ಅದು ಎಂಬತ್ತು ಅಡಿ ಆಳದವರೆಗೆ ಹರಡಿಕೊಂಡಿರುವ ಗುಹಾಂತರ ಗುಡಿ. ಪ್ರಾಗೈತಿಹಾಸಿಕ ಕಾಲದಿಂದ ನವಶಿಲಾಯುಗ, ಶಾತವಾಹನ, ಕದಂಬ, ರಾಷ್ಟ್ರಕೂಟ, ಚಾಲುಕ್ಯ ಹಾಗೂ ವಿಜಯನಗರ, ನಾಯಕ ಅರಸರ ಕಾಲದವರೆಗೂ ಮಾನವ ವಿಕಾಸದ ಹಾದಿಗೆ ಸಾಕ್ಷಿಯಾಗಿರುವ ಅಮೂಲ್ಯ ಸ್ಮಾರಕ. ಇದನ್ನು ದೀಪದ ಬೆಳಕಿನಲ್ಲಿ ವೀಕ್ಷಿಸಬೇಕು ಎಂಬುದು ಶಿಲ್ಪಕಲೆ ಅಧ್ಯಯನಕಾರ ಎಂ. ದ್ವಾರಕೀಶ್ ಅವರ ಮಾತು.

ಚಿತ್ರದುರ್ಗದ ಚಂದ್ರವಳ್ಳಿ ತೋಟದಲ್ಲಿರುವ ‘ಅಂಕಲಿ ಗುರುಪೀಠ’ದ ಮುಂದೆ ನಿಂತಾಗ ಆ ಮಾತು ಮತ್ತೆ ನೆನಪಾಯಿತು. ಸುತ್ತಲಿನ ಕಲ್ಲುಬಂಡೆಗಳು ಮತ್ತು ಹಳೆಯ ಭೂದೃಶ್ಯವೇ ಒಂದು ಪುರಾತನ ಕಥೆಯನ್ನು ಹೇಳುತ್ತಿದ್ದಂತೆ ಭಾಸವಾಯಿತು. ನಮ್ಮ ತಂಡದವರ ಮುಂದೆ ಆ ಮಾತನ್ನು ಹಂಚಿಕೊಂಡಾಗ, ‘ದೀಪ ಎಲ್ಲಿಂದ ತರೋದು? ಎಣ್ಣೆ ಬೇಕಲ್ಲವೇ? ಗುಹೆಯೊಳಗೆ ಹೊಗೆ ತುಂಬಿದರೆ?’ ಎಂಬ ಪ್ರಶ್ನೆಗಳ ಮಳೆಯೇ ಸುರಿಯಿತು. ಚರ್ಚೆಯ ನಂತರ ‘ಮೇಣದಬತ್ತಿ ಬೆಳಕಿನಲ್ಲಿ ನೋಡೋಣ’ ಎಂಬ ತೀರ್ಮಾನಕ್ಕೆ ಎಲ್ಲರೂ ಒಪ್ಪಿಕೊಂಡೆವು.

ಹೀಗೆ ಮೇಣದಬತ್ತಿ ಬೆಳಕಿನಲ್ಲಿ ಗುಹಾಂತರ ಅಂಕಲಿ ಗುರುಪೀಠದ ದರ್ಶನ ಆರಂಭವಾಯಿತು. ಸ್ಥಳದಲ್ಲಿದ್ದ ಪ್ರವಾಸಿ ಮಾರ್ಗದರ್ಶಿ ಎಸ್. ಬಸವರಾಜು ಅವರಿಗೆ ಇದು ಅಪರೂಪದ ಅನುಭವವಾಗಿತ್ತು. ಅವರ ಕೈಯಲ್ಲಿದ್ದ ಟಾರ್ಚ್ ಆರಿಸಿ, ಅವರು ಸಹ ಗೌರವದಿಂದ ಮೇಣದಬತ್ತಿಯನ್ನು ಹಿಡಿದರು. ಆ ಬೆಳಕಿನ ಕಂಪನವೇ ನಮ್ಮ ಮನಸ್ಸಿನಲ್ಲಿ ಉತ್ಸಾಹ ಮೂಡಿಸಿತು.

ಗುಹೆ ಪ್ರವೇಶಿಸುವ ಮೊದಲು ಪಕ್ಕದಲ್ಲಿದ್ದ, ಪಂಚಪಾಂಡವರು ಸ್ಥಾಪಿಸಿದ್ದಾರೆ ಎನ್ನಲಾದ ಪಂಚಲಿಂಗೇಶ್ವರ ದೇವಾಲಯದಲ್ಲಿ ದರ್ಶನ ಮಾಡಿದೆವು. ಆ ದೇವಾಲಯದ ಮೌನವೇ ಒಂದು ತಪಸ್ಸಿನಂತೆ ಅನಿಸಿತು. ನಂತರ ನಂದಿ ಬಾಗಿಲ ಮೂಲಕ ಗುಹೆ ಪ್ರವೇಶ. ಬಾಗಿಲ ಮೇಲಿನ ನಂದಿ ಶಿಲ್ಪದ ದೃಷ್ಟಿಯೇ ನಮ್ಮನ್ನು ಒಳಗೆ ಎಳೆದಂತೆ ತೋರಿತು. ಮೊದಲಿಗೆ ಐದು ಮೆಟ್ಟಿಲು ಇಳಿದು, ನಂತರ ಏಳು ಮೆಟ್ಟಿಲು. ‘ಏಳು-ಬೀಳು’ ಎಂಬಂತೆ ಶತ್ರುಗಳು ಕತ್ತಲಲ್ಲಿ ಪ್ರವೇಶಿಸಿದರೆ ತಕ್ಷಣ ಅಡ್ಡಿಪಡಿಸುವ ರಚನೆ ಇದಾಗಿರಬಹುದು ಎಂಬ ವಿವರಣೆ ದೊರಕಿತು. ಆ ಮೆಟ್ಟಿಲುಗಳ ಪ್ರತಿಯೊಂದು ಹೆಜ್ಜೆಯೂ ಕಾಲವನ್ನು ಹಿಂದಕ್ಕೆ ಕರೆದೊಯ್ಯುತ್ತಿದ್ದಂತೆ ಅನಿಸಿತು.

ಮಧ್ಯಾಹ್ನದ ಬಿರುಬಿಸಿಲಿನಿಂದ ಒಳಗೆ ಪ್ರವೇಶಿಸಿದ ಕ್ಷಣದಲ್ಲಿ ತಂಪಾದ ಗಾಳಿ ನಮ್ಮನ್ನು ಸ್ವಾಗತಿಸಿತು. ಗಾಳಿಯ ಹರಿವು ಇಲ್ಲದಿದ್ದರೂ ಒಳಗಿನ ತಂಪು ಎಲ್ಲರಿಗೂ ಅಚ್ಚರಿಯಾಯಿತು. ಕೆಲ ಕ್ಷಣ ನಾವು ಮಾತೇ ಇಲ್ಲದೆ ನಿಂತಿದ್ದೆವು. ಸುಣ್ಣ, ಗಾರೆ, ಬೆಲ್ಲ ಮತ್ತು ವನಸ್ಪತಿಗಳ ಮಿಶ್ರಣದಿಂದ ನಿರ್ಮಿತ ಗೋಡೆಗಳೇ ಈ ತಂಪಿಗೆ ಕಾರಣವೆಂಬ ಮಾಹಿತಿ ತಿಳಿದುಬಂತು. ಆ ಕ್ಷಣದಲ್ಲಿ ಪ್ರಕೃತಿಯೂ ಮಾನವ ಕೌಶಲ್ಯವೂ ಒಂದಾಗಿ ಕೆಲಸ ಮಾಡಿದಂತೆ ಭಾಸವಾಯಿತು.

ಮೆಟ್ಟಿಲುಗಳ ಎರಡೂ ಬದಿಗಳಲ್ಲಿದ್ದ ದೀಪದ ಗೂಡುಗಳು ಹಳೆಯ ಕಾಲದ ಬೀದಿ ದೀಪಗಳ ಸಾಲನ್ನು ನೆನಪಿಸಿದವು. ಗೋಡೆಗಳ ಮೇಲೆ ಮೂಡಿದ್ದ ನೆರಳುಗಳು ಚಲಿಸುತ್ತಿದ್ದಂತೆ ಕಾಣುತ್ತಿದ್ದವು. ಆ ಕ್ಷಣದಲ್ಲಿ ಟಾರ್ಚ್ ಬೆಳಕು ಅನಗತ್ಯವೆನಿಸಿತು. ಮೇಣದಬತ್ತಿಯ ಬೆಳಕೇ ಸಾಕು ಎಂಬ ಭಾವ ಮೂಡಿತು. ಶತಮಾನಗಳ ಹಿಂದಿನ ವಾತಾವರಣದಲ್ಲಿ ನಾವು ಕಾಲಿಡುತ್ತಿರುವ ಅನುಭವವಾಗಿತ್ತು.

ಮೆಟ್ಟಿಲುಗಳ ಇಳಿಜಾರಿನಲ್ಲಿ ಕಾವಲುಗಾರನ ಪೀಠ ಕಂಡಿತು. ಹೊರಗಿನ ಬೆಳಕಿನಿಂದ ಒಳಗಿನವರನ್ನು ಗುರುತಿಸುವ ರೀತಿಯಲ್ಲಿ ಕತ್ತಲಲ್ಲಿ ನಿರ್ಮಿತವಾದ ರಚನೆ ಅದು. ಶತ್ರುಗಳನ್ನು ದಾರಿ ತಪ್ಪಿಸುವ ಉದ್ದೇಶವೂ ಇದಕ್ಕಿದ್ದಿರಬಹುದು ಎಂಬ ಕಲ್ಪನೆ ಮನಸ್ಸಿನಲ್ಲಿ ಮೂಡಿತು.

ಮುಂದೆ ಗಣೇಶ ಬಾಗಿಲು ಕಾಣಿಸಿತು. ಮೇಲ್ಭಾಗದಲ್ಲಿ ಗಣಪತಿ ಶಿಲ್ಪ, ಎರಡೂ ಕಡೆ ಪೂರ್ಣಕುಂಭಗಳು. ಬಾಗಿಲ ಪಕ್ಕದ ಕಲ್ಲಿನ ಆನೆಗಳು ಜೀವಂತವಾಗಿಯೇ ನಿಂತಿರುವಂತೆ ತೋಚಿದವು. ಆ ಆನೆಗಳನ್ನು ಸ್ಪರ್ಶಿಸುತ್ತಾ ಇಳಿದಾಗ ‘ಸಿಂಹಾಸನ ಪೀಠ’ ಕಣ್ಮುಂದೆ ಬಂತು. ಅದರ ಪಕ್ಕದಲ್ಲಿದ್ದ ಟೀಪಾಯ್ ರೀತಿಯ ಶಿಲ್ಪವೂ ಗಮನ ಸೆಳೆಯಿತು.

ಸ್ವಲ್ಪ ದೂರದಲ್ಲಿ ಬೃಹತ್ ಶಿವಲಿಂಗ ಕಂಡು ಎಲ್ಲರಲ್ಲೂ ಭಾವನಾತ್ಮಕ ರೋಮಾಂಚನ ಉಂಟಾಯಿತು. ಮೇಣದಬತ್ತಿಯ ಬೆಳಕಿನಲ್ಲಿ ಶಿವನಿಗೆ ದೀಪಾರಾಧನೆ ಮಾಡುತ್ತಿರುವಂತೆ ಅನುಭವವಾಯಿತು. ಮಯೂರವರ್ಮನ ಕಾಲದಲ್ಲಿ ಇಲ್ಲಿ ಶಿವಲಿಂಗ ಸ್ಥಾಪನೆಯಾಗಿರಬಹುದೆಂಬ ಮಾಹಿತಿ ಮತ್ತಷ್ಟು ಆಶ್ಚರ್ಯ ತಂದಿತು. ಮೇಲಿನಿಂದ ಭಕ್ತರು ಹಾಕುವ ನಾಣ್ಯಗಳು ನೇರವಾಗಿ ಶಿವಲಿಂಗದ ಬಳಿ ಬೀಳುವ ವ್ಯವಸ್ಥೆಯೂ ಅದ್ಭುತವಾಗಿತ್ತು.

ಮುಂದಿನ ಅಂತಸ್ತಿನಲ್ಲಿ ಹಳೆಯ ಕಾಲದ ಎಂಜಿನಿಯರಿಂಗ್ ಕೌಶಲ್ಯಗಳು ಸ್ಪಷ್ಟವಾಗಿ ಗೋಚರಿಸಿದವು. ಸ್ನಾನಗೃಹಕ್ಕೆ ಜಲಸಂಪರ್ಕ ಕಲ್ಪಿಸಿರುವ ವ್ಯವಸ್ಥೆ, ಕಿರಿದಾದ ಕಾಲುವೆಗಳ ಮೂಲಕ ನೀರು ಹರಿಯುವ ವಿನ್ಯಾಸ–ಇವುಗಳು ಅಚ್ಚರಿಯೇ ಆಗಿದ್ದವು. ಕಲ್ಲಿನಿಂದಲೇ ನಿರ್ಮಿತ ಹಾಸಿಗೆಗಳು, ತಲೆದಿಂಬಿನ ವ್ಯವಸ್ಥೆ ಎಲ್ಲ ಜಾಗದ ಸದುಪಯೋಗದ ಪಾಠ ಹೇಳುತ್ತಿದ್ದವು. ಆ ಕಾಲದ ಬುದ್ಧಿವಂತಿಕೆ ನಮ್ಮನ್ನು ಚಕಿತಗೊಳಿಸಿತು.

ಸಿಂಹದ ಮುಖದ ಬಾಗಿಲು ಮತ್ತೊಂದು ರಹಸ್ಯವನ್ನು ತೆರೆದಿತು. ಬಾಣದ ಗುರುತುಗಳ ಬದಲು ಸಿಂಹದ ಮುಖದ ದಿಕ್ಕು ಮುಂದಿನ ಕೊಠಡಿಗೆ ದಾರಿ ತೋರಿಸುತ್ತಿತ್ತು. ಚಿತ್ರಕಲೆಗೇ ಮೀಸಲಾದ ಕೊಠಡಿಯ ಗೋಡೆಗಳ ಮೇಲೆ ಹಳೆಯ ಬಣ್ಣದ ಚಿತ್ರಗಳು ಇನ್ನೂ ಕಥೆ ಹೇಳುತ್ತಿದ್ದಂತೆ ಕಂಡವು. ಕೆಲವು ಚಿತ್ರಗಳು ಕಾಲದ ಹೊಡೆತದಿಂದ ಮಸುಕಾಗಿದ್ದರೂ, ಅವುಗಳ ಅರ್ಥ ಇನ್ನೂ ಜೀವಂತವಾಗಿದ್ದಂತೆ ತಿಳಿಯಿತು.

ಅಂತಿಮವಾಗಿ ತಲುಪಿದ ‘ಸೀಕ್ರೆಟ್ ಚೇಂಬರ್’ ಸಂಪೂರ್ಣ ಮೌನ ಮತ್ತು ಕತ್ತಲೆಯ ಲೋಕವಾಗಿತ್ತು. ಧ್ವನಿಯೇ ಇಲ್ಲದ ಆ ಕೊಠಡಿಯಲ್ಲಿ ಕ್ಷಣಕಾಲ ಭಯವೂ ಉಂಟಾಯಿತು. ನಮ್ಮ ಉಸಿರಿನ ಶಬ್ದ ಕೇಳಿಸುತ್ತಿತ್ತು. ಮೇಣದಬತ್ತಿ ಆರಿಸಿ ಮತ್ತೆ ಬೆಳಕು ಹಚ್ಚಿದಾಗ ಆ ಜಾಗವೇ ಬೇರೆ ಲೋಕದಂತೆ ಕಾಣಿಸಿತು.

ಅಂತಿಮವಾಗಿ ದೇವಾಲಯದ ಪ್ರಾಂಗಣ. ಗರ್ಭಗುಡಿಯಂತಿರುವ ಸ್ಥಳದಲ್ಲಿ ದೇವರ ಪ್ರತಿಮೆ ಇಲ್ಲದಿದ್ದರೂ ಹಂಸ ಮತ್ತು ನವಿಲಿನ ಶಿಲ್ಪಗಳು ಶಾರದಾ ಮತ್ತು ಸುಬ್ರಹ್ಮಣ್ಯ ದೇವಾಲಯಗಳ ಸೂಚನೆ ನೀಡುವಂತಿದ್ದವು. ಆ ಶಿಲ್ಪಗಳ ನಾಜೂಕು ಕೆಲಸವು ಶಿಲ್ಪಿಗಳ ಕೈಚಳಕವನ್ನು ಸಾರಿ ಹೇಳುತ್ತಿದ್ದವು.

ಈ ಗುಹೆ ಶಿಲಾಯುಗದ ವಾಸಸ್ಥಾನದಿಂದ ಆರಂಭಿಸಿ ರಾಜಮನೆತನಗಳ ಭದ್ರತಾ ತಾಣ, ನಂತರ ಧಾರ್ಮಿಕ ಕೇಂದ್ರ ಮತ್ತು ಗುರುಪೀಠವಾಗಿ ರೂಪಾಂತರಗೊಂಡಿರುವುದು ಇದರ ಇತಿಹಾಸದ ವೈಶಿಷ್ಟ್ಯ. ಪ್ರತಿಯೊಂದು ಕಲ್ಲೂ ಒಂದು ಕಾಲದ ಕಥೆಯನ್ನು ಹೊತ್ತಿರುವಂತೆ ಅನಿಸಿತು.

ಒಂದೂವರೆ ಗಂಟೆಗೂ ಹೆಚ್ಚು ಮೇಣದಬತ್ತಿ ಬೆಳಕಿನಲ್ಲಿ ನಡೆದ ಈ ಅನುಭವ ಕಾಲಯಾನದಂತಿತ್ತು. ಹೊರಬಂದಾಗ ಸೂರ್ಯನ ಬೆಳಕು ಕಣ್ಣುಗಳನ್ನು ಚುಚ್ಚಿದರೂ, ಮನಸ್ಸಿನಲ್ಲಿ ಉಳಿದದ್ದು ಒಂದು ಅಜ್ಞಾತ ಲೋಕದಿಂದ ಮರಳಿ ಬಂದ ಅನುಭವ–ಆ ಕ್ಷಣ ಇನ್ನೂ ಸ್ವಲ್ಪ ಹೊತ್ತು ಅಲ್ಲೇ ನಿಲ್ಲಬೇಕೆನಿಸುವಷ್ಟು ಗಾಢವಾಗಿತ್ತು.

ಮೂಲ ಹುಡುಕುತ್ತಾ...

ಅಂಕಲಿ ಗುರುಪೀಠದ ಮೂಲ ನವಶಿಲಾಯುಗದವರೆಗೆ ಹಿಂತಿರುಗುತ್ತದೆ. ಚಂದ್ರವಳ್ಳಿ ಪ್ರದೇಶವು ಪ್ರಾಚೀನ ಮಾನವ ವಸತಿಯ ಪ್ರಮುಖ ಕೇಂದ್ರವಾಗಿತ್ತು. ಶಾತವಾಹನರು ಇಲ್ಲಿ ಸೀಸದ ಲೋಹ ಠಂಕಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಚಾಲುಕ್ಯರು ಗುಹಾಂತರ ದೇವಾಲಯಗಳನ್ನು ನಿರ್ಮಿಸಿರುವ ಸಾಧ್ಯತೆಗಳಿವೆ.

ಕೆಲ ಕಾಲದಲ್ಲಿ ಈ ಗುಹೆ ಬಂಕರ್ ರೀತಿಯ ಭದ್ರತಾ ತಾಣವಾಗಿಯೂ ಬಳಸಲ್ಪಟ್ಟಿತ್ತು. ನಂತರ ನಾಯಕ ಅರಸರ ಕಾಲದಲ್ಲಿ ಇದು ವಿದ್ಯಾಕೇಂದ್ರ ಮತ್ತು ದಾಸೋಹ ಭವನವಾಗಿ ಅಭಿವೃದ್ಧಿಯಾಯಿತು.

ಚಂದ್ರವಳ್ಳಿಯಲ್ಲಿ ರೋಮನ್ ನಾಣ್ಯಗಳು ಪತ್ತೆಯಾಗಿರುವುದು ಈ ಪ್ರದೇಶವು ಅಂತರರಾಷ್ಟ್ರೀಯ ವ್ಯಾಪಾರ ಸಂಪರ್ಕ ಹೊಂದಿದ್ದುದನ್ನು ಸೂಚಿಸುತ್ತದೆ. 1901ರಲ್ಲಿ ಆರ್. ನರಸಿಂಹಾಚಾರ್ ಅವರು ಹಾಗೂ ನಂತರ ಎಂ.ಎಚ್. ಕೃಷ್ಣ ಅವರ ನೇತೃತ್ವದಲ್ಲಿ ನಡೆದ ಉತ್ಖನನಗಳು ಇದರ ಪ್ರಾಚೀನತೆಯನ್ನು ದೃಢಪಡಿಸಿವೆ.

ಪ್ರಸ್ತುತ ಚಂದ್ರವಳ್ಳಿ ನಿರ್ವಹಣೆ ಮುರುಘಾ ಮಠದ ಕೈಯಲ್ಲಿದೆ. ಆದರೆ ಇದು ಇನ್ನೂ ಪೂರ್ಣ ಪ್ರಮಾಣದಲ್ಲಿ ಪುರಾತತ್ವ ಸಂರಕ್ಷಿತ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಿಲ್ಲ ಎಂಬುದು ಸಂಶೋಧಕರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.