ಗೌರಿ ಚಂದ್ರಕೇಸರಿ

ಗುಹೆಯಂತಿರುವ ಕಮಾನು ದ್ವಾರವನ್ನು ದಾಟಿದ ಕ್ಷಣ, ಬೇರೊಂದು ಲೋಕಕ್ಕೆ ಕಾಲಿಟ್ಟ ಅನುಭವ. ಕಲ್ಲುಗುಡ್ಡೆಗಳ ನಡುವೆ ಮೌನವಾಗಿ ಮಲಗಿದ್ದ ಭೂಮಿ, ಇಂದು ಬಣ್ಣ, ರೂಪ, ಸ್ಮೃತಿ ಮತ್ತು ಸಂಸ್ಕೃತಿಗಳ ಸಂಗಮವಾಗಿ ನಿಂತಿದೆ. ಶಿವಮೊಗ್ಗದ ಸವಳಂಗ ಸಮೀಪದ ಸೂರಗೊಂಡನಕೊಪ್ಪ ಸಂತ ಸೇವಾಲಾಲ್ ಅವರ ಜನ್ಮಭೂಮಿ. ಇಲ್ಲಿ ಸುಮಾರು ನಲವತ್ತು ಎಕರೆ ವ್ಯಾಪ್ತಿಯಲ್ಲಿ ತಲೆ ಎತ್ತಿ ನಿಂತಿರುವ ‘ಭಾಯಾಗಡ್’ ಕೇವಲ ಕಲಾಗ್ರಾಮವಲ್ಲ; ಅದು ಒಂದು ಸಮುದಾಯದ ಆತ್ಮಕಥೆ.

ಬೆಟ್ಟ-ಗುಡ್ಡಗಳಿಂದ ಕೂಡಿದ ಪಾಳು ಭೂಮಿಯನ್ನು ಮನಮೋಹಕ ಉದ್ಯಾನವನವನ್ನಾಗಿ ರೂಪಿಸಿರುವ ಕಲ್ಪನೆ ಮೊದಲ ನೋಟದಲ್ಲೇ ಆಕರ್ಷಿಸುತ್ತದೆ. ಪ್ರವೇಶ ದ್ವಾರವೇ ಗುಹೆಯ ಪ್ರತಿರೂಪದಂತೆ ವಿನ್ಯಾಸಗೊಳಿಸಿದ್ದು, ಒಳನುಗ್ಗುತ್ತಿದ್ದಂತೆ ಮಾನವ ನಿರ್ಮಿತ ಗುಹಾಂತರಗಳು ತಣ್ಣನೆಯ ಸ್ಪರ್ಶ ನೀಡುತ್ತವೆ. ಪ್ರಕೃತಿಯ ಮಡಿಲಲ್ಲಿರುವ ಕಲಾತ್ಮಕ ವಾಸ್ತು–ಈ ಎರಡು ಅನುಭವಗಳು ಒಂದೇ ಹೊತ್ತಿನಲ್ಲಿ ಮನಸ್ಸನ್ನು ತಂಪಾಗಿಸುತ್ತವೆ.

ಭಾಯಾಗಡ್ನ ಹೃದಯದಲ್ಲಿ ಬಂಜಾರರ ಜೀವನ ಶೈಲಿಯ ಜೀವಂತ ಚಿತ್ರಣಗಳಿವೆ. ಲಂಬಾಣಿ ವೇಷಭೂಷಣದಲ್ಲಿ ನಿಂತಿರುವ ಪ್ರತಿಮೆಗಳು ಕೇವಲ ಶಿಲ್ಪಗಳಲ್ಲ; ಅವು ಕಥೆಗಳನ್ನೇ ಹೇಳುವಂತಿವೆ. ನ್ಯಾಯ ಬಗೆಹರಿಸುವ ಪಂಚಾಯತಿ ಕಟ್ಟೆ, ನಾಮಕರಣದ ಸಂಭ್ರಮ, ಕಟ್ಟಿಗೆ ಹೊತ್ತು ಸಾಗುವ ಮಹಿಳೆ, ಕ್ಷೌರ ಮಾಡುತ್ತಿರುವ ಕ್ಷೌರಿಕ, ಕೌದಿ ಹೊಲಿಯುವ ಕೈಗಳು, ಮೇಯುತ್ತಿರುವ ದನಗಾಹಿಗಳು...ಈ ಎಲ್ಲ ಸನ್ನಿವೇಶಗಳು ನೈಜತೆಯ ಮಟ್ಟಕ್ಕೆ ತಲುಪಿವೆ. ಒಮ್ಮೆ ಈ ಕಲಾಕೃತಿಗಳ ಮಧ್ಯೆ ನಿಂತರೆ, ಬಂಜಾರರ ಹಳ್ಳಿಯೊಂದರಲ್ಲಿ ಹೆಜ್ಜೆ ಇಟ್ಟ ಭಾವ ಮೂಡುತ್ತದೆ.

ಒಂದು ಎಕರೆಯಷ್ಟು ಪ್ರದೇಶವನ್ನು ಉದ್ಯಾನವನಕ್ಕೆ ಮೀಸಲಿಟ್ಟಿದ್ದು, ಲತಾ ಮಂಟಪಗಳು ವಿಶಿಷ್ಟ ಸೊಬಗನ್ನು ನೀಡುತ್ತವೆ. ಉದ್ಯಾನವನದ ಒಂದು ಪಾರ್ಶ್ವದಲ್ಲಿ ಮಾರಿಕಾಂಬಾ ದೇವಸ್ಥಾನ, ಇನ್ನೊಂದು ಬದಿಯಲ್ಲಿ ಸಂತ ಸೇವಾಲಾಲರ ಪಾದುಕೆಯನ್ನು ಪ್ರತಿಷ್ಠಿಸಿದ ಗದ್ದುಗೆ ಇವು ಭಕ್ತಿಭಾವಕ್ಕೆ ಮೆರಗು ಕೊಡುತ್ತವೆ. 1739ರ ಫೆಬ್ರುವರಿ 15ರಂದು ಜನಿಸಿದ ಸೇವಾಲಾಲರು ಆಜನ್ಮ ಬ್ರಹ್ಮಚಾರಿಯಾಗಿ, ಸಮುದಾಯದ ಸುಖದುಃಖಗಳಿಗೆ ಸ್ಪಂದಿಸಿದ ಮಹನೀಯರೆಂದು ಜನಪದ ಕತೆಗಳು ಹೇಳುತ್ತವೆ. ಅವರ ಸ್ಮರಣೆಗಾಗಿ ಪ್ರತಿವರ್ಷ ಸಂಕ್ರಾಂತಿ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಇಲ್ಲಿ ಸೇರುತ್ತಾರೆ. ಫೆಬ್ರುವರಿ 12 ರಿಂದ 15ರ ವರೆಗೆ ನಡೆಯುವ ಮೂರು ದಿನಗಳ ಉತ್ಸವದಲ್ಲಿ ನಾಡಿನ ನಾನಾ ಭಾಗಗಳಿಂದ ಜನರು ಆಗಮಿಸಿ ಭಾಗವಹಿಸುತ್ತಾರೆ. ನಿತ್ಯ ಅನ್ನಸಂತರ್ಪಣೆ ವ್ಯವಸ್ಥೆಯೂ ಭಕ್ತರಿಗೆ ಆತ್ಮೀಯತೆ ತುಂಬುತ್ತದೆ.

ಮಕ್ಕಳಿಗಾಗಿ ಜಾರುಬಂಡೆ, ತಿರುಗುಣಿ ಮುಂತಾದ ಆಟೋಪಕರಣಗಳಿವೆ. ಆದರೆ ನಿರ್ವಹಣೆಯ ಕೊರತೆ ಕೆಲವೆಡೆ ಕಣ್ಣಿಗೆ ಬೀಳುತ್ತದೆ. ಕಸಕಡ್ಡಿಗಳು, ಅಪೂರ್ಣ ಕಟ್ಟಡಗಳು, ನಿಧಾನಗತಿಯ ಕಾಮಗಾರಿ ಭಾಯಾಗಡ್ನ ಕನಸಿಗೆ ಇನ್ನೂ ಪೂರ್ಣರೂಪ ಬಂದಿಲ್ಲವೆನ್ನಿಸುವ ಸೂಚನೆಗಳು. ಸಮುದಾಯ ಭವನ, ಯಾತ್ರಿ ನಿವಾಸ, ಬಸ್ ತಂಗುದಾಣ, ಆರೋಗ್ಯ ಕೇಂದ್ರ, ಉಪಾಹಾರ ಗೃಹ, ಕಲಾತ್ಮಕ ಕಲ್ಯಾಣಿ ಈ ಎಲ್ಲ ಯೋಜನೆಗಳು ಇನ್ನೂ ಪೂರ್ಣತೆಯನ್ನು ಕಾದಿವೆ. ಸುಮಾರು ಏಳು ವರ್ಷಗಳಿಂದ ಕಾಮಗಾರಿ ಸಾಗುತ್ತಿರುವುದಾದರೂ, ನಿರೀಕ್ಷಿತ ವೇಗ ಕಾಣುತ್ತಿಲ್ಲ.

ಆದರೂ, ಈ ಅಪೂರ್ಣತೆಯ ಮಧ್ಯೆಯೇ ಒಂದು ಸ್ಪಷ್ಟ ಕನಸು ಗೋಚರಿಸುತ್ತದೆ. ಭಾಯಾಗಡ್ ಒಂದು ಸುಂದರ ಪರಿಕಲ್ಪನೆ. ಅದು ಬಂಜಾರರ ಸಂಸ್ಕೃತಿಯನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಒಪ್ಪಿಸುವ ಸಂಕಲ್ಪ. ಇಲ್ಲಿನ ಕಲಾಕೃತಿಗಳನ್ನು ಮನಸಾರೆ ನೋಡುವುದಕ್ಕೆ ಕನಿಷ್ಠ ಎರಡು-ಮೂರು ಗಂಟೆಗಳಾದರೂ ಬೇಕಾಗುತ್ತದೆ. ಇದು ಕೇವಲ ಪ್ರವಾಸಿ ತಾಣವಲ್ಲ; ಸಂಸ್ಕೃತಿಯ ಅಧ್ಯಯನಕ್ಕೆ, ಸಮುದಾಯದ ಬದುಕಿನ ಅರಿವಿಗೆ ಒಂದು ಮುಕ್ತ ವೇದಿಕೆ.

ಯೋಗ್ಯ ಪ್ರಚಾರ ಮತ್ತು ಸಮರ್ಪಕ ನಿರ್ವಹಣೆ ಸಿಕ್ಕಲ್ಲಿ, ಭಾಯಾಗಡ್ ನಾಡಿನ ಪ್ರಮುಖ ಜನಪದ-ಸಂಸ್ಕೃತಿ ಕೇಂದ್ರವಾಗಿ ಬೆಳೆಯಬಹುದು. ಒಂದು ಸಮುದಾಯದ ಇತಿಹಾಸ, ಆಚಾರ-ವಿಚಾರ, ಭಾವನೆಗಳನ್ನು ಶಿಲ್ಪಗಳಲ್ಲಿ, ದೃಶ್ಯಗಳಲ್ಲಿ, ಸ್ಥಳ ವಿನ್ಯಾಸದಲ್ಲಿ ಕಟ್ಟಿಕೊಡುವ ಈ ಪ್ರಯತ್ನ ಸಂಪೂರ್ಣ ರೂಪ ಪಡೆದ ದಿನ, ಅದು ಕೇವಲ ಕಲಾಗ್ರಾಮವಲ್ಲ–ಬಂಜಾರರ ಬದುಕಿನ ಜೀವಂತ ಸಂಗ್ರಹಾಲಯವಾಗಲಿದೆ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-51-2046531320

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.