ಬೆಂಗಳೂರು: 2023ನೇ ಸಾಲಿನ ಪ್ರತಿಷ್ಠಿತ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ ಮತ್ತು ‘ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ’ಗಳ ಫಲಿತಾಂಶ ಪ್ರಕಟವಾಗಿದೆ. ಸಂಪತ್ ಸಿರಿಮನೆ ಅವರ ಕಥೆ ‘ಪತನ’ ಹಾಗೂ ಡಾ.ಲಕ್ಷ್ಮಣ ವಿ.ಎ. ಅವರ ಕವನ ‘ಬಾಲೆ, ಬೆತ್ತಲೆ ಬೊಂಬೆ ಮತ್ತು ಕಡಲು’ ಆಯಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಪಡೆದುಕೊಂಡಿವೆ.
ಕಥಾಸ್ಪರ್ಧೆಯಲ್ಲಿ ಸಿದ್ದು ಸತ್ಯಣ್ಣವರ ಅವರ ‘ಒಂದು ತೇಗದ ಖುರ್ಚಿ’ ಹಾಗೂ ಬಸವಣ್ಣೆಪ್ಪ ಕಂಬಾರ ಅವರ ‘ಚಂದ್ರಾಮ ಕನ್ನಡಿ ಹರಳ’ ಕಥೆಗಳು ಕ್ರಮವಾಗಿ ಎರಡು ಮತ್ತು ಮೂರನೇ ಬಹುಮಾನಕ್ಕೆ ಭಾಜನವಾಗಿವೆ. ಪೂರ್ಣಿಮಾ ಮಾಳಗಿಮನಿ ಅವರ ‘ಹಸಿದ ಹೊಟ್ಟೆ ಮತ್ತು ಶಿಷ್ಟಾಚಾರ’, ದೀಪಾ ಹಿರೇಗುತ್ತಿ ಅವರ ‘ತುಳಸಿ’, ಎನ್.ಸಿ.ಮಹೇಶ್ ಅವರ ‘ಸಂವಿಧಾನ ಅಂದದ್ದೇ ಕಾರಣವಾಗಿ...’, ಅರ್ಪಣ ಎಚ್.ಎಸ್. ಅವರ ‘ಚಾವಡಿ ಮತ್ತು ನಡುಮನೆಯ ಮಧ್ಯದಲ್ಲೊಂದು ಆಳ ಕಣಿವೆ’ ಹಾಗೂ ಪಿ.ಚಂದ್ರಿಕಾ ಅವರ ‘ಆಕಾಶ ಮತ್ತು ಪಕ್ಷಿ’ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವನ ಸ್ಪರ್ಧೆಯಲ್ಲಿ ಮೆಹಬೂಬ ಮುಲ್ತಾನಿ ಅವರ ‘ಮತ್ತೊಂದು ನರಕ’ ಮತ್ತು ಹೇಮಾ ಅವರ ‘ಬೆಟ್ಟದೂರು ಮತ್ತು ನಾನು’ ಕವನಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಭಾಗ್ಯ ಕೆ.ಯು. ಅವರ ‘ಕಣ್ಣಬೀದಿಯಲ್ಲಿ ಹನಿದೇರು’, ಎನ್.ಸಿ.ಮಹೇಶ್ ಅವರ ‘ಮೈತುಂಬ ಯೋನಿಗಳುಳ್ಳ ಶಾಪಗ್ರಸ್ತಳ ಅಳಲು’, ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಅದು’, ಶ್ರುತಿ ಬಿ.ಆರ್. ಅವರ ‘ತಾಯಿಯಾಗಿದ್ದೇನೆ’ ಹಾಗೂ ಶೇಖರ ಎಂ.ಬಿ. ಅವರ ‘ಆತ್ಮಸಿಲುಬೆಯಲ್ಲಿ ಏಸು ಜನನವಾದರೆ’ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿವೆ.
ಕಾದಂಬರಿಕಾರ ಹಾಗೂ ಕಥೆಗಾರ ಶ್ರೀಧರ ಬಳಗಾರ ಹಾಗೂ ಕಥೆಗಾರ್ತಿ ಬಿ.ಟಿ. ಜಾಹ್ನವಿ ಅವರು ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕವಿ–ಸಂಶೋಧಕ ಲಕ್ಷ್ಮೀಪತಿ ಕೋಲಾರ ಹಾಗೂ ಕವಯಿತ್ರಿ ಲಲಿತಾ ಸಿದ್ಧಬಸವಯ್ಯ ಅವರು ಕವನ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.