡೆಯೇರಿದಾಗ ಕಲಾವಿದನ ಮನದಲ್ಲೂ ಖುಷಿ. ಕಲಾರಸಿಕರಲ್ಲೂ ಸಂತೃಪ್ತಿ.

ಶ್ರವಣ್‌ ಅವರ ಅಮ್ಮ ಉರ್ಮಿಳಾದೇವಿ ತಾಳ್ಮೆಯ ಸಾಕಾರ ಮೂರ್ತಿ. ಹಗಲೆಲ್ಲ ಖಾಸಗಿ ನರ್ಸಿಂಗ್‌ ಹೋಮ್‌ನಲ್ಲಿ ಕೆಲಸ ಮಾಡಿ ದಣಿದುಮನೆಗೆ ಬರುತ್ತಿದ್ದರು. ಬಳಿಕ ಕಲಾಕೃತಿಗಳನ್ನು ಮಾಡಲು ಬಣ್ಣಗಳನ್ನೂ ಕ್ಯಾನ್‌ವಾಸ್‌ ಅನ್ನೂ ಸಿದ್ಧಮಾಡಿಟ್ಟುಕೊಳ್ಳುತ್ತಿದ್ದರು. ಇತ್ತಲಿನ ಮೂಲೆಯಲ್ಲಿ ಅವರು ಚಿತ್ರ ಬರೆಯುತ್ತಿದ್ದಂತೆಯೇ ಅತ್ತಲಿಂದ ಬಣ್ಣಗಳನ್ನು ಚೆಲ್ಲುತ್ತಾ ಚಿತ್ರಗಳನ್ನು ಹಾಳುಮಾಡುತ್ತಿದ್ದ ಪುಟಾಣಿ ಶ್ರವಣ್‌. ಆದರೆ ಮಗನ ಮೇಲೆ ಎಂದೂ ಸಿಟ್ಟುಮಾಡಿಕೊಳ್ಳದ ಉರ್ಮಿಳಾದೇವಿ, ಚೆಲ್ಲಿದ ಬಣ್ಣಗಳನ್ನುತನ್ನ ಕಲ್ಪನೆಯಲ್ಲಿ ಮತ್ತಷ್ಟು ಸುಂದರವಾಗಿ ಅರಳಿಸುತ್ತ ಕಲಾಕೃತಿಯೊಂದನ್ನು ಸಿದ್ಧಪಡಿಸಿಯೇ ಬಿಡುತ್ತಿದ್ದರು ಮತ್ತು ಹೇಳುತ್ತಿದ್ದರು: ‘ನೋಡು..ನೀನು ಬಣ್ಣ ಚೆಲ್ಲಿದ್ದಕ್ಕೇ ಈ ಕಲಾಕೃತಿ ಇಷ್ಟು ಚಂದವಾಯಿತು!’ ಅದಕ್ಕೆ ರಾಜ್ಯ ಪುರಸ್ಕಾರ ಬಂದದ್ದೂ ಹೌದುಬಿಡಿ..ಎನ್ನುವ ಶ್ರವಣ್‌ಗೆ ಬಾಲ್ಯವೆಂದರೆ ಅಮ್ಮನೊಡನೆ ಬಣ್ಣಗಳ ಜೊತೆಗೆ ಆಟವಾಡಿದ ದಟ್ಟ ನೆನಪುಗಳು. ಈಗ ಮಗಳು ಉಜಾಲಾ ಕುಮಾರಿ ಮತ್ತು ಅಳಿಯ ಸಂತೋಷ್‌ ಕುಮಾರ್‌ ಪಾಸ್ವಾನ್‌ ಕೂಡ ಗೋದ್ನಾ ಕಲೆಯನ್ನು ಕಲಿತು, ದೇಶಾದ್ಯಂತ ಕಲಾಪ್ರದರ್ಶನಗಳನ್ನು ನೀಡುತ್ತ ಶ್ರವಣ್‌ ಅವರಿಗೆ ಸಾಥ್‌ ನೀಡುತ್ತಿದ್ದಾರೆ.

ಮಂಗಳೂರಿನ ಕೊಡಿಯಾಲ್‌ ಗುತ್ತು ಮನೆಯಲ್ಲಿ ಏಪ್ರಿಲ್‌ 25 ಮತ್ತು 26ರಂದು ನಡೆದ ಮಧುಬನಿ ಕಾರ್ಯಾಗಾರದಲ್ಲಿ ಕಲಾವಿದರಾದ ಶ್ರವಣ್‌ ಪಾಸ್ವಾನ್‌ ಸಂತೋಷ್‌ ಕುಮಾರ್‌ ಪಾಸ್ವಾನ್‌ ಮತ್ತು ಉಜಾಲಾ ಕುಮಾರಿ - ಪ್ರಜಾವಾಣಿ ಚಿತ್ರ / ಫಕ್ರದ್ದೀನ್ ಎಚ್
ಮಂಗಳೂರಿನ ಕೊಡಿಯಾಲ್‌ ಗುತ್ತು ಮನೆಯಲ್ಲಿ ಏಪ್ರಿಲ್‌ 25 ಮತ್ತು 26ರಂದು ನಡೆದ ಮಧುಬನಿ ಕಾರ್ಯಾಗಾರದಲ್ಲಿ ಕಲಾವಿದರಾದ ಶ್ರವಣ್‌ ಪಾಸ್ವಾನ್‌ ಸಂತೋಷ್‌ ಕುಮಾರ್‌ ಪಾಸ್ವಾನ್‌ ಮತ್ತು ಉಜಾಲಾ ಕುಮಾರಿ - ಪ್ರಜಾವಾಣಿ ಚಿತ್ರ / ಫಕ್ರದ್ದೀನ್ ಎಚ್
ಸಂತೋಷ್‌ ಪಾಸ್ವಾನ್‌ ಮತ್ತು ಉಜಾಲಾ ಕುಮಾರಿ ಜೊತೆ ಶ್ರವಣ್‌ ಪಾಸ್ವಾನ್ - ಪ್ರಜಾವಾಣಿ ಚಿತ್ರ / ಫಕ್ರದ್ದೀನ್ ಎಚ್
ಸಂತೋಷ್‌ ಪಾಸ್ವಾನ್‌ ಮತ್ತು ಉಜಾಲಾ ಕುಮಾರಿ ಜೊತೆ ಶ್ರವಣ್‌ ಪಾಸ್ವಾನ್ - ಪ್ರಜಾವಾಣಿ ಚಿತ್ರ / ಫಕ್ರದ್ದೀನ್ ಎಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT