ನದಿ ದಂಡೆಯ ನೀರಿನಲ್ಲಿ ತೇಲುತ್ತಿರುವ ಮರದಿಂದ ಉದುರಿದ ಎಲೆ. ಹರಿದುಬಂದ ಮರದ ದಿಮ್ಮಿಯ ಮೇಲೆ ಹಸಿರಾಗಿ ಹಬ್ಬಿಕೊಂಡಿರುವ ಪಾಚಿ. ತೇವದ ಮಣ್ಣಿನ ನಡುವೆ ತಲೆ ಎತ್ತಿ ನಿಂತಿರುವ ಅಣಬೆಗಳು. ನೀರಂಚಿನಲ್ಲಿ ಬಲೆ ನೇಯುತ್ತಾ ಆಹಾರಕ್ಕಾಗಿ ಕಾದಿರುವ ಜೇಡ. ದಡದ ನೆರಳಲ್ಲಿ ನಿಧಾನವಾಗಿ ಸಾಗುತ್ತಿರುವ ಬಸವನಹುಳು…

ಜಿ.ಎಸ್.ಭವಾನಿ ಅವರ ವರ್ಣಚಿತ್ರಗಳನ್ನು ಒಂದೊಂದಾಗಿ ನೋಡುತ್ತಾ ಹೋದರೆ, ನಾವು ಕಾವೇರಿ ನದಿಯ ದಂಡೆಯಲ್ಲೇ ನಿಂತಿರುವ ಅನುಭವವಾಗುತ್ತದೆ. ಅವರ ಚಿತ್ರಗಳಲ್ಲಿ ಕೇವಲ ನದಿ ಮಾತ್ರವಿಲ್ಲ; ಅದರ ಸುತ್ತ ಬದುಕುವ ಜೀವಜಗತ್ತು, ಅದರ ಉಸಿರು, ಅದರ ಮೌನ, ಅದರ ನೋವು ಎಲ್ಲವೂ ಬೆರೆತಿವೆ.

ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಿಂದ ಹಿಡಿದು, ಸಮುದ್ರ ಸೇರುವ ತಮಿಳುನಾಡಿನ ಪಂಪೂಹಾರ್ವರೆಗೆ ಕಾವೇರಿಯೊಂದಿಗೆ ಸಂಚರಿಸಿ ಭವಾನಿ ಈ ಚಿತ್ರಗಳನ್ನು ರಚಿಸಿದ್ದಾರೆ. ನದಿಯ ಪಯಣವನ್ನು ಕೇವಲ ದೃಶ್ಯವಾಗಿ ಅಲ್ಲ, ಭಾವವಾಗಿ ಹಿಡಿದಿಟ್ಟಿರುವುದು ಅವರ ಚಿತ್ರಗಳ ವಿಶೇಷ.

ಅವರು ಹೆಚ್ಚಾಗಿ ನದಿ ದಂಡೆಯಲ್ಲೇ ಕುಳಿತು ಚಿತ್ರ ಬಿಡಿಸಲಿಲ್ಲ. ಅನೇಕ ಕಡೆಗಳಲ್ಲಿ ಅದು ಸಾಧ್ಯವೂ ಇರಲಿಲ್ಲ. ಹೀಗಾಗಿ, ನದಿಯ ಹರಿವು, ದಡದ ಜೀವಜಗತ್ತು, ಬೆಳಕು–ನೆರಳಿನ ಆಟ, ನೀರಿನ ಬಣ್ಣದ ಬದಲಾವಣೆ–ಇವೆಲ್ಲವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದರು. ಹಲವೆಡೆ ಗಂಟೆಗಟ್ಟಲೆ ಮೌನವಾಗಿ ಕುಳಿತು ನದಿಯನ್ನೇ ಧ್ಯಾನಿಸಿದ ಬಳಿಕ, ತಮ್ಮ ಪಯಣ ಮುಗಿದ ಮೇಲೆ ಚಿತ್ರಗಳನ್ನು ಬಿಡಿಸಲು ಆರಂಭಿಸಿದರು.

ಅವರ ಒಂದು ಚಿತ್ರದಲ್ಲಿ ತಲಕಾವೇರಿಯ ಮೂಲದಿಂದ ಆರಂಭವಾಗಿ ಲಕ್ಷ್ಮಣತೀರ್ಥ, ಹಾರಂಗಿ ಸೇರಿದಂತೆ ಹದಿನಾಲ್ಕು ಉಪನದಿಗಳನ್ನು ತನ್ನೊಳಗೆ ಸೇರಿಸಿಕೊಂಡು ಸಾಗುವ ಕಾವೇರಿ ಕೊನೆಯಲ್ಲಿ ಸಮುದ್ರ ಸೇರುವ ದೃಶ್ಯ ಮೂಡಿದೆ. ಒಂದೇ ಚಿತ್ರದಲ್ಲಿ ನದಿಯ ಸಂಪೂರ್ಣ ಕಥಾನಕವನ್ನು ಹಿಡಿದಿಟ್ಟಿರುವ ಈ ಕೃತಿ ವಿಶೇಷವಾಗಿ ಗಮನ ಸೆಳೆಯುತ್ತದೆ.

ಇನ್ನೂ ಕೆಲವು ಚಿತ್ರಗಳಲ್ಲಿ ನದಿ ದಂಡೆಯ ಸೂಕ್ಷ್ಮ ಜಗತ್ತು ಕಾಣಿಸುತ್ತದೆ. ಮರಗಳಿಂದ ಉದುರಿದ ಎಲೆಗಳು, ನೀರಿನಲ್ಲಿ ಮಿನುಗುವ ಮೀನುಗಳು, ಕಾಡಿನ ಅಪರೂಪದ ಹೂಗಳು, ಹಕ್ಕಿಗಳು–ಹೀಗೆ ಕಾವೇರಿಯ ಸುತ್ತಲಿನ ಅನೇಕ ಜೀವಿಗಳು ಚಿತ್ರಗಳಲ್ಲಿ ಜೀವಂತವಾಗುತ್ತವೆ. ‘ಒಂದು ನದಿದಂಡೆಯಲ್ಲಿ ಇಷ್ಟೊಂದು ಜೀವಸಂಕುಲವಿದೆಯೇ?’ ಎಂಬ ಅಚ್ಚರಿ ಮೂಡಿಸದೇ ಇರುವುದಿಲ್ಲ.

ಒಂದು ಚಿತ್ರದಲ್ಲಿ ಮಹಿಳೆಯೊಬ್ಬರು ಸಮುದ್ರದತ್ತ ನಡೆದು ಹೋಗುತ್ತಿರುವ ದೃಶ್ಯವಿದೆ. ಅದರ ಪಕ್ಕದಲ್ಲೇ ಸಮುದ್ರ ಸೇರುತ್ತಿರುವ ಕಾವೇರಿ. ನದಿಯ ಪಯಣ ಮತ್ತು ಮಾನವ ಜೀವನದ ಪಯಣ ಒಂದೇ ಭಾವದಲ್ಲಿ ಬೆರೆತಂತೆ ಆ ಚಿತ್ರ ಕಾಡುತ್ತದೆ.

ಕಾವೇರಿಯೊಂದಿಗೆ ಆರಂಭವಾದ ಪಯಣ

ಕೊಡಗು ಜಿಲ್ಲೆ ಸೋಮವಾರಪೇಟೆಯ ಭವಾನಿ ಮೊದಲಿಗೆ ತಲಕಾವೇರಿಯಿಂದ ತಿ.ನರಸೀಪುರದವರೆಗೆ ಸುಮಾರು ಹತ್ತು ದಿನಗಳು ಕಾವೇರಿಯೊಂದಿಗೆ ಪ್ರಯಾಣಿಸಿದರು. ಎಲ್ಲಿ ಮನಸ್ಸಿಗೆ ಇಷ್ಟವಾಗುತ್ತಿತ್ತೋ ಅಲ್ಲಿ ತಂಗುತ್ತಿದ್ದರು. ಈ ಪಯಣದಲ್ಲಿ ಕಟ್ಟುನಿಟ್ಟಿನ ಯೋಜನೆಗಳಿಗಿಂತ ಅನುಭವಗಳೇ ಮುಖ್ಯವಾಗಿದ್ದವು.

ನಂತರ, ತಲಕಾವೇರಿಯಿಂದ ಪಂಪೂಹಾರ್ವರೆಗೆ ಕಾವೇರಿಯ ಸಂಪೂರ್ಣ ಪಯಣವನ್ನು ದಾಖಲಿಸುವ ದೊಡ್ಡ ಯೋಜನೆ ರೂಪುಗೊಂಡಿತು. ಚಾಲಕ ಮತ್ತು ಇಬ್ಬರು ಸ್ನೇಹಿತರೊಂದಿಗೆ ಈ ಸಂಚಾರ ಆರಂಭವಾಯಿತು. ಆಗಷ್ಟೇ ಮಳೆಗಾಲ ಮುಗಿದಿದ್ದರಿಂದ ನದಿ ಅಪಾರ ಜಲರಾಶಿಯೊಂದಿಗೆ ಹರಿಯುತ್ತಿತ್ತು.

ಕಾವೇರಿಯ ಹರಿವು ಸುಮಾರು 800 ರಿಂದ 850 ಕಿಲೋಮೀಟರ್ ಇದ್ದರೂ, ರಸ್ತೆಮಾರ್ಗದಲ್ಲಿ ಸಂಚರಿಸಿದ್ದರಿಂದ ಸುಮಾರು 1,300 ಕಿಲೋಮೀಟರ್ ಕ್ರಮಿಸಬೇಕಾಯಿತು.

ಮೂಲದಲ್ಲಿ ಸಣ್ಣ ಹರಿವಿನಂತೆ ಕಾಣುವ ಕಾವೇರಿ ಮುಂದೆ ಉಪನದಿಗಳನ್ನು ಸೇರಿಸಿಕೊಂಡು ಹೇಗೆ ವಿಶಾಲವಾಗುತ್ತಾಳೆ ಎಂಬುದು ಅವರ ಕಣ್ಣೆದುರೇ ತೆರೆದಿತು. ನದಿ ತೀರದಲ್ಲಿರುವ ಆದಿ ರಂಗ, ಮಧ್ಯ ರಂಗ, ಅಂತ್ಯ ರಂಗನಾಥಸ್ವಾಮಿ ದೇಗುಲಗಳು ಕಾವೇರಿಯೊಂದಿಗೆ ಬೆಸೆದುಕೊಂಡಿರುವ ಸಂಸ್ಕೃತಿಯ ಮತ್ತೊಂದು ಮುಖವನ್ನು ತೋರಿಸಿವೆ. ಮತ್ತೊಂದೆಡೆ, ನದಿ ತೀರದ ಹೊಲಗಳಲ್ಲಿ ಬೆಳೆಯುತ್ತಿದ್ದ ವೈವಿಧ್ಯಮಯ ಬೆಳೆಗಳು ಕೃಷಿ ಬದುಕಿನ ಚಿತ್ರಣ ನೀಡಿದ್ದವು.

ಕರ್ನಾಟಕ ದಾಟಿ ತಮಿಳುನಾಡು ಪ್ರವೇಶಿಸಿದಾಗ ಅವರಿಗೆ ಹೊಸ ಪ್ರಪಂಚವೇ ತೆರೆದಂತಾಯಿತು. ತಿರುವಾರೂರಿನಲ್ಲಿ ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ತ್ಯಾಗರಾಜರ ಮನೆ ಮುಂದೆಯೇ ಹರಿಯುವ ಕಾವೇರಿಯನ್ನು ನೋಡಿದಾಗ, ಈ ನದಿ ಕೇವಲ ಕೃಷಿಗೆ ಮಾತ್ರವಲ್ಲ, ಸಂಗೀತಕ್ಕೂ, ಸಂಸ್ಕೃತಿಗೂ ಜೀವನಾಡಿಯಾಗಿದ್ದಾಳೆ ಎಂಬ ಭಾವ ಅವರಲ್ಲಿ ಮೂಡಿತು.

ಈ ಪಯಣದಲ್ಲಿ ಪ್ರಕೃತಿಯ ಸೌಂದರ್ಯ ಅಪಾರ ಸಂತೋಷ ನೀಡಿದರೆ, ನದಿಯ ದಂಡೆಗಳಲ್ಲಿ ಕಂಡ ಕಸ–ತ್ಯಾಜ್ಯ ಅಷ್ಟೇ ಬೇಸರ ತಂದಿತು.

‘ಬಿಯರ್ ಬಾಟಲಿಗಳು, ಪ್ಲಾಸ್ಟಿಕ್, ನದಿಯ ದಂಡೆಯಲ್ಲಿ ಹರಡಿಕೊಂಡಿತ್ತು. ಬಟ್ಟೆಗಳಿಗೆ ಬಣ್ಣ ಹಾಕುವ ಕಾರ್ಖಾನೆಗಳ ತ್ಯಾಜ್ಯ ನೇರವಾಗಿ ನದಿಗೆ ಸೇರುತ್ತಿರುವ ದೃಶ್ಯ ಮನಸ್ಸು ಕಲುಕಿತು’ ಎಂದು ಭವಾನಿ ವಿಷಾದದಿಂದ ನೆನಪಿಸಿಕೊಳ್ಳುತ್ತಾರೆ.

ಸಮುದ್ರ ಸೇರುವ ಮುನ್ನದ ಮೌನ

ಕುಂಭಕೋಣಂ ತಲುಪಿದಾಗ ಅವರಿಗೆ ವಿಚಿತ್ರ ಭಾವ ಕಾಡತೊಡಗಿತು. ಇನ್ನು ಕೆಲವೇ ದೂರದಲ್ಲಿ ಕಾವೇರಿ ಬಂಗಾಳಕೊಲ್ಲಿಯನ್ನು ಸೇರುತ್ತಾಳೆ. ಅದರ ನಂತರ ನದಿಯೊಂದಿಗಿನ ಈ ಪಯಣ ಮುಗಿಯಲಿದೆ.

ಆ ಭಾವನೆ ಅವರನ್ನು ಮೂರು ದಿನ ಅಲ್ಲಿಯೇ ತಂಗುವಂತೆ ಮಾಡಿತು. ‘ಮೇಡಂ, ಮುಂದೆ ಹೋಗೋಣವೇ?’ ಎಂದು ಚಾಲಕ ಹಲವು ಬಾರಿ ಕೇಳಿದರೂ, ಅವರ ಮನಸ್ಸು ಮುಂದಕ್ಕೆ ಹೆಜ್ಜೆ ಇಡಲು ಒಪ್ಪುತ್ತಿರಲಿಲ್ಲ.

ಕೊನೆಗೆ ಪಂಪೂಹಾರ್ ತಲುಪಿದಾಗ ಅವರಿಗೆ ಮತ್ತೆ ಮೂಲದ ಕಾವೇರಿ ಕಂಡ ಅನುಭವವಾಯಿತು.

‘ಮೂಲದಲ್ಲಿ ಕಾವೇರಿ ಎಷ್ಟು ಸ್ವಚ್ಛವಾಗಿದ್ದಳೋ, ಇಲ್ಲಿ ಅಷ್ಟು ಸ್ವಚ್ಛವಾಗಿರಲಿಲ್ಲ. ಆದರೆ, ಹರಿವಿನ ಅಗಲ ಮತ್ತೆ ಕಿರಿದಾಗಿತ್ತು’ ಎಂದು ಅವರು ಹೇಳುತ್ತಾರೆ.

ಚಿಕ್ಕ ಹರಿವಿನಂತೆ ಹುಟ್ಟುವ ಕಾವೇರಿ, ಮುಂದೆ ಉಪನದಿಗಳನ್ನು ಸೇರಿಸಿಕೊಂಡು ಭೋರ್ಗರೆಯುತ್ತಾ ಸಾಗುತ್ತಾಳೆ. ಜಲಾಶಯಗಳನ್ನು ತುಂಬುತ್ತಾಳೆ. ಜೀವಗಳನ್ನು ಪೋಷಿಸುತ್ತಾಳೆ. ಕೊನೆಯಲ್ಲಿ ಮತ್ತೆ ಕಿರಿದಾಗಿಯೇ ಸಮುದ್ರ ಸೇರುತ್ತಾಳೆ.

‘ಆ ಕ್ಷಣದಲ್ಲಿ ಮನಸ್ಸು ಏನನ್ನೂ ಯೋಚಿಸದ, ಭಾವಿಸದ ಸ್ಥಿತಿಗೆ ಹೋಗಿತ್ತು’ ಎಂದು ಹೇಳುತ್ತಾ ಭವಾನಿ ದೂರದ ಗಗನದತ್ತ ದೃಷ್ಟಿ ನೆಟ್ಟರು.

ಹರಿವು ಮತ್ತು ಅರಿವು

ಕಾವೇರಿಯೊಂದಿಗೆ ನಡೆಸಿದ ಈ ವಿಶಿಷ್ಟ ಪಯಣವನ್ನು ಭವಾನಿ ಕೇವಲ ಚಿತ್ರಗಳಲ್ಲಿ ಮಾತ್ರ ಸೀಮಿತಗೊಳಿಸಿಲ್ಲ. ಪಯಣದ ವೇಳೆ ಸೆರೆಹಿಡಿದ ವಿಡಿಯೊಗಳು, ಚಿತ್ರಗಳು ಮತ್ತು ಅನುಭವಗಳನ್ನು ಈಗ ಶಾಲೆ–ಕಾಲೇಜುಗಳಲ್ಲಿ ಪ್ರದರ್ಶಿಸುತ್ತಾ, ವಿದ್ಯಾರ್ಥಿಗಳಲ್ಲಿ ನದಿಗಳ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಕಾವೇರಿ ಕೇವಲ ನದಿಯಲ್ಲ; ಅದು ಜೀವಜಗತ್ತು, ಸಂಸ್ಕೃತಿ ಮತ್ತು ಪರಿಸರದ ಜೀವನಾಡಿ ಎಂಬ ಸಂದೇಶವನ್ನು ತಮ್ಮ ಕಲೆಯ ಮೂಲಕ ತಲುಪಿಸುತ್ತಿದ್ದಾರೆ.

ಭವಾನಿ ಅವರ ಕಲಾಕೃತಿಗಳು ಶ್ರೀಲಂಕಾ, ವಿಯಟ್ನಾಂ, ನ್ಯೂಜಿಲೆಂಡ್, ಜರ್ಮನಿ, ಆಸ್ಟ್ರೇಲಿಯಾ, ಅಮೆರಿಕ, ಇಟಲಿ ಸೇರಿದಂತೆ ಹಲವು ದೇಶಗಳಲ್ಲಿ ಪ್ರದರ್ಶನ ಕಂಡಿವೆ. ಭಾರತದಲ್ಲೂ ತಮಿಳುನಾಡು, ನವದೆಹಲಿ, ರಾಜಸ್ಥಾನ, ಚಂಡೀಗಢ, ಮುಂಬೈ ಸೇರಿದಂತೆ ಅನೇಕ ನಗರಗಳಲ್ಲಿ ಅವರ ಚಿತ್ರಗಳು ಮೆಚ್ಚುಗೆ ಪಡೆದಿವೆ.

ಹಲವು ಪ್ರಶಸ್ತಿ–ಗೌರವಗಳಿಗೆ ಪಾತ್ರರಾಗಿರುವ ಅವರಿಗೆ ಈಚೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣ ಪ್ರಶಸ್ತಿಯೂ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.