ಅಕ್ಕಿಯೊಳನ್ನವನು ಮೊದಲಾರು ಕಂಡವನು?
ಅಕ್ಕರದ ಬರಹಕ್ಕೆ ಮೊದಲಿಗನದಾರು?...

ಹೌದು, ಇಲ್ಲಿನ ಅಕ್ಕರೆಯ ಅಕ್ಷರಗಳ ಬರಹಕ್ಕೆ ಮೊದಲಿಗನದಾರು? ಇಲ್ಲಿನ ಅಕ್ಷರ ನಾಟ್ಯೋತ್ಸವವನ್ನು ಅಥವಾ ಆಯೋಜಕರ ಮಾತಿನಂತೆ ‘ಅಕ್ಷರ ಸಿಂಗಾರೋತ್ಸವ’ವನ್ನು ಕಂಡೊಡನೆ ಮನಸ್ಸಿನೊಳಗೇಳುವ ಕಗ್ಗದ ಪ್ರಶ್ನೆಯಿದು. ಚಿತ್ರಕಲೆಗಳು, ಕಲಾಕೃತಿಗಳ ಪ್ರದರ್ಶನಗಳ ಸಾಲಿನಲ್ಲಿ ವಿಭಿನ್ನವಾಗಿ ನಿಲ್ಲುವ ಈ ಅಕ್ಷರ ಸಿಂಗಾರೋತ್ಸವದ ವೇದಿಕೆ ಏರಿದರೆ ಅಲ್ಲಿ ಹಲವು ಚಿಂತನೆಗಳು, ಆಲೋಚನೆಗಳು. ಎಲ್ಲಕ್ಕೂ ಕನ್ನಡಕ್ಕೆ ಕನ್ನಡಿ ಹಿಡಿಯುವ ಕಾತರ! ಅವುಗಳನ್ನು ನೋಡುತ್ತಿದ್ದರೆ ಒಂಥರಾ ಅಕ್ಷರಗಳು ಖುಷಿಯಿಂದ ಕುಣಿವಂತೆ ಭಾಸ. ಅವುಗಳ ನಾಚಿಕೆ, ವೈಯಾರಕ್ಕೆ ಕೊನೆಯುಂಟೇ? ಈ ಕ್ಯಾಲಿಗ್ರಫಿ ಕಲಾಪ್ರದರ್ಶನದಲ್ಲಿ ಮುತ್ತುಗಳು ಪೋಣಿಸಿದಂತೆ ಭಾಸವಾಗುವ ಅಕ್ಷರಗಳಿಗೆ ಚೌಕಟ್ಟು ನೀಡಿ, ಜೀವ ತುಂಬಿ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ ಐವರು ಲಿಪಿಕಾರರು.

ಇಲ್ಲಿ ಕನ್ನಡ ಅಕ್ಷರ ಮಾಲೆಯೇ ಕಲಾಕೃತಿಯ ರೂಪ ತಾಳಿದೆ. ವಚನಗಳು, ಕಗ್ಗಗಳು ಹೊಸ ರೂಪದಲ್ಲಿ ಕಣ್ಣೆದುರಿಗೆ ಬಂದು ನಿಲ್ಲುತ್ತವೆ. ಅವುಗಳಿಗಿಲ್ಲಿ ಹಲವು ಬಣ್ಣ, ಹಲವು ವರ್ಣ. ಕವಿ ಸಿದ್ಧಲಿಂಗಯ್ಯ ಅವರ ‘ಹಸಿವಿನಿಂದ ಸತ್ತೋರು...’ ಇಲ್ಲಿ ಅಕ್ಷರ ರೂಪದಲ್ಲಿ ಕಪ್ಪು, ಕೆಂಪಿನ ಹೊದಿಕೆ ಹೊತ್ತು ನಿಂತಾಗ ಅದರ ವೇಗ ಹಿರಿದು. ಕುವೆಂಪು ಅವರ ‘ಉಳುವ ಯೋಗಿ..’ಗೂ ಅಕ್ಷರ ಚೌಕಟ್ಟಿನೊಳಗೆ ಜಾಗವಿದೆ. ಧುಮುಕಿ ಮರೆಯಾಗುವ ವರ್ಣಮಾಲೆಯೂ ರಹಸ್ಯ ಹೊತ್ತು ಸಾಗಿದೆ. ನೀಲಿ ತಂತುಗಳಲ್ಲೂ ಕನ್ನಡದ ಘಮ.

ಈ ವಿಭಿನ್ನ ಪ್ರದರ್ಶನದ ಕಲ್ಪನೆ ಎರಡು ವರ್ಷಗಳ ಹಿಂದೆಯೇ ಈ ಲಿಪಿಕಾರರಲ್ಲೊಬ್ಬರಾದ ಸುರೇಶ್ ಎಸ್. ವಾಘ್ಮೋರೆ ಅವರ ಮನಸ್ಸಿನಲ್ಲಿ ಮೊಳಕೆಯೊಡೆದಿತ್ತು. ಅದನ್ನು ಕಾಪಿಟ್ಟುಕೊಂಡು ಗಿಡವಾಗಿ ನೆಟ್ಟು ಮೂವತ್ತು ದಿನ ನೀರೆರೆದು ಹೆಮ್ಮರವಾಗಿ ಬೆಳೆಸುವ ಕನಸು ಅವರದ್ದು. ‘ನಾವೆಲ್ಲರೂ ವೃತ್ತಿನಿರತರು. ಎರಡು ವರ್ಷಗಳ ಹಿಂದೆಯೇ ಈ ಪ್ರದರ್ಶನ ನಡೆಯಬೇಕಿತ್ತು. ಕಾರಣಾಂತರಗಳಿಂದ ಮುಂದೂಡುತ್ತಾ ಬಂದೆವು. ಈ ಬಾರಿ ಐವರು ಸೇರಿ ಇದನ್ನು ಆಯೋಜಿಸಿದ್ದೇವೆ. 2019ರಲ್ಲಿ ಸಿಂಗಪುರಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿ ಭಾರತೀಯ ಭಾಷೆಗಳ ಪ್ರದರ್ಶನ ನಡೆದಿತ್ತು. ನಾನು ಕನ್ನಡ ಭಾಷೆಯ ಕ್ಯಾಲಿಗ್ರಫಿ ಪ್ರದರ್ಶನವನ್ನು ಅಲ್ಲಿ ನೀಡಿದ್ದೆ. ಕಗ್ಗವನ್ನು ನಾನು ಅಲ್ಲಿ ಪ್ರದರ್ಶಿಸಿದ್ದೆ. ಅಲ್ಲಿ ಹಲವು ಅಂತರರಾಷ್ಟ್ರೀಯ ಲಿಪಿಕಾರರ ಸಂಪರ್ಕ ದೊರೆತಿತ್ತು. ಕ್ಯಾಲಿಗ್ರಫಿ ಎನ್ನುವುದು ಬರವಣಿಗೆಗಷ್ಟೇ ಸೀಮಿತವಾಗಿರದೆ, ಅದರಲ್ಲಿ ಕಲೆಗಳನ್ನು ಅವರು ಸೃಷ್ಟಿಸಿದ್ದರು. ಇದರ ಸ್ಫೂರ್ತಿಯೇ ಈ ಪ್ರದರ್ಶನ ಆಯೋಜನೆಗೆ ಕಾರಣ’ ಎನ್ನುತ್ತಾರೆ ಸುರೇಶ್.

‘ಅಕ್ಷರಗಳಿಗೆ ಚಿತ್ರಕಲೆಯ ರೂಪ ನೀಡಿ, ಬಣ್ಣ ತುಂಬಿ ಪ್ರಸ್ತುತಪಡಿಸಿದರೆ ಅದಕ್ಕೊಂದು ಬೇರೆಯದೇ ಶಕ್ತಿ ಬರುತ್ತದೆ. ಅವುಗಳ ಶಕ್ತಿ, ಭಾವನೆಗಳು ಭಿನ್ನವಾಗಿಯೇ ಇರುತ್ತವೆ. ಖಾಲಿ ಹಾಳೆಯ ಮೇಲಿನ ಅಕ್ಷರಗಳಿಗಿಂತ ಚಿತ್ರಕಲೆಯಲ್ಲಿ ಮೂಡಿಬಂದ ಕಗ್ಗಗಳನ್ನು, ಇತರೆ ನುಡಿಮುತ್ತುಗಳನ್ನು ಓದುವುದೇ ಚೆಂದ. ನಮ್ಮ ಪ್ರಯತ್ನವೂ ಇದೇ. ದಕ್ಷಿಣ ಭಾರತದಲ್ಲಿ ಇಂತಹ ಪ್ರಯತ್ನ ವಿರಳ. ಜನರಿಗೆ ಇದು ಇಷ್ಟವಾಗಿದೆ. ಮಂಕುತಿಮ್ಮನ ಕಗ್ಗಗಳು ನನ್ನ ಹಲವು ಕಲೆಗಳಲ್ಲಿ ಇವೆ. ಅವುಗಳು ಹೇಳುವ ನೀತಿ ಪಾಠ ಹಲವು. ‘ಹುಲ್ಲಾಗು ಬೆಟ್ಟದಡಿ..’ ಎಂಬ ಕಗ್ಗವನ್ನು ಗಮನಿಸಿದರೆ ಅದರೊಳಗಿರುವ ಅರ್ಥಗಳು ಹಲವು. ಇವುಗಳು ನಮ್ಮನ್ನು ಹೆಚ್ಚು ಸೆಳೆದವು. ಇವುಗಳು ಖಾಲಿ ಹಾಳೆಗಳಿಗಿಂತ ಬಣ್ಣದೋಕುಳಿಯೊಳಗೆ ಮತ್ತಷ್ಟು ಶಕ್ತಿ ಪಡೆಯುತ್ತವೆ. ಕ್ಯಾಲಿಗ್ರಫಿಯಲ್ಲಿ ಲಿಪಿಕಾರರಿಗೆ ಅವರದ್ದೇ ಆದ ಶೈಲಿಗಳಿವೆ. ಯಾವ ಅಕ್ಷರಗಳಲ್ಲಿ ಒಂದು ಚಾಲಕಶಕ್ತಿ ಇರುತ್ತದೋ ಅವುಗಳು ಅಷ್ಟೇ ಅಂದವಾಗಿ, ಪ್ರಭಾವ ಬೀರುವ ವಸ್ತುವಾಗುತ್ತದೆ. ನಮ್ಮ ಉದ್ದೇಶ ಒಂದು ವಾರ ಪ್ರದರ್ಶನ ಇಡುವುದಾಗಿತ್ತು. ಕನ್ನಡಕ್ಕಾಗಿ ಈ ಪ್ರದರ್ಶನ ಎಂಬ ಕಾರಣಕ್ಕಾಗಿ ಒಂದು ತಿಂಗಳು ಉಚಿತವಾಗಿ ಈ ಸ್ಥಳವನ್ನು ನೀಡಿದ್ದಾರೆ’ ಎಂದು ಅವರು ವಿವರ ಬಿಚ್ಚಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.