ಮಬ್ಬುಗತ್ತಲಿನಲ್ಲಿ ಹಂದಿಯ ಶಿಕಾರಿಗೆ ಕುಳಿತ ಗೆಳೆಯರು, ಭರ್ಜರಿ ಬೇಟೆಯ ಖುಷಿಯಲ್ಲಿ ಮನೆ ಕಡೆ ಹೊರಡುತ್ತಾರೆ. ಸುತ್ತ ಆಲದಮರದ ಒಣಎಲೆಗಳು ಉದುರುವ ಸದ್ದು, ಜೀರುಂಡೆಗಳ ಏಕತಾನ ಧ್ವನಿ, ದೂರದಲ್ಲೆಲ್ಲೋ ನಾಯಿ ಬೊಗಳುವ ಪ್ರತಿಧ್ವನಿ. ಉಳಿದಂತೆ ಎಲ್ಲೆಡೆ ಸ್ಮಶಾನದ ಮೌನ. ಕತ್ತಲೆಯ ಗರ್ಭದಿಂದ ಚಿಕ್ಕ ಟಾರ್ಚ್ ಹಿಡಿದು ಒಬ್ಬ ಬರುತ್ತಾನೆ; ಅವನ ಹಿಂದೆ ತಡವುತ್ತಾ ಇನ್ನೊಬ್ಬ. ಅವರ ಮುಖದ ಭಯ ಪ್ರೇಕ್ಷಕರಿಗೂ ಬೆವರಿನ ಅನುಭವ ಮೂಡಿಸುತ್ತದೆ. ಇದು ಯಾವ ಭಯಾನಕ ಸಿನಿಮಾದ ದೃಶ್ಯವಲ್ಲ; ಬೆಂಗಳೂರಿನ ‘ಧ್ವನಿ ತಂಡ’ವು ರಂಗಶಂಕರದಲ್ಲಿ ಪ್ರದರ್ಶಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸಣ್ಣಕತೆಗಳ ಆಧಾರಿತ ‘ಮಾಯಾಮೃಗ’ ನಾಟಕದ ಆರಂಭದ ಕ್ಷಣಗಳು.

ತೇಜಸ್ವಿಯವರ ಕಥೆಗಳಲ್ಲಿ ಮಲೆನಾಡಿನ ಬದುಕು, ಪರಿಸರದ ಸೂಕ್ಷ್ಮತೆ, ಪ್ರಾಣಿ ಪ್ರಪಂಚ, ಬೇಟೆಯ ಸಂಸ್ಕೃತಿ ಮೊದಲಾದವುಗಳು ಓದುಗರಿಗೆ ಚಿರಪರಿಚಿತ. ಇದೇ ಲೋಕವನ್ನು ‘ಮಾಯಾಮೃಗ’ ನಾಟಕವೂ ರಂಗದ ಮೇಲೆ ಜೀವಂತಗೊಳಿಸುತ್ತದೆ. ಸಂಗೀತದ ಮೇಷ್ಟ್ರು ದಾಸಪ್ಪರೊಂದಿಗೆ ದೆವ್ವಗಳಿಲ್ಲವೆಂದು ವಾದಿಸುವ ಒಬ್ಬ ಮತ್ತು ಅವುಗಳ ಇರುವಿಕೆಯನ್ನು ನಂಬುವ ಇನ್ನೊಬ್ಬ–ಇಬ್ಬರೂ ಸ್ಮಶಾನದ ಕತ್ತಲಿನಲ್ಲಿ ದೆವ್ವಗಳ ಹುಡುಕಾಟಕ್ಕೆ ಹೊರಡುತ್ತಾರೆ. ಒಬ್ಬನಿಗೆ ದೆವ್ವವೆಂಬುದು ಮೂಢನಂಬಿಕೆಯ ಪ್ರಶ್ನೆ; ಮತ್ತೊಬ್ಬನಿಗೆ ಅದು ರೂಪ ಬದಲಾಯಿಸುವ, ಮನುಷ್ಯನನ್ನು ಕಾಡುವ ಅಸ್ತಿತ್ವ. ಈ ಸಂಭಾಷಣೆಗಳ ನಡುವೆ ‘ದೆವ್ವಗಳು ಮನುಷ್ಯನ ತಲೆಯಲ್ಲೇ ಇವೆ’ ಎನ್ನುವ ತಾತ್ವಿಕ ಅರ್ಥವೂ ನಿಧಾನವಾಗಿ ತೆರೆದುಕೊಳ್ಳುತ್ತದೆ.

ಉಚ್ಚರಿಸಲು ಕಷ್ಟವಾಗುವ ‘ಚುಂ ಬಿಟ್ಸಿಂ’ ಎಂಬ ಚೀನೀ ಪದದ ಸುತ್ತ ನಡೆಯುವ ಗೊಂದಲ ನಾಟಕಕ್ಕೆ ಹಾಸ್ಯದ ಲಯ ನೀಡುತ್ತದೆ. ತೇಜಸ್ವಿಯವರ ‘ಪಂಜ್ರೊಳ್ಳಿ ಪಿಶಾಚಿಯ ಸವಾಲು’ ಕಥೆಯ ಪ್ರಸಂಗವನ್ನು ನಿರ್ದೇಶಕರು ಚಂದವಾಗಿ ಜೋಡಿಸಿದ್ದಾರೆ. ಓದಲು ಹೋಗಿದ್ದ ಗೆಳೆಯರು ಶೌಚದ ಡಬ್ಬದಲ್ಲೇ ಕಾಫಿ ಕಾಯಿಸಿ ಕುಡಿಯುವ ಪ್ರಸಂಗ ಪ್ರೇಕ್ಷಕರಲ್ಲಿ ನಗೆಯ ಅಲೆ ಎಬ್ಬಿಸುತ್ತದೆ. ಜೊತೆಗೆ ‘ಮಾರನ ಚಪ್ಪಲಿ’, ‘ಕುಕ್ಕುಟದ ಪಿಶಾಚಿ’ ಮೊದಲಾದ ತೇಜಸ್ವಿಯವರ ಇತರ ಕಥೆಗಳ ಸಣ್ಣ ನೆರಳುಗಳೂ ನಾಟಕಕ್ಕೆ ಮತ್ತಷ್ಟು ರಸ ತುಂಬುತ್ತವೆ.

ನಿರ್ದೇಶಕ ಪೃಥ್ವಿ ಆರಾಧ್ಯ ಕಥೆಯನ್ನು ಕೇವಲ ರಂಗರೂಪಕ್ಕೆ ತರುವುದಲ್ಲ; ಅದನ್ನು ದೃಶ್ಯಾನುಭವವಾಗಿ ಕಟ್ಟಿಕೊಡುತ್ತಾರೆ. ಪ್ರೇಕ್ಷಕರ ನಡುವಿನಿಂದಲೇ ಪಾತ್ರಗಳು ದೆವ್ವ ಹುಡುಕುತ್ತಾ ಸಾಗುವುದು ಕಥನದ ತಂತ್ರವಾಗಿಯೂ ಕೆಲಸ ಮಾಡುತ್ತದೆ. ಸ್ಮಶಾನದಿಂದ ಹಿಂಬಾಲಿಸುವ ಕಂತ್ರಿ ನಾಯಿಮರಿ, ಅದನ್ನು ಮನೆ ಕಾಂಪೌಂಡ್ ಒಳಗೆ ಬಿಟ್ಟುಬರುವ ದೃಶ್ಯಗಳು ನಿಧಾನವಾಗಿ ಅಸಹಜತೆಯ ಭಾವನೆ ಹುಟ್ಟಿಸುತ್ತವೆ. ನಾಯಿಮರಿಯ ಸದ್ದಿಗೆ ಎಚ್ಚರಗೊಂಡು ಹೊರಬರುವ ಕರಾಳ ವ್ಯಕ್ತಿ, ಮತ್ತೆ ಮತ್ತೆ ಅದನ್ನು ಓಡಿಸುವ ಪ್ರಯತ್ನ, ಕೊನೆಯಲ್ಲಿ ಹಾಸುಗಲ್ಲಿನ ಮೇಲೆ ದೊಪ್ಪನೆ ಬೀಳುವ ಕ್ಷಣ – ಇವೆಲ್ಲವೂ ರಂಗದ ಮೇಲಿನ ಕುತೂಹಲವನ್ನು ಗಟ್ಟಿಗೊಳಿಸುತ್ತವೆ. ಕೊನೆಯಲ್ಲಿ ಕೆಂಪು ಬೆಳಕು ಮಾಯಾಮೃಗವಾಗಿ ಮೆದುಳಿನೊಳಗೆ ಇಳಿಯುವಂತೆ ಮೂಡಿಸಿರುವ ದೃಶ್ಯ ನಿರ್ದೇಶಕರ ಕಲ್ಪನಾ ಶಕ್ತಿಗೆ ಸಾಕ್ಷಿ. ಸ್ಮಶಾನದ ಜೇಡರಬಲೆಯನ್ನು ಮನುಷ್ಯನ ಮೆದುಳಿನ ರೂಪಕವಾಗಿ ಬಳಸಿರುವುದು ನಾಟಕದ ಧ್ವನಿಶಕ್ತಿಯನ್ನು ಮತ್ತಷ್ಟು ಆಳಗೊಳಿಸುತ್ತದೆ.

ಒಬ್ಬನ ಪಾತ್ರದಲ್ಲಿ ಸುಜಯ್ ಶಾಸ್ತ್ರಿ ನಾಟಕದ ಲಯವನ್ನು ಹಿಡಿದಿಟ್ಟಿದ್ದಾರೆ. ದೀರ್ಘ ಸಂಭಾಷಣೆಗಳಲ್ಲೂ ಅವರ ಅಭಿನಯ ಜೀವಂತಿಕೆಯನ್ನು ಕಳೆದುಕೊಳ್ಳುವುದಿಲ್ಲ. ಸಾಂದರ್ಭಿಕ ಮೌನಗಳನ್ನೇ ಅವರು ಆಂಗಿಕಾಭಿನಯದ ಮೂಲಕ ಅರ್ಥಪೂರ್ಣವಾಗಿಸುತ್ತಾರೆ. ಹಾಸ್ಯ ಮತ್ತು ಆತಂಕದ ನಡುವೆ ಸುಲಭವಾಗಿ ಸಂಚರಿಸುವ ಅವರ ಅಭಿನಯ ನಾಟಕಕ್ಕೆ ವಿಶೇಷ ಬಲ ನೀಡುತ್ತದೆ. ಇನ್ನೊಬ್ಬನ ಪಾತ್ರದಲ್ಲಿ ಪ್ರದೀಪ್ ಪೋಷಕವಾಗಿ ಕಾಣಿಸಿಕೊಂಡರೂ ಕೆಲವೆಡೆ ಇನ್ನಷ್ಟು ಹೊಂದಾಣಿಕೆ ಅಗತ್ಯವೆನಿಸುತ್ತದೆ.

ಸಮರ್ಥ್ ನೀಡಿರುವ ಹಿನ್ನೆಲೆ ಸಂಗೀತ ಸ್ಮಶಾನದ ಮೌನವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಮುದ್ರಿತ ಪಾಶ್ಚಾತ್ಯ ಸಂಗೀತದ ಜೊತೆಗೆ ಬಳಸಿರುವ ಗಿಟಾರ್ ಧ್ವನಿ ನಾಟಕದ ಅಸಹಜ ವಾತಾವರಣವನ್ನು ಗಾಢಗೊಳಿಸುತ್ತದೆ. ರಂಜನ್ ಅವರ ಬೆಳಕಿನ ವಿನ್ಯಾಸ ವಿಶೇಷವಾಗಿ ಗಮನ ಸೆಳೆಯುತ್ತದೆ. ಮಬ್ಬುಗತ್ತಲಿನ ಸ್ಮಶಾನ, ಕೆಂಪು ದೀಪದ ಹರಿವು, ಕತ್ತಲಿನಿಂದ ಬೆಳಕಿಗೆ ಜಾರುವ ಪಾತ್ರಗಳು– ಇವೆಲ್ಲವೂ ದೃಶ್ಯಗಳಿಗೆ ಜೀವ ತುಂಬುತ್ತವೆ. ರಾಮಕೃಷ್ಣ ಬೆಳತೂರರ ಪ್ರಸಾದನ ಕೂಡ ನಾಟಕದ ವಾತಾವರಣಕ್ಕೆ ಪೂರಕವಾಗಿದೆ.

‘ಮಾಯಾಮೃಗ’ ಕೇವಲ ದೆವ್ವದ ಕಥೆಯಲ್ಲ. ಅದು ಮನುಷ್ಯನ ಭಯ, ಕಲ್ಪನೆ ಮತ್ತು ಮೆದುಳಿನ ಕತ್ತಲನ್ನು ಹುಡುಕುವ ರಂಗಪ್ರಯೋಗ. ತೇಜಸ್ವಿಯವರ ಲೋಕವನ್ನು ಅದರ ವಿಚಿತ್ರತೆ, ಹಾಸ್ಯ ಮತ್ತು ತಾತ್ವಿಕತೆಯೊಂದಿಗೆ ರಂಗದ ಮೇಲೆ ಜೀವಂತಗೊಳಿಸಿರುವುದು ಈ ನಾಟಕದ ವಿಶೇಷ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-51-872486421

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.