ಕುವೆಂಪು ಅವರು ತಮ್ಮ ‘ಉದಯರವಿ’ ಮನೆಯ ಉದ್ಯಾನದಲ್ಲಿ ಕಂಪುಸೂಸಿ ಕಂಗೊಳಿಸುತ್ತಿರುವ ಸೂರ್ಯಕಾಂತಿ, ಗುಲಾಬಿ, ಜರ್ಬರಾ, ಮ್ಯಾಗ್ನೋಲಿಯಾ ಗ್ರಾಂಡಿಪೆÇ್ಲೀರಾ ಮುಂತಾದ ವಿವಿಧ ಬಣ್ಣದ ಹಲವು ಹೂವುಗಳ ಸೌಂದರ್ಯದ ಆರಾಧನೆಯಲ್ಲಿ ಲೀನವಾಗಿದ್ದಾರೆ. ಅವರು ಸೌಂದರ್ಯಯಜ್ಞ (ಯಾಜಿ) ದಲ್ಲಿ ಯಾಜನ (ಯಜ್ಞವನ್ನು ಮಾಡಿಸುವಿಕೆ)ರಾಗಿದ್ದಾರೆ. ‘ಸೌಂದರ್ಯಯಾಜಿ’ ಅವರ ಸೃಷ್ಟಿಯ ಪದ. ಆ ಯಜ್ಞವು ಸತ್ಯ ಶಿವ ಸೌಂದರ್ಯದ್ದಾಗಿದೆ. ಅದಕ್ಕೆ ಕೋಗಿಲೆ ಮುಂತಾದ ಪಕ್ಷಿಗಳ ಧ್ವನಿ ಕುಕಿಲುಗಳ ಕೂಜನ ಮಂಗಳವಾದ್ಯವಾಗಿದೆ. ಸ್ಪಟಿಕ ಪುಷ್ಪ ಲಾಜನ (ಬತ್ತದ ಅರಳು)ವಾಗಿದೆ. ಅವರು ಯಾಗ ನಡೆಸುತ್ತಿರುವುದು ಲೋಕಕಲ್ಯಾಣಕರವಾದ ‘ಸರ್ವಸೃಷ್ಟಿಯ ಸರ್ವಸುಖ’ಕ್ಕಾಗಿ. ಇದೊಂದು ಕವಿಯ ಹೃದಯ ಅನುಭಾವಿಸಿ ಸವಿದ ಸೌಂದರ್ಯ ರಸದ ಅಮೃತದೂಟ; ಅಲೌಕಿಕ ಸುಖ.